ಎಕ್ಸಿನೋಸ್ ಚಿಪ್‌ಸೆಟ್‌ನೊಂದಿಗೆ ಬರುತ್ತಿದೆ ಸ್ಯಾಮ್‌ಸಂಗ್ Galaxy Z Flip 7!
ದಕ್ಷಿಣ ಕೊರಿಯಾದ ಟೆಕ್ ದೈತ್ಯ ಸ್ಯಾಮ್‌ಸಂಗ್ ತನ್ನ ಜನಪ್ರಿಯ ಕ್ಲಾಮ್‌ಶೆಲ್ ಫೋಲ್ಡಬಲ್ ಸರಣಿಯನ್ನು ಮುಂದುವರೆಸಿಕೊಂಡು ಹೋಗಲು ಸಜ್ಜಾಗಿದೆ. ಈ ವರ್ಷದ ಕೊನೆಯಲ್ಲಿ ಸ್ಯಾಮ್‌ಸಂಗ್ Galaxy Z Flip 6 ರ ಉತ್ತರಾಧಿಕಾರಿಯಾಗಿ Galaxy Z Flip 7 ಅನ್ನು ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿರುವ Z ಫ್ಲಿಪ್ 6 ಆಕ್ಟಾ-ಕೋರ್ ಸ್ನಾಪ್‌ಡ್ರಾಗನ್ 8 ಜೆನ್ 3 ಚಿಪ್‌ಸೆಟ್‌ನಿಂದ ಕಾರ್ಯನಿರ್ವಹಿಸುತ್ತಿದೆ. ಆದರೆ, ಮುಂಬರುವ ಫ್ಲಿಪ್ 7 ರ ಚಿಪ್‌ಸೆಟ್ ಬಗ್ಗೆ ಇತ್ತೀಚಿನ ವರದಿಗಳು ಕುತೂಹಲ ಕೆರಳಿಸಿವೆ.!
ಹಿಂದೆ, ಈ ಹೊಸ ಹ್ಯಾಂಡ್‌ಸೆಟ್ ಸ್ನಾಪ್‌ಡ್ರಾಗನ್ 8 ಎಲೈಟ್ SoC ಯೊಂದಿಗೆ ಬಿಡುಗಡೆಯಾಗಬಹುದು ಎಂಬ ಊಹಾಪೋಹಗಳಿದ್ದವು. ಆದರೆ, ಚೋಸನ್‌ಬಿಜ್‌ನ ಹೊಸ ವರದಿಯ ಪ್ರಕಾರ, ಸ್ಯಾಮ್‌ಸಂಗ್ ತನ್ನದೇ ಆದ ಇನ್-ಹೌಸ್ ಎಕ್ಸಿನೋಸ್ 2500 ಚಿಪ್‌ಸೆಟ್ ಅನ್ನು Galaxy Z Flip 7 ನಲ್ಲಿ ಬಳಸಲು ನಿರ್ಧರಿಸಿದೆ ಎಂದು ತಿಳಿದುಬಂದಿದೆ. ಈ ವರದಿಯು ಫೋಲ್ಡಬಲ್ ಫೋನ್‌ನ ನಿರೀಕ್ಷಿತ ಉತ್ಪಾದನಾ ವೇಳಾಪಟ್ಟಿಯನ್ನು ಸಹ ಬಹಿರಂಗಪಡಿಸಿದೆ. ಅದರ ಪ್ರಕಾರ, ಮೇ ತಿಂಗಳಿನಲ್ಲಿ ಬೃಹತ್ ಉತ್ಪಾದನೆಯು ಪ್ರಾರಂಭವಾಗುವ ಸಾಧ್ಯತೆಯಿದೆ ಮತ್ತು ಜೂನ್ ವೇಳೆಗೆ ಸುಮಾರು 200,000 ಯುನಿಟ್‌ಗಳನ್ನು ತಯಾರಿಸುವ ಗುರಿಯನ್ನು ಸ್ಯಾಮ್‌ಸಂಗ್ ಹೊಂದಿದೆ. ಅಷ್ಟೇ ಅಲ್ಲದೆ, ಜುಲೈ ತಿಂಗಳಿನಲ್ಲಿ ಈ ಫೋನ್ ಅಧಿಕೃತವಾಗಿ ಬಿಡುಗಡೆಯಾಗಬಹುದು ಎಂದು ವರದಿ ಸೂಚಿಸುತ್ತದೆ.
ವರದಿಯ ಪ್ರಕಾರ, ಬೆಲೆ ಮತ್ತು ಉತ್ಪಾದನಾ ಕಾಳಜಿಗಳೇ ಸ್ಯಾಮ್‌ಸಂಗ್ ಸ್ನಾಪ್‌ಡ್ರಾಗನ್‌ಗಿಂತ ಎಕ್ಸಿನೋಸ್ ಚಿಪ್‌ನತ್ತ ಹೆಚ್ಚು ಒಲವು ತೋರಲು ಕಾರಣವಾಗಿವೆ. ಸ್ಯಾಮ್‌ಸಂಗ್ ಕೇವಲ ಸೀಮಿತ ಸಂಖ್ಯೆಯ, ಅಂದರೆ 200,000 ಯುನಿಟ್‌ಗಳ Galaxy Z Flip 7 ಫೋಲ್ಡಬಲ್ ಅನ್ನು ಮಾತ್ರ ಉತ್ಪಾದಿಸಲು ಯೋಜಿಸಿರುವುದರಿಂದ, ತಮ್ಮದೇ ಚಿಪ್‌ಸೆಟ್ ಅನ್ನು ಬಳಸುವುದು ಹೆಚ್ಚು ಕಾರ್ಯಸಾಧ್ಯ ಮತ್ತು ವೆಚ್ಚ-ಪರಿಣಾಮಕಾರಿ ಎಂದು ಕಂಪನಿ ಭಾವಿಸಿದೆ. ಈ ನಿರ್ಧಾರವು ಫೋನಿನ ಬೆಲೆಯನ್ನು ನಿಯಂತ್ರಿಸಲು ಅಥವಾ ತಮ್ಮ ಲಾಭದ ಅಂಚನ್ನು ಹೆಚ್ಚಿಸಿಕೊಳ್ಳಲು ಸ್ಯಾಮ್‌ಸಂಗ್‌ಗೆ ಸಹಾಯ ಮಾಡುತ್ತದೆ.

ಹಿಂದಿನ ವರದಿಯೊಂದು Galaxy Z Flip 7 ಸ್ಮಾರ್ಟ್‌ಫೋನ್ಜಾಗತಿಕವಾಗಿ ಎಕ್ಸಿನೋಸ್ 2500 SoC ಯೊಂದಿಗೆ ಬರಲಿದೆ ಎಂದು ಹೇಳಿಕೊಂಡಿತ್ತು. ಇದು ಈ ಹಿಂದೆ ಕೇಳಿಬಂದಿದ್ದ ಸ್ನಾಪ್‌ಡ್ರಾಗನ್ 8 ಎಲೈಟ್ ಚಿಪ್‌ನ ಮಾಹಿತಿಗೆ ತದ್ವಿರುದ್ಧವಾಗಿದೆ. ಇದರ ಜೊತೆಗೆ, Galaxy Z Flip 7 ರ ಒಂದು ಅಗ್ಗದ ಮತ್ತು ತೆಳುವಾದ ಪರ್ಯಾಯ ಮಾದರಿಯು ಇನ್-ಹೌಸ್ ಎಕ್ಸಿನೋಸ್ 2400e ಚಿಪ್‌ಸೆಟ್‌ನೊಂದಿಗೆ ಬರಬಹುದು ಎಂಬ ಊಹಾಪೋಹಗಳು ಹರಿದಾಡುತ್ತಿವೆ. ಈ ಮಾದರಿಯು FE ಅಥವಾ Xe ಬ್ರ್ಯಾಂಡಿಂಗ್ ಅನ್ನು ಹೊಂದಿರಬಹುದು ಎಂದು ಸಹ ನಿರೀಕ್ಷಿಸಲಾಗಿದೆ.
ಆದರೆ, Galaxy Z Flip 7 ಗೆ ವ್ಯತಿರಿಕ್ತವಾಗಿ, ಅದರ ಜೊತೆಯಲ್ಲೇ ಬಿಡುಗಡೆಯಾಗುವ ನಿರೀಕ್ಷೆಯಿರುವ Galaxy Z Fold 7 ಹ್ಯಾಂಡ್‌ಸೆಟ್‌ನ ಪ್ರೊಸೆಸರ್ ಬಗ್ಗೆ ಯಾವುದೇ ಗೊಂದಲಗಳಿಲ್ಲ. ಇದುವರೆಗಿನ ಎಲ್ಲಾ ಸೋರಿಕೆಗಳು ಮತ್ತು ವರದಿಗಳು ಈ ಬುಕ್-ಸ್ಟೈಲ್ ಫೋಲ್ಡಬಲ್ ಫೋನ್ ಗ್ಯಾಲಕ್ಸಿಗಾಗಿ ಕಸ್ಟಮೈಸ್ ಮಾಡಿದ ಸ್ನಾಪ್‌ಡ್ರಾಗನ್ 8 ಎಲೈಟ್ SoC ಅನ್ನು ಹೊಂದುವ ಸಾಧ್ಯತೆ ಇದೆ ಎಂದು ಸ್ಪಷ್ಟವಾಗಿ ತಿಳಿಸಿವೆ. ಹೀಗಾಗಿ, ಸ್ಯಾಮ್‌ಸಂಗ್‌ನ ಮುಂಬರುವ ಫೋಲ್ಡಬಲ್ ಫೋನ್‌ಗಳ ಚಿಪ್‌ಸೆಟ್ ಆಯ್ಕೆಯು ಮಾರುಕಟ್ಟೆಯಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಬಿಡುಗಡೆಯ ನಂತರವಷ್ಟೇ ಅಂತಿಮ ಸ್ಪಷ್ಟನೆ ದೊರೆಯಲಿದೆ. ಈ ಕುರಿತಂತೆ ನಿಮ್ಮ ಅಭಿಪ್ರಾಯ ಏನು ಎಂಬುದನ್ನು ಈ ಕೆಳಗೆ ಕಾಮೆಂಟ್ ಮಾಡಿ ತಿಳಿಸಿ


Click it and Unblock the Notifications








