Galaxy S26 Ultra ಲೀಕ್: iPhone 17 Pro Max, Vivo X300 Pro ಜೊತೆ ಹೋಲಿಕೆ!
ತಂತ್ರಜ್ಞಾನ ದಿಗ್ಗಜ Samsung ತನ್ನ ಬಹುನಿರೀಕ್ಷಿತ Galaxy S26 ಫ್ಲ್ಯಾಗ್‌ಶಿಪ್ ಸರಣಿಯನ್ನು ಅನಾವರಣಗೊಳಿಸಲು ಸಜ್ಜಾಗಿದೆ. ಈ ವಾರ ನಡೆಯಲಿರುವ ಗ್ಯಾಲಕ್ಸಿ ಅನ್‌ಪ್ಯಾಕ್ಡ್ 2026 ಕಾರ್ಯಕ್ರಮದಲ್ಲಿ Galaxy S26 ಫ್ಲ್ಯಾಗ್‌ಶಿಪ್ ಸರಣಿಯು ಅಧಿಕೃತವಾಗಿ ಪರಿಚಯವಾಗುವ ಸಾಧ್ಯತೆ ಇದೆ. ಈ ಸರಣಿಯಲ್ಲಿ ಸರಣಿಯ ಅತ್ಯಂತ ಫ್ಲಾಗ್‌ಶಿಪ್ Galaxy S26 Ultra ಫೋನ್ ಎಲ್ಲರ ಗಮನಸೆಳೆದಿದೆ. ಇದೀಗ ಈ Galaxy S26 Ultra ಫೋನ್‌ನ ವಿನ್ಯಾಸ ಮತ್ತು ಗಾತ್ರವನ್ನು iPhone 17 Pro Max ಮತ್ತು Vivo X300 Pro ಮಾದರಿಗಳೊಂದಿಗೆ ಹೋಲಿಸಲಾಗಿದೆ.!
ಹೌದು, ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ Galaxy S26 Ultra 'ಇನ್-ಹ್ಯಾಂಡ್' ಚಿತ್ರಗಳು ಗಮನಸೆಳೆದಿದ್ದವು. ಇದೇ ಮೊದಲ ಬಾರಿಗೆ Galaxy S26 Ultra ಫೋನ್‌ನ ವಿನ್ಯಾಸ ಮತ್ತು ಗಾತ್ರವನ್ನು iPhone 17 Pro Max ಮತ್ತು Vivo X300 Pro ಮಾದರಿಗಳೊಂದಿಗೆ ಹೋಲಿಸಲಾದ ಚಿತ್ರವೊಂದನ್ನು ಜನಪ್ರಿಯ ಯೂಟ್ಯೂಬರ್ ಸಾಹಿಲ್ ಕರೋಲ್ ಅವರು ಪ್ರಕಟಿಸಿದ್ದಾರೆ. ಇದರಲ್ಲಿ Galaxy S26 Ultra 'ಫೋನ್ iPhone 17 Pro Max ಮತ್ತು Vivo X300 Pro ಗಿಂತ ಸ್ವಲ್ಪ ದೊಡ್ಡದಾಗಿ ಕಾಣಿಸುತ್ತದೆ. ಆದರೆ, ಬದಲಾವಣೆ ಗಮನಾರ್ಹವಾಗಿಲ್ಲ.
ಲಭ್ಯ ಮಾಹಿತಿಯ ಪ್ರಕಾರ, ಹೊಸ Galaxy S26 Ultra ಸ್ವಲ್ಪ ದೊಡ್ಡ ಗಾತ್ರವನ್ನು ಹೊಂದಿರಬಹುದು. ಆದರೆ ಹಿಂದಿನ ಮಾದರಿಯೊಂದಿಗೆ ಹೋಲಿಸಿದರೆ ದೊಡ್ಡ ಮಟ್ಟದ ಆಯಾಮ ಬದಲಾವಣೆ ಕಾಣಿಸದಿರುವ ಸಾಧ್ಯತೆ ಇದೆ. ವಿನ್ಯಾಸದ ವಿಚಾರದಲ್ಲಿ, ಫೋನ್ ಪ್ರೀಮಿಯಂ ಫಿನಿಷ್‌ನೊಂದಿಗೆ ಬರುವ ಸೂಚನೆ ಇದೆ. ಫ್ಲಾಟ್ ಹಿಂಭಾಗದ ಪ್ಯಾನೆಲ್ ಮತ್ತು ಲೋಹದ ಫ್ರೇಮ್ ಇದರ ಪ್ರಮುಖ ಆಕರ್ಷಣೆಯಾಗಬಹುದು. ಹಿಂಭಾಗದಲ್ಲಿ ನಾಲ್ಕು ಕ್ಯಾಮೆರಾ ಸೆಟ್‌ಅಪ್ ಕಾಣಿಸಿಕೊಳ್ಳುತ್ತಿದ್ದು, ಅದರಲ್ಲಿ ಮೂರು ಲೆನ್ಸ್‌ಗಳು ಪಿಲ್-ಆಕಾರದ ಮೋಡ್ಯೂಲ್ ಒಳಗೆ ಇರಬಹುದೆಂದು ತಿಳಿದುಬಂದಿದೆ.

Galaxy S26 Ultra ಹಿಂಭಾಗದಲ್ಲಿ ಕಂಪನಿಯ ಲೋಗೋ ಸ್ಪಷ್ಟವಾಗಿ ಕಾಣಿಸದಿರುವುದು ಗಮನಾರ್ಹ ಸಂಗತಿಯಾದರೆ, ಬಿಳಿ ಬಣ್ಣದ ಆಯ್ಕೆಯಲ್ಲಿ ಕಾಣಿಸಿಕೊಂಡಿರುವ ಚಿತ್ರಗಳು ವಿಶಿಷ್ಟವಾಗಿವೆ. ಕಾರ್ಯಕ್ಷಮತೆಯ ದೃಷ್ಟಿಯಿಂದ Galaxy S26 Ultra ವಿಶೇಷವಾಗಿ ರೂಪುಗೊಂಡ Snapdragon 8 Elite Gen 5 for Galaxy ಚಿಪ್‌ಸೆಟ್‌ನೊಂದಿಗೆ ಬರುವ ನಿರೀಕ್ಷೆಯಿದೆ. ಇದರಿಂದ ಹೆಚ್ಚಿನ ವೇಗ, ಉತ್ತಮ ಗೇಮಿಂಗ್ ಅನುಭವ ಹಾಗೂ AI ಆಧಾರಿತ ಕಾರ್ಯಗಳಲ್ಲಿ ಸುಧಾರಿತ ಪ್ರದರ್ಶನ ಸಿಗಬಹುದು.
ಈ ಬಾರಿ S Pen ವೈಶಿಷ್ಟ್ಯಗಳ ವಿಷಯದಲ್ಲಿ ಕೆಲ ಬದಲಾವಣೆಗಳಿರಬಹುದೆಂಬ ವರದಿಗಳು ಹೊರಬಿದ್ದಿವೆ. ಸ್ಟೈಲಸ್‌ಗೆ ಈ ಬಾರಿ ಬ್ಲೂಟೂತ್ ಸಪೋರ್ಟ್ ಇರದೇ ಇರಬಹುದು ಎಂಬ ಊಹಾಪೋಹಗಳಿವೆ. ಹಿಂದಿನ ವರ್ಷ ಬಿಡುಗಡೆಯಾದ Galaxy S25 Ultra ಯಲ್ಲಿಯೂ ಕೆಲವು ಬ್ಲೂಟೂತ್ ಆಧಾರಿತ ವೈಶಿಷ್ಟ್ಯಗಳನ್ನು ಕೈಬಿಡಲಾಗಿತ್ತು. ಅದೇ ಧೋರಣಿಯನ್ನು ಕಂಪನಿ ಮುಂದುವರಿಸುವ ಸಾಧ್ಯತೆ ಇದೆ. ಜೊತೆಗೆ, S Pen ಸ್ಲಾಟ್‌ನ ಸ್ಥಾನದಲ್ಲಿ ಸಣ್ಣ ಮಟ್ಟದ ಬದಲಾವಣೆ ಕಾಣಿಸಬಹುದೆಂದು ಹೇಳಲಾಗುತ್ತಿದೆ.
ಫೆಬ್ರವರಿ 25 ರಂದು ಕ್ಯಾಲಿಫೋರ್ನಿಯಾದ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಬೆಳಿಗ್ಗೆ 10 ಗಂಟೆಗೆ PT/ಮಧ್ಯಾಹ್ನ 1 ಗಂಟೆಗೆ ET (ರಾತ್ರಿ 11:30 IST ಭಾರತೀಯ ಕಾಲಮಾನ) ನಡೆಯಲಿರುವ Galaxy Unpacked 2026 ಈವೆಂಟ್‌ನಲ್ಲಿ Samsung Galaxy S26 Ultra ಅನ್ನು ಭಾರತ ಮತ್ತು ಇತರ ಜಾಗತಿಕ ಮಾರುಕಟ್ಟೆಗಳಲ್ಲಿ ಬಿಡುಗಡೆ ಮಾಡಬಹುದು. ಇದೇ ವೇದಿಕೆಯಲ್ಲಿ Galaxy S26 ಮತ್ತು Galaxy S26+ ಜೊತೆಗೆ ಹೊಸ Galaxy Buds ಮಾದರಿಗಳೂ ಬಿಡುಗಡೆಯಾಗಲಿವೆ ಎನ್ನಲಾಗಿದೆ.
ಒಟ್ಟಿನಲ್ಲಿ, Galaxy S26 Ultra ತನ್ನ ವಿನ್ಯಾಸ, ಶಕ್ತಿಶಾಲಿ ಪ್ರೊಸೆಸರ್ ಮತ್ತು ಕ್ಯಾಮೆರಾ ವೈಶಿಷ್ಟ್ಯಗಳೊಂದಿಗೆ ಹೊಸ ಮಟ್ಟದ ಅನುಭವ ನೀಡುವ ಉದ್ದೇಶ ಹೊಂದಿರುವಂತೆ ಕಾಣುತ್ತದೆ. ಅಧಿಕೃತ ಘೋಷಣೆಯ ನಂತರ ಬೆಲೆ, ಲಭ್ಯತೆ ಮತ್ತು ಸಂಪೂರ್ಣ ಸ್ಪೆಸಿಫಿಕೇಷನ್‌ಗಳ ಬಗ್ಗೆ ಸ್ಪಷ್ಟ ಮಾಹಿತಿ ಲಭ್ಯವಾಗಲಿದೆ. Galaxy Unpacked ಕಾರ್ಯಕ್ರಮದ ನಂತರ ಈ ಫೋನ್ ಕುರಿತು ಇನ್ನಷ್ಟು ವಿವರಗಳು ಹೊರಬೀಳುವ ನಿರೀಕ್ಷೆಯಿದ್ದು, ಭಾರತದಲ್ಲೂ ಶೀಘ್ರವೇ ಈ ಸರಣಿ ಬಿಡುಗಡೆಯಾಗುವ ಸಾಧ್ಯತೆ ಇರುವುದರಿಂದ ದೇಶದ ತಂತ್ರಜ್ಞಾನ ಅಭಿಮಾನಿಗಳ ಗಮನ ಈ ಕಾರ್ಯಕ್ರಮದ ಮೇಲೆ ಕೇಂದ್ರೀಕೃತವಾಗಿದೆ.


Click it and Unblock the Notifications








