ವಿಶ್ವದ ಮೊದಲ ಏಳು ಕ್ಯಾಮೆರಾಗಳುಳ್ಳ ಫೋನ್ ಬಿಡುಗಡೆ ದಿನಾಂಕ ಫಿಕ್ಸ್!
ವಿಶ್ವದಲ್ಲೇ ಮೊಟ್ಟ ಮೊದಲ ಬಾರಿಗೆ ಏಳು ಕ್ಯಾಮೆರಾಗಳನ್ನು ಹೊತ್ತು ಬರುತ್ತಿರುವ ನೋಕಿಯಾದ ಸ್ಮಾರ್ಟ್‌ಪೋನ್ ಬಿಡುಗಡೆಗೆ ವೇದಿಕೆ ಸಿದ್ದಗೊಂಡಿದೆ. ಬರೋಬ್ಬರಿ ಏಳು ಕ್ಯಾಮೆರಾಗಳುಳ್ಳ ಬಹುನಿರೀಕ್ಷಿತ ನೋಕಿಯಾ 9 ಪ್ಯೂರ್‌ವ್ಯೂ' ಬಿಡುಗಡೆ ದಿನಾಂಕವನ್ನು ನೋಕಿಯಾದ ಮಾಲಿಕ ಸಂಸ್ಥೆ ಹೆಚ್ಎಂಡಿ ಗ್ಲೋಬಲ್ ಘೋಷಿಸಿದ್ದು, ಮೊಬೈಲ್ ಪ್ರಿಯರಿಗೆ ಭಾರೀ ಸಿಹಿಸುದ್ದಿ ನೀಡಿದೆ.
ಹೌದು, ಇದೇ ಫೆಬ್ರವರಿ ತಿಂಗಳಿನಲ್ಲಿ 'ನೋಕಿಯಾ 9 ಪ್ಯೂರ್‌ವ್ಯೂ' ಸ್ಮಾರ್ಟ್‌ಪೋನ್ ಅನ್ನು ಜಾಗತಿಕವಾಗಿ ಬಿಡುಗಡೆ ಮಾಡುವುದಾಗಿ ಹೆಚ್ಎಂಡಿ ಗ್ಲೋಬಲ್ ಅಧಿಕೃತವಾಗಿ ಘೋಷಿಸಿದ್ದು, ಇದರಿಂದಾಗಿ ಈಗಾಗಲೇ ಹಲವು ರೂಮರ್ಸ್‌ಗಳು ಹರಿದಾಡಿ ವಿಶ್ವ ಮೊಬೈಲ್ ಮಾರುಕಟ್ಟೆಯಲ್ಲಿ ಸಾಕಷ್ಟು ಸದ್ದು ಮಾಡುತ್ತಿರುವ 'ನೋಕಿಯಾ 9 ಪ್ಯೂರ್‌ವ್ಯೂ' ಈಗ ಮತ್ತೆ ಸುದ್ದಿಯಲ್ಲಿದೆ.

ವಿಶ್ವದ ಮೊದಲ ಏಳು ಕ್ಯಾಮೆರಾಗಳುಳ್ಳ ಸ್ಮಾರ್ಟ್‌ಫೋನ್ ಎಂಬ ಹೆಗ್ಗಳಿಕೆಯ ಜೊತೆಗೆ 'ನೋಕಿಯಾ 9 ಪ್ಯೂರ್‌ವ್ಯೂ' ಸ್ಮಾರ್ಟ್‌ಫೋನ್ ಹೊಂದಿರುವ ಫೀಚರ್ಸ್ ಕೂಡ ಮೊಬೈಲ್ ಪ್ರಿಯರನ್ನು ಸೆಳೆಯಲು ತಯಾರಾಗಿವೆ. ಹಾಗಾದರೆ, ಬಿಡುಗಡೆಗೆ ಮುನ್ನವೇ ಭಾರೀ ಸದ್ದು ಮಾಡುತ್ತಿರುವ 'ನೋಕಿಯಾ 9 ಪ್ಯೂರ್‌ವ್ಯೂ' ಸ್ಮಾರ್ಟ್‌ಫೋನ್ ಹೇಗಿರಲಿದೆ ಎಂಬುದನ್ನು ಮುಂದೆ ಓದಿ ತಿಳಿಯಿರಿ.

ಬಿಡುಗಡೆ ಯಾವಾಗ?
ವಿಶ್ವ ಮೊಬೈಲ್ ಮಾರುಕಟ್ಟೆಯಲ್ಲಿ ಹೊಸ ಕ್ರಾಂತಿಗೆ ಕಾರಣವಾಗಲಿದೆ ಎಂದು ಹೇಳಲಾಗಿರುವ 'ನೋಕಿಯಾ 9 ಪ್ಯೂರ್‌ವ್ಯೂ' ಸ್ಮಾರ್ಟ್‌ಪೋನ್ ಇದೇ ಫೆಬ್ರವರಿ ತಿಂಗಳಲ್ಲೇ ಮಾರುಕಟ್ಟೆಗೆ ಬಿಡುಗಡೆ ಮಾಡುವುದಾಗಿ ಹೆಚ್ಎಂಡಿ ಗ್ಲೋಬಲ್ ತಿಳಿಸಿದೆ. ಫೆಬ್ರವರಿ ತಿಂಗಳಿನ 24ನೇ ತಾರೀಖಿನಂದು ವಿಶ್ವ ಮೊಬೈಲ್ ಮಾರುಕಟ್ಟೆಗೆ ವಿಶ್ವದ ಮೊದಲ 7 ಕ್ಯಾಮೆರಾಗಳ ಸ್ಮಾರ್ಟ್‌ಫೋನ್ ಮೊಬೈಲ್ ಮಾರುಕಟ್ಟೆಗೆ ಪರಿಚಯವಾಗಲಿದೆ.

ಒಟ್ಟು 7 ಕ್ಯಾಮೆರಾಗಳ ಸ್ಮಾರ್ಟ್‌ಫೋನ್!
ನೋಕಿಯಾ 9 ಪ್ಯೂರ್ವ್ಯೂನಲ್ಲಿ ಒಟ್ಟು 7 ಕ್ಯಾಮೆರಾಗಳಿವೆ ಎಂಬುದನ್ನು ಹೆಚ್ಎಂಡಿ ಗ್ಲೋಬಲ್ ಮೂಲಗಳು ಖಚಿತಪಡಿಸಿವೆ. ಸ್ಮಾರ್ಟ್‌ಫೋನಿನ ಹಿಂಬದಿಯಲ್ಲಿ 5 ಕ್ಯಾಮೆರಾಗಳಿದ್ದರೆ, ಮುಂಭಾಗದಲ್ಲಿ ಎರಡು ಕ್ಯಾಮೆರಾಗಳನ್ನು ನೀಡಲಾಗಿದೆ ಎಂದು ತಿಳಿದುಬಂದಿದೆ. ಈ ಮೊಬೈಲ್ನ ಹಿಂಬದಿಯಲ್ಲಿ ಐದು ಕ್ಯಾಮೆರಾ ಲೆನ್ಸ್ ಜೊತೆಗೆ ದೊಡ್ಡದಾದ ಎಲ್‌ಇಡಿ ಫ್ಲ್ಯಾಶ್ ಕೂಡ ನೀಡಲಾಗಿದೆ. ಆದರೆ, ಇದರಲ್ಲಿ ಯಾವೆಲ್ಲಾ ಕ್ಯಾಮೆರಾ ವೈಶಿಷ್ಟ್ಯಗಳನ್ನು ತರಲಾಗಿದೆ ಎಂಬುದು ಈ ವರೆಗೂ ಗುಟ್ಟಾಗಿ ಉಳಿದಿದೆ.

ನೋಕಿಯಾ 9 ಪ್ಯೂರ್‌ವ್ಯೂ ಫೀಚರ್ಸ್
ನೋಕಿಯಾ 9 ಬಗ್ಗೆ ಸೋರಿಕೆಯಾದ ಮಾಹಿತಿಯ ಪ್ರಕಾರ, ನೋಕಿಯಾ 9 ಪ್ಯೂರ್‌ವ್ಯೂ ಸ್ಮಾರ್ಟ್‌ಫೋನಿನಲ್ಲಿ ಡಿಸ್ಪ್ಲೇ- 5.9 ಇಂಚಿನ ಕ್ಯೂಹೆಚ್ಡಿ ಡಿಸ್ಪ್ಲೇ( ಗೊರಿಲ್ಲಾ ಗ್ಲಾಸ್- 5) ಡಿಸ್ಪ್ಲೇ, ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 845 ಪ್ರೊಸೆಸರ್, RAM- 8 ಜಿಬಿ RAM, 256 ಜಿಬಿ ಸ್ಟೋರೇಜ್, ಅಂಡ್ರಾಯ್ಡ್ 9 ಅಪರೇಟಿಂಗ್ ಸಿಸ್ಟಂ ಮತ್ತು 4,150 mAh ಬ್ಯಾಟರಿ ಸಾಮರ್ಥ್ಯ ಸೇರಿದಂತೆ ಎಲ್ಲಾ ಹೈ ಎಂಡ್ ಫೀಚರ್ಸ್‌ಗಳನ್ನು ಸ್ಮಾರ್ಟ್‌ಪೋನ್ ಒಳಗೊಂಡಿರುತ್ತದೆ ಎಂದು ಹೇಳಲಾಗಿದೆ.

ನೋಕಿಯಾ 9 ಪ್ಯೂರ್‌ವ್ಯೂ ಬೆಲೆ ಎಷ್ಟು?
ಕೆಲವೇ ಕೆಲವು ದಿನಗಳಲ್ಲಿ ವಿಶ್ವ ಮೊಬೈಲ್ ಮಾರುಕಟ್ಟೆಗೆ ಬಿಡುಗಡೆಯಾಗುತ್ತಿರುವ ನೋಕಿಯಾ 9 ಪ್ಯೂರ್‌ವ್ಯೂ ಬೆಲೆ ಕೂಡ ಈಗಾಗಲೇ ಲೀಕ್ ಆಗಿದೆ. ನೋಕಿಯಾ ಲೀಕ್ಸ್ ಎಂಬ ಸಾಮಾಜಿಕ ಖಾತೆಯಲ್ಲಿ ನೋಕಿಯಾ 9 ಪ್ಯೂರ್‌ವ್ಯೂ ಬೆಲೆಯನ್ನು ಬಹಿರಂಗಪಡಿಸಲಾಗಿದ್ದು, ಯುರೋಪ್ನಲ್ಲಿ ಬಿಡುಗಡೆಯಾಗಲಿರುವ ಈ ಸ್ಮಾರ್ಟ್ಫೋನ್ಗೆ 749 ರಿಂದ 799 ಯುರೋ ನಿಗದಿಪಡಿಸಲಾಗುತ್ತದೆ ಎಂದು ಹೇಳಲಾಗಿದೆ.

ಭಾರತದಲ್ಲೂ ಬಿಡುಗಡೆ!?
ಗತಕಾಲದ ವೈಭವವನ್ನು ಮತ್ತೆ ವಾಪಸ್ ಪಡೆಯಲು ಯತ್ನಿಸುತ್ತಿರುವ ನೋಕಿಯಾ ಬ್ರ್ಯಾಂಡ್ ಪುನರ್ ಸ್ಥಾಪಿಸಲು ಹೆಚ್ಎಂಡಿ ಗ್ಲೋಬಲ್ ಪ್ರಯತ್ನಿಸುತ್ತಿದೆ. ಈ ಪ್ರಯತ್ನದ ಫಲವಾಗಿ ಫೆಬ್ರವರಿ ತಿಂಗಳಿನ 24 ರಂದು ಭಾರತದಲ್ಲೂ ಸಹ 'ನೋಕಿಯಾ 9 ಪ್ಯೂರ್‌ವ್ಯೂ' ಫೋನ್ ಬಿಡುಗಡೆಯಾಗಲಿದೆ ಎಂದು ಹೇಳಲಾಗಿದೆ. ಈಗಾಗಲೇ ಇದರ ಬೆಲೆಯು ಭಾರತದಲ್ಲಿ 59 ಸಾವಿರದಿಂದ 65 ಸಾವಿರದವರೆಗೆ ಇರಲಿದೆ ಎಂದು ಅಂದಾಜಿಸಲಾಗಿದೆ.


Click it and Unblock the Notifications








