ಆಪಲ್‌ನ ಮುಂಬರುವ ಫೋಲ್ಡೆಬಲ್ ಐಫೋನ್ ಹೇಗಿರಲಿದೆ ನೋಡಿ!
ಟೆಕ್ ದೈತ್ಯ ಆಪಲ್ ತನ್ನ ಮೊದಲ ಫೋಲ್ಡೆಬಲ್ ಐಫೋನ್ ಅನ್ನು ಅಭಿವೃದ್ಧಿಪಡಿಸುತ್ತಿದೆ ಎಂಬ ವದಂತಿಗಳು ಹಲವು ತಿಂಗಳುಗಳಿಂದ ಹರಿದಾಡುತ್ತಿವೆ. ಆರಂಭದಲ್ಲಿ ಆಪಲ್ ಯಾವ ವಿನ್ಯಾಸವನ್ನು ಅಳವಡಿಸಿಕೊಳ್ಳಬಹುದು ಎಂಬ ಬಗ್ಗೆ ಗೊಂದಲಗಳಿದ್ದವು. ಆದರೆ, ಇತ್ತೀಚಿನ ವಿಶ್ಲೇಷಕರ ಮತ್ತು ಸೋರಿಕೆಗಳ ಪ್ರಕಾರ, ಕಂಪನಿಯು ಪುಸ್ತಕದ ಶೈಲಿಯ ವಿನ್ಯಾಸದೊಂದಿಗೆ ಮುಂದುವರಿಯುವ ಸಾಧ್ಯತೆ ಹೆಚ್ಚಿದೆ. ಈ ವಿನ್ಯಾಸದಲ್ಲಿ ಫೋನ್ ಅನ್ನು ಪುಸ್ತಕದಂತೆ ತೆರೆಯಬಹುದು ಮತ್ತು ಮುಚ್ಚಬಹುದು, ಇದು ದೊಡ್ಡ ಆಂತರಿಕ ಡಿಸ್ಪ್ಲೇ ಮತ್ತು ಹೊರಭಾಗದಲ್ಲಿ ಚಿಕ್ಕದಾದ ಕವರ್ ಡಿಸ್ಪ್ಲೇಯನ್ನು ಹೊಂದಿರುತ್ತದೆ ಎಂದು ಹೇಳಲಾಗಿದೆ.
ಹೌದು, ಇತ್ತೀಚಿನ ಸೋರಿಕೆಯೊಂದು ಆಪಲ್ ಸುಕ್ಕುಗಳಿಲ್ಲದ ಡಿಸ್ಪ್ಲೇಯನ್ನು ಆಯ್ಕೆ ಮಾಡಿಕೊಂಡಿದೆ ಎಂದು ತಿಳಿಸುತ್ತದೆ. ಚೀನಾದ ಸಾಮಾಜಿಕ ವೇದಿಕೆಯಾದ ವೀಬೊದಲ್ಲಿ 'yeux1122' ಬ್ಲಾಗರ್ ಹಂಚಿಕೊಂಡಿರುವ ಮಾಹಿತಿಯ ಪ್ರಕಾರ, ಆಪಲ್‌ನ ಫೋಲ್ಡೆಬಲ್ ಐಫೋನ್ ತನ್ನ ಮೊದಲ ಮಡಿಸಬಹುದಾದ ಸಾಧನಕ್ಕಾಗಿ ಪಂಚ್-ಹೋಲ್ ಕ್ಯಾಮೆರಾವನ್ನು ಬಳಸಲಿದೆ. ಇದು ಆಪಲ್‌ನ ಸಾಮಾನ್ಯ ಬಯೋಮೆಟ್ರಿಕ್ ದೃಢೀಕರಣ ತಂತ್ರಜ್ಞಾನವಾದ ಫೇಸ್ ಐಡಿಯಿಂದ ಭಿನ್ನವಾಗಿದೆ. ಮುಂಬರುವ ಮಡಿಸಬಹುದಾದ ಸಾಧನದಲ್ಲಿ ಫಿಂಗರ್‌ಪ್ರಿಂಟ್ ಆಧಾರಿತ ಬಯೋಮೆಟ್ರಿಕ್ ಬಳಸುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.
ಖ್ಯಾತ ವಿಶ್ಲೇಷಕ ಮಿಂಗ್-ಚಿ ಕ್ವೊ ಅವರು ಸಹ ಇದೇ ರೀತಿಯ ಮಾಹಿತಿಯನ್ನು ಉಲ್ಲೇಖಿಸಿದ್ದರು. ಇವರ ಪ್ರಕಾರ, ಆಪಲ್‌ನ ಮುಂಬರುವ ಫೋಲ್ಡೆಬಲ್ ಸಾಧನವು ಪುಸ್ತಕದ ಶೈಲಿಯ ಮಡಿಸಬಹುದಾದ ವಿನ್ಯಾಸವನ್ನು ಹೊಂದಿರುತ್ತದೆ ಮತ್ತು 2026ರ ನಾಲ್ಕನೇ ತ್ರೈಮಾಸಿಕದಲ್ಲಿ ಪ್ರವೇಶಿಸುವ ಇದರ ಬೆಲೆ $2,000 ರಿಂದ $2,500 ರ ನಡುವೆ ಇರಬಹುದು. ಅಲ್ಲದೆ, ಈ ಸಾಧನವು 7.8-ಇಂಚಿನ ಕ್ರೀಸ್-ಮುಕ್ತ ಆಂತರಿಕ ಡಿಸ್ಪ್ಲೇ ಮತ್ತು 5.5-ಇಂಚಿನ ಕವರ್ ಡಿಸ್ಪ್ಲೇ ಹೊಂದಿರುತ್ತದೆ. ಈ ಸಾಧನವನ್ನು ಮಡಿಸಿದಾಗ 9-9.5 ಮಿಮೀ ದಪ್ಪ ಮತ್ತು ತೆರೆದಾಗ 4.5-4.8 ಮಿಮೀ ದಪ್ಪವನ್ನು ಹೊಂದಿರುತ್ತದೆ ಎಂದು ಅವರು ಹೇಳಿದ್ದರು.

ಇಷ್ಟೇ ಅಲ್ಲದೆ, ಮಡಿಸಬಹುದಾದ ಐಫೋನ್‌ಗಾಗಿ ಕೆಲವು ತಂತ್ರಜ್ಞಾನಗಳನ್ನು ಐಫೋನ್ 17 ಏರ್ ಎಂಬ ಮತ್ತೊಂದು ಮುಂಬರುವ ಸ್ಮಾರ್ಟ್‌ಫೋನ್‌ನಿಂದ ಎರವಲು ಪಡೆಯಲಾಗಿದೆ ಎಂದು ವರದಿಯಾಗಿದೆ. ಐಫೋನ್ 17 ಏರ್ ಆಪಲ್‌ನ ಅತ್ಯಂತ ತೆಳುವಾದ ಐಫೋನ್ ಆಗಿರಲಿದ್ದು, ಕೇವಲ 5.5 ಮಿಮೀ ದಪ್ಪವನ್ನು ಹೊಂದಿರುತ್ತದೆ ಎಂದು ಹೇಳಲಾಗುತ್ತದೆ. ಐಫೋನ್‌ನ ಡಿಸ್ಪ್ಲೇ 4:3 ರ ಆಕಾರ ಅನುಪಾತವನ್ನು ಹೊಂದಿರುತ್ತದೆ ಮತ್ತು ಈ ತೆಳುವಾದ ವಿನ್ಯಾಸದಲ್ಲಿ ಬಳಸಲಾದ ಕೆಲವು ತಂತ್ರಜ್ಞಾನಗಳನ್ನು ಫೋಲ್ಡೆಬಲ್ ಐಫೋನ್‌ನ ವಿನ್ಯಾಸವನ್ನು ಅತ್ಯುತ್ತಮವಾಗಿಸಲು ಬಳಸಿಕೊಳ್ಳಬಹುದು ಎಂದು ಹೇಳಿದೆ.
ಈಗಾಗಲೇ ಹಲವು ವರದಿಗಳು, ಆಪಲ್ ತನ್ನ ಮುಂಬರುವ ಫೋಲ್ಡೆಬಲ್ ಸಾಧನಕ್ಕಾಗಿ ಸುಕ್ಕುಗಳಿಲ್ಲದ ಡಿಸ್ಪ್ಲೇಯನ್ನು ಆಯ್ಕೆ ಮಾಡಿಕೊಂಡಿದ ಮತ್ತು ಇದಕ್ಕಾಗಿ ಸ್ಯಾಮ್‌ಸಂಗ್ ಏಕೈಕ ಪೂರೈಕೆದಾರನಾಗಿರಲಿದೆ. ಮಡಿಸಬಹುದಾದ ಡಿಸ್ಪ್ಲೇಯಲ್ಲಿ ಸುಕ್ಕುಗಳು ಕಾಣಿಸಿಕೊಳ್ಳುವುದು ಒಂದು ಸಾಮಾನ್ಯ ಸಮಸ್ಯೆ. ಆದರೆ, ಆಪಲ್ ಈ ಸಮಸ್ಯೆಯನ್ನು ಪರಿಹರಿಸಲು ಗಮನಹರಿಸಿದೆ. ಒಟ್ಟಾರೆಯಾಗಿ, ಆಪಲ್‌ನ ಮುಂಬರುವ ಫೋಲ್ಡೆಬಲ್ ಐಫೋನ್ ಪುಸ್ತಕದ ಶೈಲಿಯ ವಿನ್ಯಾಸ, ಸುಕ್ಕುಗಳಿಲ್ಲದ ಡಿಸ್ಪ್ಲೇ, ಪಂಚ್-ಹೋಲ್ ಕ್ಯಾಮೆರಾ ಮತ್ತು ಟಚ್ ಐಡಿಯಂತಹ ವೈಶಿಷ್ಟ್ಯಗಳೊಂದಿಗೆ ಬರಲು ಸಜ್ಜಾಗಿದೆ ಎಂದು ತೋರುತ್ತದೆ.
2026 ರ ಕೊನೆಯಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿರುವ ಆಪಲ್‌ನ ಮುಂಬರುವ ಫೋಲ್ಡೆಬಲ್ ಐಫೋನ್ ಸಾಧನವು ಫೋಲ್ಡೆಬಲ್ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಹೊಸ ಸಂಚಲನವನ್ನು ಮೂಡಿಸುವ ಸಾಧ್ಯತೆ ಇದೆ. ಆದಾಗ್ಯೂ, ಇವು ಕೇವಲ ವದಂತಿಗಳು ಮತ್ತು ಸೋರಿಕೆಗಳಾಗಿದ್ದು, ಆಪಲ್ ಅಧಿಕೃತವಾಗಿ ಈ ಬಗ್ಗೆ ಯಾವುದೇ ಮಾಹಿತಿಯನ್ನು ಬಹಿರಂಗಪಡಿಸುವವರೆಗೆ ಕಾಯಬೇಕಾಗಿದೆ.


Click it and Unblock the Notifications








