Lava Agni 4 ಲಾಂಚ್: ಕಡಿಮೆ ಬೆಲೆಗೆ ಪ್ರೀಮಿಯಂ ಫೋನ್!..ಚೀನೀ ಕಂಪೆನಿಗಳಿಗೆ ಶಾಕ್!
ಭಾರತದ ಮೊಬೈಲ್ ಮಾರುಕಟ್ಟೆಯು ಬಹುನಿರೀಕ್ಷೆಯಿಂದ ಎದುರುನೋಡುತ್ತಿದ್ದ ಲಾವಾ ಕಂಪೆನಿಯ ಅತ್ಯಂತ ಫ್ಲಾಗ್‌ಶಿಪ್ ಸ್ಮಾರ್ಟ್‌ಫೋನ್ 'Lava Agni 4' ಇಂದು (೨೦,ಗುರುವಾರ) ಭರ್ಜರಿಯಾಗಿ ಬಿಡುಗಡೆಯಾಗಿದೆ. ಕಳೆದ ಅಕ್ಟೋಬರ್ 2024 ರಲ್ಲಿ ಪರಿಚಯಗೊಂಡು ಭಾರೀ ಹವಾ ಸೃಷ್ಟಿಸಿದ್ದ Lava Agni 3 ಉತ್ತರಾಧಿಕಾರಿಯಾಗಿ ಈ ಹೊಸ ಪೀಳಿಗೆಯ ಸ್ಮಾರ್ಟ್‌ಫೋನ್ ಆಗಮಿಸಿದ್ದು, ಇದು 6.67-ಇಂಚಿನ 120Hz ಫ್ಲಾಟ್ AMOLED ಡಿಸ್‌ಪ್ಲೇ, ಡೈಮೆನ್ಸಿಟಿ 8350 ಚಿಪ್‌ಸೆಟ್, 4K 60fps ವರೆಗೆ ವೀಡಿಯೊ ರೆಕಾರ್ಡಿಂಗ್, VC ಲಿಕ್ವಿಡ್ ಕೂಲಿಂಗ್ ಸಿಸ್ಟಮ್ ಮತ್ತು 5,000mAh ಬ್ಯಾಟರಿತಂಹ ಫೀಚರ್ಸ್ ಒಳಗೊಂಡಿದೆ. ಹಾಗಾದರೆ, ಲಾವಾದ ಅತ್ಯಂತ ಫ್ಲಾಗ್‌ಶಿಪ್ ಸ್ಮಾರ್ಟ್‌ಫೋನ್ 'Lava Agni 4' ಸ್ಮಾರ್ಟ್‌ಫೋನ್ ಹೇಗಿದೆ?, ಬೆಲೆ ಎಷ್ಟು ಮತ್ತು ಫೀಚರ್ಸ್ ಯಾವುವು ಎಂಬ ಸಂಪೂರ್ಣ ಮಾಹಿತಿಯನ್ನು ನೋಡೋಣ ಬನ್ನಿ.
Lava Agni 4 : ಸಂಪೂರ್ಣ ವೈಶಿಷ್ಟ್ಯಗಳು
ಹೊಸ Lava Agni 4 ಫೋನ್ ಮುಂಭಾಗದಲ್ಲಿ 1.7mm ಸಮಾನಾಂತರ ಸಣ್ಣ ಬೆಸೆಲ್‌ಗಳು ಹೊಂದಿರುವ ಅಲ್ಯೂಮಿನಿಯಂ ಮಿಶ್ರಲೋಹ ಲೋಹದ ಚೌಕಟ್ಟನ್ನು ಹೊಂದಿದೆ ಮತ್ತು ಹಿಂಭಾಗದಲ್ಲಿ ಮ್ಯಾಟ್ AG ಗ್ಲಾಸ್ ಬಳಕೆ ಮಾಡಲಾಗಿದೆ.. ಇದರಲ್ಲಿರುವ Super Anti-Drop Diamond Frame ಫೋನ್‌ಗೆ ಹೆಚ್ಚುವರಿ ಬಲವನ್ನು ಕೊಡುತ್ತದೆ ಮತ್ತು IP64 ರೇಟಿಂಗ್ ಧೂಳು ಮತ್ತು ನೀರಿನಿಂದ ರಕ್ಷಣೆ ನೀಡುತ್ತದೆ. ಒದ್ದೆಯ ಅಥವಾ ಎಣ್ಣೆಯ ಕೈಗಳಿಂದ ಬಳಸುವಾಗ ಪ್ರತಿಕ್ರಿಯೆ ಹೆಚ್ಚಿಸಲು, ಇದರಲ್ಲಿ Wet Touch Control ಕೂಡ ಇದೆ ಎಂದು ಲಾವಾ ತಿಳಿಸಿದೆ. ಒಟ್ಟಾರೆಯಾಗಿ ಪ್ರೀಮಿಯಂ ಲುಕ್ ಅನ್ನು ನೋಡಬಹುದು.

ಡಿಸ್ಪ್ಲೇ ವಿಭಾಗದಲ್ಲಿ, Lava Agni 4 ಫೋನಿನಲ್ಲಿ 120Hz ರಿಫ್ರೆಶ್ ರೇಟ್ ಹೊಂದಿರುವ 6.67 ಇಂಚಿನ 120Hz AMOLED ಫ್ಲಾಟ್ ಡಿಸ್ಪ್ಲೇ ಇದೆ. 446 PPI ಪಿಕ್ಸೆಲ್ ಸಾಂದ್ರತೆ ಮತ್ತು 2,400 ನಿಟ್ಸ್‌ವರೆಗೆ ಪ್ರಕಾಶಮಾನತೆ ನೀಡುವ ಈ ಸ್ಕ್ರೀನ್‌ನ್ನು Corning Gorilla Glass ರಕ್ಷಿಸಿದೆ. 7mm ಸಣ್ಣ ಬೆಸೆಲ್‌ಗಳು ಪ್ರೀಮಿಯಂ ಲುಕ್‌ಗೆ ಸಹಾಯ ಮಾಡಿವೆ. ಕಾರ್ಯಕ್ಷಮತೆ ವಿಭಾಗದಲ್ಲಿ, ಈ ಫೋನಿನಲ್ಲಿ 8GB LPDDR5X RAM ಮತ್ತು 256GB UFS 4.0 ಸ್ಟೋರೇಜ್ ಜೊತೆಗೆ MediaTek Dimensity 8350 ಚಿಪ್‌ಸೆಟ್ ಇದೆ. ಕಂಪನಿ ಪ್ರಕಾರ, ಇದರ AnTuTu v10 ಸ್ಕೋರ್ 14 ಲಕ್ಷಕ್ಕಿಂತ ಹೆಚ್ಚಾಗಿದೆ.
ಕ್ಯಾಮೆರಾ ವಿಭಾಗದಲ್ಲಿ, Lava Agni 4 ಫೋನ್ ಡ್ಯುಯಲ್ ಹಿಂಬದಿಯ ಕ್ಯಾಮೆರಾ ವ್ಯವಸ್ಥೆಯನ್ನು ಹೊಂದಿದೆ, ಇದು f/1.88 ಅಪರ್ಚರ್ ಮತ್ತು ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಮತ್ತು 8-ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್‌ನೊಂದಿಗೆ 50-ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾವನ್ನು ಒಳಗೊಂಡಿದೆ. ಸೆಲ್ಫಿಗಳು ಮತ್ತು ವೀಡಿಯೊ ಕರೆಗಳಿಗಾಗಿ ಎಲೆಕ್ಟ್ರಾನಿಕ್ ಇಮೇಜ್ ಸ್ಟೆಬಿಲೈಸೇಶನ್ (EIS) ಹೊಂದಿರುವ 50-ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾವನ್ನು ಹೊಂದಿದೆ. ಮುಂಭಾಗ ಮತ್ತು ಹಿಂಭಾಗದ ಎರಡೂ ಕ್ಯಾಮೆರಾಗಳು 4K 60fps ವರೆಗೆ ವೀಡಿಯೊ ರೆಕಾರ್ಡಿಂಗ್ ಅನ್ನು ಬೆಂಬಲಿಸುತ್ತವೆ.

ಬ್ಯಾಟರಿ ವಿಭಾಗದಲ್ಲಿ, Lava Agni 4 ಫೋನ್‌ನಲ್ಲಿ 5,000mAh ಬ್ಯಾಟರಿ ಇದ್ದು, ಇದಕ್ಕೆ 66W ಫಾಸ್ಟ್ ಚಾರ್ಜಿಂಗ್ ಬೆಂಬಲ ಇದೆ. ಲಾವಾ ಪ್ರಕಾರ, ಫೋನ್ 19 ನಿಮಿಷಗಳಲ್ಲಿ 50% ಚಾರ್ಜ್ ಆಗುತ್ತದೆ.ಈ Lava Agni 4 ಫೋನಿನ ವಿಶೇಷತೆ ಎಂದರೆ, ಇದೇ ಮೊದಲ ಬಾರಿಗೆ ಲಾವಾದಲ್ಲಿ ಕಸ್ಟಮೈಸೇಬಲ್ ಆಕ್ಷನ್ ಕೀ ತರಲಾಗಿದೆ. ಈ ಬಟನ್ ಮೂಲಕ ಕಾಮೆರಾ, ಟಾರ್ಚ್, ವೈಬ್ರೇಷನ್ ಮೋಡ್, ಅಪ್ಸ್ ಸೇರಿದಂತೆ 100ಕ್ಕೂ ಹೆಚ್ಚು ಶಾರ್ಟ್‌ಕಟ್‌ಗಳನ್ನು ಹೊಂದಿಸಬಹುದು. ಹಾಗೂ ಸಿಂಗಲ್ ಪ್ರೆಸ್, ಡಬಲ್ ಪ್ರೆಸ್, ಲಾಂಗ್ ಪ್ರೆಸ್ ಮೂಲಕ ವಿಭಿನ್ನ ಕಾರ್ಯಗಳನ್ನು ಹೊಂದಿಸಿಕೊಳ್ಳಬಹುದು ಎಂದು ತಿಳಿಸಲಾಗಿದೆ.
ಈ ಬಾರಿ ಲಾವಾ ತನ್ನದೇ ಆದ Vayu AI ಅನ್ನು ಪರಿಚಯಿಸಿದೆ. ಇದು ಫೋನ್ ಬಳಕೆಯನ್ನು ಇನ್ನಷ್ಟು ಸಹಜ ಹಾಗೂ ಸಂಭಾಷಣಾತ್ಮಕವಾಗಿಸುತ್ತದೆ. Vayu AI ಮೂಲಕ, ಸಿಸ್ಟಮ್ ಫಂಕ್ಷನ್‌ಗಳನ್ನು ವಾಯ್ಸ್ ಮೂಲಕ ನಿಯಂತ್ರಿಸಬಹುದು ಇದರಲ್ಲಿ AI Math Teacher, AI English Teacher, AI Companions, AI Horoscope, AI Photo Editor, AI Call Summary ಮತ್ತು AI Image Generator ಹೀಗೆ ಅನೇಕ AI ಫೀಚರ್‌ಗಳು ಲಭ್ಯವಿದೆ. ಇಷ್ಟೇ ಅಲ್ಲದೆ, Google ನ Circle to Search ಸಹ ಈ ಫೋನ್‌ನಲ್ಲಿ ನೀಡಲಾಗಿದೆ.
ಇನ್ನುಳಿದಂತೆ, Lava Agni 4 ಫೋನ್ ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸರ್, ಫೇಸ್ ಅನ್‌ಲಾಕ್, ಅಪ್ಲಿಕೇಶನ್ ಲಾಕ್, ಆಂಟಿ-ಥೆಫ್ಟ್ ಅಲಾರಾಂ ಮತ್ತು ಗೌಪ್ಯತೆ ಮತ್ತು ಸುರಕ್ಷತೆಗಾಗಿ ಆಂಟಿ-ಪೀಪಿಂಗ್ ವೈಶಿಷ್ಟ್ಯಗಳೊಂದಿಗೆ ಬರುತ್ತದೆ. ಈ ಫೋನಿನಲ್ಲಿರುವ ಕನೆಕ್ಟಿವಿಟಿ ವೈಶಿಷ್ಟ್ಯಗಳಲ್ಲಿ 5G, 4G LTE, Wi-Fi 6E, ಬ್ಲೂಟೂತ್ 5.4, USB 3.2 ಟೈಪ್-C, ಮತ್ತು IR ಬ್ಲಾಸ್ಟರ್ ಸೇರಿವೆ. ಇದು ಡ್ಯುಯಲ್ ಸ್ಟೀರಿಯೊ ಸ್ಪೀಕರ್‌ಗಳು ಮತ್ತು ಮೈಕ್ರೊಫೋನ್ ಅನ್ನು ಸಹ ಹೊಂದಿದೆ. ಗಮನಿಸಬೇಕಾದ ಮತ್ತೊಂದು ಫೀಚರ್ ಎಂದರೆ, ಹೀಟ್ ಮ್ಯಾನೇಜ್‌ಮೆಂಟ್‌ಗೆ 4,300 ಚ.ಮಿಮೀ ಗಾತ್ರದ VC ಲಿಕ್ವಿಡ್ ಕೂಲಿಂಗ್ ಸಿಸ್ಟಂ ಇದೆ.ಚ
Lava Agni 4 : ಬೆಲೆ ಮತ್ತು ಲಭ್ಯತೆ
ಭಾರತದಲ್ಲಿ Lava Agni 4 ಸ್ಮಾರ್ಟ್‌ಪೋನಿಗೆ ₹22,999 (8GB RAM + 256GB ಸ್ಟೋರೇಜ್) ಬೆಲೆ ನಿಗದಿಪಡಿಸಲಾಗಿದೆ. ಕಂಪನಿ ಈ ಬೆಲೆಯನ್ನು ಪ್ರಾರಂಭಿಕ ಆಫರ್ ಎಂದೂ ಹೇಳಿದೆ. ಗ್ರಾಹಕರು ಈ ಫೋನನ್ನು Phantom Black ಮತ್ತು Lunar Mist ಎಂಬ ಎರಡು ಬಣ್ಣಗಳ ಆಯ್ಕೆಗಳಲ್ಲಿ,ಇದೇ ನವೆಂಬರ್ 25 ರಂದು ಮಧ್ಯಾಹ್ನ 12 ಗಂಟೆಯಿಂದ Amazon ನಲ್ಲಿ ಖರೀದಿಸಬಹುದು. ಒಟ್ಟಾರೆ ಸಾರಾಂಶವಾಗಿ, ಲಾವಾ ಆಗ್ನಿ 4 ತನ್ನ ಬೆಲೆಯಲ್ಲೇ ಪ್ರೀಮಿಯಂ ಡಿಸ್ಪ್ಲೇ, ಶಕ್ತಿಶಾಲಿ ಚಿಪ್, ಉತ್ತಮ ಕ್ಯಾಮೆರಾ, ಮತ್ತು ಭಾರತದ ಬಳಕೆದಾರರಿಗೆ ಹೊಂದಿಕೊಂಡ AI ವೈಶಿಷ್ಟ್ಯಗಳನ್ನು ಒದಗಿಸುತ್ತಿದೆ. ಸ್ಥಳೀಯ ಬ್ರ್ಯಾಂಡ್‌ನಿಂದ ಈ ಗುಣಮಟ್ಟದ ಪ್ಯಾಕೇಜ್ ಬರುತ್ತಿರುವುದು ವಿಶೇಷವಾಗಿದ್ದು, ಕಡಿಮೆ ಬೆಲೆಯಲ್ಲಿ ಮಿಡ್ ಪ್ರೀಮಿಯಂ ಫೋನ್ ಹುಡುಕುತ್ತಿರುವವರಿಗೆ ಇದು ಆಕರ್ಷಕ ಆಯ್ಕೆಯಾಗಬಹುದು.


Click it and Unblock the Notifications








