Oppo: ಶೀಘ್ರ ಹೊಸ ಫೋನ್ ಲಾಂಚ್! 100W ಚಾರ್ಜಿಂಗ್, ಬಿಗ್ ಬ್ಯಾಟರಿ.. ಯಾವುದು?
ಒಪ್ಪೋ (Oppo) ಕಂಪನಿಯು ಹೊಸ ಮೊಬೈಲ್ ಬಿಡುಗಡೆಗೆ ತಯಾರಿ ನಡೆಸುತ್ತಿದೆ. ಕಂಪನಿಯು ತನ್ನ 'Find' ಸರಣಿಯಲ್ಲಿ ಈ ಫೋನನ್ನು ಭಾರತ ಸೇರಿದಂತೆ ಇತರೆ ಜಾಗತಿಕ ಮಾರುಕಟ್ಟೆಗಳಲ್ಲಿ ಲಾಂಚ್ ಮಾಡುವ ಸಾಧ್ಯತೆಯಿದೆ. ಇದು ಒಪ್ಪೋ ಫೈಂಡ್ X8 (Oppo Find X8) ಎಂಬ ಹೆಸರಿನೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಡಲಿದೆ. ಈ ಮಧ್ಯೆಯೇ, ಮುಂಬರುವ ಹೊಸ ಸ್ಮಾರ್ಟ್‌ಫೋನಿನ ಫೋಟೋ ಬಿಡುಗಡೆಗೂ ಮೊದಲೇ ಸೋರಿಕೆಯಾಗಿದೆ. ಈ ಫೋಟೋದಲ್ಲಿ ಫೋನಿನ ವಿನ್ಯಾಸವನ್ನು ಕಾಣಬಹುದು. ಜೊತೆಗೆ, ಪ್ರಮುಖ ವೈಶಿಷ್ಟ್ಯಗಳನ್ನು ಸಹ ಬಹಿರಂಗಪಡಿಸಲಾಗಿದೆ.
ಒಪ್ಪೋ ಫೈಂಡ್ X8 (Oppo Find X8) ಮೊಬೈಲ್‌ನ ಫೋಟೋ ಮೈಕ್ರೋ ಬ್ಲಾಗಿಂಗ್ ಸೈಟ್ Weibo ನಲ್ಲಿ ಸೋರಿಕೆಯಾಗಿದೆ. ಈ ಮೂಲಕ ಫೋನಿನ ವಿನ್ಯಾಸ (ಲುಕ್) ರಿವೀಲ್ ಆಗಿದೆ. ಮೊಬೈಲ್‌ನ ಹಿಂಭಾಗದ ಫಲಕದಲ್ಲಿ ದೊಡ್ಡ ವೃತ್ತಾಕಾರದ ಕ್ಯಾಮೆರಾ ಮಾಡ್ಯೂಲ್ ಕಂಡು ಬರುತ್ತದೆ. ಇದರಲ್ಲಿ ಎಲ್‌ಇಡಿ ಫ್ಲ್ಯಾಷ್‌ನೊಂದಿಗೆ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ನೀಡಲಾಗಿದೆ. ಫೋನಿನ ಹಿಂಭಾಗವು ಒನ್‌ಪ್ಲಸ್ ಓಪನ್ (OnePlus Open) ಮತ್ತು ಒಪ್ಪೋ ಫೈಂಡ್ N3 (Oppo Find N3) ಅನ್ನು ಹೋಲುತ್ತದೆ.

ಒಪ್ಪೋ ಫೈಂಡ್ X8 ಫೋನ್ ಕ್ಯಾಮೆರಾ ಮಾಡ್ಯೂಲ್‌ನಲ್ಲಿ 'H' ಬ್ರ್ಯಾಂಡಿಂಗ್ ಅನ್ನು ಸಹ ಹೊಂದಿದೆ. ಅಂದರೆ ಒಪ್ಪೋ ಫೈಂಡ್ X8 ಫೋನ್ ಹ್ಯಾಸೆಲ್‌ಬ್ಲಾಡ್ ಪಾಲುದಾರಿಕೆಯಲ್ಲಿ ಬರುತ್ತದೆ. ಒಪ್ಪೋ ಫೈಂಡ್ X8 ಫೋನ್ ನೀಲಿ ಸಿಲ್ವರ್ ಬಣ್ಣದಲ್ಲಿ ಕಂಡುಬರುತ್ತದೆ. ಇತರೆ ಸೋರಿಕೆಗಳಲ್ಲಿ ಇದು ಕಪ್ಪು ಬಣ್ಣದಲ್ಲಿ ಕಂಡುಬಂದಿದೆ. ಈ ಸೋರಿಕೆಯಲ್ಲಿ ಮುಂಭಾಗದ ಫಲಕದ ಬಗ್ಗೆ ಯಾವುದೇ ಮಾಹಿತಿ ಲಭ್ಯವಿಲ್ಲ. ಆದರೆ, ಒಪ್ಪೋ ಫೈಂಡ್ X8 ಫೋನಿನಲ್ಲಿ ಉತ್ತಮವಾದ ಡಿಸ್ಪ್ಲೇಯನ್ನು ಪಡೆಯಬಹುದು ಎಂದು ನಿರೀಕ್ಷಿಸಲಾಗಿದೆ.
ಒಪ್ಪೋ ಫೈಂಡ್ X8 ಫೋನಿನ ವೈಶಿಷ್ಟ್ಯಗಳು (ಸೋರಿಕೆ)
ಡಿಸ್ಪ್ಲೇ ವಿವರ
ಮುಂಬರುವ ಒಪ್ಪೋ ಫೈಂಡ್ X8 ಫೋನ್ 6.7 ಇಂಚಿನ LTPO OLED ಡಿಸ್ಪ್ಲೇಯನ್ನು ಹೊಂದಿರಲಿದೆ. ಇದು ಪೂರ್ಣ ಹೆಚ್‌ಡಿ ಪ್ಲಸ್ ರೆಸಲ್ಯೂಶನ್‌ನೊಂದಿಗೆ ಬರುತ್ತದೆ. 1 ರಿಂದ 120 Hz ವರೆಗಿನ ಡೈನಾಮಿಕ್ ರಿಫ್ರೆಶ್ ದರ ಮತ್ತು ಹೆಚ್ಚಿನ ಬ್ರೈಟ್‌ನೆಸ್ ಅನ್ನು ಈ ಡಿಸ್ಪ್ಲೇಯು ಬೆಂಬಲಿಸಬಹುದು.
ಪ್ರೊಸೆಸರ್ ಸಾಮರ್ಥ್ಯ
ಕಂಪನಿಯು ಒಪ್ಪೋ ಫೈಂಡ್ X8 ಮೊಬೈಲ್ ಅನ್ನು ಮೀಡಿಯಾ ಟೆಕ್ ಡೈಮೆನ್ಸಿಟಿ 9400 ಚಿಪ್‌ಸೆಟ್‌ನೊಂದಿಗೆ ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಈ ಚಿಪ್ ಬಗ್ಗೆ ಗೀಕ್‌ಬೆಂಚ್‌ನಲ್ಲಿಯೂ ಮಾಹಿತಿ ಸೋರಿಕೆಯಾಗಿದೆ.
ಕ್ಯಾಮೆರಾ ರಚನೆ
ಒಪ್ಪೋ ಕಂಪನಿಯು ಕ್ಯಾಮೆರಾಗೆ ಹೆಚ್ಚು ಒತ್ತು ನೀಡುತ್ತದೆ. ಅದರಂತೆ, ಒಪ್ಪೋ ಫೈಂಡ್ X8 ಮೊಬೈಲ್ 50 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾವನ್ನು ಹೊಂದಿರಲಿದೆ. ಇದು 50 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್ ಮತ್ತು 3x ಪೆರಿಸ್ಕೋಪ್ ಜೂಮ್ ಲೆನ್ಸ್ ಅನ್ನು ಹಿಂದಿನ ಪ್ಯಾನೆಲ್‌ನಲ್ಲಿ ಹೊಂದಿರುವ ಸಾಧ್ಯತೆಯಿದೆ. ಸೆಲ್ಫಿ ಕ್ಯಾಮೆರಾ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.
ಬ್ಯಾಟರಿ ಬ್ಯಾಕಪ್
ಒಪ್ಪೋ ಫೈಂಡ್ X8 ಸ್ಮಾರ್ಟ್‌ಫೋನ್ 5,600mAh ಸಾಮರ್ಥ್ಯದ ದೊಡ್ಡ ಬ್ಯಾಟರಿಯನ್ನು ಹೊಂದಿರುವ ಸಾಧ್ಯತೆಯಿದೆ. ಇದನ್ನು ವೇಗವಾಗಿ ಚಾರ್ಜ್ ಮಾಡಲು, ಕಂಪನಿಯು 100W ವೈರ್ಡ್ ಚಾರ್ಜಿಂಗ್ ಬೆಂಬಲವನ್ನು ಒದಗಿಸುವ ನಿರೀಕ್ಷೆಯಿದೆ.
ಇತರೆ ವೈಶಿಷ್ಟ್ಯಗಳು
ಮುಂಬರುವ ಒಪ್ಪೋ ಫೈಂಡ್ X8 ಮೊಬೈಲ್ ಆಂಡ್ರಾಯ್ಡ್ ಜೊತೆಗೆ ColorOS 15 ನೊಂದಿಗೆ ಬರಬಹುದು. ಇದು ಯುಎಸ್‌ಬಿ ಟೈಪ್ ಸಿ ಪೋರ್ಟ್ ಅನ್ನು ಹೊಂದಿರಲಿದೆ. ಈ ಫೋನ್, ಟ್ರೈ-ಸ್ಟೇಟ್ ಅಲರ್ಟ್ ಸ್ಲೈಡರ್ ಮತ್ತು ಡೆಡಿಕೇಟೆಡ್ ಬಟನ್ ಅನ್ನು ಹೊಂದಿರುತ್ತದೆ ಎಂದು ಹೇಳಲಾಗಿದೆ. ಒಪ್ಪೋ ಫೈಂಡ್ X8 ಅನ್ನು ಅಕ್ಟೋಬರ್ 21 ರಂದು ಚೀನಾದಲ್ಲಿ ಬಿಡುಗಡೆ ಮಾಡಬಹುದು ಎಂದು ನಿರೀಕ್ಷಿಸಲಾಗಿದೆ.


Click it and Unblock the Notifications








