OPPO: ಈ ಫೋನಿಗೆ ಸಾಟಿಯೇ ಇಲ್ಲ! 7000mAh ಬ್ಯಾಟರಿ, 50MP ಕ್ಯಾಮೆರಾ.. ಕೇವಲ 13,990 ರೂ.!
ಒಪ್ಪೋ ನಿನ್ನೆ ಭಾರತದಲ್ಲಿ ಒಪ್ಪೋ K13 5G (OPPO K13 5G) ಅನ್ನು ಪರಿಚಯಿಸಿತ್ತು. ಒಂದು ದಿನದ ಬಳಿಕ, ಹೊಸ ಒಪ್ಪೋ K12s (OPPO K12s) ಫೋನನ್ನು ಇಂದು ಬಿಡುಗಡೆ ಮಾಡಿದೆ. ಹೌದು, ಕಂಪನಿಯು ತನ್ನ 'K' ಸರಣಿಯಲ್ಲಿ ಈ ಹೊಸ ಫೋನನ್ನು ತಂದಿದೆ. ಈ ಸ್ಮಾರ್ಟ್‌ಫೋನ್ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಒಪ್ಪೋ K13 ಫೋನಿನಂತೆಯೇ ಇದೆ. ಒಪ್ಪೋ K13 ಅನ್ನು 8GB RAM ನೊಂದಿಗೆ ಲಾಂಚ್ ಮಾಡಿದ್ದರೆ, ಒಪ್ಪೋ K12S ಮೊಬೈಲ್ 12GB RAM ನೊಂದಿಗೆ ಬರುತ್ತದೆ. ಈ ಒಪ್ಪೋ K12s ವಿಶೇಷತೆಗಳ ಬಗ್ಗೆ ಇಲ್ಲಿದೆ ಮಾಹಿತಿ.
ಒಪ್ಪೋ K12s ಮೊಬೈಲ್ ನಾಲ್ಕು ಸ್ಟೋರೇಜ್ ಮತ್ತು ಮೂರು ಬಣ್ಣಗಳ ಆಯ್ಕೆಗಳಲ್ಲಿ ಬರುತ್ತದೆ. ಈ ಫೋನಿನ ವಿಶೇಷತೆಗಳೆಂದರೆ, ಇದು ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 6 ಜೆನ್ 4 ಪ್ರೊಸೆಸರ್ ಹೊಂದಿದೆ. ಈ ಮೊಬೈಲ್ 6.67 ಇಂಚಿನ ಡಿಸ್ಪ್ಲೇಯೊಂದಿಗೆ ಬರುತ್ತದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಮತ್ತು 16 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಅಳವಡಿಸಲಾಗಿದೆ. ಇದರೊಂದಿಗೆ 512GB ಸ್ಟೋರೇಜ್, 7000mAh ಬ್ಯಾಟರಿ ಮತ್ತು 80W ವೇಗದ ಚಾರ್ಜಿಂಗ್ ಸೇರಿದಂತೆ ಹಲವು ಅತ್ಯುತ್ತಮ ವೈಶಿಷ್ಟ್ಯಗಳು ಲಭ್ಯವಿದೆ.

ಒಪ್ಪೋ K12s ಫೋನಿನ ವೈಶಿಷ್ಟ್ಯಗಳು
ಡಿಸ್ಪ್ಲೇ ವಿವರ
ಒಪ್ಪೋ K12s ಸ್ಮಾರ್ಟ್‌ಫೋನ್ 6.67 ಇಂಚಿನ ಫುಲ್ ಹೆಚ್‌ಡಿ ಪ್ಲಸ್ ಅಮೋಲೆಡ್ ಡಿಸ್ಪ್ಲೇ ಹೊಂದಿದೆ. ಇದು 2,400 × 1,080 ಪಿಕ್ಸೆಲ್‌ಗಳ ಸ್ಕ್ರೀನ್ ರೆಸಲ್ಯೂಶನ್ ಬೆಂಬಲದೊಂದಿಗೆ ಬರುತ್ತದೆ. ಈ ಡಿಸ್ಪ್ಲೇಯು 120Hz ರಿಫ್ರೆಶ್ ದರದ ಬೆಂಬಲ ಪಡೆದಿದೆ. ಈ ಸ್ಕ್ರೀನ್ ಸುಗಮ ಸ್ಕ್ರೋಲಿಂಗ್ ಮತ್ತು ಗೇಮಿಂಗ್‌ಗೆ ಉತ್ತಮ ಆಯ್ಕೆಯಾಗಿದೆ. ಇದು ಇನ್ ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸರ್ ಮತ್ತು ಇನ್ಫ್ರಾರೆಡ್ ಸೆನ್ಸರ್ ವೈಶಿಷ್ಟ್ಯ ಹೊಂದಿದೆ.
ಪ್ರೊಸೆಸರ್ ಸಾಮರ್ಥ್ಯ
ಒಪ್ಪೋ K12s ಮೊಬೈಲ್ ಸ್ನಾಪ್‌ಡ್ರಾಗನ್ 6 ಜೆನ್ 4 ಪ್ರೊಸೆಸರ್ ಹೊಂದಿದೆ. ಇದನ್ನು 4 ನ್ಯಾನೊಮೀಟರ್ ಫ್ಯಾಬ್ರಿಕೇಶನ್‌ಗಳ ಮೇಲೆ ನಿರ್ಮಿಸಲಾಗಿದೆ. ಈ ಫೋನ್ ಆಂಡ್ರಾಯ್ಡ್ 15 ಆಧಾರಿತ ColorOS 15 ಜೊತೆಗೆ ಕೆಲಸ ನಿರ್ವಹಿಸುತ್ತದೆ. ಗ್ರಾಫಿಕ್ಸ್‌ಗಾಗಿ ಇದು, ಅಡ್ರಿನೊ 810 ಜಿಪಿಯು ಹೊಂದಿದೆ. ಈ ಮೊಬೈಲ್ 8GB ಮತ್ತು 12GB RAM ಆಯ್ಕೆ ಹೊಂದಿದೆ. ಇದರೊಂದಿಗೆ 128GB, 256GB ಮತ್ತು 512GB ಸ್ಟೋರೇಜ್ ಆಯ್ಕೆ ಲಭ್ಯವಿದೆ.

ಕ್ಯಾಮೆರಾ ಸೆಟಪ್
ಒಪ್ಪೋ K12s ಫೋನ್ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಲಭ್ಯವಿದೆ. ಇದರೊಂದಿಗೆ ದ್ವಿತೀಯ ಕ್ಯಾಮೆರಾವು 2 ಮೆಗಾಪಿಕ್ಸೆಲ್ ಮೊನೊಕ್ರೋಮ್ ಲೆನ್ಸ್ ಹೊಂದಿದೆ. ಈ ಫೋನ್ 4K ವಿಡಿಯೋ ರೆಕಾರ್ಡಿಂಗ್ ಅನ್ನು ಬೆಂಬಲಿಸುತ್ತದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಫೋನಿನಲ್ಲಿ 16 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾವನ್ನು ಅಳವಡಿಸಲಾಗಿದೆ.
ಬ್ಯಾಟರಿ ಮತ್ತು ಚಾರ್ಜಿಂಗ್
ಒಪ್ಪೋ K12s ಮೊಬೈಲ್ 7000mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಬಿಡುಗಡೆಯಾಗಿದೆ. ಈ ಬ್ಯಾಟರಿಯನ್ನು ವೇಗವಾಗಿ ಚಾರ್ಜ್ ಮಾಡಲು, ಈ ಮೊಬೈಲ್ 80W ವೇಗದ ಚಾರ್ಜಿಂಗ್ ತಂತ್ರಜ್ಞಾನವನ್ನು ಹೊಂದಿದೆ. ಈ ಸ್ಮಾರ್ಟ್‌ಫೋನಿನ ಬ್ಯಾಟರಿ 5 ವರ್ಷಗಳ ಬಾಳಿಕೆ ಬರಲಿದೆ ಎಂದು ಕಂಪನಿ ಹೇಳಿದೆ.
ಒಪ್ಪೋ K12s ಬೆಲೆ ಮತ್ತು ಲಭ್ಯತೆ
ಒಪ್ಪೋ K12s ಫೋನಿನ 8GB RAM + 128GB ಸ್ಟೋರೇಜ್ ರೂಪಾಂತರವನ್ನು 13,990 ರೂ.ಗೆ ಬಿಡುಗಡೆ ಮಾಡಲಾಗಿದೆ. 8GB RAM + 256GB ಸ್ಟೋರೇಜ್ ಬೆಲೆ 16,320 ರೂ. ಆಗಿದೆ. 12GB RAM + 256GB ಸ್ಟೋರೇಜ್ ವೇರಿಯಂಟ್ 18,650 ರೂ.ಗೆ ಮಾರಾಟವಾಗಲಿದೆ. ಇನ್ನು ಟಾಪ್ ವೇರಿಯಂಟ್ 12GB RAM + 512GB ಅನ್ನು 20,990 ರೂ.ಗೆ ಪರಿಚಯಿಸಲಾಗಿದೆ. ಈ ಸ್ಮಾರ್ಟ್‌ಫೋನ್ ಏಪ್ರಿಲ್ 25 ರಿಂದ ಚೀನಾದಲ್ಲಿ ಮಾರಾಟವಾಗಲಿದೆ. ಇದನ್ನು ರೋಸ್ ಪರ್ಪಲ್, ಪ್ರಿಸ್ಮ್ ಬ್ಲಾಕ್ ಮತ್ತು ಸ್ಟಾರ್ ವೈಟ್ ಬಣ್ಣಗಳಲ್ಲಿ ಖರೀದಿಸಬಹುದು. ಇದು ಆದಷ್ಟು ಬೇಗ ಭಾರತೀಯ ಮಾರುಕಟ್ಟೆಗೆ ಬರುವ ಸಾಧ್ಯತೆಯಿದೆ.


Click it and Unblock the Notifications








