ಭಾರತೀಯರಿಗೆ ಒನ್‌ಪ್ಲಸ್ ಸಿಹಿಸುದ್ದಿ..ಅಕ್ಟೋಬರ್‌ನಲ್ಲಿ 'ಒನ್‌ಪ್ಲಸ್ 6ಟಿ' ರಿಲೀಸ್!
ಭಾರತದಲ್ಲಿ ಅತಿ ಹೆಚ್ಚು ಪ್ರೀಮಿಯಮ್ ಸ್ಮಾರ್ಟ್‌ಫೋನ್‌ಗಳನ್ನು ಮಾರಾಟ ಮಾಡುತ್ತಿರುವ ಚೀನಾದ ಒನ್‌ಪ್ಲಸ್ ಮೊಬೈಲ್ ಕಂಪೆನಿ ಮೊಬೈಲ್ ಪ್ರಿಯರಿಗೆ ಮತ್ತೊಂದು ಸಿಹಿಸುದ್ದಿ ನೀಡಿದೆ. ಇದೇ ಅಕ್ಟೋಬರ್ ತಿಂಗಳಿನಲ್ಲಿ ಒನ್‌ಪ್ಲಸ್ 6 ಗಿಂತಲೂ ಶಕ್ತಿಶಾಲಿಯಾದ 'ಒನ್‌ಪ್ಲಸ್ 6ಟಿ' ಸ್ಮಾರ್ಟ್‌ಫೋನ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡುವುದಾಗಿ ಕಂಪೆನಿ ಮಾಹಿತಿ ನೀಡಿದೆ.
ಹೌದು, ವರ್ಷಕ್ಕೊಂದು ಫೋನ್ ಎಂಬ ಗೆರೆಯನ್ನು ಒನ್‌ಪ್ಲಸ್ ಕಂಪೆನಿ ಇದೇ ಮೊದಲ ಬಾರಿಗೆ ದಾಟುತ್ತಿದೆ. ಕಳೆದ ಮೇ ತಿಂಗಳಿನಲ್ಲಷ್ಟೇ ಒನ್‌ಪ್ಲಸ್ 6 ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿದ್ದ ಒನ್‌ಪ್ಲಸ್ ಕಂಪೆನಿಯು ಕೇವಲ ಆರು ತಿಂಗಳಿನ ಒಳಗಾಗಿಯೇ ಮತ್ತೊಂದು ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಲು ಸಿದ್ದವಾಗಿ ಮೊಬೈಲ್ ಪ್ರಿಯರನ್ನು ಅಚ್ಚರಿಪಡಿಸಿದೆ.

ಪ್ರಮುಖ ಇಂಗ್ಲೀಷ್ ಟೆಕ್ ಮಾಧ್ಯಮಗಳು ವರದಿ ಮಾಡಿರುವಂತೆ, 'ಒನ್‌ಪ್ಲಸ್ 6ಟಿ' ಸ್ಮಾರ್ಟ್‌ಫೋನ್ ಇನ್ನು 'ಟೆಕ್ನಿಕಲ್ ಅಪ್ರೂವಲ್' (ತಾಂತ್ರಿಕ ಅನುಮೋದನೆ) ಪಡೆಯುವ ಹಂತದಲ್ಲಿದ್ದು, ಶೀಘ್ರವೇ ಮಾರುಕಟ್ಟೆಗೆ ಕಾಲಿಡುವ ಬಗ್ಗೆ ಮಾಹಿತಿ ನೀಡಿದೆ. ಹಾಗಾದರೆ, 'ಒನ್‌ಪ್ಲಸ್ 6ಟಿ' ಸ್ಮಾರ್ಟ್‌ಫೋನ್ ಫೀಚರ್ಸ್ ಏನಿರಬಹುದು ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

6.4 ಇಂಚ್ ಡಿಸ್‌ಪ್ಲೇ ಹೊಂದಿರಲಿದೆ ಫೋನ್!
ಅಕ್ಟೋಬರ್ ತಿಂಗಳಿನಲ್ಲಿ ಮಾರುಕಟ್ಟೆಗೆ ಕಾಲಿಡುತ್ತಿರುವ 'ಒನ್‌ಪ್ಲಸ್ 6ಟಿ' ಸ್ಮಾರ್ಟ್‌ಫೋನ್ 6.4 ಇಂಚಿನ ಬಿಗ್ ಡಿಸ್‌ಪ್ಲೇ ಹೊಂದಿರಲಿದೆ ಎಂದು ಹೇಳಲಾಗಿದೆ. NA ಸ್ಕ್ರ್ಯಾಚ್ ನಿರೋಧಕ ಪ್ರದರ್ಶನದೊಂದಿಗೆ ಸ್ಕ್ರೀನ್ ರಕ್ಷಿತವಾಗಿರಲಿದ್ದು, 1080 x 2280 ಪಿಕ್ಸೆಲ್‌ಗಳ ರೆಸಲ್ಯೂಶನ್ ಸಾಂದ್ರತೆಯೊಂದಿಗೆ ಸ್ಮಾರ್ಟ್‌ಫೋನ್ ಬಿಡುಗಡೆಯಾಗುತ್ತಿದೆ ಎಂದು ಹೇಳಲಾಗಿದೆ.

ಪ್ರೊಸೆಸರ್ ಮತ್ತು RAM!
'ಒನ್‌ಪ್ಲಸ್ 6ಟಿ' ಸ್ಮಾರ್ಟ್‌ಫೋನಿನಲ್ಲಿ ಕ್ವಾಲ್ಕಮ್ ಕಂಪೆನಿಯ 2.8GHz ಆಕ್ಟಾ ಕೋರ್ ಕ್ರೊಯೊ 385 ಪ್ರೊಸೆಸರ್ ಅನ್ನು ಅಳವಡಿಸಲಾಗಿದೆ. 6GB RAM ಸಾಮರ್ಥ್ಯದಲ್ಲಿ 64GB ಆಂತರಿಕ ಮೆಮೊರಿ ಹೊಂದಿರುವ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ ಓರಿಯೋದಲ್ಲಿ ಕಾರ್ಯನಿರ್ವಹಣೆ ನೀಡಲಿದೆ. ಆಂಡ್ರಾಯ್ಡ್ ಪಿ ಸಪೋರ್ಟ್ ಇರಬಹುದಾದರೂ, ನಿಖರ ಮಾಹಿತಿ ಇನ್ನು ಹೊರಬಿದ್ದಿಲ್ಲ.

ಕ್ಯಾಮೆರಾದಲ್ಲಿ ರಾಜಿಯಿಲ್ಲ.!
ಒನ್‌ಪ್ಲಸ್ ತನ್ನ ಸ್ಮಾರ್ಟ್‌ಫೋನ್ ಕ್ಯಾಮೆರಾಗಳ ಬಗ್ಗೆ ರಾಜಿಯಾಗುವುದಿಲ್ಲ ಎಂಬುದನ್ನು ನಾವೇನು ಹೇಳಬೇಕಿಲ್ಲ. ಅದರಂತೆಯೇ, 'ಒನ್‌ಪ್ಲಸ್ 6ಟಿ' ಸ್ಮಾರ್ಟ್‌ಫೋನಿನಲ್ಲಿ ಹೈ ಡೈನಾಮಿಕ್ ರೇಂಜ್ ಮೋಡ್ 16MP ಸಾಮರ್ಥ್ಯದ ಎರಡು ರಿಯರ್ ಕ್ಯಾಮೆರಾಗಳು ಹಾಗೂ 24 ಮೆಗಾಪಿಕ್ಸೆಲ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ಇರಲಿದೆ ಎಂದು ಹೇಳಲಾಗಿದೆ.

ಬ್ಯಾಟರಿ ಮತ್ತು ಇತರೆ ಫೀಚರ್ಸ್?
'ಒನ್‌ಪ್ಲಸ್ 6ಟಿ' ಸ್ಮಾರ್ಟ್‌ಫೋನಿನಲ್ಲಿ 3500mAh ಸಾಮರ್ಥ್ಯದ ಬ್ಯಾಟರಿಯನ್ನು ಅಳವಡಿಸಿರುವ ಬಗ್ಗೆ ಖಚಿತ ಮಾಹಿತಿ ಲಭ್ಯವಿದೆ. ಇನ್ನು ಹಿಂಭಾಗದಲ್ಲಿ ಫಿಂಗರ್‌ಪ್ರಿಂಟ್ ಆಯ್ಕೆ ಜೊತೆಗೆ ಫೇಸ್ ಅನ್‌ಲಾಕ್ ಫೀಚರ್ ಅನ್ನು 'ಒನ್‌ಪ್ಲಸ್ 6ಟಿ' ಹೊಂದಿರಲಿದೆ. 3.5MM ಆಡಿಯೋ ಜಾಕ್ ಅನ್ನು ಸಹ ಒನ್‌ಪ್ಲಸ್ ಮೊಬೈಲ್ ಪ್ರಿಯರು ನಿರೀಕ್ಷಿಬಹುದಾಗಿದೆ.

ಬೆಲೆ ಮತ್ತು ಲಭ್ಯತೆ?
ಮೊದಲೇ ಹೇಳಿದಂತೆ 'ಒನ್‌ಪ್ಲಸ್ 6ಟಿ' ಸ್ಮಾರ್ಟ್‌ಫೋನ್ ಇದೇ ಅಕ್ಟೋಬರ್ ತಿಂಗಳಿನಲ್ಲಿ ಮೊಬೈಲ್ ಮಾರುಕಟ್ಟೆಗೆ ಕಾಲಿಡುತ್ತಿದೆ. ಒನ್‌ಪ್ಲಸ್ 6 ಗಿಂತಲೂ ಹೆಚ್ಚು ಫೀಚರ್ಸ್ ಹೊಂದಿರುವ ಈ 'ಒನ್‌ಪ್ಲಸ್ 6ಟಿ' ಸ್ಮಾರ್ಟ್‌ಫೋನ್ ಬೆಲೆ ಕೂಡ ಹೆಚ್ಚಿರಲಿದೆ ಎಂದು ಹೇಳಲಾಗಿದೆ. ಆದರೆ, ಇದರ ವ್ಯತ್ಯಾಸ 20 ರಿಂದ 30 ಡಾಲರ್‌ಗಳಿರಬಹುದು ಎಂದು ಹೇಳಲಾಗಿದೆ.


Click it and Unblock the Notifications








