64 ಎಂಪಿ ಕ್ಯಾಮೆರಾ ಫೋನ್ 'ರೆಡ್‌ಮಿ ನೋಟ್ 8' ಬರ್ತಿದೆ ದಾರಿ ಬಿಡಿ!
ರೆಡ್‌ಮಿ ನೋಟ್ 7 ಪ್ರೊ ಮತ್ತು ರೆಡ್‌ಮಿ ಕೆ 20 ಪ್ರೊ ಸ್ಮಾರ್ಟ್‌ಫೋನ್‌ಗಳ ಮೂಲಕ ಮೊಬೈಲ್ ಮಾರುಕಟ್ಟೆಯಲ್ಲಿ ಹವಾ ಎಬ್ಬಿಸಿರುವ ಶಿಯೋಮಿ ಇದೀಗ 'ರೆಡ್‌ಮಿ ನೋಟ್ 8' ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ ಎಂದು ಹೇಳಲಾಗಿದೆ. ಶಿಯೋಮಿಯ ಉಪಾಧ್ಯಕ್ಷ ಮತ್ತು ರೆಡ್‌ಮಿಯ ಜನರಲ್ ಮ್ಯಾನೇಜರ್ ಆಗಿರುವ ಲು ವೀಬಿಂಗ್ ಅವರು, ಮುಂಬರುವ ರೆಡ್ಮಿ ನೋಟ್ 8 ತಯಾರಿಕೆಯಲ್ಲಿದೆ ಎಂಬುದರ ಬಗ್ಗೆ ಸ್ಪಷ್ಟ ಸುಳಿವು ನೀಡಿದ್ದಾರೆ ಎಂದು ಅಲ್ಲಿನ ಮಾಧ್ಯಮ ವರದಿಗಳು ತಿಳಿಸಿವೆ.

ಹೌದು, ಇತ್ತೀಚಿನ ಬೆಳವಣಿಗೆಯೊಂದರಲ್ಲಿ 'ಲು ವೀಬಿಂಗ್' ಅವರು ಮುಂಬರುವ ರೆಡ್ಮಿ ನೋಟ್ 8 ತಯಾರಿಕೆಯಲ್ಲಿದೆ ಎಂದು ಸುಳಿವು ನೀಡಿದ್ದಾರೆ. ಚೀನಾದ ಜಾಲತಾಣ ವೀಬೊದಲ್ಲಿನ ಬಳಕೆದಾರರ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡುವ ವೇಳೆಯಲ್ಲಿ, ರೆಡ್‌ಮಿಯ ನೂತನ ಸಾಧನವು ಅಸ್ತಿತ್ವದಲ್ಲಿದೆ ಮತ್ತು ರೆಡ್ಮಿ ನೋಟ್ 7 ಸರಣಿಗಿಂತ ಅದು ಹೆಚ್ಚು ಶಕ್ತಿಯುತವಾಗಿರುತ್ತದೆ ಎಂದು ಬಹಿರಂಗಪಡಿಸಿದ್ದಾರೆ ಎಂದು ಅಲ್ಲಿನ ಗಿಜ್‌ಚೀನಾ ವೆಬ್‌ಸೈಟ್ ವರದಿ ಮಾಡಿರುವುದು ಇದೀಗ ವೈರಲ್ ಆಗಿದೆ.
ಮುಂಬರುವ ರೆಡ್ಮಿ ನೋಟ್ 8 ಸರಣಿ ಫೋನ್‌ಗಳ ಬಗ್ಗೆ ಲು ವೀಬಿಂಗ್ ಅವರು ಯಾವುದೇ ವಿವರಗಳನ್ನು ಬಹಿರಂಗಪಡಿಸಿಲ್ಲ. ಆದಾಗ್ಯೂ, ರೆಡ್ಮಿ ನೋಟ್ 8 64 ಎಂಪಿ ಕ್ಯಾಮೆರಾದೊಂದಿಗೆ ಇದೇ ಆಗಸ್ಟ್ ಎರಡನೇ ವಾರದಲ್ಲಿ ಬರಲಿದೆ ಎಂದು ನಾವು ನಿರೀಕ್ಷಿಸಬಹುದು. ಏಕೆಂದರೆ, 64 ಎಂಪಿ ಸ್ಯಾಮ್‌ಸಂಗ್ ಬ್ರೈಟ್ ಜಿಡಬ್ಲ್ಯೂ 1 ಸಂವೇದಕವನ್ನು ಒಳಗೊಂಡಿರುವ ಸ್ಮಾರ್ಟ್‌ಫೋನ್ ಅನ್ನು ರೆಡ್ಮಿ ಈಗಾಗಲೇ ಟೀಸರ್ ಬಿಡುಗಡೆ ಮಾಡಿರುವುದು ಇದಕ್ಕೆ ಸಾಕ್ಷಿ ಎಂದು ಅಲ್ಲಿನ ಮಾಧ್ಯಮಗಳು ತಿಳಿಸಿವೆ.

ಈ ವರ್ಷದಲ್ಲಿ ಈಗಾಗಲೇ ಎರಡು ಹೈ ಎಂಡ್ ಫೀಚರ್ಸ್ ಫೋನ್‌ಗಳನ್ನು ಪರಿಚಯಿಸಿರುವ ಶಿಯೋಮಿ, ಇದೀಗ ಮೂರನೇ ಅಚ್ಚರಿ ನೀಡುವ ಸನಿಹದಲ್ಲಿದೆ. ಹೊಸ ಫೋನಿನ ( ಬಹುಶಃ ರೆಡ್‌ಮಿ ನೋಟ್ 8) 64ಎಂಪಿ ಕ್ಯಾಮೆರಾದಲ್ಲಿ ಸ್ಯಾಮ್‌ಸಂಗ್ ISOCELL ಬ್ರೈಟ್ GW1 ಸೆನ್ಸಾರ್ ಇರಲಿದೆ. ಇತ್ತೀಚಿಗಷ್ಟೇ ಈ ಕುರಿತು ಶಿಯೋಮಿ ಭಾರತೀಯ ಮ್ಯಾನೇಜಿಂಗ್ ಡೈರೆಕ್ಟರ್ ಮನು ಕುಮಾರ ಜೈನ್ ಸ್ಯಾಂಪಲ್ ಫೋಟೊಗಳನ್ನು ಶೇರ್ ಮಾಡಿದ್ದನ್ನು ನಾವಿಲ್ಲಿ ನೋಡಬಹುದು.
ಒಟ್ಟಿನಲ್ಲಿ, ಈ ಬಗ್ಗೆ 64ಎಂಪಿ ಕ್ಯಾಮೆರಾ ಸ್ಯಾಂಪಲ್ ಫೋಟೊ ಬಿಟ್ಟು ಬೇರೆ ಯಾವುದೇ ಹೆಚ್ಚಿನ ಮಾಹಿತಿಯನ್ನು ಕಂಪನಿ ಬಿಟ್ಟುಕೊಟ್ಟಿಲ್ಲ. ಆದರೆ, 64ಎಂಪಿ ಕ್ಯಾಮೆರಾವು ಅಲ್ಟ್ರಾ ಪಿಕ್ಸಲ್ ಮೋಡ್ ಸೆನ್ಸಾರ್ ಸಾಮರ್ಥ್ಯವನ್ನು ಹೊಂದಿರಲಿದ್ದು, ಫೋಟೊಗಳು ಹೈ ರೆಸಲ್ಯೂಶನ್‌ನಲ್ಲಿರುತ್ತವೆ. ಜೊತೆಗೆ ಅತ್ಯುತ್ತಮ ಝೂಮ್ ಸಾಮರ್ಥ್ಯವನ್ನು ಹೊಂದಿರಲಿದ್ದು, ಫೋಟೊವನ್ನು ಸಾಕಷ್ಟು ಝೂಮ್ ಮಾಡಿದಾಗಲೂ, ಪಿಕ್ಸಲ್ ಗುಣಮಟ್ಟವು ಕಡಿಮೆಯಾಗುವುದಿಲ್ಲ ಎಂದು ಹೇಳಲಾಗಿದೆ.


Click it and Unblock the Notifications








