ವಿಶ್ವದ ಟಾಪ್ 10 ಸ್ಮಾರ್ಟ್‌ಫೋನ್ ಕಂಪನಿಗಳು ಯಾವುವು ಗೊತ್ತಾ..?
ಜಾಗತಿಕವಾಗಿ ಯಾವ ಸ್ಮಾರ್ಟ್‌ಫೋನ್ ಕಂಪನಿ ದೊಡ್ಡದು ಎಂಬ ಕುತೂಹಲವಿದೆಯೇ..? ಆ ಕೌತುಕಕ್ಕೆ ಸದ್ಯ ಉತ್ತರ ದೊರಕಿದ್ದು, ಕೌಂಟರ್‌ಪಾಯಿಂಟ್ ಮಾರ್ಕೆಟ್ ಮಾನಿಟರ್ 2019ರ ದ್ವಿತೀಯ ತ್ರೈಮಾಸಿಮ ವರದಿ ಬಿಡುಗಡೆ ಮಾಡಿದೆ. ಯಾವ ಕಂಪನಿ ವಿಶ್ವ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಹೆಚ್ಚಿನ ಶೇರ್ ಹೊಂದಿದೆ ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡುತ್ತದೆ. ಕೌಂಟರ್‌ಪಾಯಿಂಟ್ ವರದಿಯಲ್ಲಿ ಉಲ್ಲೇಖಿಸಿದ ಟಾಪ್ 10 ಸ್ಮಾರ್ಟ್‌ಫೋನ್ ಕಂಪನಿಗಳ ಯಾವುವು ಎಂಬುದನ್ನು ಮುಂದೆ ನೋಡಿ..

ಸ್ಯಾಮ್‌ಸಂಗ್
ಶೇ. 21.3ರಷ್ಟು ಮಾರುಕಟ್ಟೆ ಹಂಚಿಕೆಯೊಂದಿಗೆ ದಕ್ಷಿಣ ಕೊರಿಯಾದ ಸ್ಮಾರ್ಟ್‌ಫೋನ್ ಕಂಪನಿ ಸ್ಯಾಮ್‌ಸಂಗ್, 2019ರ ದ್ವಿತೀಯ ತ್ರೈಮಾಸಿಕದಲ್ಲಿ ಜಾಗತಿಕ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಮೊದಲ ಸ್ಥಾನವನ್ನು ಗಳಿಸಿದೆ. ಕಳೆದ ವರ್ಷಕ್ಕಿಂತ ಶೇ.7.1ರಷ್ಟು ಪ್ರಗತಿಯನ್ನು ಜಾಗತಿಕ ಮಾರುಕಟ್ಟೆಯಲ್ಲಿ ಸ್ಯಾಮ್‌ಸಂಗ್ ಕಂಡಿದೆ.

ಹುವಾವೆ
ಎರಡನೇ ಸ್ಥಾನವನ್ನು ಚೀನಾದ ಪ್ರಮುಖ ಸ್ಮಾರ್ಟ್‌ಫೋನ್ ತಯಾರಕ ಕಂಪನಿ ಹುವಾವೆ ಪಡೆದುಕೊಂಡಿದೆ. ಕೌಂಟರ್‌ಪಾಯಿಂಟ್ ಸಂಶೋಧನೆ ಪ್ರಕಾರ 2019ರ ದ್ವಿತೀಯ ತ್ರೈಮಾಸಿಕದಲ್ಲಿ ಶೇ. 15.8ರಷ್ಟು ಮಾರುಕಟ್ಟೆ ಹಂಚಿಕೆಯನ್ನು ಹೊಂದಿದೆ. ಕಂಪನಿಯು 56.7 ಮಿಲಿಯನ್ ಯುನಿಟ್‌ಗಳನ್ನು ಮಾರಾಟ ಮಾಡಿದ್ದು, ವರ್ಷದಿಂದ ವರ್ಷಕ್ಕೆ ಶೇ. 4.6ರಷ್ಟು ಪ್ರಗತಿ ಕಂಡಿದೆ.

ಆಪಲ್
ಶೇ. 10.3ರಷ್ಟು ಮಾರುಕಟ್ಟೆ ಪಾಲನ್ನು ಹೊಂದಿರುವ ಕಪರ್ಟಿನೋ ಆಧಾರಿತ ಟೆಕ್ ದೈತ್ಯ ಆಪಲ್ ಮೂರನೇ ಅತಿದೊಡ್ಡ ಸ್ಮಾರ್ಟ್‌ಫೋನ್ ಕಂಪನಿಯಾಗಿದೆ. 2019ರ ದ್ವಿತೀಯ ತ್ರೈಮಾಸಿಕದಲ್ಲಿ ಜಾಗತಿಕವಾಗಿ ಮಾರುಕಟ್ಟೆ ಕುಸಿತ ಕಂಡಿರುವುದು ಸ್ಪಷ್ಟವಾಗಿದೆ. 2018ರ ದ್ವಿತೀಯ ತ್ರೈಮಾಸಿಕದಲ್ಲಿ ಆಪಲ್ ಕಂಪನಿ ಶೇ.11.3ರಷ್ಟು ಮಾರುಕಟ್ಟೆ ಪಾಲನ್ನು ಹೊಂದಿತ್ತು.

ಶಿಯೋಮಿ
ಕಳೆದ ವರ್ಷಕ್ಕಿಂತ ಶೇ.0.9ರಷ್ಟು ಪ್ರಗತಿಯನ್ನು 2019ರ ಎರಡನೇ ತ್ರೈಮಾಸಿಕದಲ್ಲಿ ಕಂಡಿರುವ ಶಿಯೋಮಿ ಜಾಗತಿಕ ಮಾರುಕಟ್ಟೆಯಲ್ಲಿ ನಾಲ್ಕನೇ ಸ್ಥಾನವನ್ನು ಹೊಂದಿದೆ. 2019ರ ಎರಡನೇ ತ್ರೈಮಾಸಿಕದಲ್ಲಿ ಶೇ.9ರಷ್ಟು ಮಾರುಕಟ್ಟೆ ಪಾಲನ್ನು ಶಿಯೋಮಿ ಹೊಂದಿದೆ.

ಒಪ್ಪೋ
5ನೇ ಸ್ಥಾನದಲ್ಲಿ ಚೀನಾದ ಸ್ಮಾರ್ಟ್‌ಫೋನ್ ತಯಾರಿಕಾ ಕಂಪನಿ ಒಪ್ಪೋ ಇದೆ. 2019ರ ದ್ವಿತೀಯ ತ್ರೈಮಾಸಿಕದಂತ್ಯಕ್ಕೆ ಒಪ್ಪೋ ಶೇ.8.1ರಷ್ಟು ಮಾರುಕಟ್ಟೆ ಪಾಲನ್ನು ಹೊಂದಿದೆ. ಆದರೆ, ಕಳೆದ ವರ್ಷಕ್ಕಿಂತ ಶೇ. 2ರಷ್ಟು ಮಾರುಕಟ್ಡೆಯನ್ನು ಒಪ್ಪೋ ಕಳೆದುಕೊಂಡಿದೆ.

ವಿವೋ
ಮತ್ತೊಂದು ಚೀನಾ ಮೂಲದ ಸ್ಮಾರ್ಟ್‌ಫೋನ್ ತಯಾರಿಕಾ ಕಂಪನಿ ವಿವೋ ಜಾಗತಿಕ ಮಾರುಕಟ್ಟೆಯಲ್ಲಿ 6ನೇ ಸ್ಥಾನವನ್ನು ಹೊಂದಿದೆ. 2019ರ ದ್ವಿತೀಯ ತ್ರೈಮಾಸಿಕದಲ್ಲಿ ವಿವೋ ಕಂಪನಿ ಶೇ.7.5ರಷ್ಟು ಮಾರುಕಟ್ಟೆ ಪಾಲನ್ನು ಹೊಂದಿದ್ದು, ಕಳೆದ ವರ್ಷಕ್ಕಿಂತ ಶೇ.2.1ರಷ್ಟು ಪ್ರಗತಿಯನ್ನು ಕಂಡಿದೆ.

ಲೆನೊವೋ (ಮೊಟೊರೋಲಾ ಸೇರಿ)
ಮೊಟೊರೋಲಾ ಬ್ರಾಂಡ್ ಸೇರಿ ಲೆನೊವೋ ಕಂಪನಿಯ ಮಾರುಕಟ್ಟೆ ಪಾಲು 2019ರ ದ್ವಿತೀಯ ತ್ರೈಮಾಸಿಕದಲ್ಲಿ ಶೇ.2.6ರಷ್ಟಿತ್ತು.

ಎಲ್‌ಜಿ
2019ರ ದ್ವಿತೀಯ ತ್ರೈಮಾಸಿಕದಲ್ಲಿ ಎಲ್‌ಜಿ ಕಂಪನಿ ಭಾರೀ ಕುಸಿತ ಕಂಡಿದ್ದು, ಜಾಗತಿಕ ಮಟ್ಟದಲ್ಲಿ ಕಳೆದ ವರ್ಷಕ್ಕಿಂತ ಶೇ.18.5ರಷ್ಟು ಹಿನ್ನಡೆಯನ್ನು ಎಲ್‌ಜಿ ಅನುಭವಿಸಿದೆ. ಶೇ.2.2ರಷ್ಟು ಮಾರುಕಟ್ಟೆ ಪಾಲಿನೊಂದಿಗೆ ಜಾಗತಿಕ ಮಟ್ಟದಲ್ಲಿ 8ನೇ ಸ್ಥಾನ ಹೊಂದಿದೆ.

ಹೆಚ್‌ಎಂಡಿ (ನೋಕಿಯಾ)
ಜಾಗತಿಕ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ನೋಕಿಯಾ ಬ್ರಾಂಡ್ ಹೊಂದಿರುವ ಹೆಚ್‌ಎಂಡಿ ಕಂಪನಿ 9ನೇ ಸ್ಥಾನ ಹೊಂದಿದೆ.

ರಿಯಲ್‌ಮಿ
ಚೀನಾ ಮೂಲದ ರಿಯಲ್‌ಮಿ ಕಂಪನಿ ಕಳೆದ ವರ್ಷಕ್ಕಿಂತ ಶೇ.848ರಷ್ಟು ಪ್ರಗತಿಯನ್ನು ಕಂಡಿದ್ದು, ಜಾಗತಿಕ ಮಟ್ಟದಲ್ಲಿ 2019ರ ದ್ವಿತೀಯ ತ್ರೈಮಾಸಿಕದಲ್ಲಿ ಶೇ.1.3ರಷ್ಟು ಮಾರುಕಟ್ಟೆ ಪಾಲನ್ನು ಹೊಂದಿದೆ.


Click it and Unblock the Notifications








