ಮಿಡ್‌ರೇಂಜ್ OnePlus 13T ಫೋನಿನಲ್ಲಿ ಈ ಪ್ರಮುಖ ವೈಶಿಷ್ಟ್ಯಗಳು ಇರುವುದು ಖಚಿತ!
ಜನಪ್ರಿಯ ಮೊಬೈಲ್ ತಯಾರಕ OnePlus ಶೀಘ್ರದಲ್ಲೇ ತನ್ನ ಹೊಸ ಸ್ಮಾರ್ಟ್‌ಫೋನ್ OnePlus 13T ಅನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ. ಬಿಡುಗಡೆಗೂ ಮುನ್ನ, ಕಂಪನಿಯ ಉನ್ನತ ಅಧಿಕಾರಿಯೊಬ್ಬರು ಸಾಮಾಜಿಕ ಮಾಧ್ಯಮದ ಮೂಲಕ ಈ OnePlus 13T ಫೋನಿನ ಕೆಲವು ಪ್ರಮುಖ ವೈಶಿಷ್ಟ್ಯಗಳ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಈ ಹೊಸ ಫೋನ್ ಕಾಂಪ್ಯಾಕ್ಟ್ ವಿನ್ಯಾಸವನ್ನು ಹೊಂದಿರಲಿದ್ದು, ಫ್ಲಾಟ್ ಸ್ಕ್ರೀನ್ ಅನ್ನು ಒಳಗೊಂಡಿರುತ್ತದೆ ಎಂದು ದೃಢಪಡಿಸಲಾಗಿದೆ. ಇದು ಸಣ್ಣ ಗಾತ್ರದ ಆದರೆ ಉತ್ತಮ ಕಾರ್ಯಕ್ಷಮತೆಯ ಸ್ಮಾರ್ಟ್‌ಫೋನ್‌ಗಳಲ್ಲಿ ಒಂದಾಗಿರುವ ಸಾಧ್ಯತೆ ಇದೆ.
OnePlus ಚೀನಾದ ಅಧ್ಯಕ್ಷರಾದ ಲೂಯಿಸ್ ಲೀ ಅವರು Weibo ವೇದಿಕೆಯಲ್ಲಿ OnePlus 13T ಸ್ಮಾರ್ಟ್‌ಫೋನಿನ ಕುರಿತು ಮಾಹಿತಿ ನೀಡಿದ್ದಾರೆ. ಅವರ ಪ್ರಕಾರ, ಈ ಸ್ಮಾರ್ಟ್‌ಫೋನ್ ಕಾಂಪ್ಯಾಕ್ಟ್ ಆಗಿರುತ್ತದೆ ಮತ್ತು ಫ್ಲಾಟ್ ಸ್ಕ್ರೀನ್ ಅನ್ನು ಹೊಂದಿರುತ್ತದೆ. ಸ್ಮಾರ್ಟ್‌ಫೋನಿನ ನಿಖರವಾದ ವಿವರಗಳು ಇನ್ನೂ ಬಹಿರಂಗವಾಗಿಲ್ಲವಾದರೂ, ಇದು 1.5K ರೆಸಲ್ಯೂಶನ್ ಮತ್ತು 120Hz ರಿಫ್ರೆಶ್ ದರದೊಂದಿಗೆ 6.3-ಇಂಚಿನ OLED ಡಿಸ್ಪ್ಲೇಯನ್ನು ಹೊಂದಿರುವ ಸಾಧ್ಯತೆ ಇದೆ. ಗಮನಿಸಬೇಕಾದ ಅಂಶವೆಂದರೆ, OnePlus ನ ಪ್ರಮುಖ ಮಾದರಿಯಾದ OnePlus 13 ದೊಡ್ಡದಾದ 6.82-ಇಂಚಿನ ಡಿಸ್‌ಪ್ಲೇಯನ್ನು ಹೊಂದಿದೆ.
ಇನ್ನು ಈ OnePlus 13T ಸ್ಮಾರ್ಟ್‌ಫೋನಿನಲ್ಲಿ ಫ್ಲಾಟ್ ಡಿಸ್ಪ್ಲೇ ಜೊತೆಗೆ, ಹೊಸದಾಗಿ ಕಸ್ಟಮೈಸ್ ಮಾಡಬಹುದಾದ ಶಾರ್ಟ್‌ಕಟ್ ಬಟನ್ ಅನ್ನು ನೀಡಲಾಗುತ್ತಿದೆ ಎಂದು ಲೂಯಿಸ್ ಲೀ ಅವರು ತಿಳಿಸಿದ್ದಾರೆ. ಅವರು ಹಂಚಿಕೊಂಡಿರುವ ಚಿತ್ರದ ಪ್ರಕಾರ, ಈ ಬಟನ್ ಫೋನಿನ ಎಡಭಾಗದಲ್ಲಿದೆ. ಪ್ರಸ್ತುತ OnePlus 13 ರಲ್ಲಿರುವ ಅಲರ್ಟ್ ಸ್ಲೈಡರ್‌ನ ಜಾಗದಲ್ಲಿ ಈ ಹೊಸ ಬಟನ್ ಇರಬಹುದು ಎಂದು ಅಂದಾಜಿಸಲಾಗಿದೆ. ಈ ಬಟನ್ ಕೇವಲ ಮ್ಯೂಟ್, ವೈಬ್ರೇಟ್ ಮತ್ತು ರಿಂಗ್ ಮೋಡ್‌ಗಳನ್ನು ಬದಲಾಯಿಸುವುದಲ್ಲದೆ, ಬೇರೆ ಬೇರೆ ಸಿಸ್ಟಮ್ ಕಾರ್ಯಗಳನ್ನು ನಿರ್ವಹಿಸಲು ಶಾರ್ಟ್‌ಕಟ್ ಆಗಿಯೂ ಕಾರ್ಯನಿರ್ವಹಿಸಲಿದೆ.
ಇಷ್ಟೇ ಅಲ್ಲದೆ, ಹೊಸದಾಗಿ ಕಸ್ಟಮೈಸ್ ಮಾಡಬಹುದಾದ ಶಾರ್ಟ್‌ಕಟ್ ಬಟನ್ ಬಟನ್‌ನಲ್ಲಿ"ಅತ್ಯಂತ ಆಸಕ್ತಿದಾಯಕ ಕಾರ್ಯವನ್ನು" ಸೇರಿಸಲಾಗಿದೆ ಎಂದು ಲೀ ಹೇಳಿದ್ದು, ಅದರ ವಿವರಗಳನ್ನು ಮುಂದಿನ ದಿನಗಳಲ್ಲಿ ಬಹಿರಂಗಪಡಿಸಲಾಗುವುದು ಎಂದು ತಿಳಿಸಿದ್ದಾರೆ. ಈಗಾಗಲೇ OnePlus 13T ಸ್ಮಾರ್ಟ್‌ಫೋನ್ AnTuTu ಡೇಟಾಬೇಸ್‌ಗೆ ಪ್ರವೇಶಿಸಿದೆ. ಮಾದರಿ ಸಂಖ್ಯೆ PKX110 ಅಡಿಯಲ್ಲಿ ಪಟ್ಟಿ ಮಾಡಲಾದ ಈ ಸಾಧನವು ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8 ಎಲೈಟ್ ಆವೃತ್ತಿಯಿಂದ ಚಾಲಿತವಾಗಿದ್ದು, ಇತರೆ ಪ್ರಭಾವಶಾಲಿ ಕಾರ್ಯಕ್ಷಮತೆಯ ಸಂಖ್ಯೆಗಳನ್ನು ಸಹ ಬಹಿರಂಗಪಡಿಸಿದೆ.

OnePlus 13T ಸ್ಮಾರ್ಟ್‌ಫೋನ್ 16GB RAM ಮತ್ತು 512GB ಸಂಗ್ರಹಣೆಯ ಜೊತೆಗೆ ಆಂಡ್ರಾಯ್ಡ್ 15 ನಲ್ಲಿ ಕಾರ್ಯನಿರ್ವಹಿಸಲಿದೆ. ಈ ಸ್ಮಾರ್ಟ್‌ಫೋನ್ ಗಮನಾರ್ಹವಾದ ಒಟ್ಟು AnTuTu ಬೆಂಚ್‌ಮಾರ್ಕ್ ಸ್ಕೋರ್ 3,006,913 ಅನ್ನು ಸಾಧಿಸಿದೆ. ಇದರಲ್ಲಿ 678,498 CPU ಸ್ಕೋರ್, 1,268,838 GPU ಸ್ಕೋರ್, 569,999 ಮೆಮೊರಿ ಸ್ಕೋರ್ ಮತ್ತು 489,578 UX ಸ್ಕೋರ್ ಸೇರಿವೆ. ಈ AnTuTu ಡೇಟಾಬೇಸ್‌ನಲ್ಲಿ OnePlus 13T ಕಾಂಪ್ಯಾಕ್ಟ್ ಫ್ಲ್ಯಾಗ್‌ಶಿಪ್ ಫೆಂಗ್ಚಿ ಗೇಮಿಂಗ್ ಕೋರ್ ಅನ್ನು ಒಳಗೊಂಡಿರುತ್ತದೆ ಎಂಬುದು ಸಹ ತಿಳಿದುಬಂದಿದೆ.
OnePlus 13T ಸ್ಮಾರ್ಟ್‌ಫೋನಿನ ಕುರಿತಾದ ಹೆಚ್ಚಿನ ಮಾಹಿತಿಗಳು ಬಿಡುಗಡೆಯ ದಿನಾಂಕ ಹತ್ತಿರವಾಗುತ್ತಿದ್ದಂತೆ ಲಭ್ಯವಾಗುವ ನಿರೀಕ್ಷೆಯಿದೆ. ಈ ಫೋನ್ ಏಪ್ರಿಲ್ ತಿಂಗಳಿನಲ್ಲಿ ಅಧಿಕೃತವಾಗಿ ಬಿಡುಗಡೆಯಾಗುವ ಸಾಧ್ಯತೆ ಇದೆ ಎಂದು ವದಂತಿಗಳು ಹರಿದಾಡುತ್ತಿವೆ. ಕಾಂಪ್ಯಾಕ್ಟ್ ವಿನ್ಯಾಸ ಮತ್ತು ಹೊಸ ಕಸ್ಟಮೈಸ್ ಮಾಡಬಹುದಾದ ಬಟನ್‌ನಿಂದಾಗಿ ಈ ಫೋನ್ ಗ್ರಾಹಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗುತ್ತದೆಯೇ ಎಂದು ಕಾದು ನೋಡಬೇಕಿದೆ. ವದಂತಿಗಳಂತೆ, ಈ ಮುಂಬರುವ ಸ್ಮಾರ್ಟ್‌ಫೋನಿನ ವೈಶಿಷ್ಟ್ಯಗಳಿ ಈ ಕೆಳಗಿನಂತಿರಬಹುದು.
ಹಲವು ಪ್ರಮುಖ ಟೆಕ್ ಮಾಧ್ಯಮಗಳು ವರದಿ ಮಾಡಿರುವಂತೆ, ಮುಂಬರುವ ಈ OnePlus 13T ಸ್ಮಾರ್ಟ್‌ಫೋನ್ 6.31 ಇಂಚಿನ ಡಿಸ್ಪ್ಲೇ ಹೊಂದಿರುತ್ತದೆ. ಇದು 1.5K ರೆಸಲ್ಯೂಶನ್ ಬೆಂಬಲ ಹೊಂದಿರುವ LTPO OLED ಪ್ರೀಮಿಯಂ ಸ್ಕ್ರೀನ್ ಆಗಿರುತ್ತದೆ. ಈ ಡಿಸ್ಪ್ಲೇಯು 120Hz ರಿಫ್ರೆಶ್ ದರದ ಬೆಂಬಲದೊಂದಿಗೆ ಬರುತ್ತದೆ. ಇನ್ ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸರ್ ತಂತ್ರಜ್ಞಾನವನ್ನು ಸಹ ಹೊಂದಿರಲಿದೆ ಎಂದು ಹೇಳಿವೆ, ಪ್ರೊಸೆಸರ್ ವಿಭಾಗದಲ್ಲಿ, ಈ ಸ್ಮಾರ್ಟ್‌ಫೋನ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8 ಎಲೈಟ್ ಪ್ರೊಸೆಸರ್‌ನೊಂದಿಗೆ 16GB RAM ಮತ್ತು 512GB ಸ್ಟೋರೇಜ್ ಆಯ್ಕೆಯೊಂದಿಗೆ ಬಿಡುಗಡೆಯಾಗಲಿದೆ. ಮತ್ತು OIS ಬೆಂಬಲದೊಂದಿಗೆ 50 ಮೆಗಾಪಿಕ್ಸೆಲ್ ಡ್ಯುಯಲ್ ಕ್ಯಾಮೆರಾ, 80W ವೇಗದ ಚಾರ್ಜಿಂಗ್ ತಂತ್ರಜ್ಞಾನದೊಂದಿಗೆ 6200mAh ಸಾಮರ್ಥ್ಯದ ಬ್ಯಾಟರಿ ಇರಲಿದೆ ಎಂದು ಹೇಳಲಾಗಿದೆ.
ನಿರೀಕ್ಷಿಸಲಾಗಿರುವ ಪ್ರಮುಖ ವೈಶಿಷ್ಟ್ಯಗಳು:
ಕ್ಯಾಮರಾ: 50MP ಪ್ರಾಥಮಿಕ ಸಂವೇದಕ ಮತ್ತು 50MP 2x ಟೆಲಿಫೋಟೋ ಲೆನ್ಸ್ ಇರುವ ಡ್ಯುಯಲ್-ಕ್ಯಾಮರಾ ಸೆಟಪ್ ಅನ್ನು ನಿರೀಕ್ಷಿಸಲಾಗಿದೆ.
ವಿನ್ಯಾಸ: ಒನ್‌ಪ್ಲಸ್ 13T ಬಾರ್-ಆಕಾರದ ಮಾಡ್ಯೂಲ್‌ನಲ್ಲಿ ಇರಿಸಲಾದ ಡ್ಯುಯಲ್-ಕ್ಯಾಮರಾ ಸೆಟಪ್ ಅನ್ನು ಒಳಗೊಂಡಿರುತ್ತದೆ.
* ಬಟನ್: ಒನ್‌ಪ್ಲಸ್ 13T ಒಂದು ಹೊಸ ಕಸ್ಟಮೈಸ್ ಮಾಡಬಹುದಾದ ಬಟನ್ ಅನ್ನು ಒಳಗೊಂಡಿರುತ್ತದೆ, ಇದು ಅಲರ್ಟ್ ಸ್ಲೈಡರ್ ಅನ್ನು ಬದಲಾಯಿಸುತ್ತದೆ.
* ಸಾಫ್ಟ್‌ವೇರ್: Android 15 ನಲ್ಲಿ ಕಾರ್ಯನಿರ್ವಹಿಸುವ ನಿರೀಕ್ಷೆಯಿದೆ.
* ಬೆಲೆ: ಒನ್‌ಪ್ಲಸ್ 13T ಸ್ನಾಪ್‌ಡ್ರಾಗನ್ 8 ಎಲೈಟ್ ಪ್ರೊಸೆಸರ್‌ನೊಂದಿಗೆ ಅಗ್ಗದ ಫೋನ್(ಸುಮಾರು 40 ರಿಂದ 45 ಸಾವಿರ) ಆಗಿರುತ್ತದೆ ಎಂದು ನಿರೀಕ್ಷಿಸಲಾಗಿದೆ.


Click it and Unblock the Notifications