Samsung Galaxy S25 FE ವಿಮರ್ಶೆ: ಕಡಿಮೆ ಬೆಲೆಯಲ್ಲಿ ಫ್ಲ್ಯಾಗ್‌ಶಿಪ್ ಫೀಲ್?
ಸ್ಯಾಮ್‌ಸಂಗ್ ತನ್ನ ಹೊಸ ಫ್ಯಾನ್ ಎಡಿಷನ್ (FE) ಮಾದರಿಯಾದ ಗ್ಯಾಲಕ್ಸಿ S25 FE ಅನ್ನು ಪರಿಚಯಿಸಿದೆ. ಈ ಬಾರಿ, ಈ ಫೋನ್ ಕೆಲವು ಮಹತ್ವದ ಬದಲಾವಣೆಗಳೊಂದಿಗೆ ಬಂದಿದೆ. ಹಿಂದಿನ ಮಾದರಿಗೆ ಹೋಲಿಸಿದರೆ, ಇದರ ಬ್ಯಾಟರಿ ಸಾಮರ್ಥ್ಯವು S25+ ಮಾದರಿಗೆ ಹತ್ತಿರವಾಗಿದೆ, ಜೊತೆಗೆ ಈ ಫೋನ್ ಇನ್ನಷ್ಟು ತೆಳ್ಳಗೆ ಮತ್ತು ಹಗುರವಾಗಿದೆ. ಅಷ್ಟೇ ಅಲ್ಲದೆ, ಯುವ ಬಳಕೆದಾರರಿಗೆ ಇಷ್ಟವಾಗುವಂತಹ ಪ್ರಮುಖ ಸುಧಾರಣೆ ಎಂದರೆ ಮುಂಭಾಗದ ಕ್ಯಾಮೆರಾವನ್ನು ಅಪ್‌ಗ್ರೇಡ್ ಮಾಡಿರುವುದು.
ಇವೆಲ್ಲದರ ಜೊತೆಗೆ, ಸ್ಯಾಮ್‌ಸಂಗ್ ತನ್ನ ಫ್ಲ್ಯಾಗ್‌ಶಿಪ್ ಮಾದರಿಗಳಲ್ಲಿ ನೀಡುವ Galaxy AI ವೈಶಿಷ್ಟ್ಯಗಳನ್ನು ಸಹ ಈ ಫೋನ್‌ನಲ್ಲಿ ಸೇರಿಸಿದೆ. ಈ AI ವೈಶಿಷ್ಟ್ಯಗಳು ಫೋನ್ ಬಳಕೆಯ ಅನುಭವವನ್ನೇ ಬದಲಾಯಿಸುವ ನಿರೀಕ್ಷೆ ಒದಗಿಸಿವೆ. ಈ ಹೊಸ ಫೋನ್ ವಿನ್ಯಾಸ, ಕಾರ್ಯಕ್ಷಮತೆ ಮತ್ತು ವೈಶಿಷ್ಟ್ಯಗಳ ಸಮತೋಲಿತ ಮಿಶ್ರಣವನ್ನು ನೀಡುವ ಮೂಲಕ ಬಳಕೆದಾರರ ಗಮನ ಸೆಳೆಯುವ ನಿರೀಕ್ಷೆ ಇದೆ. ಬನ್ನಿ, Samsung Galaxy S25 FE ಫೋನ್ ಹೇಗಿದೆ ಎಂಬ ನಮ್ಮ ಮೊದಲ ವಿಮರ್ಶೆಯನ್ನು ನೋಡೋಣ.
ವಿನ್ಯಾಸ ಮತ್ತು ಡಿಸ್ಪ್ಲೇ
ಗ್ಯಾಲಕ್ಸಿ S25 FE ಯ ವಿನ್ಯಾಸವು ಅದರ ಸಹೋದರ ಮಾದರಿಗಳಾದ S25 ಮತ್ತು S25+ ನಿಂದ ಪ್ರೇರಣೆ ಪಡೆದಿದೆ ಎನ್ನಬಹುದು. ಇದು ಕನಿಷ್ಠ ಮತ್ತು ನಯವಾದ ವಿನ್ಯಾಸವನ್ನು ಹೊಂದಿದೆ, ಹಾಗೂ ಆರ್ಮರ್ ಅಲ್ಯೂಮಿನಿಯಂ ಫ್ರೇಮ್ ಬಳಸಿ ನಿರ್ಮಿಸಲಾಗಿದೆ. ಕೈಯಲ್ಲಿ ಹಿಡಿದಾಗ ಇದರ ಹಗುರವಾದ ತೂಕ ಮತ್ತು ತೆಳ್ಳಗಿನ ರಚನೆ ಸ್ಪಷ್ಟವಾಗಿ ಅನುಭವಕ್ಕೆ ಬರುತ್ತದೆ. ಈ ಫೋನ್ ನೇವಿ, ವೈಟ್ ಮತ್ತು ಜೆಟ್ ಬ್ಲ್ಯಾಕ್ ಎಂಬ ಮೂರು ಆಕರ್ಷಕ ಬಣ್ಣಗಳಲ್ಲಿ ಲಭ್ಯವಿದೆ.

ಕೇವಲ 7.4mm ದಪ್ಪ ಮತ್ತು 190g ತೂಕವನ್ನು ಹೊಂದಿರುವ ಈ ಫೋನ್, ಹಿಂದಿನ ಮಾದರಿ S24 FE ಗಿಂತ ಗಮನಾರ್ಹವಾಗಿ ಹಗುರವಾಗಿದೆ (S24 FE: 213g). ತೂಕ ಕಡಿಮೆಯಾಗಿದ್ದರೂ, ಇದು 4900mAh ಸಾಮರ್ಥ್ಯದ ದೊಡ್ಡ ಬ್ಯಾಟರಿಯನ್ನು ಹೊಂದಿದೆ. ಇಷ್ಟೇ ಅಲ್ಲದೆ, ಫೋನ್ IP68 ನೀರು ಮತ್ತು ಧೂಳು ನಿರೋಧಕ ಸಾಮರ್ಥ್ಯವನ್ನು ಹೊಂದಿದೆ.
ಗ್ಯಾಲಕ್ಸಿ S25 FE ಫೋನ್ ಡಿಸ್ಪ್ಲೇ ಬಗ್ಗೆ ಹೇಳುವುದಾದರೆ, 6.7 ಇಂಚಿನ AMOLED ಪರದೆಯನ್ನು ಬಳಸಲಾಗಿದೆ, ಇದು S25+ ಮಾದರಿಯಲ್ಲಿರುವಂತೆಯೇ ಇದೆ. 120Hz ರಿಫ್ರೆಶ್ ದರ ಮತ್ತು 1900 ನಿಟ್ಸ್ ಗರಿಷ್ಠ ಹೊಳಪಿನೊಂದಿಗೆ, ಬಣ್ಣಗಳು ಸ್ಪಷ್ಟವಾಗಿ ಮತ್ತು ಜೀವಂತವಾಗಿ ಕಾಣುತ್ತವೆ. ಈ ಡಿಸ್ಪ್ಲೇ ಗೀರುಗಳು ಮತ್ತು ಬೀಳುವಿಕೆಗಳಿಂದ ರಕ್ಷಣೆ ನೀಡಲು ಗೊರಿಲ್ಲಾ ಗ್ಲಾಸ್ ವಿಕ್ಟಸ್+ ಅನ್ನು ಹೊಂದಿದೆ.

ಕ್ಯಾಮೆರಾ ಮತ್ತು ಕಾರ್ಯಕ್ಷಮತೆ
ಗ್ಯಾಲಕ್ಸಿ S25 FE ಫೋನಿನ ಹಿಂಭಾಗದಲ್ಲಿ ಮೂರು ಕ್ಯಾಮೆರಾಗಳ ಸೆಟಪ್ ಇದೆ. ಇದರಲ್ಲಿ, 50MP ಮುಖ್ಯ ಕ್ಯಾಮೆರಾ, 12MP ಅಲ್ಟ್ರಾ-ವೈಡ್ ಲೆನ್ಸ್ ಮತ್ತು 8MP ಟೆಲಿಫೋಟೋ ಲೆನ್ಸ್ (3x ಆಪ್ಟಿಕಲ್ ಜೂಮ್ ಮತ್ತು 30x ಡಿಜಿಟಲ್ ಜೂಮ್). ಈ ಕ್ಯಾಮೆರಾಗಳು ಉತ್ತಮ ಗುಣಮಟ್ಟದ ಫೋಟೋಗಳನ್ನು ತೆಗೆಯಲು ಸಹಾಯ ಮಾಡುತ್ತವೆ. ವೀಡಿಯೋ ಚಿತ್ರೀಕರಣದಲ್ಲಿ 8K 30fps ಅಥವಾ 4K 60fps ಆಯ್ಕೆಗಳು ಲಭ್ಯ.
ಈ ಬಾರಿ, ಮುಂಭಾಗದ ಕ್ಯಾಮೆರಾವನ್ನು 12MP ಗೆ ಅಪ್‌ಗ್ರೇಡ್ ಮಾಡಿರುವುದು ಗಮನಾರ್ಹವಾಗಿದ್ದು, ಇದು ಸೆಲ್ಫಿ ಮತ್ತು ವೀಡಿಯೋ ಕರೆಗಳಿಗೆ ಉತ್ತಮ ಅನುಭವ ನೀಡುತ್ತದೆ. ಇದರ ಜೊತೆಗೆ, AI-ಆಧಾರಿತ ಆಡಿಯೋ ಎರೇಸರ್, ಸ್ಲೋ-ಮೊ ಮತ್ತು ಇಮೇಜ್ ಎಡಿಟಿಂಗ್ ವೈಶಿಷ್ಟ್ಯಗಳು ಕ್ಯಾಮೆರಾ ಅನುಭವವನ್ನು ಮತ್ತಷ್ಟು ಸುಧಾರಿಸುತ್ತವೆ.

ಕಾರ್ಯಕ್ಷಮತೆಯ ವಿಷಯದಲ್ಲಿ, ಫೋನ್ Exynos 2400 ಚಿಪ್‌ಸೆಟ್ ಅನ್ನು ಬಳಸುತ್ತದೆ, ಇದು S24 ಸರಣಿಯಲ್ಲಿಯೂ ಇದೆ. ದಿನನಿತ್ಯದ ಬಳಕೆಗೆ ಈ ಚಿಪ್‌ಸೆಟ್ ಸಾಕಷ್ಟು ಶಕ್ತಿಶಾಲಿಯಾಗಿದೆ. ದೀರ್ಘಕಾಲದ ಗೇಮಿಂಗ್ ಅಥವಾ ಹೆಚ್ಚು ಕೆಲಸ ಮಾಡುವಾಗ ಫೋನ್ ಬಿಸಿಯಾಗುವುದನ್ನು ತಡೆಯಲು ಸ್ಯಾಮ್‌ಸಂಗ್ ದೊಡ್ಡದಾದ ವಾಪರ್ ಚೇಂಬರ್ ಕೂಲಿಂಗ್ ಸಿಸ್ಟಮ್ ಅನ್ನು ಅಳವಡಿಸಿದೆ. ಈ ಫೋನ್ 8GB RAM ಜೊತೆಗೆ 128GB, 256GB ಮತ್ತು 512GB ಸಂಗ್ರಹಣಾ ಆಯ್ಕೆಗಳಲ್ಲಿ ಲಭ್ಯವಿದೆ.
ಬ್ಯಾಟರಿ ಮತ್ತು ಸಾಫ್ಟ್‌ವೇರ್
ಹೊಸ ಗ್ಯಾಲಕ್ಸಿ S25 FE ಫೋನಿನಲ್ಲಿ 4900mAh ಸಾಮರ್ಥ್ಯದ ಬ್ಯಾಟರಿ ಇದೆ, ಇದು ಹಿಂದಿನ ಮಾದರಿಯಾದ 4700mAh ಗಿಂತ ಹೆಚ್ಚಿದೆ. ತೂಕ ಕಡಿಮೆಯಾಗಿದ್ದರೂ, ದೊಡ್ಡ ಬ್ಯಾಟರಿ ಸೇರಿಸಿರುವುದು ಒಂದು ದೊಡ್ಡ ಅನುಕೂಲವಾಗಿದೆ. ಚಾರ್ಜಿಂಗ್ ವೇಗವು 45W ವೈರ್ಡ್ ಮತ್ತು 15W ವೈರ್‌ಲೆಸ್ ಆಗಿದ್ದು, ಇದು ಸಾಮಾನ್ಯ ಮಟ್ಟದಲ್ಲಿದೆ.
ಸಾಫ್ಟ್‌ವೇರ್ ವಿಚಾರದಲ್ಲಿ, ಫೋನ್ ಆಂಡ್ರಾಯ್ಡ್ 16 ಆಧಾರಿತ One UI 8 ನಲ್ಲಿ ಕಾರ್ಯನಿರ್ವಹಿಸುತ್ತದೆ. ಸ್ಯಾಮ್‌ಸಂಗ್ 7 ವರ್ಷಗಳ ಆಂಡ್ರಾಯ್ಡ್ ಅಪ್‌ಡೇಟ್ ಮತ್ತು 7 ವರ್ಷಗಳ ಭದ್ರತಾ ಪ್ಯಾಚ್‌ಗಳ ಭರವಸೆ ನೀಡಿದೆ. ಎಲ್ಲಾ ಪ್ರಮುಖ Galaxy AI ವೈಶಿಷ್ಟ್ಯಗಳು ಈ ಫೋನ್‌ನಲ್ಲಿ ಲಭ್ಯವಿದ್ದು, Google AI Pro Suite ನ 6 ತಿಂಗಳ ಉಚಿತ ಚಂದಾದಾರಿಕೆಯನ್ನೂ ಒಳಗೊಂಡಿದೆ.

ನಮ್ಮ ಮೊದಲ ಅನುಭವ ಏನು?
ನಾವು ಗ್ಯಾಲಕ್ಸಿ S25 FE ಫೋನನ್ನು ಹಲವು ಗಂಟೆಗಳ ಕಾಲ ಬಳಸಿನೋಡಿದ್ದೇವೆ. ಸ್ಯಾಮ್‌ಸಂಗ್‌ನ ಈ ಹೊಸ ಫೋನ್ ಸಣ್ಣ-ಪುಟ್ಟ ಸುಧಾರಣೆಗಳೊಂದಿಗೆ ಒಟ್ಟಾರೆ ಉತ್ತಮ ಮತ್ತು ಸಮತೋಲಿತ ಅನುಭವ ನೀಡುತ್ತದೆ. ಉತ್ತಮ ವಿನ್ಯಾಸ, ಹಗುರ ತೂಕ, ದೊಡ್ಡ ಬ್ಯಾಟರಿ, ಸುಧಾರಿತ ಸೆಲ್ಫಿ ಕ್ಯಾಮೆರಾ ಮತ್ತು AI ವೈಶಿಷ್ಟ್ಯಗಳೊಂದಿಗೆ, ಇದು ಯುವ ಬಳಕೆದಾರರಿಗೆ ಆಕರ್ಷಕ ಆಯ್ಕೆಯಾಗಿ ಹೊರಹೊಮ್ಮುವ ಸಾಧ್ಯತೆ ಇದೆ.
ಅಮೇರಿಕಾದಲ್ಲಿ Galaxy S25 FE ಪ್ರಾರಂಭಿಕ ಬೆಲೆ $650 (ಸುಮಾರು ₹60,000) ಆಗಿದೆ. ಇದು S24 FE ಬಿಡುಗಡೆ ಬೆಲೆಯಂತೆಯೇ ಇದೆ. ಭಾರತಕ್ಕೆ ನಿಖರ ಬೆಲೆ ಇನ್ನೂ ಪ್ರಕಟವಾಗಿಲ್ಲ. ಆದರೆ, ಇದೇ ಬೆಲೆಯನ್ನು ಅಥವಾ ಇದಕ್ಕಿಂತ ಕಡಿಮೆ ಬೆಲೆಯನ್ನು ನಾವು ಎದುರುನೋಡುತ್ತಿದ್ದೇವೆ ಒಂದು ವೇಳೆ ಸರಿಯಾದ ಬೆಲೆಯಲ್ಲಿ ಬಿಡುಗಡೆಯಾದರೆ, ಇದು ಉತ್ತಮ ಅಫೊರ್‌ಡೆಬಲ್ ಫ್ಲಾಗ್‌ಶಿಪ್ ಅಪ್‌ಗ್ರೇಡ್ ಆಗಿ ಪರಿಣಮಿಸಬಹುದು.


Click it and Unblock the Notifications








