ಭಾರತಕ್ಕೆ ಬರುತ್ತಿದೆ ಕಡಿಮೆ ಬೆಲೆಯ ಮತ್ತೊಂದು Xiaomi 5G ಫೋನ್!
ಸ್ಪರ್ಧಾತ್ಮಕ ಬೆಲೆಗಳಲ್ಲಿ ಅತ್ಯುತ್ತಮ ಸ್ಮಾರ್ಟ್‌ಫೋನ್‌ಗಳ ತಯಾರಿಕೆಗೆ ಹೆಸರಾಗಿರುವ Xiaomi, ಭಾರತದಲ್ಲಿ ಶೀಘ್ರವೇ ಮತ್ತೊಂದು ಹೊಸ ಬಜೆಟ್ 5G ಸ್ಮಾರ್ಟ್‌ಫೋನ್‌ನ್ನು ಪರಿಚಯಿಸುವ ಸಾಧ್ಯತೆ ಇದೆ. ದೇಶದಲ್ಲಿ ಈ ಹೊಸ ಸ್ಮಾರ್ಟ್‌ಫೋನ್ Redmi 15C 5G ಎಂಬ ಹೆಸರಿನಲ್ಲಿ ಪರಿಚಯಗೊಳ್ಳುವ ಸಾಧ್ಯತೆ ಇದ್ದು, ಈ ಮುಂಬರುವ ಸ್ಮಾರ್ಟ್‌ಫೋನಿನ ದೇಶದಲ್ಲಿನ ಬೆಲೆ ಮತ್ತು ಸ್ಪೆಸಿಫಿಕೇಶನ್‌ಗಳು ಈಗ ಲೀಕ್ ಆಗಿವೆ. ಜಾಗತಿಕ ಮಾರುಕಟ್ಟೆಯಲ್ಲಿ ಈಗಾಗಲೇ ಲಭ್ಯವಿರುವ ಈ ಫೋನ್ ದೇಶದ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಯಲ್ಲಿ ಲಭ್ಯವಾಗಲಿದೆ ಎನ್ನಲಾಗಿದೆ. ಹಾಗಾದರೆ, ಮುಂಬರಲಿರುವ Redmi 15C 5G ಸ್ಮಾರ್ಟ್‌ಫೋನ್ ಹೇಗಿರಲಿದೆ?, ನಿರೀಕ್ಷಿತ ಫೀಚರ್ಸ್ ಯಾವುವು ಮತ್ತು ಬೆಲೆ ಎಷ್ಟಿರಬಹುದು ಎಂಬ ಸಂಪೂರ್ಣ ಮಾಹಿತಿಯನ್ನು ನೋಡೋಣ ಬನ್ನಿ.
ಭಾರತದಲ್ಲಿ Redmi 15C ನಿರೀಕ್ಷಿತ ಬೆಲೆ (ಲೀಕ್ ಆಗಿರುವಂತೆ)
ದೇಶದಲ್ಲಿ 5G ಸಾಮರ್ಥ್ಯದ ಹೊಸ Redmi 15C ಫೋನ್ ಆಗಮನದ ಕುರಿತಂತೆ ಜನಪ್ರಿಯ ಟಿಪ್‌ಸ್ಟರ್ ಅಭಿಷೇಕ್ ಯಾದವ್ (@yabhishekhd) ಅವರು ಮಾಹಿತಿ ಸೋರಿಕೆ ಮಾಡಿದ್ದಾರೆ. X ನಲ್ಲಿ( ಹಿಂದಿನ ಟ್ವಿಟರ್) ಅವರು ಪ್ರಕಟಿಸಿರುವ ಪೋಸ್ಟ್‌ನಲ್ಲಿ, Redmi 15C 5G ಮೂರು RAM-ಸ್ಟೋರೇಜ್ ಆಯ್ಕೆಗಳೊಂದಿಗೆ ಬರಬಹುದು. ಮತ್ತು ಇವು ಕ್ರಮವಾಗಿ 4GB + 128GB - ₹11,500, 6GB + 128GB - ₹12,500 ಮತ್ತು 8GB + 128GB - ₹14,500 ಶೇಖರಣಾ ಮಾದರಿಗಳು ಹಾಗೂ ಬೆಲೆಗಳಲ್ಲಿ ಬರುವ ಬಗ್ಗೆ ಸೂಚಿಸಿದ್ದಾರೆ. ಇದರಿಂದ Redmi 15C 5G ಕುರಿತ ನಿರೀಕ್ಷೆ ಹೆಚ್ಚಾಗಿದೆ.
Redmi 15C: ನಿರೀಕ್ಷಿತ ವೈಶಿಷ್ಟ್ಯಗಳು ಯಾವುವು?
Redmi ತನ್ನ ಬಜೆಟ್ ಫೋನ್‌ಗಳಿಗೆ ಸಾಮಾನ್ಯವಾಗಿ ಉತ್ತಮ ಚಿಪ್‌ಸೆಟ್ ಅನ್ನು ಒದಗಿಸುತ್ತದೆ. ಇದೀಗ ಅಭಿಷೇಕ್ ಯಾದವ್ ಅವರು ಸೂಚಿಸಿರುಂತೆ ಈ ಫೋನ್ MediaTek Dimensity 6300 (6nm) ಪ್ರೊಸೆಸರ್ ಮತ್ತು 6,000mAh ಬ್ಯಾಟರಿ ಹಾಗೂ ಸೆಲ್ಫಿ ಕ್ಯಾಮೆರಾವನ್ನು ಇರಿಸಲು ನಾಚ್‌ನೊಂದಿಗೆ HD+ ರೆಸಲ್ಯೂಶನ್ ಡಿಸ್ಪ್ಲೇಯನ್ನು ಹೊಂದಿರಬಹುದು ಎನ್ನಲಾಗಿದೆ. ಇದು ನಿಜವಾಗಿದ್ದರೆ, ಕಳೆದ ಸೆಪ್ಟೆಂಬರ್‌ನಲ್ಲಿ ಅನಾವರಣಗೊಂಡ ಜಾಗತಿಕ ಪ್ರತಿರೂಪದಂತೆಯೇ ಈ ಫೋನ್ ಭಾರತದಲ್ಲಿ ಬಿಡುಗಡೆಯಾಗಬಹುದು. ಹಾಗಾದರೆ, ಜಾಗತಿಕ ಮಾದರಿಯ Redmi 15C ಫೋನ್ ಹೇಗಿದೆ?, ನೋಡೋಣ ಬನ್ನಿ.

Redmi 15C: ಜಾಗತಿಕ ಮಾದರಿ
Redmi 15C 5G ಫೋನಿನ ಜಾಗತಿಕ ಮಾದರಿಯು 6.9-ಇಂಚಿನ (720×1,600 ಪಿಕ್ಸೆಲ್‌ಗಳು) ಡಿಸ್ಪ್ಲೇಯನ್ನು ಹೊಮದಿದೆ. ಇದು 120Hz ವರೆಗಿನ ರಿಫ್ರೆಶ್ ರೇಟ್, 240Hz ವರೆಗಿನ ಟಚ್ ಸ್ಯಾಂಪ್ಲಿಂಗ್ ದರ ಮತ್ತು 810 ನಿಟ್ಸ್ ಗರಿಷ್ಠ ಹೊಳಪನ್ನು ಹೊಂದಿದೆ. ಕಾರ್ಯಕ್ಷಮತೆಗಾಗಿ, ಈ Redmi 15C 5G ಅನ್ನು ಪವರ್ ಮಾಡುವುದು ಆಕ್ಟಾ ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 6300 (6nm) ಪ್ರೊಸೆಸರ್. ಇದನ್ನು 4GB LPDDR4X RAM ಮತ್ತು 256GB ಆನ್‌ಬೋರ್ಡ್ ಸಂಗ್ರಹಣೆಯೊಂದಿಗೆ ಜೋಡಿಸಲಾಗಿದೆ. ವಿಶೇಷವೆಂದರೆ, ಈ ಮಸ್ಟೋರೇಜ್ ಮೈಕ್ರೋ SD ಕಾರ್ಡ್ ಮೂಲಕ 1TB ವರೆಗೆ ವಿಸ್ತರಿಸಬಹುದು.
ಕ್ಯಾಮೆರಾ ವಿಭಾಗದಲ್ಲಿ, Redmi 15C 5G ಫೋನ್ ಡ್ಯುಯಲ್ ಹಿಂಬದಿಯ ಕ್ಯಾಮೆರಾ ಸೆಟಪ್ ಅನ್ನು ಹೊಂದಿದ್ದು, ಇದರಲ್ಲಿ 50-ಮೆಗಾಪಿಕ್ಸೆಲ್ (f/1.8) ಪ್ರಾಥಮಿಕ ಶೂಟರ್ ಮತ್ತು ಅನಿರ್ದಿಷ್ಟ ಎರಡನೇ ಕ್ಯಾಮೆರಾವನ್ನು ಹೊಂದಿದೆ. ಸೆಲ್ಫಿ ಮತ್ತು ವೀಡಿಯೊ ಕರೆಗಳಿಗಾಗಿ, 8MP ಕ್ಯಾಮೆರಾ ಇದೆ. ಇನ್ನುಳಿದಂತೆ, 33W ವೇಗದ ಚಾರ್ಜಿಂಗ್ ಬೆಂಬಲದ 6,000mAh ಬ್ಯಾಟರಿ, ಧೂಳು ಮತ್ತು ನೀರಿನಿಂದ ರಕ್ಷಣೆಗೆ IP64 ರೇಟಿಂಗ್, Bluetooth 5.4, Wi-Fi ಬೆಂಬಲ ಹಾಗೂ 3.5mm ಆಡಿಯೋ ಜ್ಯಾಕ್ ವೈಶಿಷ್ಟ್ಯಗಳು ಈ ಫೋನಿನಲ್ಲಿವೆ. ಹಾಗಾದರೆ, ಜಾಗತಿಕವಾಗಿ ಈ ಪೋನ್ ಬೆಲೆ ಎಷ್ಟಿದೆ?
Redmi 15C : ಜಾಗತಿಕ ಬೆಲೆ
ಬಿಡುಗಡೆಯ ಸಮಯದಲ್ಲಿ, Redmi 15C 5G ಬೆಲೆ ಪೋಲೆಂಡ್‌ನಲ್ಲಿ PLN 799 (ಸರಿಸುಮಾರು ರೂ. 19,000) ಆಗಿತ್ತು. ಅಲ್ಲಿ ಇದು ಡಸ್ಕ್ ಪರ್ಪಲ್, ಮಿಡ್‌ನೈಟ್ ಬ್ಲ್ಯಾಕ್ ಮತ್ತು ಮಿಂಟ್ ಗ್ರೀನ್ ಬಣ್ಣಗಳಲ್ಲಿ ಲಭ್ಯವಿತ್ತು. ಈಗ ಈ Redmi 15C ಫೋನ್ ಭಾರತಕ್ಕೆ ಬರುವ ಸೂಚನೆ ದೊರೆತಿದೆ. ದೊಡ್ಡ ಸ್ಕ್ರೀನ್, ಬಲವಾದ ಬ್ಯಾಟರಿ, 5G ಸಪೋರ್ಟ್ ಮತ್ತು ಕೈಗೆಟುಕುವ ಬೆಲೆಗಳಲ್ಲಿ ಇದು ಬಜೆಟ್ 5G ವಿಭಾಗದಲ್ಲಿ ಅತ್ಯಂತ ಆಕರ್ಷಕ ಆಯ್ಕೆಯಾಗಬಹುದು. ಏನಂತಿರಾ?


Click it and Unblock the Notifications








