7,410mAh ಬ್ಯಾಟರಿಯೊಂದಿಗೆ Redmi K80 Ultra ಬಿಡುಗಡೆ: ಎಲ್ಲಾ ವಿವರಗಳು!
ಶಿಯೋಮಿಯ ಉಪ-ಬ್ರ್ಯಾಂಡ್ ರೆಡ್ಮಿ, ತನ್ನ ಹೊಸ ಗೇಮಿಂಗ್-ಕೇಂದ್ರಿತ ಸ್ಮಾರ್ಟ್‌ಫೋನ್ Redmi K80 Ultra ಅನ್ನು ಚೀನಾದಲ್ಲಿ ಬಿಡುಗಡೆ ಮಾಡಿದೆ. ಗೇಮಿಂಗ್ ಪ್ರಿಯರನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಲಾದ ಈ ಫೋನ್, ಇತ್ತೀಚಿನ ತಂತ್ರಜ್ಞಾನ ಮತ್ತು ಶಕ್ತಿಯುತ ಕಾರ್ಯಕ್ಷಮತೆಯೊಂದಿಗೆ ಮೊಬೈಲ್ ಮಾರುಕಟ್ಟೆಗೆ ಬಂದಿದ್ದು, ಇದರ ಬೆಲೆ ಚೀನಾದಲ್ಲಿ ಕೇವಲ CNY 2,599 (ಸುಮಾರು ರೂ. 31,000) ಆಗಿದೆ. ಈ ಹೊಸ Redmi K80 Ultra ಸ್ಮಾರ್ಟ್‌ಫೋನಿನ ಸಂಪೂರ್ಣ ವೈಶಿಷ್ಟ್ಯಗಳು ಮತ್ತು ಬೆಲೆಗಳ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ.
Redmi K80 Ultra: ಸಂಪೂರ್ಣ ವೈಶಿಷ್ಟ್ಯಗಳು,
Redmi K80 Ultra ಫೋನ್ 6.83-ಇಂಚಿನ 1.5K OLED ಡಿಸ್ಪ್ಲೇ ಹೊಂದಿದೆ. ಇದು 144Hz ರಿಫ್ರೆಶ್ ದರ, 2,560Hz PWM ಡಿಮ್ಮಿಂಗ್ ಮತ್ತು 480Hz ಟಚ್ ಸ್ಯಾಂಪ್ಲಿಂಗ್ ದರವನ್ನು ಬೆಂಬಲಿಸುತ್ತದೆ. ಇದರೊಂದಿಗೆ Xiaomi ಶೀಲ್ಡ್ ಗ್ಲಾಸ್ ರಕ್ಷಣೆ ಇದೆ. ಈ ವಿಶೇಷಣಗಳು ಗೇಮರ್‌ಗಳಿಗೆ ಅತ್ಯಂತ ಸುಗಮ ಮತ್ತು ಸ್ಪಂದಿಸುವ ದೃಶ್ಯ ಅನುಭವವನ್ನು ಖಾತ್ರಿಪಡಿಸುತ್ತವೆ. ಇದು ದೀರ್ಘಕಾಲದ ಗೇಮಿಂಗ್ ಅವಧಿಗಳಲ್ಲಿ ಕಣ್ಣಿನ ಆಯಾಸವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಕಂಪೆನಿ ಹೇಳಿಕೊಂಡಿದೆ.
ಕಾರ್ಯಕ್ಷಮತೆಯ ವಿಷಯದಲ್ಲಿ, Redmi K80 Ultra ಫೋನ್ 3nm ಆಕ್ಟಾ-ಕೋರ್ MediaTek Dimensity 9400+ SoC ಪ್ರೊಸೆಸರ್‌ನಿಂದ ಚಾಲಿತವಾಗಿದ್ದು, ಇದು 16GB ವರೆಗಿನ LPDDR5x RAM ಮತ್ತು 1TB ವರೆಗೆ UFS 4.1 ಸ್ಟೋರೇಜ್ ಆಯ್ಕೆಗಳೊಂದಿಗೆ ಜೋಡಿಸಲ್ಪಟ್ಟಿದೆ. ಸಾಫ್‌ವೇರ್ ವಿಭಾಗದಲ್ಲಿ, ಫೋನ್ ಆಂಡ್ರಾಯ್ಡ್ 15 ಆಧಾರಿತ ಕಂಪನಿಯ HyperOS 2 ಸ್ಕಿನ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಬಯೋಮೆಟ್ರಿಕ್ ದೃಢೀಕರಣಕ್ಕಾಗಿ, ಫೋನ್ ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಅನ್ನು ಸಹ ಹೊಂದಿದೆ.

ಕ್ಯಾಮೆರಾ ವಿಭಾಗದಲ್ಲಿ, Redmi K80 Ultra ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಒಳಗೊಂಡಿದೆ. ಇದು 50-ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಮತ್ತು 8-ಮೆಗಾಪಿಕ್ಸೆಲ್ ಅಲ್ಟ್ರಾವೈಡ್ ಶೂಟರ್ ಅನ್ನು ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ, ಮಧ್ಯದಲ್ಲಿರುವ ಹೋಲ್-ಪಂಚ್ ಕಟೌಟ್‌ನಲ್ಲಿ 20-ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾ ಇದೆ. ಇನ್ನು ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ IP68 ರೇಟಿಂಗ್ಪಡೆದುಕೊಂಡಿದ್ದು, ಬಾಳಿಕೆಗೆ ಹೆಚ್ಚು ಒತ್ತು ನೀಡಲಾಗಿದೆ.
ಬ್ಯಾಟರಿ ಸಾಮರ್ಥ್ಯಕ್ಕೆ ಬಂದರೆ, ಈ ಫೋನ್ ದೊಡ್ಡ 7,410mAh ಬ್ಯಾಟರಿಯನ್ನು ಹೊಂದಿದ್ದು, ದೀರ್ಘಕಾಲದ ಗೇಮಿಂಗ್ ಅವಧಿಗಳನ್ನು ಸುಲಭವಾಗಿ ನಿರ್ವಹಿಸುತ್ತದೆ. ಇದು 100W ವೇಗದ ಚಾರ್ಜಿಂಗ್‌ಗೆ ಬೆಂಬಲಿಸುವುದರಿಂದ ಅತಿ ವೇಗವಾಗಿ ಚಾರ್ಜ್ ಆಗುತ್ತದೆ. ಸಂಪರ್ಕ ಆಯ್ಕೆಗಳಲ್ಲಿ 5G, 4G LTE, Wi-Fi 7, ಬ್ಲೂಟೂತ್ 5.4, Auracast, GPS, A-GPS, NavIC, NFC, ಮತ್ತು USB Type-C ಪೋರ್ಟ್ ಸೇರಿವೆ. ಈ ಫೋನ್ 163.08×77.93×8.18mm ಅಳತೆ ಮತ್ತು 219g ತೂಗುತ್ತದೆ.
ಬೆಲೆ ಮತ್ತು ಲಭ್ಯತೆ
Redmi K80 Ultra ಫೋನ್ ಚೀನಾದಲ್ಲಿ ಎರಡು ಮಾದರಿಗಳಲ್ಲಿ ಬಿಡುಗಡೆಯಾಗಿದೆ. ಇದರ ಮೂಲ ಮಾದರಿ 12GB RAM ಮತ್ತು 256GB ಸಂಗ್ರಹಣೆಯೊಂದಿಗೆ CNY 2,599 (ಸುಮಾರು ರೂ. 31,000) ಬೆಲೆಯನ್ನು ಹೊಂದಿದ್ದರೆ, 16GB RAM ಮತ್ತು 1TB ಸಂಗ್ರಹಣೆ ಮಾದರಿಯು CNY 3,799 (ಸುಮಾರು ರೂ. 45,400) ಬೆಲೆಗೆ ದೊರೆಯುತ್ತದೆ. ಇದು ಐಸ್ ಬ್ಲೂ, ಮೂನ್ ರಾಕ್ ವೈಟ್, ಸ್ಯಾಂಡ್‌ಸ್ಟೋನ್ ಆಶ್ ಮತ್ತು ಸ್ಪ್ರೂಸ್ ಗ್ರೀನ್ ಬಣ್ಣಗಳಲ್ಲಿ ಲಭ್ಯವಿದೆ. ಆದರೆ, ಈ ಫೋನ್ ಭಾರತದಲ್ಲಿ ಯಾವಾಗ ಬಿಡುಗಡೆಯಾಗಲಿದೆ ಎಂಬ ಬಗ್ಗೆ ಕಂಪೆನಿಯಿಂದ ಯಾವುದೇ ಮಾಹಿತಿ ಲಭ್ಯವಾಗಿಲ್ಲ.


Click it and Unblock the Notifications








