ಆಗಸ್ಟ್ 27 ರಂದು 10,000mAh+ ಬ್ಯಾಟರಿಯ ರಿಯಲ್‌ಮಿ ಫೋನ್ ಲಾಂಚ್!
ಜನಪ್ರಿಯ ಮೊಬೈಲ್ ಬ್ರ್ಯಾಂಡ್ ರಿಯಲ್‌ಮಿ ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್‌ಫೋನ್ ಲೋಕದಲ್ಲಿ ಒಂದು ದೊಡ್ಡ ಅಚ್ಚರಿಯನ್ನು ಮೂಡಿಸುತ್ತಿದೆ. ಈ ವರ್ಷದ ಆರಂಭದಲ್ಲಿ ತನ್ನ 10,000mAh ಬ್ಯಾಟರಿ ಹೊಂದಿರುವ ಕಾನ್ಸೆಪ್ಟ್ ಫೋನ್ ಅನ್ನು ಪರಿಚಯಿಸಿದ ನಂತರ, ಈಗ ಕಂಪನಿ ಅದಕ್ಕಿಂತಲೂ ದೊಡ್ಡ ಬ್ಯಾಟರಿ ಸಾಮರ್ಥ್ಯದ ಹೊಸ ಫೋನ್ ಅನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ. ಇದು ಕೇವಲ ದೊಡ್ಡ ಬ್ಯಾಟರಿ ಫೋನ್ ಮಾತ್ರವಲ್ಲ, ಇದರೊಂದಿಗೆ ರಿಯಲ್‌ಮಿ ತನ್ನ ಚಾರ್ಜಿಂಗ್ ತಂತ್ರಜ್ಞಾನದಲ್ಲಿ ಹೊಸ ಮೈಲಿಗಲ್ಲನ್ನು ಸಾಧಿಸುವ ಭರವಸೆಯನ್ನು ಒದಗಿಸಿದೆ.!
ಹೌದು, ರಿಯಲ್‌ಮಿ ತನ್ನ ಅಧಿಕೃತ X (ಹಿಂದೆ ಟ್ವಿಟರ್) ಖಾತೆಯಲ್ಲಿ, "1x,000mAh" ಬ್ಯಾಟರಿಯೊಂದಿಗೆ ಹೊಸ ಫೋನ್ ಆಗಸ್ಟ್ 27 ರಂದು ಬಿಡುಗಡೆಯಾಗಲಿದೆ ಎಂದು ಘೋಷಿಸಿದೆ. ಇಲ್ಲಿನ 'x' ಅಕ್ಷರವು ಕನಿಷ್ಠ 10,000mAh ಸಾಮರ್ಥ್ಯವನ್ನು ಸೂಚಿಸುತ್ತಿದ್ದು, ಇದು ಮೇ ತಿಂಗಳಲ್ಲಿ ತೋರಿಸಿದ ಕಾನ್ಸೆಪ್ಟ್ ಫೋನ್‌ಗಿಂತಲೂ ದೊಡ್ಡದಾಗಿರಬಹುದು ಎಂದು ಊಹಿಸಲಾಗಿದೆ.
ಕೇವಲ ದೊಡ್ಡ ಬ್ಯಾಟರಿ ಮಾತ್ರವಲ್ಲ, ರಿಯಲ್‌ಮಿ ತನ್ನ ಮತ್ತೊಂದು ಪೋಸ್ಟ್‌ನಲ್ಲಿ "320W ವೇಗದ ಚಾರ್ಜಿಂಗ್‌ನಿಂದ ಬೃಹತ್ 10,000mAh ಬ್ಯಾಟರಿಯವರೆಗೆ... ಮುಂದೆ ಏನು ಬರಲಿದೆ?" ಎಂದು ಪ್ರಶ್ನಿಸುವ ಮೂಲಕ ಹೊಸ ತಲೆಮಾರಿನ ಬ್ಯಾಟರಿ ಮತ್ತು ಚಾರ್ಜಿಂಗ್ ತಂತ್ರಜ್ಞಾನದ ಬಗ್ಗೆ ಸುಳಿವು ನೀಡಿದೆ. ಈ ಪ್ರಕಟಣೆ ಸ್ಮಾರ್ಟ್‌ಫೋನ್ ಬಳಕೆದಾರರಲ್ಲಿ ಭಾರಿ ಕುತೂಹಲ ಮೂಡಿಸಿದೆ.

ಕಳೆದ ವರ್ಷ ರಿಯಲ್‌ಮಿ ಪರಿಚಯಿಸಿದ 320W ಸೂಪರ್‌ಸಾನಿಕ್ ಚಾರ್ಜ್ ತಂತ್ರಜ್ಞಾನವು ಕೇವಲ 4.5 ನಿಮಿಷಗಳಲ್ಲಿ 0 ಯಿಂದ 100% ಚಾರ್ಜ್ ಮಾಡಬಲ್ಲ ಸಾಮರ್ಥ್ಯ ಹೊಂದಿದೆ ಎಂದು ಹೇಳಲಾಗಿದೆ. ಕೇವಲ ಒಂದು ನಿಮಿಷದ ಚಾರ್ಜಿಂಗ್‌ನಿಂದ ಬ್ಯಾಟರಿ 26% ಮತ್ತು ಎರಡು ನಿಮಿಷಗಳಲ್ಲಿ 50% ಚಾರ್ಜ್ ಆಗುತ್ತದೆ ಎಂದು ವರದಿಗಳು ತಿಳಿಸಿವೆ. ಈ ತಂತ್ರಜ್ಞಾನ ಮುಂಬರುವ ಫೋನ್‌ಗಳಲ್ಲಿ ಅಳವಡಿಕೆಯಾಗುವ ಸಾಧ್ಯತೆ ಇದೆ.
ಈ ವರ್ಷದ ಮೇ ತಿಂಗಳಲ್ಲಿ ರಿಯಲ್‌ಮಿ ಪ್ರದರ್ಶಿಸಿದ GT ಕಾನ್ಸೆಪ್ಟ್ ಫೋನ್, 10,000mAh ಬ್ಯಾಟರಿ ಮತ್ತು 320W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ ಗಮನ ಸೆಳೆದಿತ್ತು. ಈ ಫೋನ್ ಕೇವಲ 8.5mm ದಪ್ಪ ಮತ್ತು 200 ಗ್ರಾಂ ಗಿಂತ ಸ್ವಲ್ಪ ಹೆಚ್ಚು ತೂಕ ಹೊಂದಿದೆ. ಅದರ 'ಮಿನಿ ಡೈಮಂಡ್' ಆರ್ಕಿಟೆಕ್ಚರ್, ದೊಡ್ಡ ಬ್ಯಾಟರಿ ಹೊಂದಿಕೊಳ್ಳಲು ಆಂತರಿಕ ವಿನ್ಯಾಸವನ್ನು ಮರುರೂಪಿಸುತ್ತದೆ. ಈ ತಾಂತ್ರಿಕ ಪ್ರಗತಿ, ದೊಡ್ಡ ಬ್ಯಾಟರಿಯು ಫೋನ್‌ಗೆ ಹೆಚ್ಚಿನ ತೂಕ ಮತ್ತು ದಪ್ಪ ಸೇರಿಸುತ್ತದೆ ಎಂಬ ಸಾಮಾನ್ಯ ಕಲ್ಪನೆಯನ್ನು ಬದಲಾಯಿಸಬಹುದು.
ಪ್ರಸ್ತುತ, ರಿಯಲ್‌ಮಿ ಸ್ಮಾರ್ಟ್‌ಫೋನ್‌ಗಳಲ್ಲಿ ಅತಿದೊಡ್ಡ ಬ್ಯಾಟರಿ ರಿಯಲ್‌ಮಿ GT 7 ಸರಣಿಯಲ್ಲಿದೆ. ಇದರ ಚೀನೀ ರೂಪಾಂತರ 7,200mAh ಬ್ಯಾಟರಿಯನ್ನು ಹೊಂದಿದ್ದು, 100W ವೈರ್ಡ್ ಫಾಸ್ಟ್ ಚಾರ್ಜಿಂಗ್ ಬೆಂಬಲಿಸುತ್ತದೆ. ಇದರ ಭಾರತೀಯ ಆವೃತ್ತಿಯು 7,000mAh ಬ್ಯಾಟರಿ ಮತ್ತು 120W ವೈರ್ಡ್ ಫಾಸ್ಟ್ ಚಾರ್ಜಿಂಗ್ ಹೊಂದಿದೆ. ಈ ಹಿನ್ನೆಲೆಯಲ್ಲಿ, ಮುಂಬರುವ 1X,000mAh ಫೋನ್, ದೊಡ್ಡ ಬ್ಯಾಟರಿ ಫೋನ್‌ಗಳ ವಿಭಾಗದಲ್ಲಿ ಹೊಸ ಮಾನದಂಡವನ್ನು ಸ್ಥಾಪಿಸಲಿದೆ.
ರಿಯಲ್‌ಮಿ ಈ ಹೊಸ ಫೋನ್ ಹೆಸರನ್ನು ಕಂಪನಿ ಇನ್ನೂ ಬಹಿರಂಗಪಡಿಸಿಲ್ಲ. ಆದರೆ, ಈ ಹೊಸ ಫೋನ್ ಭಾರತೀಯ ಮಾರುಕಟ್ಟೆಗೆ ಯಾವಾಗ ಮತ್ತು ಯಾವ ಹೆಸರಿನಲ್ಲಿ ಬರುತ್ತದೆ ಎಂಬುದನ್ನು ಕಾದು ನೋಡಬೇಕಿದೆ. ರಿಯಲ್‌ಮಿ ಈ ವರ್ಷದಾಂತ್ಯಕ್ಕೆ ಅಥವಾ ಮುಂದಿನ ವರ್ಷದ ಆರಂಭದಲ್ಲಿ ಈ ಫೋನ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡುವ ಸಾಧ್ಯತೆಗಳಿವೆ. ಈ ಹೊಸ ಫೋನ್ ಮಾರುಕಟ್ಟೆಗೆ ಬಂದಾಗ, ಬಳಕೆದಾರರಿಗೆ ಒಂದು ದಿನಕ್ಕೂ ಹೆಚ್ಚು ಕಾಲ ಚಾರ್ಜಿಂಗ್ ಚಿಂತೆ ಇಲ್ಲದೆ ಕೆಲಸ ಮಾಡುವ ಅನುಭವ ಸಿಗಲಿದೆ ಎನ್ನಬಹುದು.
1x,000mAh" ಬ್ಯಾಟರಿಯೊಂದಿಗೆ ಬರಲಿರುವ ಹೊಸ ರಿಯಲ್‌ಮಿಯ ಫೋನ್ ಮೊಬೈಲ್ ತಂತ್ರಜ್ಞಾನದಲ್ಲಿ ಮತ್ತಷ್ಟು ಹೊಸತನವನ್ನು ತರಲಿದೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಈ ಕುರಿತಂತೆ ನಿಮ್ಮ ಅನಿಸಿಕೆ ಏನು ಎಂಬುದನ್ನು ಈ ಕೆಳಗೆ ಕಾಮೆಂಟ್ ಮಾಡಿ ತಿಳಿಸಿ.


Click it and Unblock the Notifications








