ಭಾರತಕ್ಕೆ ಮಾತ್ರ ಸೀಮಿತ OnePlus 13s: ಜಾಗತಿಕ ಅಭಿಮಾನಿಗಳಿಗೆ ನಿರಾಸೆ!
ಜನಪ್ರಿಯ ಸ್ಮಾರ್ಟ್‌ಫೋನ್ ಬ್ರ್ಯಾಂಡ್ OnePlus ಒಂದು ಅಚ್ಚರಿಯ ನಿರ್ಧಾರ ಕೈಗೊಂಡಿದೆ. ತನ್ನ ಬಹುನಿರೀಕ್ಷಿತ ಫ್ಲ್ಯಾಗ್‌ಶಿಪ್ ಸ್ಮಾರ್ಟ್‌ಫೋನ್ OnePlus 13s ಅನ್ನು ಭಾರತಕ್ಕೆ ಮಾತ್ರ ಸೀಮಿತಗೊಳಿಸಿದೆ. ದಿ ವರ್ಜ್ ವರದಿ ಮಾಡಿದಂತೆ, ಈ ಫೋನ್ ಚೀನಾದಲ್ಲಿ OnePlus 13T ಎಂದು ಕರೆಯಲ್ಪಡುತ್ತಿದ್ದು, ಯುರೋಪ್ ಅಥವಾ ಉತ್ತರ ಅಮೆರಿಕಾದಲ್ಲಿ ಬಿಡುಗಡೆಯಾಗುವುದಿಲ್ಲ ಎಂದು ಕಂಪನಿ ಖಚಿತಪಡಿಸಿದೆ. ಇದು OnePlus ನ ಸಾಮಾನ್ಯ ಜಾಗತಿಕ ಬಿಡುಗಡೆ ತಂತ್ರದಿಂದ ಸಂಪೂರ್ಣವಾಗಿ ಭಿನ್ನವಾಗಿದೆ ಎಂದು ತಿಳಿದುಬಂದಿದೆ. ಮತ್ತು ಈ ನಡೆ ಜಾಗತಿಕ ಮಾರುಕಟ್ಟೆಯಲ್ಲಿ ಅಚ್ಚರಿ ಮೂಡಿಸಿದೆ.!
ಹೌದು, OnePlu ಕಂಪನಿಯ ಕಾರ್ಯನಿರ್ವಾಹಕರು ಖಚಿತಪಡಿಸಿದಂತೆ, ಪಾಶ್ಚಿಮಾತ್ಯ ಮಾರುಕಟ್ಟೆಗಳಿಗೆ ಈ ಫೋನ್ ಬಿಡುಗಡೆ ಮಾಡುವ ಯಾವುದೇ ಯೋಜನೆ ಸದ್ಯಕ್ಕಿಲ್ಲ. OnePlus ಯುರೋಪ್‌ನ ಮುಖ್ಯ ಮಾರ್ಕೆಟಿಂಗ್ ಅಧಿಕಾರಿ ಸೆಲಿನಾ ಶಿ ಅವರು, "ಕಂಪನಿಯು ಪ್ರಸ್ತುತ 13s ಅನ್ನು ಯುರೋಪ್‌ನಲ್ಲಿ ಬಿಡುಗಡೆ ಮಾಡುವ ಯಾವುದೇ ಯೋಜನೆಯನ್ನು ಹೊಂದಿಲ್ಲ" ಎಂದು ಸ್ಪಷ್ಟಪಡಿಸಿದ್ದಾರೆ. ಅಂತೆಯೇ, OnePlus ಉತ್ತರ ಅಮೆರಿಕದ ಮಾರ್ಕೆಟಿಂಗ್ ಮುಖ್ಯಸ್ಥ ಸ್ಪೆನ್ಸರ್ ಬ್ಲಾಂಕ್ ಅವರು, ಅಮೆರಿಕ ಮತ್ತು ಕೆನಡಾದ ಬಳಕೆದಾರರು ಸಹ ಈ ಸಾಧನವನ್ನು ಪಡೆಯಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.
OnePlus ಈ ಫೋನ್‌ನ ನಿರ್ದಿಷ್ಟ ಬಿಡುಗಡೆ ದಿನಾಂಕವನ್ನು ಇನ್ನೂ ಬಹಿರಂಗಪಡಿಸಿಲ್ಲವಾದರೂ, ಇದನ್ನು ಈಗಾಗಲೇ ಬ್ರ್ಯಾಂಡ್‌ನ ದೇಶದ ವೆಬ್‌ಸೈಟ್‌ನಲ್ಲಿ "ಶೀಘ್ರದಲ್ಲೇ ಬರಲಿದೆ" ಎಂದು ಪಟ್ಟಿ ಮಾಡಲಾಗಿದೆ. ಭಾರತೀಯ ಮಾರುಕಟ್ಟೆಗಾಗಿರುವ ಅಧಿಕೃತ ವಿಶೇಷಣಗಳು ಇನ್ನೂ ಬಹಿರಂಗವಾಗಿಲ್ಲದಿದ್ದರೂ, ನಿರೀಕ್ಷೆಗಳು OnePlus 13T ಮಾದರಿಯನ್ನು ಆಧರಿಸಿವೆ. ಈ ಫೋನ್ ಅತ್ಯಂತ ಶಕ್ತಿಯುತವಾದ ಸ್ನಾಪ್‌ಡ್ರಾಗನ್ 8 Gen 3 "ಎಲೈಟ್" ಚಿಪ್‌ಸೆಟ್ ಅನ್ನು ಒಳಗೊಂಡಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ಇದರೊಂದಿಗೆ, 16GB ವರೆಗಿನ RAM ಮತ್ತು 1TB ಆಂತರಿಕ ಸಂಗ್ರಹಣೆಯ ಆಯ್ಕೆಗಳು ಇರಬಹುದು.

ಮುಂಬರುವ OnePlus 13s ಪೋನ್ 120Hz ರಿಫ್ರೆಶ್ ದರದೊಂದಿಗೆ ಫ್ಲಾಟ್-ಎಡ್ಜ್ಡ್ 6.32-ಇಂಚಿನ OLED ಡಿಸ್ಪ್ಲೇ ಉತ್ತಮ ದೃಶ್ಯ ಅನುಭವ ನೀಡಲಿದೆ. ಕ್ಯಾಮೆರಾ ಸೆಟಪ್‌ನಲ್ಲಿ 50MP ಮುಖ್ಯ ಸಂವೇದಕ, 50MP 2x ಟೆಲಿಫೋಟೋ ಲೆನ್ಸ್ ಮತ್ತು 16MP ಸೆಲ್ಫಿ ಕ್ಯಾಮೆರಾ ಇರಬಹುದು. ಬ್ಯಾಟರಿ ಬಾಳಿಕೆಯು ಈ ಫೋನ್‌ನ ಪ್ರಮುಖ ಆಕರ್ಷಣೆಯಾಗುವ ಸಾಧ್ಯತೆ ಇದೆ. ಇದು 80W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುವ 6,260mAh ಬ್ಯಾಟರಿಯನ್ನು ಹೊಂದಿರಬಹುದು. ಜೊತೆಗೆ OnePlus ತನ್ನ ವಿಶಿಷ್ಟವಾದ ಅಲರ್ಟ್ ಸ್ಲೈಡರ್ ಅನ್ನು "ಕ್ವಿಕ್ ಕೀ" ಬಟನ್‌ನೊಂದಿಗೆ ಬದಲಾಯಿಸಿದೆ ಎನ್ನಲಾಗಿದೆ.
ಭಾರತದಲ್ಲಿ ಈ ಫೋನ್‌ನ ಅಂದಾಜು ಬೆಲೆ ರೂ. 45,000 ರಿಂದ ರೂ. 50,000 ರವರೆಗೆ ಇರಬಹುದು ಎಂದು ನಿರೀಕ್ಷಿಸಲಾಗಿದೆ. ಈ ಬೆಲೆಯಲ್ಲಿ, OnePlus 13s ಭಾರತೀಯ ಮಾರುಕಟ್ಟೆಯಲ್ಲಿ ಪ್ರಬಲ ಫ್ಲ್ಯಾಗ್‌ಶಿಪ್ ಸ್ಪರ್ಧಿಯಾಗಿ ಹೊರಹೊಮ್ಮುವ ಸಾಧ್ಯತೆ ಇದೆ. ಆದರೆ, ಭಾರತದ ಹೊರಗಿನ ಅಭಿಮಾನಿಗಳಿಗೆ ಈ ಸಾಧನವನ್ನು ಹೊಂದುವುದು ಸುಲಭವಲ್ಲ ಮತ್ತು ಅದು ಅಪಾಯಕಾರಿಯೂ ಆಗಿರಬಹುದು.ಈ ಫೋನ್ ಅನ್ನು ಆಮದು ಮಾಡಿಕೊಳ್ಳಲು ಬಯಸುವವರು ಬಹಳ ಎಚ್ಚರಿಕೆಯಿಂದ ಇರಬೇಕು. ಏಕೆಂದರೆ, OnePlus 13s ವಿದೇಶಿ ಪ್ರದೇಶಗಳಲ್ಲಿನ ಎಲ್ಲಾ ನೆಟ್‌ವರ್ಕ್ ಬ್ಯಾಂಡ್‌ಗಳನ್ನು ಬೆಂಬಲಿಸದಿರಬಹುದು.
ಭಾರತೀಯರಿಗಾಗಿಯೇ ಬರುತ್ತಿರುವ ಮುಂಬರುವ OnePlus 13s ಅತ್ಯುತ್ತಮ ಫ್ಲ್ಯಾಗ್‌ಶಿಪ್ ವೈಶಿಷ್ಟ್ಯಗಳನ್ನು ಹೊಂದಿರುವ ಫೋನ್ ಆಗಿರಬಹುದು. ಆದರೆ ನೀವು ಭಾರತದಲ್ಲಿ ಇಲ್ಲದಿದ್ದರೆ, ಈ ಫೋನ್ ಅನ್ನು ಪಡೆಯುವುದು ಕಷ್ಟಕರ ಮತ್ತು ಅಪಾಯಕಾರಿ ನಿರ್ಧಾರವಾಗಬಹುದು. OnePlus 13s ವಿದೇಶಿ ಪ್ರದೇಶಗಳಲ್ಲಿನ ಎಲ್ಲಾ ನೆಟ್‌ವರ್ಕ್ ಬ್ಯಾಂಡ್‌ಗಳನ್ನು ಬೆಂಬಲಿಸದಿರಬಹುದು, ಇದು ಸೀಮಿತ ಸಂಪರ್ಕಕ್ಕೆ ಕಾರಣವಾಗಬಹುದು. ಇದರ ಜೊತೆಗೆ, ಅಧಿಕೃತ ಬಿಡುಗಡೆ ಇಲ್ಲದ ಕಾರಣ, ಅಂತರರಾಷ್ಟ್ರೀಯ ಖರೀದಿದಾರರಿಗೆ ಯಾವುದೇ ಖಾತರಿ ಅಥವಾ ಮಾರಾಟದ ನಂತರದ ಸೇವೆ ಲಭ್ಯವಿರುವುದಿಲ್ಲ.


Click it and Unblock the Notifications








