ಟ್ರೈ-ಫೋಲ್ಡ್ ಫೋನ್ ಬಿಡುಗಡೆಗೆ Samsung ಸಜ್ಜು: ನಿರೀಕ್ಷಿತ ಬೆಲೆ, ಫೀಚರ್ಸ್ ನೋಡಿ!
ಟೆಕ್ ದೈತ್ಯ ಬ್ರ್ಯಾಂಡ್ Samsung ತನ್ನ ಮಡಚಬಹುದಾದ ಫೋನ್ ವಿಭಾಗದಲ್ಲಿ ಹೊಸ ಕ್ರಾಂತಿಗೆ ಸಿದ್ಧವಾಗಿದೆ. ಕಂಪೆನಿಯು ತನ್ನ ಮೊದಲ ಟ್ರೈ-ಫೋಲ್ಡ್ (tri-fold) ಸ್ಮಾರ್ಟ್‌ಫೋನ್ ಅನ್ನು ಪರಿಚಯಿಸಲು ಸಜ್ಜಾಗಿದ್ದು, ಈ ಫೋನ್ ಈಗಾಗಲೇ ಬೃಹತ್ ಉತ್ಪಾದನಾ ಹಂತದಲ್ಲಿದೆ ಎಂದು ವರದಿಗಳು ತಿಳಿಸಿವೆ. ಬಹುನಿರೀಕ್ಷಿತ 'ಗ್ಯಾಲಕ್ಸಿ ಅನ್‌ಪ್ಯಾಕ್ಡ್ 2025' ಕಾರ್ಯಕ್ರಮದಲ್ಲಿ ಈ ಸಾಧನವು ಅಧಿಕೃತವಾಗಿ ಅನಾವರಣಗೊಳ್ಳುವ ಸಾಧ್ಯತೆಯಿದೆ. ಆದರೆ, ಮಾರುಕಟ್ಟೆಯಲ್ಲಿ ಇದರ ವಾಣಿಜ್ಯ ಬಿಡುಗಡೆ ನವೆಂಬರ್‌ನಲ್ಲಿ ನಿರೀಕ್ಷಿಸಲಾಗಿದೆ. ಹಾಗಾದರೆ, ಸ್ಯಾಮ್‌ಸಂಗ್ನ ಹೊಸ ಟ್ರೈ-ಫೋಲ್ಡ್ ಸ್ಮಾರ್ಟ್‌ಫೋನ್ ಹೇಗಿರಬಹುದು?, ನಿರೀಕ್ಷಿತ ಬೆಲೆ ಎಷ್ಟು ಮತ್ತು ಈ ಫೋನ್ ಕುರಿತು ನಾವು ಈ ವರೆಗೂ ತಿಳಿದಿರುವ ಎಲ್ಲಾ ಮಾಹಿತಿಗಳನ್ನು ನೋಡೋಣ ಬನ್ನಿ.
ಇಟಿ ನ್ಯೂಸ್ ವರದಿಯ ಪ್ರಕಾರ, Samsung ಟ್ರೈ-ಫೋಲ್ಡ್ ಫೋನ್ ಈಗಾಗಲೇ ಬೃಹತ್ ಉತ್ಪಾದನಾ ಹಂತದಲ್ಲಿದೆ. ಸದ್ಯಕ್ಕೆ, Samsung ತನ್ನ ಉತ್ಪಾದನೆಯನ್ನು ಸುಮಾರು 50,000 ಯೂನಿಟ್‌ಗಳಿಗೆ ಮಾತ್ರ ಸೀಮಿತಗೊಳಿಸಿದೆ. ಇದು ಆರಂಭದಲ್ಲಿ ಅಂದಾಜಿಸಿದ್ದ 2 ಲಕ್ಷ ಯೂನಿಟ್‌ಗಳಿಗಿಂತ ಬಹಳ ಕಡಿಮೆ. ಮಾರುಕಟ್ಟೆಯಲ್ಲಿ ಹೊಸ ಫಾರ್ಮ್ ಫ್ಯಾಕ್ಟರ್ಗೆ ಸಿಗುವ ಪ್ರತಿಕ್ರಿಯೆ ಹೇಗಿದೆ ಎಂಬುದನ್ನು ಅರಿಯಲು ಈ ಎಚ್ಚರಿಕೆಯ ಹೆಜ್ಜೆಯನ್ನು ಇಡಲಾಗಿದೆ. ಈ ಮೊದಲ ತಲೆಮಾರಿನ ಸಾಧನಕ್ಕೆ ಗ್ಯಾಲಕ್ಸಿ Z ಟ್ರೈಫೋಲ್ಡ್ ಅಥವಾ ಗ್ಯಾಲಕ್ಸಿ G ಫೋಲ್ಡ್ ಎಂದು ತಾತ್ಕಾಲಿಕವಾಗಿ ಹೆಸರಿಸುವ ಸಾಧ್ಯತೆ ಇದೆ. ಈ ಫೋನ್ ಗ್ರಾಹಕರಲ್ಲಿ ಎಷ್ಟು ಆಸಕ್ತಿ ಹುಟ್ಟಿಸುತ್ತದೆ ಎಂಬುದರ ಆಧಾರದ ಮೇಲೆ ಭವಿಷ್ಯದಲ್ಲಿ ಉತ್ಪಾದನೆಯ ಪ್ರಮಾಣವನ್ನು ನಿರ್ಧರಿಸಲಾಗುವುದು ಎಂದು ಹೇಳಲಾಗಿದೆ.
ಹೇಗಿರಲಿದೆ Samsung ಟ್ರೈ-ಫೋಲ್ಡ್ ಫೋನ್?
ಹಲವಾರು ವರದಿಗಳು ಸೂಚಿಸಿರುವಂತೆ, ಈ ಟ್ರೈ-ಫೋಲ್ಡ್ ಫೋನ್ ಹಲವಾರು ಪ್ರಮುಖ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಇದರಲ್ಲಿ ಮೂರು ಮಡಚುವ ಹಿಂಜ್ ವಿನ್ಯಾಸವಿದ್ದು, ಸಂಪೂರ್ಣ ತೆರೆದಾಗ 8 ಇಂಚುಗಳಿಗಿಂತ ದೊಡ್ಡ AMOLED ಸ್ಕ್ರೀನ್ ದೊರೆಯುವ ಸಾಧ್ಯತೆ ಇದೆ. ಇದು ಬಳಕೆದಾರರಿಗೆ ಟ್ಯಾಬ್ಲೆಟ್‌ನಂತಹ ಅನುಭವವನ್ನು ನೀಡಲಿದೆ. ಫೋನ್ ಇತ್ತೀಚಿನ Snapdragon 8 Gen 4 ಪ್ರೊಸೆಸರ್ ಹೊಂದಿರುವ ಸಾಧ್ಯತೆ ಇದೆ. ಇದೇ ಪ್ರೊಸೆಸರ್ ಖಚಿತವಾದರೆ, ಫೋನ್‌ಗೆ ಅದ್ಭುತ ಕಾರ್ಯಕ್ಷಮತೆ ನೀಡಲಿದೆ.
ಇನ್ನು ಬ್ಯಾಟರಿ ವಿನ್ಯಾಸದ ಬಗ್ಗೆ ಹೇಳುವುದಾದರೆ, ಟ್ರೈ-ಫೋಲ್ಡ್ ವಿನ್ಯಾಸದ ಕಾರಣ ಎರಡು ಅಥವಾ ಮೂರು ವಿಭಜಿತ ಬ್ಯಾಟರಿ ಘಟಕಗಳನ್ನು ಇದು ಹೊಂದಿರಬಹುದು. ಇದರ ಒಟ್ಟು ಸಾಮರ್ಥ್ಯ 5000mAh ಗಿಂತ ಹೆಚ್ಚಿರಬಹುದು ಎಂದು ನಿರೀಕ್ಷಿಸಲಾಗಿದೆ. ಕ್ಯಾಮೆರಾ ವಿಭಾಗದಲ್ಲಿ Z ಫೋಲ್ಡ್ ಸರಣಿಯಂತೆ ಮಲ್ಟಿ-ಕ್ಯಾಮೆರಾ ಸೆಟಪ್ ನಿರೀಕ್ಷಿಸಲಾಗಿದ್ದು, ಇದರಲ್ಲಿ 50MP ಪ್ರಾಥಮಿಕ ಕ್ಯಾಮೆರಾ, ಅಲ್ಟ್ರಾ-ವೈಡ್ ಹಾಗೂ ಟೆಲಿಫೋಟೊ ಲೆನ್ಸ್‌ಗಳು ಇರಲಿವೆ ಎಂದು ಹೇಳಲಾಗಿದೆ. ಆದರೆ, ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

ಈ ಟ್ರೈ-ಫೋಲ್ಡ್ ಫೋನ್ ಅನ್ನು ಮೊದಲು ದಕ್ಷಿಣ ಕೊರಿಯಾ ಮತ್ತು ಚೀನಾ ಮಾರುಕಟ್ಟೆಗಳಿಗೆ ಮಾತ್ರ ಬಿಡುಗಡೆ ಮಾಡಲು Samsung ನಿರ್ಧರಿಸಿದೆ. ಈ ನಿರ್ಧಾರದ ಹಿಂದೆ ಎರಡು ಕಾರಣಗಳಿವೆ. ಮೊದಲನೆಯದಾಗಿ, ಕಂಪನಿಯ ಪ್ರಮುಖ ಉತ್ಪನ್ನವಾದ ಗ್ಯಾಲಕ್ಸಿ Z ಫೋಲ್ಡ್7 ಮಾದರಿಯ ಬೇಡಿಕೆಗೆ ಯಾವುದೇ ರೀತಿಯ ಅಡ್ಡಿಯಾಗಬಾರದು ಎಂಬುದು. ಎರಡನೆಯದಾಗಿ, ನಿರ್ದಿಷ್ಟ ಮಾರುಕಟ್ಟೆಗಳಲ್ಲಿ ಗ್ರಾಹಕರ ಪ್ರತಿಕ್ರಿಯೆಯನ್ನು ಸೂಕ್ಷ್ಮವಾಗಿ ಗಮನಿಸಿ, ಮುಂದಿನ ಹೆಜ್ಜೆಗಳನ್ನು ರೂಪಿಸುವುದು.
Samsung ಟ್ರೈ-ಫೋಲ್ಡ್ ಬೆಲೆ ಎಷ್ಟು?
ದಕ್ಷಿಣ ಕೊರಿಯಾದ ವರದಿಗಳ ಪ್ರಕಾರ, ಈ ಫೋನ್ ಬೆಲೆ ಸುಮಾರು ₹2,00,000 ರಿಂದ ₹2,30,000 (USD 2400 - 2700) ನಡುವೆ ಇರಬಹುದು ಎಂದು ಅಂದಾಜಿಸಲಾಗಿದೆ. ಇದು Samsungನ ಅತ್ಯಂತ ದುಬಾರಿ ಸಾಧನಗಳಲ್ಲಿ ಒಂದಾಗಲಿದೆ. ಆರಂಭಿಕ ಹಂತದಲ್ಲಿ ಸೀಮಿತ ಸಂಖ್ಯೆಯ ಯೂನಿಟ್‌ಗಳು ನವೆಂಬರ್‌ನಲ್ಲಿ ಲಭ್ಯವಿರಲಿವೆ. ಮಾರುಕಟ್ಟೆ ಪ್ರತಿಕ್ರಿಯೆಯ ಆಧಾರದಲ್ಲಿ, ನಂತರದ ಹಂತಗಳಲ್ಲಿ ಈ ಫೋನ್ ಇತರ ದೇಶಗಳ ಮಾರುಕಟ್ಟೆಗೂ ವಿಸ್ತರಿಸುವ ಸಾಧ್ಯತೆ ಇದೆ.
ಈ ಹೊಸ ಪ್ರಯತ್ನವು Samsung ತನ್ನ ಫೋಲ್ಡಬಲ್ ಫೋನ್ ವಿಭಾಗದಲ್ಲಿನ ನಾಯಕತ್ವವನ್ನು ಉಳಿಸಿಕೊಳ್ಳುವ ಮಹತ್ವದ ಹೆಜ್ಜೆಯಾಗಿದೆ. ಟ್ರೈ-ಫೋಲ್ಡ್ ಫೋನ್‌ಗಳು ಭವಿಷ್ಯದಲ್ಲಿ ಯಶಸ್ವಿಯಾದರೆ, Samsung ಇಂತಹ ಮಾದರಿಗಳ ಉತ್ಪಾದನೆಯನ್ನು ಹೆಚ್ಚಿಸಬಹುದು. ಇದು ಕೇವಲ ತಾಂತ್ರಿಕ ಅಭಿವೃದ್ಧಿಯಲ್ಲ, ಬದಲಾಗುತ್ತಿರುವ ಬಳಕೆದಾರರ ಆದ್ಯತೆಗಳಿಗೆ ಹೊಂದಿಕೊಂಡು ಹೊಸ ಅನುಭವ ನೀಡುವ ಪ್ರಯತ್ನ ಕೂಡ ಆಗಿದೆ. ಸೀಮಿತ ಉತ್ಪಾದನೆ ಮತ್ತು ನಿಯಂತ್ರಿತ ಬಿಡುಗಡೆಯು ಕಂಪನಿಯ ಎಚ್ಚರಿಕೆಯ ನಡೆಯನ್ನು ತೋರಿಸುತ್ತದೆ. ಈ ಸಾಧನ ಯಶಸ್ವಿಯಾದರೆ, ಅದು ಭವಿಷ್ಯದ ಮಡಚಬಹುದಾದ ಸ್ಮಾರ್ಟ್‌ಫೋನ್ ಮಾರುಕಟ್ಟೆಯ ದಿಕ್ಕನ್ನೇ ಬದಲಾಯಿಸುವ ಶಕ್ತಿ ಹೊಂದಿದೆ. ಈ ಕುರಿತಂತೆ ನಿಮ್ಮ ಅನಿಸಿಕೆ ಏನು? ಎಂಬುದನ್ನು ಈ ಕೆಳಗೆ ಕಾಮೆಂಟ್ ಮಾಡಿ ತಿಳಿಸಿ.


Click it and Unblock the Notifications








