ಆಯ್ದ ಮಹೀಂದ್ರಾ EV ಗಳಿಗೆ ಸ್ಯಾಮ್‌ಸಂಗ್ ಡಿಜಿಟಲ್ ಕಾರ್ ಕೀ ಸೌಲಭ್ಯ ಲಭ್ಯ!
ಬುಧವಾರದಂದು (ಅಕ್ಟೋಬರ್ 29) ಬೆಂಗಳೂರಿನ ಸ್ಯಾಮ್‌ಸಂಗ್ ಒಪೇರಾ ಹೌಸ್‌ನಲ್ಲಿ ಮಹೀಂದ್ರ EV ಮಾಲೀಕರಿಗೆ ಒಂದು ಭರ್ಜರಿ ಸಿಹಿಸುದ್ದಿ ದೊರೆಯಿತು. ಅದೇನಂದರೆ, ಸ್ಯಾಮ್‌ಸಂಗ್ ಭಾರತದಲ್ಲಿ ತನ್ನ ಡಿಜಿಟಲ್ ಕಾರ್ ಕೀ ವೈಶಿಷ್ಟ್ಯವನ್ನು ಅಧಿಕೃತವಾಗಿ ಪರಿಚಯಿಸಿದ್ದು, ಅದನ್ನು ಮಹೀಂದ್ರ ಕಂಪನಿಯ ಆಯ್ದ ಎಲೆಕ್ಟ್ರಿಕ್ SUV ಮಾದರಿಗಳಲ್ಲಿ ಅಳವಡಿಸಲಾಗಿದೆ. ಈ ಬಿಡುಗಡೆ ಮೂಲಕ, ಮಹೀಂದ್ರಾ ಭಾರತದಲ್ಲಿ ಸ್ಯಾಮ್‌ಸಂಗ್‌ನ ಡಿಜಿಟಲ್ ಕಾರ್ ಕೀ ತಂತ್ರಜ್ಞಾನವನ್ನು ಅಳವಡಿಸಿಕೊಂಡ ಮೊದಲ ಕಾರು ತಯಾರಕ ಎಂಬ ಹೆಗ್ಗಳಿಕೆಯನ್ನು ಗಳಿಸಿದೆ. ಹಾಗಾದರೆ, ಏನಿದು ಸಿಹಿಸುದ್ದಿ ಎಂಬುದನ್ನು ನೋಡೋಣ ಬನ್ನಿ.
ಸ್ಯಾಮ್‌ಸಂಗ್ ಭಾರತದಲ್ಲಿ ತನ್ನ ಡಿಜಿಟಲ್ ಕಾರ್ ಕೀ ವೈಶಿಷ್ಟ್ಯವನ್ನು ಅಧಿಕೃತವಾಗಿ ಪರಿಚಯಿಸಿದೆ. ಇದರ ಸಹಾಯದಿಂದ ಆಯ್ದ ಮಹೀಂದ್ರಾ EV ಮಾಲೀಕರು ಶೀಘ್ರದಲ್ಲೇ ತಮ್ಮ ಗ್ಯಾಲಕ್ಸಿ ಸ್ಮಾರ್ಟ್‌ಫೋನ್‌ನಿಂದಲೇ ಕಾರನ್ನು ಲಾಕ್, ಅನ್‌ಲಾಕ್ ಮತ್ತು ಸ್ಟಾರ್ಟ್ ಕೂಡ ಮಾಡಬಹುದು. ಇದು ಸಾಂಪ್ರದಾಯಿಕ ಭೌತಿಕ ಕಾರ್ ಕೀಯ ಅಗತ್ಯವನ್ನು ನಿವಾರಿಸುತ್ತದೆ. ಈ ವೈಶಿಷ್ಟ್ಯವನ್ನು ಬೆಂಬಲಿತ ಗ್ಯಾಲಕ್ಸಿ ಸಾಧನಗಳಲ್ಲಿ ಮೊದಲೇ ಸ್ಥಾಪಿಸಲಾದ ಸ್ಯಾಮ್‌ಸಂಗ್ ವಾಲೆಟ್‌ಗೆ ಸಂಯೋಜಿಸಲಾಗಿದೆ. ಪ್ರಸ್ತುತ NFC ತಂತ್ರಜ್ಞಾನ ಹೊಂದಿರುವ ಆಯ್ದ ಫ್ಲ್ಯಾಗ್‌ಶಿಪ್ ಫೋನ್‌ಗಳು ಮಾತ್ರ ಬೆಂಬಲಿಸುತ್ತವೆ ಎಂದು ತಿಳಿಸಲಾಗಿದೆ.
ಯಾವ ಮಹೀಂದ್ರ ಕಾರುಗಳಿಗೆ ಸಪೋರ್ಟ್ ಇದೆ?
ಪ್ರಾರಂಭಿಕ ಹಂತದಲ್ಲಿ, ಸ್ಯಾಮ್‌ಸಂಗ್ ಪರಿಚಯಿಸಿರುವ ಈ ಡಿಜಿಟಲ್ ಕೀ ವೈಶಿಷ್ಟ್ಯವು Mahindra XEV 9e ಮತ್ತು BE 6 ಎಲೆಕ್ಟ್ರಿಕ್ SUV ಗಳಿಗೆ ಲಭ್ಯವಾಗಲಿದೆ. ಆಯ್ದ Galaxy ಫೋನ್ ಬಳಕೆದಾರರು ಕಾರು ಲಾಕ್/ಅನ್‌ಲಾಕ್ ಹಾಗೂ ಇಗ್ನಿಷನ್ ಪ್ರಾರಂಭಿಸಲು ಫೋನ್‌ನಲ್ಲೇ ಇರುವ ವಾಲೆಟ್ ಆಪ್ ಅನ್ನು ಬಳಸಬಹುದು. ಜೊತೆಗೆ ಬಳಕೆದಾರರು ತಮ್ಮ ಡಿಜಿಟಲ್ ಕಾರ್ ಕೀ ಅನ್ನು ಕುಟುಂಬ ಅಥವಾ ಸ್ನೇಹಿತರೊಂದಿಗೆ ನಿಗದಿತ ಅವಧಿಗೆ ಹಂಚಿಕೊಳ್ಳಬಹುದು. ಈ ವೇಳೆ ಕಾರು ಪ್ರಾರಂಭವಾದಾಗ ಮೂಲ ಸಾಧನಕ್ಕೆ ಸಹ ನೋಟಿಫಿಕೇಶನ್ ಬರುತ್ತದೆ
ಯಾವ ಗ್ಯಾಲಕ್ಸಿ ಸ್ಮಾರ್ಟ್‌ಫೋನ್‌ಗಳಲ್ಲಿ ಇದು ಲಭ್ಯ?
ಸ್ಯಾಮ್ಸಂಗ್ ವಾಲೆಟ್‌ನ ಡಿಜಿಟಲ್ ಕಾರ್ ಕೀ ವೈಶಿಷ್ಟ್ಯವನ್ನು UWB (Ultra-Wideband) ಮತ್ತು NFC ತಂತ್ರಜ್ಞಾನ ಹೊಂದಿರುವ ಆಯ್ದ ಫ್ಲ್ಯಾಗ್‌ಶಿಪ್ ಫೋನ್‌ಗಳು ಮಾತ್ರ ಬೆಂಬಲಿಸುತ್ತವೆ. ಈ ಪಟ್ಟಿಯಲ್ಲಿ Galaxy S25, S24, S23 ಸರಣಿಗಳು Galaxy Z Fold 7, Z Flip 7, Z Fold 6, Z Flip 6 ಹಾಗೂ 2020ರ ನಂತರ ಬಿಡುಗಡೆಯಾದ UWB ಸಪೋರ್ಟ್ ಹೊಂದಿರುವ Galaxy S ಮತ್ತು Z ಸರಣಿಯ ಸಾಧನಗಳಲ್ಲಿ ಈ ವೈಶಿಷ್ಟ್ಯ ಬಳಸಬಹುದು.

ಏನೆಲ್ಲಾ ಸುರಕ್ಷತಾ ವೈಶಿಷ್ಟ್ಯಗಳು ಇವೆ
ಸ್ಯಾಮ್ಸಂಗ್ ವಾಲೆಟ್‌ನ ಡಿಜಿಟಲ್ ಕಾರ್ ಕೀ ವೈಶಿಷ್ಟ್ಯದಲ್ಲಿ ಹೆಚ್ಚಿನ ಸುರಕ್ಷತೆ ಒದಗಿಸಲಾಗಿದೆ. ಫೋನ್ ಕಳೆದುಹೋದರೆ ಅಥವಾ ಕಳ್ಳತನವಾದರೆ, Samsung Find ಸೇವೆ ಮೂಲಕ ಅದನ್ನು ದೂರದಿಂದಲೇ ಲಾಕ್ ಮಾಡಬಹುದು ಮತ್ತು ಡಿಜಿಟಲ್ ಕೀ ಅಳಿಸಬಹುದು. ಜೊತೆಗೆ, ಈ ವೈಶಿಷ್ಟ್ಯ ಬಯೋಮೆಟ್ರಿಕ್ ಅಥವಾ ಪಿನ್ ಆಧಾರಿತ ಪ್ರಮಾಣೀಕರಣ ಹೊಂದಿದೆ. ಜೊತೆಗೆ, ಇತ್ತೀಚಿನ ಗ್ಯಾಲಕ್ಸಿ ಫೋನ್‌ಗಳಲ್ಲಿ ಬ್ಯಾಟರಿ ಪೂರ್ಣ ಖಾಲಿಯಾದರೂ, NFC ಆಧಾರಿತ ಡಿಜಿಟಲ್ ಕೀ ಕಾರ್ಯನಿರ್ವಹಿಸುತ್ತದೆ. ಅಂದರೆ ಫೋನ್ ಆಫ್ ಆಗಿದ್ದರೂ ಕಾರು ಅನ್‌ಲಾಕ್ ಮಾಡಲು ಸಾಧ್ಯ ಎಂದು ಸ್ಯಾಮ್‌ಸಂಗ್ ತಿಳಿಸಿದೆ.
ಮಹೀಂದ್ರ ಮತ್ತು ಸ್ಯಾಮ್‌ಸಂಗ್ ಹೆಗ್ಗಳಿಕೆ
ಮಹೀಂದ್ರ ಕಂಪೆನಿಯು ಈ ವೈಶಿಷ್ಟ್ಯವನ್ನು ಅಳವಡಿಸಿಕೊಂಡ ಭಾರತದ ಮೊದಲ ಕಾರು ತಯಾರಕ ಸಂಸ್ಥೆಯಾಗಿ ಹೊರಹೊಮ್ಮಿದೆ. ಜೊತೆಗೆ ಸ್ಯಾಮ್ಸಂಗ್ ಕೂಡ ಭಾರತದಲ್ಲಿ ತನ್ನ ಸೇವೆಗಳನ್ನು ವಿಸ್ತರಿಸಲು ಸಾಧ್ಯವಾಗಿದೆ. ಕಂಪೆನಿಯು ಈಗಾಗಲೇ ವಿದೇಶಗಳಲ್ಲಿ Tesla, Volvo, Hyundai ಮುಂತಾದ ಕಂಪನಿಗಳು ಈಗಾಗಲೇ ಡಿಜಿಟಲ್ ಕೀ ಸಪೋರ್ಟ್ ನೀಡುತ್ತಿದೆ. ಇದೀಗ ಸ್ಯಾಮ್ಸಂಗ್ ಮತ್ತು ಮಹೀಂದ್ರನ ಸಹಭಾಗಿತ್ವವು ಭಾರತದ EV ತಂತ್ರಜ್ಞಾನ ಕ್ಷೇತ್ರದಲ್ಲಿ ಹೊಸ ಅಧ್ಯಾಯ ಆರಂಭಿಸಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಭಾರತೀಯ ಕಾರು ಬ್ರ್ಯಾಂಡ್‌ಗಳು ಈ ರೀತಿಯ ಸ್ಮಾರ್ಟ್ ಕೀ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ನಿರೀಕ್ಷೆಯಿದೆ. ಗಮನಿಸುವುದಾದರೆ, ಸ್ಯಾಮ್ಸಂಗ್ ತನ್ನ ವಾಲೆಟ್ ಆಪ್ ಅನ್ನು 2022ರಲ್ಲಿ ಪರಿಚಯಿಸಿತ್ತು, ಮತ್ತು ಅದು ಈಗ ಪೇಮೆಂಟ್ ಕಾರ್ಡ್, ಗುರುತಿನ ದಾಖಲೆಗಳು ಹಾಗೂ ಡಿಜಿಟಲ್ ಕೀಗಳನ್ನು ಸುರಕ್ಷಿತವಾಗಿ ಸಂಗ್ರಹಿಸುವ ಪ್ಲಾಟ್‌ಫಾರ್ಮ್ ಆಗಿದೆ.


Click it and Unblock the Notifications








