ನಿಮ್ಮ ಇತ್ತೀಚಿನ Nothing/CMF ಸಾಧನವು ನಕಲಿಯಾಗಿರಬಹುದು!
ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ವೇಗವಾಗಿ ಬೆಳೆಯುತ್ತಿರುವ ಬ್ರಿಟನ್ ಮೂಲದ ತಂತ್ರಜ್ಞಾನ ಕಂಪನಿ Nothing ಇದೀಗ ನಕಲಿ ಉತ್ಪನ್ನಗಳ ವಿರುದ್ಧ ಹೋರಾಡುತ್ತಿದೆ. 2025ರ ನಾಲ್ಕನೇ ತ್ರೈಮಾಸಿಕದಲ್ಲಿ ಭಾರತದಲ್ಲಿ ಕಂಪನಿಯ ಸ್ಮಾರ್ಟ್‌ಫೋನ್ ಶಿಪ್‌ಮೆಂಟ್‌ಗಳು ವರ್ಷಾಂತರ ಆಧಾರದ ಮೇಲೆ 32 ಶೇಕಡಾ ಏರಿಕೆ ಕಂಡಿವೆ ಎಂದು ವರದಿ ಹೇಳುತ್ತದೆ. ಈ ವೇಗದ ಬೆಳವಣಿಗೆ ಬ್ರ್ಯಾಂಡ್‌ಗೆ ಭಾರತದಲ್ಲಿ ಹೆಚ್ಚುತ್ತಿರುವ ಬೇಡಿಕೆಯನ್ನು ತೋರಿಸಿದರೂ, ಮಾರುಕಟ್ಟೆಯಲ್ಲಿ ನಕಲಿ ಉತ್ಪನ್ನಗಳ ಹರಡುವಿಕೆ ಹೊಸ ಸವಾಲಾಗಿ ಪರಿಣಮಿಸಿದೆ.
ಹೌದು, Nothing ಇಂಡಿಯಾ ಸಹ-ಸ್ಥಾಪಕ ಮತ್ತು ಅಧ್ಯಕ್ಷರಾದ ಅಕಿಸ್ ಇವಾಂಜೆಲಿಡಿಸ್ ಅವರು ಸಾಮಾಜಿಕ ಜಾಲತಾಣಗಳ ಮೂಲಕ ಗ್ರಾಹಕರಿಗೆ ಎಚ್ಚರಿಕೆ ಸಂದೇಶ ನೀಡಿದ್ದಾರೆ. Nothing ಹಾಗೂ ಅದರ ಉಪಬ್ರ್ಯಾಂಡ್ ಹೆಸರಿನಲ್ಲಿ ನಕಲಿ ಚಾರ್ಜರ್‌ಗಳು, TWS ಇಯರ್‌ಬಡ್ಸ್ ಮತ್ತು ಇತರ ಆಕ್ಸೆಸರಿಗಳು ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವುದಾಗಿ ಅವರು ತಿಳಿಸಿದ್ದಾರೆ. ಕೆಲವು ಉತ್ಪನ್ನಗಳು ಮೂಲ ಮಾದರಿಗಳಂತೆ ಕಾಣಿಸಿಕೊಂಡರೂ, ಇನ್ನೂ ಕೆಲವು ಕಂಪನಿಯು ಎಂದಿಗೂ ಬಿಡುಗಡೆ ಮಾಡದ ಮಾದರಿ ಅಥವಾ ಬಣ್ಣ ಆಯ್ಕೆಯಾಗಿರುವುದು ಗಮನಾರ್ಹ.
ಈ ಹಿನ್ನೆಲೆದಲ್ಲಿ Nothing ಕಂಪೆನಿಯು ಅಧಿಕಾರಿಗಳ ಜೊತೆಗೂಡಿ ದಾಳಿ ಕಾರ್ಯಾಚರಣೆ ನಡೆಸಲಾಗಿದೆ. ಸ್ಥಳೀಯ ಎಲೆಕ್ಟ್ರಾನಿಕ್ಸ್ ಮಾರುಕಟ್ಟೆಗಳಲ್ಲಿ ನಡೆದ ಪರಿಶೀಲನೆ ವೇಳೆ 1,100ಕ್ಕೂ ಹೆಚ್ಚು ನಕಲಿ ಚಾರ್ಜಿಂಗ್ ಅಡಾಪ್ಟರ್‌ಗಳು ಮತ್ತು TWS ಸಾಧನಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಂಪನಿಯ ಪ್ರಕಾರ, ಇದು ನಕಲಿ ಸರಕು ಸರಪಳಿಗಳನ್ನು ಪತ್ತೆಹಚ್ಚಿ ಅವನ್ನು ನಿಲ್ಲಿಸುವ ದಿಟ್ಟ ಪ್ರಯತ್ನದ ಭಾಗವಾಗಿದೆ. ಭಾರತದಲ್ಲಿನ ಹಲವು ನಗರಗಳಲ್ಲಿ ಇಂತಹ ಕ್ರಮಗಳು ಮುಂದುವರಿಯಲಿವೆ ಎಂದು ತಿಳಿಸಲಾಗಿದೆ.

ಸಮಸ್ಯೆ ಕೇವಲ ಆಫ್‌ಲೈನ್ ಅಂಗಡಿಗಳಲ್ಲಿ ಮಾತ್ರವಲ್ಲ. ಕೆಲವು ಇ-ಕಾಮರ್ಸ್ ತಾಣಗಳಲ್ಲೂ Nothing ಮತ್ತು CMF ಬ್ರ್ಯಾಂಡ್ ಹೆಸರಿನಲ್ಲಿ ಅನುಮಾನಾಸ್ಪದ ಉತ್ಪನ್ನಗಳು ಪಟ್ಟಿ ಆಗಿರುವುದು ಕಂಡುಬಂದಿದೆ. ಕೆಲವೊಮ್ಮೆ "Nothing ಗೆ ಹೊಂದಿಕೊಳ್ಳುತ್ತದೆ" ಎಂಬ ಹೆಸರಿನಲ್ಲಿ ಮೂರನೇ ವ್ಯಕ್ತಿಗಳ ಉತ್ಪನ್ನಗಳನ್ನು ಮಾರಾಟ ಮಾಡುವ ಪ್ರಯತ್ನವೂ ನಡೆಯುತ್ತಿದೆ. ಇಂತಹ ಸಂದರ್ಭಗಳಲ್ಲಿ ಗ್ರಾಹಕರು ಹೆಚ್ಚು ಎಚ್ಚರಿಕೆಯಿಂದ ಖರೀದಿ ಮಾಡಬೇಕು.ಗ್ರಾಹಕರು ಕಂಪನಿಯ ಬ್ರ್ಯಾಂಡಿಂಗ್ ಹೊಂದಿರುವ ಯಾವುದೇ ಸಾಧನವನ್ನು ಖರೀದಿಸುವ ಮೊದಲು ಪರಿಶೀಲಿಸಬೇಕೆಂದು ಸಂಸ್ಥೆಯು ವಿನಂತಿಸಿದೆ.
ಇತ್ತೀಚಿಗಷ್ಟೇ. ಬೆಂಗಳೂರು 100 ಫೀಟ್ ರಸ್ತೆಯಲ್ಲಿ Nothing ತನ್ನ ಮೊದಲ ಅಧಿಕೃತ ಬ್ರ್ಯಾಂಡ್ ಸ್ಟೋರ್ ಆರಂಭಿಸಿರುವುದು ಕಂಪನಿಯ ಭಾರತ ಕೇಂದ್ರೀಕೃತ ತಂತ್ರವನ್ನು ತೋರಿಸುತ್ತದೆ. ಜೊತೆಗೆ, CMF ಉಪಬ್ರ್ಯಾಂಡ್ ಕಾರ್ಯಾಚರಣೆಗಳನ್ನು ಭಾರತಕ್ಕೆ ಸ್ಥಳಾಂತರಿಸಿರುವುದು ಸ್ಥಳೀಯ ಮಾರುಕಟ್ಟೆಗೆ ಹೆಚ್ಚಿನ ಆದ್ಯತೆ ನೀಡುತ್ತಿರುವ ಸಂಕೇತವಾಗಿದೆ. ಕಂಪನಿ ಭಾರತವನ್ನು ಪ್ರಮುಖ ಬೆಳವಣಿಗೆ ಮಾರುಕಟ್ಟೆಯಾಗಿ ಪರಿಗಣಿಸುತ್ತಿದೆ. ಕೌಂಟರ್‌ಪಾಯಿಂಟ್ ರಿಸರ್ಚ್‌ನ 2025 ರ 4 ನೇ ತ್ರೈಮಾಸಿದ ಪ್ರಕಾರ, Nothing ದೇಶದ ಸ್ಮಾರ್ಟ್‌ಫೋನ್ ಸಾಗಣೆಯಲ್ಲಿ ಶೇಕಡಾ 32 ರಷ್ಟು ವರ್ಷಾನುವರ್ಷದ ಬೆಳವಣಿಗೆಯನ್ನು ದಾಖಲಿಸಿದೆ.
ಗ್ರಾಹಕರಿಗೆ ಸಲಹೆ ಏನೆಂದರೆ, ಖರೀದಿ ಮಾಡುವ ಮೊದಲು ಉತ್ಪನ್ನದ ವಿಮರ್ಶೆಗಳು, ಮಾರಾಟಗಾರರ ವಿವರಗಳು ಮತ್ತು ಅಧಿಕೃತ ವೆಬ್‌ಸೈಟ್ ಮಾಹಿತಿಯನ್ನು ಪರಿಶೀಲಿಸುವುದು ಅತ್ಯಗತ್ಯ. ಕಡಿಮೆ ವಿಮರ್ಶೆಗಳು, ಅಸಾಧಾರಣ ಕಡಿಮೆ ಬೆಲೆ ಅಥವಾ ಅನುಮಾನಾಸ್ಪದ ಪ್ಯಾಕೇಜಿಂಗ್ ಕಂಡುಬಂದರೆ ಎಚ್ಚರಿಕೆಯಿಂದಿರಬೇಕು. ಅಧಿಕೃತ ಅಂಗಡಿಗಳು ಅಥವಾ ಮಾನ್ಯ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳ ಮೂಲಕ ಖರೀದಿ ಮಾಡುವುದು ಸುರಕ್ಷಿತ.ಸ್ಮಾರ್ಟ್‌ಫೋನ್ ಮತ್ತು ಆಕ್ಸೆಸರಿಗಳ ಬೇಡಿಕೆ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ, ನಕಲಿ ಉತ್ಪನ್ನಗಳ ವಿರುದ್ಧ ಜಾಗೃತಿ ಅತ್ಯಂತ ಮುಖ್ಯ.


Click it and Unblock the Notifications