Realme GT 7 ಸರಣಿ ಬಿಡುಗಡೆ ದಿನಾಂಕ ಪ್ರಕಟ!..ಇಲ್ಲಿದೆ ಸಂಪೂರ್ಣ ಮಾಹಿತಿ!
ಭಾರತ ಸೇರಿದಂತೆ ಜಾಗತಿಕವಾಗಿ ಏಕಕಾಲದಲ್ಲಿ ಬಿಡುಗಡೆಯಾಗುತ್ತಿರುವ ಹೊಸ Realme GT 7 ಸರಣಿಯು ಇದೇ ತಿಂಗಳ ಕೊನೆಯಲ್ಲಿ ಬಿಡುಗಡೆಯಾಗುವುದು ಅಧಿಕೃತವಾಗಿ ಖಚಿತವಾಗಿದೆ. Realme GT 7 ಸರಣಿಯನ್ನು ಇದೇ ಮೇ 27 ರಂದು ಫ್ರಾನ್ಸ್‌ನ ಪ್ಯಾರಿಸ್‌ನಲ್ಲಿ ಬಿಡುಗಡೆ ಮಾಡುವ ಬಗ್ಗೆ Realme ಕಂಪೆನಿ ತಿಳಿಸಿದ್ದು, ಭಾರತೀಯ ಕಾಲಮಾನದ ಪ್ರಕಾರ ಮಧ್ಯಾಹ್ನ 1:30ಕ್ಕೆ ಈ ಕಾರ್ಯಕ್ರಮವು ಆನ್‌ಲೈನ್‌ನಲ್ಲಿ ನೇರ ಪ್ರಸಾರವಾಗಲಿದೆ. ಕಳೆದ ವರ್ಷ ಬಿಡುಗಡೆಯಾದ Realme GT 6 ಮತ್ತು Realme 6T ಮಾದರಿಗಳ ಯಶಸ್ಸಿನ ನಂತರ, ಹೊಸ Realme GT 7 ಮತ್ತು Realme GT 7T ಮಾರುಕಟ್ಟೆಯಲ್ಲಿ ತಮ್ಮದೇ ಆದ ಛಾಪು ಮೂಡಿಸುವ ನಿರೀಕ್ಷೆಯಿದೆ. ಹಾಗಾದರೆ, ಮಧ್ಯಮ ಶ್ರೇಣಿಯ ಮೊಬೈಲ್ ಮಾರುಕಟ್ಟೆಗೆ ಹೊಸದಾಗಿ ಎಂಟ್ರಿ ನೀಡುತ್ತಿರುವ Realme GT 7 ಸರಣಿ ಸ್ಮಾರ್ಟ್‌ಫೋನ್‌ಗಳು ಹೇಗಿರಲಿವೆ ಎಂಬುದನ್ನು ನೋಡೋಣ ಬನ್ನಿ.
ಮುಂಬರುವ Realme GT 7 ಸರಣಿಯ ವೈಶಿಷ್ಟ್ಯಗಳು ಮತ್ತು ನಿರೀಕ್ಷಿತ ಬೆಲೆಯ ಕುರಿತು ಕೆಲವು ವರದಿಗಳು ಈಗಾಗಲೇ ಹೊರಬಿದ್ದಿವೆ. ಚೀನಾದಲ್ಲಿ ಬಿಡುಗಡೆಯಾದ Realme GT 7 ಮೂಲ ಮಾದರಿಯು ಮೀಡಿಯಾ ಟೆಕ್ ಡೈಮೆನ್ಸಿಟಿ 9400+ ಚಿಪ್‌ಸೆಟ್ ಅನ್ನು ಹೊಂದಿದ್ದು, ಜಾಗತಿಕ ಮಾರುಕಟ್ಟೆಗೂ ಇದೇ ಚಿಪ್‌ಸೆಟ್ ಅನ್ನು ಬಳಸುವ ಸಾಧ್ಯತೆ ಇದೆ. ಇದರೊಂದಿಗೆ 7,200mAh ಸಾಮರ್ಥ್ಯದ ಬೃಹತ್ ಬ್ಯಾಟರಿಯನ್ನು ಸಹ ನೀಡಲಾಗುವುದು ಎಂದು ನಿರೀಕ್ಷಿಸಲಾಗಿದೆ. Realme GT 7 ಮಾದರಿಯ ಎರಡೂ ಫೋನ್‌ಗಳು 144Hz ರಿಫ್ರೆಶ್ ದರದೊಂದಿಗೆ 6.78-ಇಂಚಿನ ಪೂರ್ಣ-HD+ OLED ಡಿಸ್ಪ್ಲೇಯನ್ನು ಹೊಂದಿರಲಿವೆ. ಮತ್ತು 7,700mm ಚದರ VC ಕೂಲಿಂಗ್ ಚೇಂಬರ್ ಅನ್ನು ಸಹ ಇದು ಒಳಗೊಂಡಿರಲಿವೆ. ಇದರೊಂದಿಗೆ ಧೂಳು ಮತ್ತು ನೀರಿನಿಂದ ರಕ್ಷಣೆಗಾಗಿ IP69 ರೇಟಿಂಗ್ ಅನ್ನು ಸಹ ಪಡೆದಿರುವ ಸಾಧ್ಯತೆ ಇದೆ.

ಕ್ಯಾಮೆರಾ ವಿಭಾಗದಲ್ಲಿ, ಈ Realme GT 7 ಸ್ಮಾರ್ಟ್‌ಫೋನ್‌ಗಳು 50MP ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಮತ್ತು 16MP ಸೆಲ್ಫಿ ಕ್ಯಾಮೆರಾವನ್ನು ಹೊಂದಿರಬಹುದು. ಇದಲ್ಲದೆ, Realme GT 7 ಹೊಸ ತಂತ್ರಜ್ಞಾನವನ್ನು ಒಳಗೊಂಡಿರುವ ಗ್ರ್ಯಾಫೀನ್-ಆಧಾರಿತ ಐಸ್‌ಸೆನ್ಸ್ ವಿನ್ಯಾಸವನ್ನು ಹೊಂದಿರಬಹುದು. ಇದು ಅತ್ಯಂತ ಪರಿಣಾಮಕಾರಿಯಾದ ತಂಪಾಗಿಸುವ ವ್ಯವಸ್ಥೆಯಾಗಿದ್ದು, ಗೇಮಿಂಗ್ ಅಥವಾ ಹೆಚ್ಚಿನ ಕಾರ್ಯಗಳನ್ನು ನಿರ್ವಹಿಸುವಾಗ ಫೋನ್ ಬಿಸಿಯಾಗುವುದನ್ನು ತಡೆಯುತ್ತದೆ. Realme ಹೇಳುವ ಪ್ರಕಾರ, ಅವರ 360-ಡಿಗ್ರಿ ಶಾಖ ಪ್ರಸರಣ ವ್ಯವಸ್ಥೆಯು ಫೋನ್‌ನ ಪರದೆ ಮತ್ತು ಹಿಂಭಾಗವನ್ನು ಗ್ರ್ಯಾಫೀನ್‌ನಿಂದ ಆವರಿಸಿದೆ, ಇದು ತಾಪಮಾನವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ. ಆದಾಗ್ಯೂ, ಭಾರತೀಯ ಮತ್ತು ಜಾಗತಿಕ ಮಾರುಕಟ್ಟೆಗಳಲ್ಲಿ ಬಿಡುಗಡೆಯಾಗುವ ಮಾದರಿಗಳ ನಿಖರವಾದ ವೈಶಿಷ್ಟ್ಯಗಳ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿ ಲಭ್ಯವಿಲ್ಲ.
Realme GT ಸರಣಿಯು ಯಾವಾಗಲೂ ಕಾರ್ಯಕ್ಷಮತೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡುವ ಸ್ಮಾರ್ಟ್‌ಫೋನ್‌ಗಳನ್ನು ಒಳಗೊಂಡಿರುತ್ತದೆ ಎಂದು ಹೇಳಬಹುದು. ಈ ಹಿಂದೆಯೂ Realme GT ಸರಣಿಯಲ್ಲಿ ಬಿಡುಗಡೆಯಾದ GT 7 Pro ಮಾದರಿಯಂತೆ, ಮುಂಬರುವ GT 7 ಮತ್ತು GT 7T ಮಾದರಿಗಳು ಸಹ ಅತ್ಯುತ್ತಮ ಕಾರ್ಯಕ್ಷಮತೆಯನ್ನು ನೀಡುವ ನಿರೀಕ್ಷೆಯಿದೆ. ಈ ಹೊಸ ಸಾಧನಗಳು ಮತ್ತು ಅವುಗಳ ವೈಶಿಷ್ಟ್ಯಗಳ ಕುರಿತು ಸಂಪೂರ್ಣ ಮಾಹಿತಿಯನ್ನು ಜಾಗತಿಕ ಬಿಡುಗಡೆ ಸಮಾರಂಭದಲ್ಲಿ ಬಹಿರಂಗಪಡಿಸಲಾಗುತ್ತದೆ. ಒಟ್ಟಾರೆಯಾಗಿ, ರಿಯಲ್‌ಮಿಯ ಹೊಸ GT 7 ಸರಣಿಯು ಉತ್ತಮ ಕಾರ್ಯಕ್ಷಮತೆ ಮತ್ತು ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಒಳಗೊಂಡಿರುವ ಮಧ್ಯಮ ಶ್ರೇಣಿಯ ಸ್ಮಾರ್ಟ್‌ಫೋನ್‌ಗಳಾಗಿ ಮಾರುಕಟ್ಟೆಯಲ್ಲಿ ಗಮನ ಸೆಳೆಯುವ ನಿರೀಕ್ಷೆಯಿದೆ. ಈ ಕುರಿತಂತೆ ನಿಮ್ಮ ಅಭಿಪ್ರಾಯ ಏನು ಎಂಬುದನ್ನು ಈ ಕೆಳಗೆ ಕಾಮೆಂಟ್ ಮಾಡಿ ತಿಳಿಸಿ.


Click it and Unblock the Notifications








