ಭಾರತದಲ್ಲಿ Vivo T5x 5G ಲಾಂಚ್: 7,200mAh ಭಾರಿ ಬ್ಯಾಟರಿ, ಆಕರ್ಷಕ ಬೆಲೆ!
ಭಾರತದಲ್ಲಿ ಮಧ್ಯಮ ಬೆಲೆಯ ಸ್ಮಾರ್ಟ್‌ಫೋನ್ ವಿಭಾಗ ದಿನದಿಂದ ದಿನಕ್ಕೆ ಹೆಚ್ಚು ಸ್ಪರ್ಧಾತ್ಮಕವಾಗುತ್ತಿದ್ದು, ಈ ಪೈಪೋಟಿಯಲ್ಲಿ ಹೊಸದಾಗಿ Vivo T5x 5G ಸ್ಮಾರ್ಟ್‌ಫೋನ್ ದೇಶದಲ್ಲಿಂದು (ಮಾರ್ಚ್ 17, ಮಂಗಳವಾರ) ಭರ್ಜರಿಯಾಗಿ ಬಿಡುಗಡೆಗೊಂಡಿದೆ. 7,200mAh ಸಾಮರ್ಥ್ಯದ ದೀರ್ಘಕಾಲ ಬ್ಯಾಟರಿ ಲೈಫ್, ದೃಢ ನಿರ್ಮಾಣ ಗುಣಮಟ್ಟ ಮತ್ತು ಉತ್ತಮ ಕಾರ್ಯಕ್ಷಮತೆಯನ್ನು ಒಟ್ಟುಗೂಡಿಸಿರುವ ಈ ಫೋನ್, ಸಾಮಾನ್ಯ ಬಳಕೆದಾರರಿಂದ ಹಿಡಿದು ಗೇಮಿಂಗ್ ಪ್ರಿಯರ ತನಕ ಎಲ್ಲರಿಗೂ ಸೂಕ್ತವಾಗುವಂತೆ ವಿನ್ಯಾಸಗೊಳಿಸಲಾಗಿದೆ. ಮಧ್ಯಮ ಬೆಲೆಯಲ್ಲೇ ಪ್ರೀಮಿಯಂ ಅನುಭವ ನೀಡುವತ್ತ ಕಂಪನಿ ಗಮನಹರಿಸಿದೆ.
Vivo T5x 5G : ಬೆಲೆ, ಕೊಡುಗೆ ಮತ್ತು ಲಭ್ಯತೆ
ಭಾರತದಲ್ಲಿ Vivo T5x 5G ಸ್ಮಾರ್ಟ್‌ಫೋನ್ ಮೂರು ಸ್ಟೋರೇಜ್ ಆಯ್ಕೆಗಳಲ್ಲಿ ಪರಿಚಯವಾಗಿದೆ. 6GB RAM ಮತ್ತು 128GB ಸ್ಟೋರೇಜ್ ಹೊಂದಿರುವ ಇದರ ಮೂಲ ಮಾದರಿಯ ಬೆಲೆ ₹18,999 ಆಗಿದೆ. 8GB RAM + 128GB ಸ್ಟೋರೇಜ್ ಮಾದರಿಯು ₹20,999ಕ್ಕೆ ಲಭ್ಯವಿದ್ದರೆ, 8GB RAM + 256GB ಸ್ಟೋರೇಜ್ ಮಾದರಿಯ ಬೆಲೆ ₹22,999 ಆಗಿದೆ. ಆದರೆ HDFC, Axis ಮತ್ತು SBI ಬ್ಯಾಂಕ್ ಕಾರ್ಡ್‌ಗಳು ಅಥವಾ UPI ಮೂಲಕ ಪಾವತಿ ಮಾಡಿದರೆ ₹2,000 ವರೆಗೆ ತಕ್ಷಣದ ರಿಯಾಯಿತಿ ದೊರೆಯುತ್ತದೆ. ಇದರಿಂದ ಪ್ರಾರಂಭಿಕ ಬೆಲೆ ₹16,999 ಕ್ಕೆ ಇಳಿಯುತ್ತದೆ.
ಇಷ್ಟೇ ಅಲ್ಲದೆ, ಈ ಫೋನ್ ಖರೀದಿಯ ಜೊತೆಗೆ 6 ತಿಂಗಳವರೆಗೆ No-cost EMI ಆಯ್ಕೆಯೂ ಇದೆ ಎಂದು ಕಂಪೆನಿ ತಿಳಿಸಿದೆ. Jio ಪ್ರಿಪೇಯ್ಡ್ ಬಳಕೆದಾರರಿಗೆ ₹1,199 ಮೌಲ್ಯದ 10 OTT ಅಪ್ಲಿಕೇಶನ್‌ಗಳ ಉಚಿತ ಪ್ರವೇಶವನ್ನು 6 ತಿಂಗಳ ಕಾಲ ನೀಡಲಾಗುತ್ತದೆ. ಇನ್ನು ಲಭ್ಯತೆಯ ಕುರಿತು ನೋಡುವುದಾದರೆ, ಇದೇ ಮಾರ್ಚ್ 24ರಿಂದ Flipkart, Vivo ಅಧಿಕೃತ ಇ-ಸ್ಟೋರ್ ಹಾಗೂ ಎಲ್ಲಾ ರಿಟೇಲ್ ಅಂಗಡಿಗಳಲ್ಲಿ ಈ Vivo T5x 5G ಪೋನ್ ಮೊದಲ ಬಾರಿಗೆ ಮಾರಾಟಕ್ಕೆ ಬರಲಿದ್ದು, Cyber Green ಮತ್ತು Star Silver ಎರಡು ಬಣ್ಣಗಳಲ್ಲಿ ಖರೀದಿಗೆ ದೊರೆಯಲಿದೆ ಎಂದು ಕಂಪೆನಿ ತಿಳಿಸಿದೆ.
Vivo T5x 5G : ಪ್ರಮುಖ ವೈಶಿಷ್ಟ್ಯಗಳು
Vivo T5x 5G ಫೋನ್ 6.76 ಇಂಚಿನ Full-HD+ LCD ಡಿಸ್‌ಪ್ಲೇ ಹೊಂದಿದ್ದು, 120Hz ರಿಫ್ರೆಶ್ ರೇಟ್ ಮತ್ತು 1200 ನಿಟ್ಸ್ ಗರಿಷ್ಠ ಬ್ರೈಟ್ನೆಸ್ ನೀಡುತ್ತದೆ. ದೀರ್ಘಕಾಲ ಬಳಸಿದರೂ ಕಣ್ಣುಗಳಿಗೆ ಹಾನಿ ಆಗದಂತೆ TÜV Rheinland ಲೋ ಬ್ಲೂ ಲೈಟ್ ಪ್ರಮಾಣೀಕರಣ ಮತ್ತು Eye Comfort ಮೋಡ್ ನೀಡಲಾಗಿದೆ. ಕಾರ್ಯಕ್ಷಮತೆಗಾಗಿ, MediaTek Dimensity 7400 Turbo ಚಿಪ್‌ಸೆಟ್ ಬಳಸಲಾಗಿದ್ದು, 8GB ವರೆಗೆ RAM ಮತ್ತು 256GB ವರೆಗೆ ಸ್ಟೋರೇಜ್ ಆಯ್ಕೆಗಳಿವೆ. ಇದು ದಿನನಿತ್ಯದ ಕೆಲಸಗಳಿಂದ ಹಿಡಿದು ಗೇಮಿಂಗ್ ವರೆಗೆ ಸಮರ್ಪಕ ಪ್ರದರ್ಶನ ನೀಡುವ ಭರವಸೆ ನೀಡಿದೆ.

ಕ್ಯಾಮೆರಾ ವಿಭಾಗದಲ್ಲಿ, Vivo T5x 5G ಫೋನ್ ಸಾಮಾನ್ಯ ಬಳಕೆದಾರರ ಅಗತ್ಯಗಳನ್ನು ಪೂರೈಸುವಂತೆ ವಿನ್ಯಾಸಗೊಂಡಿರುವಂತೆ ಕಾಣುತ್ತಿದೆದೆ. ಈ ಫೋನಿನ ಹಿಂಭಾಗದಲ್ಲಿ 50 ಮೆಗಾಪಿಕ್ಸೆಲ್ Sony IMX852 ಪ್ರಾಥಮಿಕ ಕ್ಯಾಮೆರಾ ಮತ್ತು 2 ಮೆಗಾಪಿಕ್ಸೆಲ್ ಬೊಕೆ ಸೆನ್ಸರ್ ನೀಡಲಾಗಿದೆ. ಸೆಲ್ಫಿ ಮತ್ತು ವೀಡಿಯೋ ಕಾಲ್‌ಗಳಿಗೆ 32 ಮೆಗಾಪಿಕ್ಸೆಲ್ ಮುಂಭಾಗ ಕ್ಯಾಮೆರಾ ಹೊಂದಿದೆ. ಸಾಫ್ಟ್‌ವೇರ್ ಭಾಗದಲ್ಲಿ, ಇದು Android 16 ಆಧಾರಿತ OriginOS 6 ಮೇಲೆ ಕಾರ್ಯನಿರ್ವಹಿಸುತ್ತದೆ.
ಈ Vivo T5x 5G ಸ್ಮಾರ್ಟ್‌ಫೋನ್‌ನ ಪ್ರಮುಖ ಆಕರ್ಷಣೆ ಎಂದರೆ ಅದರ 7,200mAh ಸಾಮರ್ಥ್ಯದ ದೊಡ್ಡ ಬ್ಯಾಟರಿ ಎನ್ನಬಹುದು. ಜೊತೆಗೆ ಇದಕ್ಕೆ 44W ಫಾಸ್ಟ್ ಚಾರ್ಜಿಂಗ್ ಬೆಂಬಲವೂ ಇದೆ. ಕಂಪನಿಯ ಪ್ರಕಾರ, ಈ ಫೋನ್ ಅನ್ನು ಒಂದು ಬಾರಿ ಚಾರ್ಜ್ ಮಾಡಿದರೆ 40 ಗಂಟೆಗಳ ವೀಡಿಯೋ ವೀಕ್ಷಣೆ, 93 ಗಂಟೆಗಳ ಸಂಗೀತ ಪ್ಲೇಬ್ಯಾಕ್ ಮತ್ತು 14.5 ಗಂಟೆಗಳ ನ್ಯಾವಿಗೇಶನ್ ಬಳಕೆ ಸಾಧ್ಯ. ಇದರಿಂದ ದಿನಪೂರ್ತಿ ಚಾರ್ಜಿಂಗ್ ಬಗ್ಗೆ ಚಿಂತಿಸದೆ ಬಳಸಲು ಸಾಧ್ಯವಾಗುತ್ತದೆ ಎಂದು ಕಂಪೆನಿಯು ಹೇಳಿಕೊಂಡಿದೆ.
ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, Bluetooth 5.4, Wi-Fi ಮತ್ತು USB Type-C ಸೇರಿವೆ. ಜೊತೆಗೆ GPS, BeiDou, GLONASS, Galileo ಮತ್ತು QZSS ನ್ಯಾವಿಗೇಶನ್ ಸಪೋರ್ಟ್ ಹಾಗೂ ಆಕ್ಸೆಲರೋಮೀಟರ್, ಜೈರೋಸ್ಕೋಪ್ ಮತ್ತು ಪ್ರಾಕ್ಸಿಮಿಟಿ ಸೆನ್ಸರ್ ಸೇರಿದಂತೆ ಅಗತ್ಯ ಸೆನ್ಸರ್‌ಗಳನ್ನೂ ಒಳಗೊಂಡಿದೆ. ಗುಣಮಟ್ಟದ ದೃಷ್ಟಿಯಿಂದ, IP68 ಮತ್ತು IP69 ರೇಟಿಂಗ್ ಹೊಂದಿದ್ದು, ನೀರು ಮತ್ತು ಧೂಳಿನಿಂದ ರಕ್ಷಣೆ ನೀಡುತ್ತದೆ. ಮಿಲಿಟರಿ ಗ್ರೇಡ್ ಶಾಕ್ ರೆಸಿಸ್ಟೆನ್ಸ್ ಇರುವುದರಿಂದ ದೈನಂದಿನ ಬಳಕೆಯಲ್ಲಿ ಹೆಚ್ಚಿನ ಬಾಳಿಕೆ ಖಚಿತಪಡಿಸುತ್ತದೆ. ಫೋನ್ ಗಾತ್ರ 166 x 78.43 x 8.3 ಮಿಮೀ ಆಗಿದ್ದು, ತೂಕ 219 ಗ್ರಾಂ ಇದೆ.
ಒಟ್ಟಾರೆಯಾಗಿ, ಈ ಹೊಸ Vivo T5x 5G ಸ್ಮಾರ್ಟ್‌ಪೋನ್ ಮಧ್ಯಮ ಬೆಲೆಯಲ್ಲೇ ದೊಡ್ಡ ಬ್ಯಾಟರಿ, ಉತ್ತಮ ಪ್ರದರ್ಶನ, ದೃಢ ವಿನ್ಯಾಸ ಮತ್ತು ಸಮತೋಲನ ವೈಶಿಷ್ಟ್ಯಗಳನ್ನು ನೀಡುವ ಸ್ಮಾರ್ಟ್‌ಫೋನ್ ಆಗಿ ಗಮನ ಸೆಳೆಯುತ್ತಿದೆ. ದೀರ್ಘಕಾಲ ಬ್ಯಾಟರಿ ಬ್ಯಾಕಪ್ ಬೇಕಾದವರು, ಗಟ್ಟಿಯಾದ ನಿರ್ಮಾಣ ಮತ್ತು ವಿಶ್ವಾಸಾರ್ಹ ಕಾರ್ಯಕ್ಷಮತೆ ಹುಡುಕುತ್ತಿರುವವರು ಈ ಸ್ಮಾರ್ಟ್‌ಫೋನ್ ಅನ್ನು ಪರಿಗಣಿಸಬಹುದು ಎಂಬುದು ನಮ್ಮ ಅಭಿಪ್ರಾಯ.


Click it and Unblock the Notifications








