ವಿಶ್ವದೆಲ್ಲೆಡೆಗೂ ಹಾರಲು ಸಿದ್ಧ ಉಚಿತ ಎಸ್ ಎಂ ಎಸ್

ಎಸ್ ಎಂ ಎಸ್ ಪ್ರಿಯರಿಗೊಂದು ಸಿಹಿ ಸುದ್ದಿ. ಇನ್ನು ಮುಂದೆ ಹೊರರಾಜ್ಯಗಳಿಗಾಗಲೀ, ಹೊರದೇಶಗಳಿಗಾಗಲೀ ಎಸ್ ಎಂ ಎಸ್ ಕಳುಹಿಸಲು ಹಿಂದು ಮುಂದು ನೋಡಬೇಕಿಲ್ಲ. ನಿಶ್ಚಿಂತೆಯಿಂದ ನಿಮ್ಮ ಸಂದೇಶಗಳನ್ನು ವಿಶ್ವದ ಯಾವುದೇ ಕಡೆಗೆ ಉಚಿತವಾಗಿ ಕಳುಹಿಸಬಹುದು.
ಹೌದು. ವಿಶ್ವದ ಮೊದಲ ವೆಬ್ ಮೇಲ್ ಸೇವೆ ಹಾಟ್ ಮೇಲ್ ಸಂಸ್ಥಾಪಕ ಸಬೀರ್ ಭಾಟಿಯಾ ನೇತೃತ್ವದ ಜಕ್ಷಟರ್ ಇಂಟರ್ ನ್ಯಾಷನಲ್ ಕಂಪನಿ ನಿಮಗೆಂದೇ ಹೊಸ ಜಕ್ಷಟರ್ ಎಸ್ ಎಂ ಎಸ್ ಅಪ್ಲಿಕೇಶನನ್ನು ಹೊರತರುವುದಾಗಿ ತಿಳಿಸಿದೆ.
ಸಬೀರ್ ಭಾಟಿಯಾ ಮತ್ತು ಯೋಗೇಶ್ ಪಟೇಲ್ ಸಹಯೋಗದೊಂದಿಗೆ ಸ್ಥಾಪಿಸಲಾಗಿರುವ ಜಕ್ಷಟರ್ ಇಂಟರ್ ನ್ಯಾಷನಲ್ ಕಂಪನಿ ಉಚಿತವಾಗಿ ಎಸ್ ಎಂ ಎಸ್ ಕಳುಹಿಸಬಹುದಾದ ನೂತನ ಟೆಕ್ಸ್ಟ್ಅಪ್ಲಿಕೇಶನನ್ನು ಹೊರತರುವುದಾಗಿ ಮಂಗಳವಾರ ಘೋಷಿಸಿದೆ.
ಈ ಜಕ್ಷಟರ್ ಎಸ್ ಎಂ ಎಸ್ ಅಪ್ಲಿಕೇಶನನ್ನು ಒಮ್ಮೆ ಡೌನ್ ಲೋಡ್ ಮಾಡಿಕೊಂಡರೆ ಸಾಕು, ವಿಶ್ವದ ಯಾವುದೇ ಕಡೆಗಾದರೂ, ಯಾವುದೇ ಮೊಬೈಲ್ ಗಾದರೂ ಉಚಿತವಾಗಿ ಎಸ್ ಎಂ ಎಸ್ ಕಳುಹಿಸಬಹುದು. ಅಷ್ಟೇ ಅಲ್ಲ, ಈ ಎಸ್ ಎಂಎಸ್ ಪಡೆದುಕೊಳ್ಳುವವರೂ ಕೂಡ ಈ ಅಪ್ಲಿಕೇಶನನ್ನು ಹೊಂದಿರುವ ಅವಶ್ಯಕತೆಯಿಲ್ಲ.
ಈಗಾಗಲೆ ಲಭ್ಯವಿರುವ ವಾಟ್ಸ್ ಆಪ್ ಮತ್ತು ಬ್ಲ್ಯಾಕ್ ಬೆರಿ ಮೆಸೆಂಜರ್ ಅಪ್ಲಿಕೇಶನ್ ಗಳಿಗಿಂತ ಈ ಜಕ್ಷಟರ್ ಎಸ್ ಎಂಎಸ್ ಅಪ್ಲಿಕೇಶನ್ ವಿಭಿನ್ನವಾಗಿದೆ ಎಂದು ಕಂಪನಿ ತಿಳಿಸಿದೆ.
ಈ ಅಪ್ಲಿಕೇಶನ್ ಭಾರೀ ಸುದ್ದಿ ಮಾಡಲಿರುವ ನಿರೀಕ್ಷೆಯಿದ್ದು, ವರ್ಷದ ಕೊನೆಗೆ 100 ಮಿಲಿಯನ್ ಚಂದಾದಾರರನ್ನು ಪಡೆಯುವ ಅಂದಾಜಿದೆ. ಮುಂದಿನ ವರ್ಷದ ಕೊನೆಗೆ ಈ ಸಂಖ್ಯೆ 600 ಮಿಲಿಯನ್ ಗೆ ಹೆಚ್ಚಲಿದೆ ಎಂದು ಕಂಪನಿ ನಿರೀಕ್ಷಿಸಿದೆ.


Click it and Unblock the Notifications





