ಮ್ಯಾಜಿಕ್ ಶುರು! ರಿಯಲ್‌ಮಿ 16 ಪ್ರೋ ಹ್ಯಾರಿ ಪಾಟರ್ ಎಡಿಷನ್ ಲಾಂಚ್ ಡೇಟ್ ಫಿಕ್ಸ್: ಫೀಚರ್ಸ್ ನೋಡಿ
ರಿಯಲ್‌ಮಿ (Realme) ಕಂಪನಿಯ ಹೊಸ ಕೊಲ್ಯಾಬರೇಷನ್ ಸ್ಮಾರ್ಟ್‌ಫೋನ್ ಶೀಘ್ರದಲ್ಲೇ ಮಾರುಕಟ್ಟೆಗೆ ಬರಲು ಸಜ್ಜಾಗಿದ್ದು, ಫ್ಲಿಪ್‌ಕಾರ್ಟ್‌ನಲ್ಲಿ (Flipkart) ಇದರ ಟೀಸರ್ ಸೈಲೆಂಟ್ ಆಗಿ ಕಾಣಿಸಿಕೊಂಡಿದೆ. ಫ್ಲಿಪ್‌ಕಾರ್ಟ್ ಮೊಬೈಲ್ ವಿಭಾಗದಲ್ಲಿ 'ಲೆಟ್ ದಿ ಮ್ಯಾಜಿಕ್ ಬಿಗಿನ್' (Let The Magic Begin) ಎಂಬ ಬ್ಯಾನರ್ ನೀಡಲಾಗಿದ್ದು, ಇದರಲ್ಲಿ ಹ್ಯಾರಿ ಪಾಟರ್‌ನ ಪ್ರಸಿದ್ಧ 'ಪ್ಲಾಟ್‌ಫಾರ್ಮ್ 9¾' ಅನ್ನು ನೆನಪಿಸುವ ವಿಂಟೇಜ್ ಟ್ರಂಕ್ ಪೆಟ್ಟಿಗೆಗಳ ಫೋಟೊ ಇದೆ. ಇನ್ನು ಲೀಕ್ ಆಗಿರುವ ರೆಂಡರ್ ಚಿತ್ರಗಳನ್ನು ಗಮನಿಸಿದರೆ, ಫೋನ್ ಹಿಂಭಾಗದಲ್ಲಿ ಹಾಗ್ವರ್ಟ್ಸ್ ಕ್ರೆಸ್ಟ್ (Hogwarts crest), ಬ್ರೌನ್ ಲೆದರ್ ಮಾದರಿಯ ಫಿನಿಶಿಂಗ್, ಗೋಲ್ಡನ್ ಸ್ಪರ್ಶ ಹಾಗೂ ಸ್ಕ್ವೇರ್ ಆಕಾರದ ಕ್ಯಾಮೆರಾ ವಿನ್ಯಾಸವನ್ನು ನೀಡಲಾಗಿದೆ. ಭಾರತದಲ್ಲಿ ಇದು ಯಾವಾಗ ಲಾಂಚ್ ಆಗಲಿದೆ ಎಂಬುದನ್ನು ಕಂಪನಿ ಇನ್ನು ಅಧಿಕೃತವಾಗಿ ತಿಳಿಸಿಲ್ಲವಾದರೂ, ಬಿಡುಗಡೆ ಹತ್ತಿರದಲ್ಲೇ ಇದೆ ಎಂದು ವರದಿಗಳು ಹೇಳುತ್ತಿವೆ.
ಈ ಟೀಸರ್ ಅಧಿಕೃತ ಕ್ಯಾಂಪೇನ್ ಎಂಬುದನ್ನೇನೋ ಖಚಿತಪಡಿಸಿದೆ, ಆದರೆ ರಿಯಲ್‌ಮಿ ಫೋನ್‌ನ ಹೆಸರನ್ನು ಮಾತ್ರ ಸದ್ಯಕ್ಕೆ ರಟ್ಟು ಮಾಡಿಲ್ಲ. ಇತ್ತೀಚೆಗೆ ಡಿಲೀಟ್ ಆದ ಲೀಕ್ ಮಾಹಿತಿಯ ಪ್ರಕಾರ, ಇದು 'ರಿಯಲ್‌ಮಿ 16 ಪ್ರೋ ಹ್ಯಾರಿ ಪಾಟರ್ ಎಡಿಷನ್' (Realme 16 Pro Harry Potter Edition) ಆಗಿರಲಿದ್ದು, 12GB + 256GB ವೆರಿಯೆಂಟ್‌ನಲ್ಲಿ ಮಾರುಕಟ್ಟೆಗೆ ಬರಲಿದೆ. ಕೇವಲ ಬಣ್ಣವನ್ನಷ್ಟೇ ಬದಲಾಯಿಸದೆ, ಫೋನ್‌ನ ಪ್ರತಿಯೊಂದು ಮೆಟೀರಿಯಲ್ ಹಾಗೂ ಬ್ರ್ಯಾಂಡಿಂಗ್‌ನಲ್ಲಿಯೂ ಹ್ಯಾರಿ ಪಾಟರ್ ಥೀಮ್ ಅನ್ನು ಆಳವಾಗಿ ಅಳವಡಿಸಿರುವುದು ರೆಂಡರ್ ಚಿತ್ರಗಳಿಂದ ಸ್ಪಷ್ಟವಾಗುತ್ತದೆ. ರಿಯಲ್‌ಮಿ ತನ್ನ ಮೈಕ್ರೋಸೈಟ್‌ನಲ್ಲೂ ಹ್ಯಾರಿ ಪಾಟರ್ ಚಿತ್ರಗಳನ್ನು ಪ್ರದರ್ಶಿಸುತ್ತಿರುವುದು ಈ ವಿಶೇಷ ಕೊಲ್ಯಾಬರೇಷನ್‌ಗೆ ಸಾಕ್ಷಿಯಾಗಿದೆ.

ರಿಯಲ್‌ಮಿ 16 ಪ್ರೋ ಹ್ಯಾರಿ ಪಾಟರ್ ಎಡಿಷನ್ ಸ್ಪೆಸಿಫಿಕೇಷನ್‌ಗಳು
ಒಂದು ವೇಳೆ ಹಾರ್ಡ್‌ವೇರ್ ವೈಶಿಷ್ಟ್ಯಗಳು ರೆಗ್ಯುಲರ್ ರಿಯಲ್‌ಮಿ 16 ಪ್ರೋ ಮಾದರಿಯಲ್ಲೇ ಇದ್ದರೆ, ಈ ಫೋನ್‌ನಲ್ಲಿ 6.78-ಇಂಚಿನ 144Hz AMOLED ಡಿಸ್‌ಪ್ಲೇ, ಮೀಡಿಯಾಟೆಕ್ ಡೈಮೆನ್ಸಿಟಿ 7300 ಮ್ಯಾಕ್ಸ್ ಪ್ರೊಸೆಸರ್, 80W ಫಾಸ್ಟ್ ಚಾರ್ಜಿಂಗ್ ಬೆಂಬಲಿಸುವ 7,000mAh ಬ್ಯಾಟರಿ ಮತ್ತು ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಇರುವ 200MP ಪ್ರಾಥಮಿಕ ಕ್ಯಾಮೆರಾ ಇರಲಿದೆ. ಲಾಂಚ್ ಟೀಸರ್‌ಗಳ ಪ್ರಕಾರ ಇದು IP69 ರೇಟಿಂಗ್ ಹಾಗೂ 50MP ಸೆಲ್ಫಿ ಕ್ಯಾಮೆರಾವನ್ನೂ ಹೊಂದಿರಲಿದೆ. ಆದರೆ, ಹ್ಯಾರಿ ಪಾಟರ್ ಎಡಿಷನ್‌ಗೆ ಸೀಮಿತವಾದ ಇತರ ವಿಶೇಷ ಫೀಚರ್‌ಗಳ ಕುರಿತು ಕಂಪನಿ ಇನ್ನು ಅಧಿಕೃತ ಮಾಹಿತಿ ನೀಡಿಲ್ಲ.
ಭಾರತದಲ್ಲಿ ರಿಯಲ್‌ಮಿ 16 ಪ್ರೋ ಹ್ಯಾರಿ ಪಾಟರ್ ಎಡಿಷನ್ ಬೆಲೆ ಮತ್ತು ವೆರಿಯೆಂಟ್ಸ್
ಈ ಸರಣಿಯಲ್ಲಿ 12GB/256GB ವೆರಿಯೆಂಟ್ ಭಾರತೀಯ ಗ್ರಾಹಕರಿಗೆ ಹೇಳಿಮಾಡಿಸಿದಂತಿರಲಿದೆ. ಸದ್ಯ ಮಾರುಕಟ್ಟೆಯಲ್ಲಿರುವ ಸಾಮಾನ್ಯ ರಿಯಲ್‌ಮಿ 16 ಪ್ರೋ ಫೋನ್‌ನ ಬೆಲೆ ₹44,999 ರಿಂದ ₹49,999 ರ ನಡುವೆ ಇದೆ (ಆಫರ್ ಹಾಗೂ ಸೆಲ್ಲರ್‌ಗೆ ತಕ್ಕಂತೆ ಬದಲಾಗುತ್ತದೆ). ಹೀಗಾಗಿ ಹ್ಯಾರಿ ಪಾಟರ್ ಥೀಮ್ ಹೊಂದಿರುವ ಈ ಸ್ಪೆಷಲ್ ಎಡಿಷನ್ ಬೆಲೆ ಕೊಂಚ ಹೆಚ್ಚೇ ಇರಲಿದ್ದು, ಬ್ಯಾಂಕ್ ಡಿಸ್ಕೌಂಟ್ ಹಾಗೂ ನೋ-ಕಾಸ್ಟ್ ಇಎಂಐ (No-cost EMI) ಆಫರ್‌ಗಳ ಮೂಲಕ ಇದು ಕೊಂಚ ಕೈಗೆಟುಕುವ ದರದಲ್ಲಿ ಸಿಗಬಹುದು. ಇನ್ನು ಆರಂಭಿಕ ಹಂತದಲ್ಲಿ ಸ್ಟಾಕ್ ಸೀಮಿತವಾಗಿರುವುದರಿಂದ ಲಾಂಚ್ ಆಫರ್‌ಗಳು ಕಮ್ಮಿ ಇರಬಹುದು.
ರಿಯಲ್‌ಮಿ 16 ಪ್ರೋ ಹ್ಯಾರಿ ಪಾಟರ್ ಎಡಿಷನ್ ಖರೀದಿಸಬೇಕೇ ಅಥವಾ ಕಾಯಬೇಕೇ?
ಈ ಫೋನ್‌ನ ಬೆಲೆ, ಮಾರಾಟದ ದಿನಾಂಕ ಮತ್ತು ಬಾಕ್ಸ್‌ನಲ್ಲಿ ನೀಡಲಾಗುವ ವಸ್ತುಗಳ ಬಗ್ಗೆ ಸ್ಪಷ್ಟ ಮಾಹಿತಿ ಪಡೆಯಲು 48 ರಿಂದ 72 ಗಂಟೆಗಳ ಕಾಲ ಕಾಯುವುದು ಒಳ್ಳೆಯದು. ಭಾರತದಲ್ಲಿ ಇದರ ಬಿಡುಗಡೆಯನ್ನು ಖಚಿತಪಡಿಸಿಕೊಳ್ಳಲು ಫ್ಲಿಪ್‌ಕಾರ್ಟ್ ಆಪ್, ರಿಯಲ್‌ಮಿ ಮೈಕ್ರೋಸೈಟ್ ಮತ್ತು ಬಿಐಎಸ್ (BIS) ಲಿಸ್ಟಿಂಗ್‌ಗಳ ಮೇಲೆ ಕಣ್ಣಿಡಿ. ಕಳೆದ ವರ್ಷ ಬಂದಿದ್ದ 'ಗೇಮ್ ಆಫ್ ಥ್ರೋನ್ಸ್' (Game of Thrones) ಎಡಿಷನ್‌ನಲ್ಲೂ ಹಾರ್ಡ್‌ವೇರ್‌ನಲ್ಲಿ ಯಾವುದೇ ಬದಲಾವಣೆ ಮಾಡದೆ, ಬಾಕ್ಸ್‌ನಲ್ಲಿ ಆಕರ್ಷಕ ಆಕ್ಸೆಸರೀಸ್‌ಗಳನ್ನು ನೀಡಲಾಗಿತ್ತು. ಈ ಫೋನ್‌ಗೂ ಕಂಪನಿ ಅದೇ ಪ್ಲಾನ್ ಮುಂದುವರಿಸುವ ಸಾಧ್ಯತೆ ಇದೆ. ಈ ನಡುವೆ, ರಿಯಲ್‌ಮಿಯ ಚೇಸ್ ಕ್ಸು (Chase Xu) ಅವರು "ಸೆಪ್ಟೆಂಬರ್ 8 ರಂದು ಸಿಗೋಣ" (See you on 8 September) ಎಂದು ಹೇಳುವ ಮೂಲಕ ಕುತೂಹಲ ಹೆಚ್ಚಿಸಿದ್ದಾರೆ.


Click it and Unblock the Notifications
