ಭಾರತಕ್ಕೆ ಶೀಘ್ರವೇ Realme 16T 5G ಮತ್ತು Realme P4R 5G ಆಗಮನ?!
ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಶೀಘ್ರದಲ್ಲೇ ಮತ್ತೆರಡು ಆಕರ್ಷಕ Realme ಸ್ಮಾರ್ಟ್‌ಫೋನ್‌ಗಳು ಬಿಡುಗಡೆಯಾಗುವ ಸೂಚನೆ ದೊರೆತಿದೆ. ಇತ್ತೀಚಿನ ಲೀಕ್ ವರದಿಗಳ ಪ್ರಕಾರ, Realme ತನ್ನ ಜನಪ್ರಿಯ Realme 16 ಸರಣಿ ಮತ್ತು Realme P4 ಸರಣಿಗಳ ಅಡಿಯಲ್ಲಿ ಎರಡು ಹೊಸ 5G ಸ್ಮಾರ್ಟ್‌ಫೋನ್‌ಗಳನ್ನು ಭಾರತದಲ್ಲಿ ಪರಿಚಯಿಸಲು ಸಿದ್ಧತೆ ನಡೆಸುತ್ತಿದ್ದು, ಈ ಹೊಸ ಸಾಧನಗಳನ್ನು Realme 16T 5G ಮತ್ತು Realme P4R 5G ಎಂಬ ಹೆಸರಿನಲ್ಲಿ ಬಿಡುಗಡೆ ಮಾಡುವ ಸಾಧ್ಯತೆ ಇದೆ ಎಂದು ಜನಪ್ರಿಯ ಟಿಪ್‌ಸ್ಟಾರ್ ಅಭಿಷೇಕ್ ಯಾದವ್ ಅವರು ಹೇಳಿದ್ದಾರೆ.
ಸಾಮಾಜಿಕ ಜಾಲತಾಣ X ನಲ್ಲಿ ಪೋಸ್ಟ್ ಮಾಡಿದ ಟಿಪ್‌ಸ್ಟರ್ ಅಭಿಷೇಕ್ ಯಾದವ್ (@yabhishekhd) ಅವರು, ಭಾರತದಲ್ಲಿ Realme ಕಂಪೆನಿಯು Realme 16T 5G ಮತ್ತು Realme P4R 5G ಎಂದು ಕರೆಯಲ್ಪಡುವ ಎರಡು ಹೊಸ ಫೋನ್‌ಗಳನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲು ತಯಾರಿ ನಡೆಸುತ್ತಿದೆ ಎಂದು ಹೇಳಿಕೊಂಡಿದ್ದಾರೆ. ಈ ಎರಡು ಹೊಸ ಫೋನ್‌ಗಳನ್ನು ಅವರು ಕ್ರಮವಾಗಿ RMX5268 ಮತ್ತು RMX5266 ಮಾದರಿ ಸಂಖ್ಯೆಗಳಲ್ಲಿ ಗುರುತಿಸಿದ್ದಾರೆ. ಇದರಿಂದ ಈ ಎರಡೂ ಫೋನ್‌ಗಳು ಹೊಂದಿರಲಿರುವ ಸ್ಟೋರೇಜ್ ಆಯ್ಕೆಗಳು ಮತ್ತು ಬಣ್ಣ ಆಯ್ಕೆಗಳು ಸಹ ಬಹಿರಂಗವಾಗಿವೆ.
Realme 16T 5G ದೇಶದಲ್ಲಿ 6GB + 128GB, 8GB + 128GB, ಮತ್ತು 8GB + 256GB RAM ಮತ್ತು ಶೇಖರಣಾ ಮಾದರಿಗಳಲ್ಲಿ ಲಭ್ಯವಿರುತ್ತದೆ ಎಂದು ಸೂಚಿಸಲಾಗಿದೆ. ಇತ್ತ Realme P4R 5G 4GB + 128GB, 6GB + 128GB ಮತ್ತು 6GB + 256GB ಮಾದರಿಗಳಲ್ಲಿ ಮಾರಾಟಕ್ಕೆ ಬರಬಹುದು. ವದಂತಿಯ Realme 16 ಸರಣಿ ಫೋನ್ ಅರೋರಾ ಗ್ರೀನ್, ಸ್ಟಾರ್‌ಲೈಟ್ ಬ್ಲಾಕ್ ಮತ್ತು ಸ್ಟಾರ್‌ಲೈಟ್ ರೆಡ್ ಬಣ್ಣಗಳಲ್ಲಿ ಬರಬಹುದು. Realme P4R 5G ಲ್ಯಾವೆಂಡರ್ ಗ್ಲೇರ್, ಸಿಲ್ವರ್ ಗ್ಲೇರ್ ಮತ್ತು ಟೈಟಾನಿಯಂ ಗ್ಲೇರ್ ಬಣ್ಣಗಳಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ.

ಈ ವರ್ಷದ ಜನವರಿ 6ರಂದು, Realme ಭಾರತದಲ್ಲಿ Realme 16 Pro+ 5G ಮತ್ತು Realme 16 Pro 5G ಫೋನ್‌ಗಳನ್ನು ಅಧಿಕೃತವಾಗಿ ಬಿಡುಗಡೆ ಮಾಡಿತ್ತು. ಇವುಗಳಲ್ಲಿ Realme 16 Pro 5G ಫೋನ್ ಪ್ರಾರಂಭಿಕ ಬೆಲೆ ₹31,999 ರೂ.ಗಳಿಗೆ ಬಿಡುಗಡೆಯಾಗಿದ್ದರೆ, Realme 16 Pro+ 5G ಪ್ರಾರಂಭಿಕ ಬೆಲೆ ₹39,999 ರೂ.ಗಳಾಗಿತ್ತು. ಇದೀಗ ಹೊಸ Realme 16T 5G ಫೋನ್ ಕೂಡ ಇದೇ ಸರಣಿಗೆ ಸೇರ್ಪಡೆಯಾಗುವ ಸಾಧ್ಯತೆ ಇದೆ. ಟೆಕ್ ವಲಯದಲ್ಲಿ ವಿಶ್ವಾಸಾರ್ಹ ಮಾಹಿತಿ ಹಂಚಿಕೊಳ್ಳುವ ಟಿಪ್ಸ್ಟರ್ ಅಭಿಷೇಕ್ ಯಾದವ್ ಅವರಿಂದ ಈ ಸುದ್ದಿಗೆ ಮತ್ತಷ್ಟು ಮಹತ್ವವೂ ಬಂದಿದೆ.
ಮತ್ತೊಂದೆಡೆ, Realme P4R 5G ಫೋನ್ P4 ಸರಣಿಯ ಇತ್ತೀಚಿನ ಹೊಸ ಮಾದರಿಯಾಗಿ ಬರಬಹುದು. ಈ ಸರಣಿಯಲ್ಲಿ Realme P4 Lite ಫೋನ್ ಕಳೆದ ಫೆಬ್ರವರಿ 20 ರಂದು ದೇಶದಲ್ಲಿ 4GB RAM ಮತ್ತು 64GB ಸ್ಟೋರೇಜ್ ಹೊಂದಿರುವ ಬೇಸ್ ರೂಪಾಂತರಕ್ಕಾಗಿ ರೂ. 9,999 ರ ಆರಂಭಿಕ ಬೆಲೆಯಲ್ಲಿ ಬಿಡುಗಡೆಯಾಗಿತ್ತು. ಆದಾಗ್ಯೂ, Realme P4 Lite 5G ಶೀಘ್ರದಲ್ಲೇ ಈ ಸಾಲಿಗೆ ಸೇರಲಿದೆ ಎಂಬ ಸುದ್ದಿಯೂ ಸಹ ಸಿಕ್ಕಿದೆ. ಇದರಿಂದ ದೇಶದಲ್ಲಿ ಕಡಿಮೆ ಬೆಲೆಯಲ್ಲಿ ಮತ್ತೊಂದು ಫೋನ್ ಅನ್ನು ಶೀಘ್ರದಲ್ಲೇ ನಿರೀಕ್ಷಿಸಬಹುದು. ಆದರೆ, ಈ ಎಲ್ಲಾ ವಿವರಗಳು ಕಂಪೆನಿಯಿಂದ ಇನ್ನೂ ರಹಸ್ಯವಾಗಿವೆ.
ಒಟ್ಟಿನಲ್ಲಿ ನೋಡಿದರೆ, Realme ಭಾರತದಲ್ಲಿ ತನ್ನ 5G ಸ್ಮಾರ್ಟ್‌ಫೋನ್ ಪೋರ್ಟ್‌ಫೋಲಿಯೊವನ್ನು ವೇಗವಾಗಿ ವಿಸ್ತರಿಸುತ್ತಿದೆ. ಹೊಸದಾಗಿ ಲಾಂಚ್ ಆಗಲಿರುವ Realme 16T 5G ಮತ್ತು Realme P4R 5G ಮಾದರಿಗಳು ಮಧ್ಯಮ ಮತ್ತು ಬಜೆಟ್ ವಿಭಾಗದ ಗ್ರಾಹಕರಿಗೆ ಹೆಚ್ಚುವರಿ ಆಯ್ಕೆಗಳನ್ನು ನೀಡಬಹುದು. ಆದರೆ ಈ ಫೋನ್‌ಗಳ ಸಂಪೂರ್ಣ ವೈಶಿಷ್ಟ್ಯಗಳು, ಅಧಿಕೃತ ಬೆಲೆ ಹಾಗೂ ಬಿಡುಗಡೆ ದಿನಾಂಕದ ಕುರಿತು ಸ್ಪಷ್ಟ ಮಾಹಿತಿ ಕಂಪನಿಯ ಅಧಿಕೃತ ಘೋಷಣೆಯ ಬಳಿಕವೇ ಲಭ್ಯವಾಗಲಿದೆ. ಅಲ್ಲಿಯವರೆಗೂ ನಿಮ್ಮ ನೆಚ್ಚಿನ ಕನ್ನಡ ಗಿಜ್‌ಬಾಟ್‌ನಲ್ಲಿ ನಿರಂತರ ಟೆಕ್ ಅಪ್‌ಡೇಟ್‌ಗಳನ್ನು ಪಡೆಯುತ್ತಿರಿ.


Click it and Unblock the Notifications








