ಗೀಕ್ ಬೆಂಚ್‌ನಲ್ಲಿ Nothing Phone 3a Lite!..20 ಸಾವಿರಕ್ಕಿಂತ ಕಡಿಮೆ ಬೆಲೆ?
Nothing ತನ್ನ ಹೊಸ ಸ್ಮಾರ್ಟ್‌ಫೋನ್ Phone 3a Lite ಅನ್ನು ಭಾರತ ಮತ್ತು ಜಾಗತಿಕವಾಗಿ ಶೀಘ್ರದಲ್ಲೇ ಬಿಡುಗಡೆ ಮಾಡಲು ಸಿದ್ಧವಾಗುತ್ತಿದೆ ಎಂಬ ಸುದ್ದಿ ಇತ್ತೀಚಿಗಷ್ಟೇ ಹೊರಬಿದ್ದಿತ್ತು. ಇದೀಗ ಈ ಪೋನ್ ಗೀಕ್ ಬೆಂಚ್ (Geekbench) ತಾಣದಲ್ಲಿ ಕಾಣಿಸಿಕೊಂಡಿದ್ದು, ಇದರ ಕಾರ್ಯಕ್ಷಮತೆ ಮತ್ತು ತಾಂತ್ರಿಕ ವೈಶಿಷ್ಟ್ಯಗಳ ಬಗ್ಗೆ ಪ್ರಮುಖ ಮಾಹಿತಿಗಳು ಬಹಿರಂಗವಾಗಿವೆ. ಜೊತೆಗೆ, ಇದು ಭಾರತ ಸರ್ಕಾರದ BIS ಪ್ರಮಾಣೀಕರಣ ತಾಣದಲ್ಲಿಯೂ ಪಟ್ಟಿ ಮಾಡಲ್ಪಟ್ಟಿದೆ, ಇದರಿಂದ ಶಿಘ್ರವೇ Phone 3a Lite ಬಿಡುಗಡೆ ಬಹುತೇಕ ಖಚಿತವಾಗಿದೆ. ಹಾಗಾದರೆ, ಮುಂಬರುವ Nothing Phone 3a Lite ಸ್ಮಾರ್ಟ್‌ಫೋನ್ ಹೇಗಿರಲಿದೆ? ಮತ್ತು ಬೆಲೆ ಎಷ್ಟಿರಬಹುದು? ಎಂಬ ಸಂಪೂರ್ಣ ಮಾಹಿತಿಯನ್ನು ಮುಂದೆ ಓದಿ ತಿಳಿಯೋಣ ಬನ್ನಿ.
ಟಿಪ್‌ಸ್ಟರ್ ಅನ್ವಿನ್ (@ZionsAnvin) ಹಂಚಿಕೊಂಡಿರುವ ಮಾಹಿತಿಯ ಪ್ರಕಾರ, Nothing Phone 3a Lite ಮಾದರಿಯು A001T ಮಾದರಿ ಸಂಖ್ಯೆಯೊಂದಿಗೆ Geekbenchನಲ್ಲಿ ಕಾಣಿಸಿಕೊಂಡಿದೆ. ಈ ಫೋನ್‌ನಲ್ಲಿ MediaTek Dimensity 7300 ಚಿಪ್‌ಸೆಟ್ ಮತ್ತು Mali-G615 MC2 GPU ಇದೆ. 8GB RAM ಮತ್ತು Android 15 ವ್ಯವಸ್ಥೆಯೊಂದಿಗೆ ಪರೀಕ್ಷಿಸಲಾದ ಈ ಫೋನ್‌ವು ಸಿಂಗಲ್-ಕೋರ್ ಪರೀಕ್ಷೆಯಲ್ಲಿ 1,003 ಅಂಕಗಳು ಹಾಗೂ ಮಲ್ಟಿ-ಕೋರ್ ಪರೀಕ್ಷೆಯಲ್ಲಿ 2,925 ಅಂಕಗಳು ಗಳಿಸಿದೆ. ಈ ಚಿಪ್‌ನಲ್ಲಿ 2GHz ವೇಗದ ನಾಲ್ಕು ಎಫಿಶಿಯನ್ಸಿ ಕೋರ್‌ಗಳು ಮತ್ತು 2.5GHz ವೇಗದ ನಾಲ್ಕು ಪರ್ಫಾರ್ಮೆನ್ಸ್ ಕೋರ್‌ಗಳು ಇವೆ.

ಮತ್ತೋರ್ವ ಜನಪ್ರಿಯ ಟಿಪ್‌ಸ್ಟರ್ ಅಭಿಷೇಕ್ ಯಾದವ್ (@yabhishekhd)ಅವರು ಹಂಚಿಕೊಂಡಿರುವ ಮತ್ತೊಂದು ಮಾಹಿತಿಯ ಪ್ರಕಾರ, Phone 3a Lite ಸಾಧನವು ಗೀಕ್ಬೆಂಚ್ GPU ಪರೀಕ್ಷೆಯಲ್ಲಿ OpenCL ಅಂಕ 2,467 ಪಡೆದಿದೆ. ಇದು ಮಧ್ಯಮ ಮಟ್ಟದ ಗೇಮಿಂಗ್ ಮತ್ತು ಗ್ರಾಫಿಕ್ಸ್ ಕಾರ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡುವ ಸಾಧ್ಯತೆಯನ್ನು ಸೂಚಿಸುತ್ತದೆ. ಬಹುಶಃ ಕಡಿಮೆ ಬೆಲೆಯಲ್ಲಿ ಫೋನ್ ಅನ್ನು ಎದುರುನೋಡುತ್ತಿರುವ ಯುವ ಗೇಮಿಂಗ್ ಪ್ರಿಯರನ್ನು Nothing ಕಂಪೆನಿಯು ಗುರಿಯಾಗಿಸಿಕೊಂಡಿರಬಹುದು.
Nothing Phone 3a Lite: ನಿರೀಕ್ಷಿತ ವೈಶಿಷ್ಟ್ಯಗಳು ಮತ್ತು ಬೆಲೆ
ಈಗಾಗಲೇ ಹರಿದಾಡುತ್ತಿರುವ ಹಲವಾರು ವರದಿಗಳ ಪ್ರಕಾರ, ಹೊಸ Nothing Phone 3a Lite ಸಾಧನವು Nothing Phone 3a Lite ಕೇವಲ ಒಂದು 8GB RAM + 128GB ಸ್ಟೋರೇಜ್ ಆಯ್ಕೆಯಲ್ಲಿ ಮತ್ತು ಕಪ್ಪು ಮತ್ತು ಬಿಳಿ ಎರಡು ಬಣ್ಣಗಳಲ್ಲಿ ಬಿಡುಗಡೆಯಾಗುವ ನಿರೀಕ್ಷೆ ಇದೆ. ಇದರ ಬೆಲೆ Nothing Phone 3a ಗಿಂತ ಸ್ವಲ್ಪ ಕಡಿಮೆ ಇರಬಹುದು. Phone 3a ಈ ವರ್ಷದ ಮಾರ್ಚ್‌ನಲ್ಲಿ ₹22,999 ದಲ್ಲಿ ಬಿಡುಗಡೆಯಾಗಿತ್ತು, ಹೀಗಾಗಿ Phone 3a Lite ದರವು ₹20,000 ಸುತ್ತಮುತ್ತ ಇರಬಹುದು ಎಂದು ಅಂದಾಜಿಸಲಾಗಿದೆ.
ಕೆಲವು ವರದಿಗಳ ಪ್ರಕಾರ, Nothing Phone 3a Lite ಸಾಧನವು ಭಾರತದಲ್ಲಿ CMF Phone 2 Pro ಆಧಾರದ ವಿನ್ಯಾಸದಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ. ಆದರೆ, ಈ ಕುರಿತು ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಇನ್ನು ನಾವು ತಿಳಿದಿರುವಂತೆ, ಪ್ರಸ್ತುತ Nothing Phone 3 ಸರಣಿಯಲ್ಲಿ Phone 3, Phone 3a ಮತ್ತು Phone 3a Pro ಮಾದರಿಗಳು ಲಭ್ಯವಿವೆ. ಒಂದು ವೇಳೆ, ಸ್ಪರ್ಧಾತ್ಮಕ ವೈಶಿಷ್ಟ್ಯಗಳೊಂದಿಗೆ ಮತ್ತು ಕಡಿಮೆ ಬೆಲೆಯಲ್ಲಿ Phone 3a Lite ಸಾಧನವು ಆಗಮಿಸಿದರೆ, ಈ ಸರಣಿಯ ಘನತೆಯು ಮತ್ತಷ್ಟು ಹೆಚ್ಚಬಹುದು.


Click it and Unblock the Notifications








