ಭರ್ಜರಿ ಸಿಹಿಸುದ್ದಿ: ಭಾರತದಲ್ಲಿ OnePlus 15 ಫೋನ್ ರಿಲೀಸ್ ಡೇಟ್ ಫಿಕ್ಸ್!
ಇದೇ ಅಕ್ಟೋಬರ್ 27ರಂದು ಚೀನಾದಲ್ಲಿ ಅಧಿಕೃತವಾಗಿ ಬಿಡುಗಡೆಗೊಂಡ ಬಹುನಿರೀಕ್ಷಿತ OnePlus 15 ಸ್ಮಾರ್ಟ್‌ಫೋನ್ ಇದೀಗ ಭಾರತದಲ್ಲೂ ಬಿಡುಗಡೆಗೊಳ್ಳಲು ಸಿದ್ಧವಾಗಿದೆ. ಭಾರತೀಯ ಸ್ಮಾರ್ಟ್‌ಫೋನ್ ಪ್ರಿಯರು ಕಾಯುತ್ತಿದ್ದ ಈ ಹೊಸ ಫ್ಲಾಗ್‌ಶಿಪ್ ಸಾಧನದ ಭಾರತೀಯ ಲಾಂಚ್ ದಿನಾಂಕವನ್ನು ಕಂಪನಿಯು ಇದೀಗ ಬಹಿರಂಗಪಡಿಸಿದ್ದು, ನವೆಂಬರ್ 13 ರಂದು ಇದು ದೇಶದಲ್ಲಿ ಅಧಿಕೃತವಾಗಿ ಬಿಡುಗಡೆಯಾಗಲಿದೆ ಎಂದು ತಿಳಿಸಿದೆ. ಗ್ರಾಹಕರು ಈ ಫೋನ್ ಅನ್ನು Amazon India ಮತ್ತು OnePlus ಅಧಿಕೃತ ಆನ್‌ಲೈನ್ ಸ್ಟೋರ್ ಮೂಲಕ ಖರೀದಿಸಲು ಸಾಧ್ಯವಾಗಲಿದೆ.
ಭಾರತೀಯ ರೂಪಾಂತರದ ಸಂಪೂರ್ಣ ವೈಶಿಷ್ಟ್ಯಗಳನ್ನು ಕಂಪನಿಯು ಇನ್ನೂ ಬಹಿರಂಗಪಡಿಸದಿದ್ದರೂ, ಅಮೆಜಾನ್‌ನಲ್ಲಿನ ಮೈಕ್ರೋಸೈಟ್ ಪ್ರಕಾರ OnePlus 15 ಫೋನ್ Qualcommನ 3nm Snapdragon 8 Elite Gen 5 ಚಿಪ್‌ಸೆಟ್ ಹೊಂದಿರಲಿದೆ ಮತ್ತು ಇದು OxygenOS 16 ಆಧಾರಿತ ಸಾಫ್ಟ್‌ವೇರ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಜೊತೆಗೆ, ಭಾರತದಲ್ಲಿನ ಮಾದರಿಯು 50MP ಟ್ರಿಪಲ್ ಹಿಂಬದಿ ಕ್ಯಾಮೆರಾ ಸೆಟ್‌ಅಪ್ ಹೊಂದಿದೆ ಎಂದು ದೃಢಪಡಿಸಲಾಗಿದೆ.
ಚೀನಾದಲ್ಲಿ ಇತ್ತೀಚೆಗೆ ಅನಾವರಣಗೊಂಡ OnePlus 15, ಅದರ ಹಿಂದಿನ ಮಾದರಿ OnePlus 13 ಗೆ ಉತ್ತರಾಧಿಕಾರಿಯಾಗಿ ಬಂದಿದೆ. ಇದು 7,300mAh ಸಾಮರ್ಥ್ಯದ ದೊಡ್ಡ ಬ್ಯಾಟರಿ, 120W ವೇಗದ ಚಾರ್ಜಿಂಗ್ ಮತ್ತು ಅತ್ಯಾಧುನಿಕ Snapdragon 8 Elite Gen 5 ಪ್ರೊಸೆಸರ್‌ನೊಂದಿಗೆ ಬಿಡುಗಡೆಯಾಗಿದೆ. ಅಂದಹಾಗೆ, ಈ ಹೊಸ ಪೀಳಿಗೆಯ OnePlus 15 ಸ್ಮಾರ್ಟ್‌ಫೋನ್ ಹೇಗಿದೆ? ಅದರ ಬೆಲೆ ಎಷ್ಟಿರಬಹುದು? ಎಂಬ ಸಂಪೂರ್ಣ ಮಾಹಿತಿಯನ್ನು ಮುಂದೆ ಓದಿ ತಿಳಿಯೋಣ ಬನ್ನಿ.
OnePlus 15: ಚೀನಾ ಮಾದರಿಯು ಹೊಂದಿರುವ ಪ್ರಮುಖ ಫೀಚರ್ಸ್
ವಿನ್ಯಾಸದ ವಿಷಯದಲ್ಲಿ, ಹೊಸ OnePlus 15 ಸ್ಮಾರ್ಟ್‌ಫೋನ್ ಚೌಕಾಕಾರದ ಕ್ಯಾಮೆರಾ ಮಾಡ್ಯೂಲ್ ಮತ್ತು ಫ್ಲಾಟ್ ಡಿಸ್ಪ್ಲೇ ಮತ್ತು ಫ್ರೇಮ್‌ನೊಂದಿಗೆ ಗಮನಾರ್ಹವಾದ ಮರುವಿನ್ಯಾಸವನ್ನು ಹೊಂದಿದೆ. ಇದನ್ನು ಏರೋಸ್ಪೇಸ್-ಗ್ರೇಡ್ ನ್ಯಾನೊ-ಸೆರಾಮಿಕ್ ಲೋಹದ ಚೌಕಟ್ಟು ಸೇರಿದಂತೆ ಉನ್ನತ-ಮಟ್ಟದ ವಸ್ತುಗಳಿಂದ ನಿರ್ಮಿಸಲಾಗಿದೆ.ಒಟ್ಟಾರೆ ಹ್ಯಾಂಡ್‌ಸೆಟ್ ಮತ್ತು ಕ್ಯಾಮೆರಾ ದ್ವೀಪವು ಆರಾಮದಾಯಕ ಹಿಡಿತಕ್ಕಾಗಿ ದುಂಡಾದ ಮೂಲೆಗಳನ್ನು ಹೊಂದಿರುವುದನ್ನು ನಾವು ಗಮನಿಸಬಹುದು.
ಡಿಸ್‌ಪ್ಲೇ ವಿಭಾಗದಲ್ಲಿ, OnePlus 15 ಸ್ಮಾರ್ಟ್‌ಫೋನಿನಲ್ಲಿ 6.78 ಇಂಚಿನ BOE ಫ್ಲೆಕ್ಸಿಬಲ್ AMOLED ಡಿಸ್ಪ್ಲೇ ನೀಡಲಾಗಿದೆ. ಇದು 165Hz ರಿಫ್ರೆಶ್ ರೇಟ್, 1.5K ರೆಸಲ್ಯೂಷನ್, ಮತ್ತು 1,800 ನಿಟ್ಸ್ ಪೀಕ್ ಬ್ರೈಟ್ನೆಸ್ ಬೆಂಬಲಿಸುತ್ತದೆ. ಪರದೆಯು 100% DCI-P3 ಕಲರ್ ಗ್ಯಾಮುಟ್ ಮತ್ತು 1.07 ಬಿಲಿಯನ್ ಬಣ್ಣ ಪ್ರದರ್ಶನ ಸಾಮರ್ಥ್ಯ ಹೊಂದಿದೆ. ಕಳೆದ ಮಾದರಿಗೆ ಹೋಲಿಸಿದರೆ, ಹೊಸ OnePlus 15 ಡಿಸ್ಪ್ಲೇ ಗಮನಾರ್ಹವಾಗಿ ಹೆಚ್ಚಿನ ರಿಫ್ರೆಶ್ ರೇಟ್ ಮತ್ತು ಸುಧಾರಿತ ದಕ್ಷತೆಯನ್ನು ನೀಡುತ್ತದೆ.
ಕಾರ್ಯಕ್ಷಮತೆಗಾಗಿ, OnePlus 15 ನಲ್ಲಿ Qualcommನ Snapdragon 8 Elite Gen 5 (3nm) ಚಿಪ್‌ಸೆಟ್ ಅಳವಡಿಸಲಾಗಿದೆ, ಇದು 4.6GHz ವೇಗದ ಪ್ರೊಸೆಸಿಂಗ್ ಸಾಮರ್ಥ್ಯ ಹೊಂದಿದೆ. Adreno 840 GPU, LPDDR5X RAM (16GB ವರೆಗೆ) ಮತ್ತು UFS 4.1 ಸ್ಟೋರೇಜ್ (1TB ವರೆಗೆ) ಸೌಲಭ್ಯಗಳು ಫೋನ್‌ಗೆ ಅತ್ಯುತ್ತಮ ಕಾರ್ಯಕ್ಷಮತೆಯನ್ನು ನೀಡುತ್ತವೆ.

ಕ್ಯಾಮೆರಾ ವಿಭಾಗದಲ್ಲಿ, ಈ OnePlus 15 ಫೋನ್ ಮೂರು 50MP ಲೆನ್ಸ್‌ಗಳೊಂದಿಗೆ ಶಕ್ತಿಶಾಲಿ ಸೆಟ್‌ಅಪ್ ನೀಡಲಾಗಿದೆ. ಪ್ರಾಥಮಿಕ (f/1.8), ಅಲ್ಟ್ರಾ-ವೈಡ್ (f/2.0), ಮತ್ತು ಟೆಲಿಫೋಟೋ (f/1.8). ಮುಂಭಾಗದಲ್ಲಿ 32MP ಸೆಲ್ಫಿ ಕ್ಯಾಮೆರಾ ಇದೆ. ಹಿಂಭಾಗದ ಕ್ಯಾಮೆರಾ 8K ವೀಡಿಯೋ ಶೂಟಿಂಗ್ ಬೆಂಬಲಿಸುತ್ತದೆ, ಇದು ವೀಡಿಯೋ ಕ್ರಿಯೇಟರ್‌ಗಳಿಗೆ ಆಕರ್ಷಕ ಆಯ್ಕೆಯಾಗಿ ಹೊರಹೊಮ್ಮುವ ಸಾಧ್ಯತೆ ಇದೆ.
ಬ್ಯಾಟರಿ ಮತ್ತು ಇತರ ವೈಶಿಷ್ಟ್ಯಗಳಲ್ಲಿ, OnePlus 15 ಪೋನಿನಲ್ಲಿ 7,300mAh ಬ್ಯಾಟರಿ ಅಳವಡಿಸಲಾಗಿದೆ. ಇದರಲ್ಲಿನ 120W ಸೂಪರ್ ಫ್ಲ್ಯಾಶ್ ಚಾರ್ಜ್ ಮೂಲಕ ಫೋನ್‌ನ್ನು ಕೇವಲ ಕೆಲವೇ ನಿಮಿಷಗಳಲ್ಲಿ ಪೂರ್ಣ ಚಾರ್ಜ್ ಮಾಡಬಹುದು. ಜೊತೆಗೆ 50W ವೈರ್‌ಲೆಸ್ ಫ್ಲ್ಯಾಶ್ ಚಾರ್ಜ್ ಸಹ ಇದೆ. ಸಂಪರ್ಕ ಆಯ್ಕೆಗಳಲ್ಲಿ 5G, Wi-Fi 7, NFC, GPS, GLONASS, Beidou, ಮತ್ತು ಇನ್‌ಡಿಸ್ಪ್ಲೇ ಅಲ್ಟ್ರಾಸೋನಿಕ್ ಫಿಂಗರ್‌ಪ್ರಿಂಟ್ ಸೆನ್ಸರ್ ಸೇರಿವೆ.
OnePlus 15: ಬೆಲೆ ಮತ್ತು ಲಭ್ಯತೆ
ಮೊದಲು ಬೆಲೆಯ ಕುರಿತು ನೋಡುವುದಾದರೆ, ಮೊಬೈಲ್ ಮಾರುಕಟ್ಟೆ ನಿರೀಕ್ಷಿಸಿದಕ್ಕಿಂತ ಕಡಿಮೆ ಬೆಲೆಗೆ OnePlus 15 ಸ್ಮಾರ್ಟ್‌ಫೋನ್ ಬಿಡುಗಡೆಯಾಗಿದೆ. ಚೀನಾದಲ್ಲಿ CNY 3,999 (ಭಾರತೀಯ ರೂಪಾಯಿಗಳಲ್ಲಿ ಸುಮಾರು ₹50,000) ಆರಂಭಿಕ ಬೆಲೆಯಲ್ಲಿ OnePlus 15 ಪರಿಚಯಗೊಂದಿದೆ. ಈ ಬೆಲೆಗೆ 12GB RAM ಮತ್ತು 256GB ಸ್ಟೋರೇಜ್ ವೇರಿಯಂಟ್ ದೊರೆಯುತ್ತದೆ. ಹೆಚ್ಚಿನ ಮೆಮೊರಿ ಮತ್ತು ಸ್ಟೋರೇಜ್ ಆಯ್ಕೆಗಳು ಕ್ರಮವಾಗಿ, ಅಂದಾಜು ₹53,000, ₹57,000 ಮತ್ತು ₹61,000 ಬೆಲೆಗಳಲ್ಲಿ ಲಭ್ಯವಾಗಲಿವೆ. ಟಾಪ್-ಎಂಡ್ ಮಾದರಿಯು (16GB + 1TB) ₹67,000 ಬೆಲೆ ಹೊಂದಿದೆ. ಚೀನಾ ಗ್ರಾಹಕರುವ ಫೋನ್‌ನ್ನು ಅಬ್ಸೊಲ್ಯೂಟ್ ಬ್ಲ್ಯಾಕ್, ಮಿಸ್ಟಿ ಪರ್ಪಲ್, ಮತ್ತು ಸ್ಯಾಂಡ್ ಡ್ಯೂನ್ ಬಣ್ಣಗಳಲ್ಲಿ ಖರೀದಿಸಬಹುದಾಗಿದ್ದು, ಇದರ ಮಾರಾಟವು ಅಲ್ಲಿ ಅಕ್ಟೋಬರ್ 28ರಿಂದ OnePlus ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಾರಂಭವಾಗಿದೆ.
ಭಾರತದಲ್ಲಿ OnePlus 15 ಬೆಲೆ ಮತ್ತು ಇತರೆ ನಿರೀಕ್ಷೆಗಳು
ಚೀನಾದಲ್ಲಿ ಇದರ ಪ್ರಾರಂಭಿಕ ಬೆಲೆ CNY 3,999 (ಸುಮಾರು ₹50,000) ಆಗಿದ್ದು, ಭಾರತದಲ್ಲಿಯೂ ಇದೇ ಬೆಲೆ ಶ್ರೇಣಿಯಲ್ಲಿ ಲಾಂಚ್ ಆಗುವ ನಿರೀಕ್ಷೆಯಿದೆ. ಬಿಡುಗಡೆಯ ದಿನದಂದೇ OnePlus 15 ಫೋನ್ ಚೀನಾದ ಪ್ರೀಮಿಯಂ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಹೊಸ ಸ್ಪರ್ಧಾತ್ಮಕ ಸಾಧನವಾಗಿ ಹೊರಹೊಮ್ಮಿದೆ. ಇದೇ ಬೆಲೆ ಮತ್ತು ಫೀಚರ್ಸ್‌ಗಳೊಂದಿಗೆ ದೇಶದಲ್ಲಿ OnePlus 15 ಆಗಮನವಾದರೆ, ಖಂಡಿತವಾಗಿಯೂ ದೇಶದ ಪ್ರೀಮಿಯಂ ಸ್ಮಾರ್ಟ್‌ಪೋನ್ ಮಾರುಕಟ್ಟೆಯಲ್ಲಿ ಸಂಚಲನ ಶುರುವಾಗಲಿದೆ. ಈ ಎಲ್ಲಾ ವಿವರಗಳು ನವೆಂಬರ್ 13ರ ಲಾಂಚ್‌ನಲ್ಲಿ ಬಹಿರಂಗವಾಗಲಿವೆ. ಅಲ್ಲಿಯವರೆಗೂ ಕಾಯೋಣ.


Click it and Unblock the Notifications








