ಭಾರತದಲ್ಲಿ 10,000 mAh ಬ್ಯಾಟರಿಯ ಹೊಸ 'ರಿಯಲ್‌ಮಿ GT' ಫೋನ್ ಅನಾವರಣ!
ಚೀನಾದ ಜನಪ್ರಿಯ ಸ್ಮಾರ್ಟ್‌ಫೋನ್ ಬ್ರ್ಯಾಂಡ್ ರಿಯಲ್‌ಮಿ ತನ್ನ GT ಸರಣಿಯ ಅಡಿಯಲ್ಲಿ ಬೃಹತ್ 10,000 mAh ಬ್ಯಾಟರಿಯನ್ನು ಹೊಂದಿರುವ ಹೊಸ ಸ್ಮಾರ್ಟ್‌ಫೋನ್ ಅನ್ನು ಭಾರತದಲ್ಲಿ ಅನಾವರಣಗೊಳಿಸುವ ಮೂಲಕ ಎಲ್ಲರನ್ನು ಅಚ್ಚರಿಗೊಳಿಸಿದೆ. ಪ್ರಮುಖ ಸ್ಮಾರ್ಟ್‌ಫೋನ್ ಬ್ರಾಂಡ್‌ಗಳಲ್ಲಿ ಇದುವರೆಗಿನ ಅತಿ ದೊಡ್ಡ ಬ್ಯಾಟರಿ ಸಾಮರ್ಥ್ಯ ಇದಾಗಿದೆ. ಇಷ್ಟೊಂದು ದೊಡ್ಡ ಬ್ಯಾಟರಿಯನ್ನು ಹೊಂದಿದ್ದರೂ ಸಹ, ಈ ಹೊಸ ಫೋನ್ ಕೇವಲ 8.5mm ದಪ್ಪವನ್ನು ಹೊಂದಿದೆ ಮತ್ತು 200 ಗ್ರಾಂಗಳಿಗಿಂತ ಸ್ವಲ್ಪ ಹೆಚ್ಚು ತೂಗುತ್ತದೆ ಎಂದು ರಿಯಲ್‌ಮಿ ಹೇಳಿಕೊಂಡಿದೆ. ಈ ಕುರಿತಂತೆ ಮತ್ತಷ್ಟು ಮಾಹಿತಿಯನ್ನು ನೋಡೋಣ ಬನ್ನಿ.
ರಿಯಲ್‌ಮಿ ತನ್ನ GT ಸರಣಿಯ ಈ ಸಾಧನದಲ್ಲಿ ಅಲ್ಟ್ರಾ-ಹೈ ಸಿಲಿಕಾನ್ ಅಂಶದ ಆನೋಡ್ ಬ್ಯಾಟರಿಯನ್ನು ಬಳಸಿದ್ದು, ಇದು 10% ಸಿಲಿಕಾನ್ ಅನುಪಾತ ಮತ್ತು 887Wh/L ಶಕ್ತಿಯ ಸಾಂದ್ರತೆಯನ್ನು ಹೊಂದಿದೆ ಎಂದು ಕಂಪನಿ ತಿಳಿಸಿದೆ. ಇಂತಹ ದೊಡ್ಡ ಬ್ಯಾಟರಿಯನ್ನು ಅಳವಡಿಸಲು, ರಿಯಲ್‌ಮಿ ಫೋನ್‌ನ ಆಂತರಿಕ ವಿನ್ಯಾಸದಲ್ಲಿ "ಮಿನಿ ಡೈಮಂಡ್ ಆರ್ಕಿಟೆಕ್ಚರ್" ಎಂಬ ವಿಶೇಷ ತಂತ್ರಜ್ಞಾನವನ್ನು ಪರಿಚಯಿಸಿದೆ. ಇದರ ಪರಿಣಾಮವಾಗಿ, ಈ ಸಾಧನವು ಕೇವಲ 23.4mm ನಲ್ಲಿ ವಿಶ್ವದ ಅತ್ಯಂತ ಕಿರಿದಾದ ಮೇನ್‌ಬೋರ್ಡ್ ಅನ್ನು ಹೊಂದಿದೆ ಎಂದು ರಿಯಲ್‌ಮಿ ಹೆಮ್ಮೆಯಿಂದ ಹೇಳಿದೆ.
ರಿಯಲ್‌ಮಿ ಕಂಪೆನಿಯು ತನ್ನ ಅಧಿಕೃತ X (ಹಿಂದೆ ಟ್ವಿಟರ್) ನಲ್ಲಿ ಹಂಚಿಕೊಂಡಿರುವ ಮಾಹಿತಿಯ ಪ್ರಕಾರ, ಮುಂಬರುವ ರಿಯಲ್‌ಮಿ GT 7 ಸರಣಿಯೊಂದಿಗೆ ಈ ನೂತನ ಬ್ಯಾಟರಿ ತಂತ್ರಜ್ಞಾನವು ಮೊದಲು ಪರಿಚಯವಾಗಲಿದೆ. ರಿಯಲ್‌ಮಿ GT 7 ಸರಣಿಯು ಭಾರತೀಯ ಮಾರುಕಟ್ಟೆಗೆ ಬರಲಿದೆ ಎಂದು ಕಂಪನಿಯು ಖಚಿತಪಡಿಸಿದ್ದರೂ, ಬಿಡುಗಡೆ ದಿನಾಂಕದ ಬಗ್ಗೆ ಇನ್ನೂ ಯಾವುದೇ ಅಧಿಕೃತ ಮಾಹಿತಿ ಲಭ್ಯವಿಲ್ಲ. ಆದಾಗ್ಯೂ, ರಿಯಲ್‌ಮಿ GT 7 ಮತ್ತು ರಿಯಲ್‌ಮಿ GT 7T ಈಗಾಗಲೇ ಭಾರತೀಯ ಗುಣಮಟ್ಟ ಬ್ಯೂರೋ (BIS) ವೆಬ್‌ಸೈಟ್‌ನಲ್ಲಿ ಕಾಣಿಸಿಕೊಂಡಿವೆ.

ಭಾರತೀಯ ಗುಣಮಟ್ಟ ಬ್ಯೂರೋ (BIS) ವೆಬ್‌ಸೈಟ್‌ನಲ್ಲಿ ಮತ್ತು ಗೀಕ್‌ಬೆಂಚ್ ಪಟ್ಟಿಯಲ್ಲಿ ಕಾಣಿಸಿಕೊಂಡಿರುವ ವೈಶಿಷ್ಟ್ಯಗಳಂತೆ, GT 7 ಫೋನ್ಮೀಡಿಯಾ ಟೆಕ್ ಡೈಮೆನ್ಸಿಟಿ 9400+ ಪ್ರೊಸೆಸರ್‌ನಿಂದ ಕಾರ್ಯನಿರ್ವಹಿಸುವ ಸಾಧ್ಯತೆ ಇದೆ, ಆದರೆ GT 7T ಡೈಮೆನ್ಸಿಟಿ 8400 ಚಿಪ್‌ಸೆಟ್ ಅನ್ನು ಹೊಂದಿರಬಹುದು ಎಂದು ನಿರೀಕ್ಷಿಸಲಾಗಿದೆ. ಈ ವರ್ಷ ಬಿಡುಗಡೆಯಾದ ಇತರ ರಿಯಲ್‌ಮಿ ಫೋನ್‌ಗಳಂತೆ, GT 7 ಸರಣಿಯು ಆಂಡ್ರಾಯ್ಡ್ 15 ಆಧಾರಿತ ರಿಯಲ್‌ಮಿ UI 6.0 ನಲ್ಲಿ ಕಾರ್ಯನಿರ್ವಹಿಸುವ ನಿರೀಕ್ಷೆಯಿದೆ. ಸದ್ಯಕ್ಕೆ ಈ ಸಾಧನಗಳ ಕುರಿತು ಹೆಚ್ಚಿನ ವಿವರಗಳು ಲಭ್ಯವಿಲ್ಲ.
ಇತ್ತೀಚಿನ ದಿನಗಳಲ್ಲಿ ದೊಡ್ಡ ಬ್ಯಾಟರಿ ಸಾಮರ್ಥ್ಯದ ಫೋನ್‌ಗಳ ಟ್ರೆಂಡ್ ಹೆಚ್ಚಾಗುತ್ತಿದೆ. ರಿಯಲ್‌ಮಿ 10,000mAh ಬ್ಯಾಟರಿಯ ಫೋನ್ ಅನ್ನು ಭಾರತಕ್ಕೆ ತರುವ ಮೂಲಕ ಈ ಸಾಲಿನಲ್ಲಿ ಮೊದಲಿಗರಾಗಿದ್ದರೂ, ಇತರ ಚೀನೀ ಸ್ಮಾರ್ಟ್‌ಫೋನ್ ತಯಾರಕರು ಸಹ ತಮ್ಮ ಹೊಸ ಸಾಧನಗಳಲ್ಲಿ ಬ್ಯಾಟರಿ ಸಾಮರ್ಥ್ಯವನ್ನು ಹೆಚ್ಚಿಸುತ್ತಿದ್ದಾರೆ. ಉದಾಹರಣೆಗೆ, ಈ ವರ್ಷ ಬಿಡುಗಡೆಯಾದ ರಿಯಲ್‌ಮಿ GT 7, ಒನ್‌ಪ್ಲಸ್ 13 ಮತ್ತು iQOO 13 ನಂತಹ ಪ್ರಮುಖ ಫೋನ್‌ಗಳು ಕನಿಷ್ಠ 6,000mAh ಬ್ಯಾಟರಿಯನ್ನು ಹೊಂದಿವೆ. ಇದಲ್ಲದೆ, iQOO ಕಳೆದ ತಿಂಗಳು ಬಿಡುಗಡೆಯಾದ ತನ್ನ iQOO Z10 ಫೋನ್‌ನಲ್ಲಿ 7,300mAh ಬ್ಯಾಟರಿಯನ್ನು ನೀಡುವ ಮೂಲಕ ಒಂದು ಹೆಜ್ಜೆ ಮುಂದೆ ಹೋಗಿದೆ. ವದಂತಿಗಳ ಪ್ರಕಾರ, ಶೀಘ್ರದಲ್ಲೇ ಬಿಡುಗಡೆಯಾಗಲಿರುವ Poco F7 ಸಹ ಇದಕ್ಕಿಂತಲೂ ದೊಡ್ಡ ಬ್ಯಾಟರಿಯನ್ನು ಹೊಂದಿರಬಹುದು ಎನ್ನಲಾಗಿದೆ. ಕಾದು ನೋಡಬೇಕು.


Click it and Unblock the Notifications








