14,499 ರೂ.ಗೆ ಬರಲಿದೆಯಂತೆ ಈ ಹೊಸ Samsung 5G ಫೋನ್!
ಜನಪ್ರಿಯ ಮೊಬೈಲ್ ಬ್ರ್ಯಾಂಡ್ Samsung ಭಾರತದಲ್ಲಿ ತನ್ನ ಬಜೆಟ್ ಸ್ನೇಹಿ ಸ್ಮಾರ್ಟ್‌ಫೋನ್ ಸರಣಿಯನ್ನು ವಿಸ್ತರಿಸಲು ಸಿದ್ಧತೆ ನಡೆಸುತ್ತಿದೆ. ಇತ್ತೀಚಿನವರದಿಗಳ ಪ್ರಕಾರ, ಕಂಪೆನಿಯ ಹೊಸ Galaxy F17 5G ಫೋನ್ ಶೀಘ್ರದಲ್ಲೇ ಮಾರುಕಟ್ಟೆಗೆ ಬರಲಿದೆ. ಇದು ಬಜೆಟ್ ಬೆಲೆಯಲ್ಲಿ ಉತ್ತಮ ಫೀಚರ್‌ಗಳನ್ನು ನೀಡುವ ನಿರೀಕ್ಷೆಯಿದೆ, ವಿಶೇಷವಾಗಿ ಕ್ಯಾಮೆರಾ ಮತ್ತು ಡಿಸ್‌ಪ್ಲೇ ವಿಭಾಗದಲ್ಲಿ ಇದು ಗಮನ ಸೆಳೆಯಬಹುದು. ಬಿಡುಗಡೆ ದಿನಾಂಕ ಇನ್ನೂ ಅಧಿಕೃತವಾಗಿ ಘೋಷಣೆಯಾಗಿಲ್ಲವಾದರೂ, ಅದರ ಫೀಚರ್‌ಗಳು ಮತ್ತು ಬೆಲೆ ವಿವರಗಳು ಸೋರಿಕೆಯಾಗಿದ್ದು ತಂತ್ರಜ್ಞಾನ ಪ್ರಿಯರಲ್ಲಿ ಕುತೂಹಲ ಮೂಡಿಸಿದೆ.
ಇತ್ತೀಚಿನ ವದಂತಿಯ ಸುದ್ದಿಗಳ ಪ್ರಕಾರ, Samsung Galaxy F17 5G ಫೋನ್ ಎರಡು ಪ್ರಮುಖ ವೆರಿಯೆಂಟ್‌ಗಳಲ್ಲಿ ಲಭ್ಯವಾಗಲಿದೆ. ಇದರ ಮೂಲ ಮಾದರಿ 4GB RAM ಮತ್ತು 128GB ಆಂತರಿಕ ಸಂಗ್ರಹಣೆಯೊಂದಿಗೆ ಬರಲಿದೆ ಎಂದು ಹೇಳಲಾಗಿದೆ ಮತ್ತು ಇದರ ಬೆಲೆ ಸುಮಾರು ₹14,499 ಇರಬಹುದು. ಇದರ ಜೊತೆಗೆ, 6GB RAM ಮತ್ತು 128GB ಆಂತರಿಕ ಸಂಗ್ರಹಣೆಯಿರುವ ಮಾದರಿಯ ಬೆಲೆ ₹15,999 ಇರಬಹುದು ಎಂದು ಸ್ಮಾರ್ಟ್‌ಪ್ರಿಕ್ಸ್ (smartprix) ವರದಿ ಮಾಡಿದೆ. ಇದರಿಂದ ದೇಶದಲ್ಲಿ ಮತ್ತೊಂದು ಬಜೆಟ್ ಬೆಲೆಯ 5G ಫೋನ್ ಆಗಮಿಸುವ ಸುಳಿವು ನಮಗೆ ದೊರೆತಿದೆ.
Galaxy F17 5G ಫೋನ್: ನಿರೀಕ್ಷಿತ ವೈಶಿಷ್ಟ್ಯಗಳು ಯಾವುವು?
ಮುಂಬರುವ Galaxy F17 5G ಫೋನ್ 6.7-ಇಂಚಿನ ಪೂರ್ಣ HD+ ಸೂಪರ್ AMOLED ಡಿಸ್‌ಪ್ಲೇಯನ್ನು ಹೊಂದಿರಬಹುದು. ಮತ್ತು ಈ ಸ್ಕ್ರೀನ್ 90Hz ರಿಫ್ರೆಶ್ ರೇಟ್ ಬೆಂಬಲದೊಂದಿಗೆ ಸ್ಮೂತ್ ಅನುಭವ ನೀಡುವ ಸಾಧ್ಯತೆಯಿದೆ. ಡಿಸ್‌ಪ್ಲೇ ರಕ್ಷಣೆಗೆಂದು ಗೊರಿಲ್ಲಾ ಗ್ಲಾಸ್ ಅನ್ನು ಬಳಸಬಹುದು ಎಂದು ವರದಿಗಳು ಸೂಚಿಸಿವೆ. ಅಲ್ಲದೆ, ಈ ಫೋನ್ ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ IP54 ರೇಟಿಂಗ್ ಹೊಂದಿರಬಹುದು, ಇದು ಅದರ ಬಾಳಿಕೆಯನ್ನು ಹೆಚ್ಚಿಸುತ್ತದೆ. ಫೋನ್‌ನ ದಪ್ಪ ಕೇವಲ 7.5mm ಇರಬಹುದು, ಇದು ಕೈಯಲ್ಲಿ ಹಿಡಿಯಲು ಆರಾಮದಾಯಕ ಅನುಭವ ನೀಡುತ್ತದೆ ಎನ್ನಲಾಗಿದೆ.

ಪ್ರೊಸೆಸರ್ ಮತ್ತು ಸಾಫ್ಟ್‌ವೇರ್ ವಿಭಾಗದಲ್ಲಿ, ಈ ಫೋನ್‌ನಲ್ಲಿ Samsung ಕಂಪೆನಿಯದ್ದೇ ಆದ 6nm Exynos 1330 ಚಿಪ್‌ಸೆಟ್ ಅನ್ನು ಬಳಸುವ ಸಾಧ್ಯತೆಯಿದೆ. ಈ ಚಿಪ್‌ಸೆಟ್ ದಿನನಿತ್ಯದ ಕೆಲಸಗಳಿಗೆ ಉತ್ತಮ ಕಾರ್ಯಕ್ಷಮತೆ ನೀಡುತ್ತದೆ. ಸಾಫ್ಟ್‌ವೇರ್ ವಿಷಯದಲ್ಲಿ, ಇದು ಆಂಡ್ರಾಯ್ಡ್ 15-ಆಧಾರಿತ One UI 7 ನೊಂದಿಗೆ ಬರಬಹುದು ಮತ್ತು ಆರು ವರ್ಷಗಳ OS ಮತ್ತು ಭದ್ರತಾ ಅಪ್‌ಡೇಟ್‌ಗಳನ್ನು ಪಡೆಯುವ ನಿರೀಕ್ಷೆಯಿದೆ. ಬ್ಯಾಟರಿ ಬಗ್ಗೆ ಹೇಳುವುದಾದರೆ, ಈ ಫೋನ್ 5,000 mAh ಬ್ಯಾಟರಿಯನ್ನು ಪ್ಯಾಕ್ ಮಾಡಲಿದೆ ಮತ್ತು 25W ವೈರ್ಡ್ ಫಾಸ್ಟ್ ಚಾರ್ಜಿಂಗ್ ಬೆಂಬಲವನ್ನು ಪಡೆಯುವ ನಿರೀಕ್ಷೆಯಿದೆ.
ಕ್ಯಾಮೆರಾ ವಿಭಾಗದಲ್ಲಿ, Galaxy F17 5G ಫೊನ್ ಮೂರು ಹಿಂಬದಿಯ ಕ್ಯಾಮೆರಾಗಳನ್ನು ಹೊಂದಿರಬಹುದು ಎಂದು ಕೆಲವು ವರದಿಗಳು ಹೇಳಿವೆ. ಇದರ ಮುಖ್ಯ ಕ್ಯಾಮೆರಾವು ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ತಂತ್ರಜ್ಞಾನದೊಂದಿಗೆ 50-ಮೆಗಾಪಿಕ್ಸೆಲ್ ಸೆನ್ಸರ್ ಅನ್ನು ಒಳಗೊಂಡಿರುತ್ತದೆ. ಇದರ ಜೊತೆಗೆ, 5-ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್ ಮತ್ತು 2-ಮೆಗಾಪಿಕ್ಸೆಲ್ ಮ್ಯಾಕ್ರೋ ಕ್ಯಾಮೆರಾ ಇರಬಹುದು. ಸೆಲ್ಫಿ ಮತ್ತು ವೀಡಿಯೊ ಕರೆಗಳಿಗಾಗಿ, ಇದು ಮುಂಭಾಗದಲ್ಲಿ 13-ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಹೊಂದಿದೆ ಎಂದು ವರದಿಯಾಗಿದೆ.
ಈ ಎಲ್ಲಾ ಮಾಹಿತಿಯು ವದಂತಿಯ ಸುದ್ದಿಗಳು ಅಥವಾ ಅನಧಿಕೃತ ವರದಿಗಳನ್ನು ಆಧರಿಸಿದೆ. Samsung ಕಂಪನಿಯು ಅಧಿಕೃತವಾಗಿ ಘೋಷಣೆ ಮಾಡುವವರೆಗೆ ಈ ಫೀಚರ್‌ಗಳು ಮತ್ತು ಬೆಲೆಯಲ್ಲಿ ಬದಲಾವಣೆಗಳಾಗಬಹುದು. ಹೆಚ್ಚಿನ ವಿವರಗಳನ್ನು ಸೆಪ್ಟೆಂಬರ್ 4 ರಂದು ನಡೆಯಲಿರುವ Samsung Galaxy ಈವೆಂಟ್‌ನಲ್ಲಿ Galaxy F17 5G ಫೋನ್ ಕುರಿತ ಹೆಚ್ಚಿನ ಮಾಹಿತಿಯನ್ನು ನಾವು ನಿರೀಕ್ಷಿಸಬಹುದು. ಅಧಿಕೃತ ಪ್ರಕಟಣೆಗಾಗಿ ಕಾಯೋಣ. ಆದರೆ, ಇದಕ್ಕೂ ಮೊದಲು, ನೀವು Galaxy F17 5G ಫೋನ್ ಆಗಮನಕ್ಕೆ ಕಾಯುತ್ತಿದ್ದೀರಾ? ಎಂಬುದನ್ನು ಈ ಕೆಳಗೆ ಕಾಮೆಂಟ್ ಮಾಡಿ ತಿಳಿಸಿ.


Click it and Unblock the Notifications








