ನಾಳೆ Vivo V40e 5G ಬಿಡುಗಡೆ: ಕಡಿಮೆ ಬೆಲೆ, ಟಾಪ್ 5 ಫೀಚರ್ಸ್ ಲೀಕ್!
ವಿವೋ ಪ್ರಿಯರಿಗೆ ನಾಳೆ ಭರ್ಜರಿ ಸಿಹಿ ಸುದ್ದಿ ಇದೆ. ಕೈಗೆಟುಕುವ ಬೆಲೆಯಲ್ಲಿ ಹೊಸ 5G ವಿವೋ ಫೋನ್ ಭಾರತಕ್ಕೆ ಎಂಟ್ರಿ ಕೊಡಲಿದೆ. ಹೌದು, ಚೀನಾದ ಪ್ರಮುಖ ಸ್ಮಾರ್ಟ್‌ಫೋನ್ ಕಂಪನಿ ವಿವೋ (Vivo) ನಾಳೆ (ಸೆಪ್ಟೆಂಬರ್ 25) ತನ್ನ 'V' ಸರಣಿಯಲ್ಲಿ ನೂತನ ಮೊಬೈಲ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಿದೆ. ಈ ಮೊಬೈಲ್ ವಿವೋ V40e 5G (Vivo V40e 5G) ಹೆಸರಿನೊಂದಿಗೆ ಲಗ್ಗೆ ಇಡಲಿದೆ. ಬನ್ನಿ, ಫೋನಿನ ನಿರೀಕ್ಷಿತ ಬೆಲೆ, ವೈಶಿಷ್ಟ್ಯಗಳು ಮತ್ತು ಇನ್ನಿತರ ಮಾಹಿತಿಯನ್ನು ತಿಳಿಯೋಣ.
ಹೌದು, ವಿವೋ V40e 5G ಸ್ಮಾರ್ಟ್‌ಫೋನ್ ಭಾರತದಲ್ಲಿ ನಾಳೆ (ಸೆಪ್ಟೆಂಬರ್ 25) ಮಧ್ಯಾಹ್ನ 12 ಗಂಟೆಗೆ ಅಧಿಕೃತವಾಗಿ ಲೋಕಾರ್ಪಣೆಗೊಳ್ಳಲಿದೆ. ಕಂಪನಿಯು ಈಗಾಗಲೇ, 'V' ಸರಣಿಯಲ್ಲಿ Vivo V40 ಮತ್ತು V40 Pro ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿದೆ. ಈ ಸಾಲಿನಲ್ಲಿ ವಿವೋ V40e 5G ಮೂರನೇ ಮೊಬೈಲ್ ಆಗಿರಲಿದೆ. ಕಂಪನಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಮೈಕ್ರೋಸೈಟ್ ಲೈವ್ ಆಗಿದೆ. ಪ್ರಮುಖ ಪ್ರಮುಖ ಫೀಚರ್ಸ್‌ಗಳು ಸಹ ಬಹಿರಂಗಗೊಂಡಿವೆ.

ವಿವೋ V40e 5G ಫೋನಿನ ನಿರೀಕ್ಷಿತ ಬೆಲೆ
8GB RAM + 128GB ಸ್ಟೋರೇಜ್ ಬೆಲೆ = 20,000 ರೂ.
8GB RAM + 256GB ಸ್ಟೋರೇಜ್ ಬೆಲೆ = 30,000 ರೂ.
ಕಂಪನಿಯು ಭಾರತದಲ್ಲಿ ವಿವೋ V40e 5G ಸ್ಮಾರ್ಟ್‌ಫೋನ್ ಅನ್ನು ಎರಡು ಸ್ಟೋರೇಜ್ ಆಯ್ಕೆಗಳಲ್ಲಿ ಬಿಡುಗಡೆ ಮಾಡುವ ಸಾಧ್ಯತೆಯಿದೆ. ಈ ಫೋನಿನ 8GB RAM ಮತ್ತು 128GB ಸ್ಟೋರೇಜ್ ಆಯ್ಕೆಯು 20,000 ರೂ. ಬೆಲೆಯನ್ನು ಹೊಂದಿರಬಹುದು. ಇನ್ನೂ, 8GB RAM ಮತ್ತು 256GB ಸ್ಟೋರೇಜ್ ಆಯ್ಕೆಯನ್ನು 30,000 ರೂ.ಗೆ ಬಿಡುಗಡೆ ಮಾಡಬಹುದು.
ವಿವೋ V40e 5G ಫೋನಿನ ವಿನ್ಯಾಸ
ವಿವೋ V40e 5G ಫೋನ್ ಇ-ಕಾಮರ್ಸ್ ವೆಬ್‌ಸೈಟ್ ಫ್ಲಿಪ್‌ಕಾರ್ಟ್ ಮೂಲಕ ಮಾರಾಟವಾಗಲಿದೆ. ಈ ಹಿಂದೆ, Vivo V30E ಅನ್ನು ಸಹ ಇದೇ ಪ್ಲಾಟ್‌ಫಾರ್ಮ್ ಮೂಲಕ ಮಾರಾಟ ಮಾಡಲಾಗಿತ್ತು. ಮೈಕ್ರೋಸೈಟ್ ಮೂಲಕ ವಿವೋ V40e 5G ಫೋನಿನ ಬಣ್ಣಗಳ ಆಯ್ಕೆಯನ್ನು ತಿಳಿಯಬಹುದು. ಈ ಫೋನ್ ರಾಯಲ್ ಬ್ರೋಂಜ್ ಮತ್ತು ಮಿಂಟ್ ಗ್ರೀನ್ ಬಣ್ಣಗಳಲ್ಲಿ ಬಿಡುಗಡೆಯಾಗಲಿದೆ.
ವಿವೋ V40e 5G ಫೋನಿನ ಹಿಂಭಾಗದ ಫಲಕದಲ್ಲಿ ಓವಲ್ ಆಕಾರದ ಕ್ಯಾಮೆರಾ ಮಾಡ್ಯೂಲ್ ಮತ್ತು ಎಲ್ಇಡಿ ಫ್ಲ್ಯಾಷ್ ಇದೆ. ಇವುಗಳ ಜೊತೆಗೆ ಆರಾ ಲೈಟ್ ಎಲ್ ಇಡಿ ಇದೆ. ಮುಂಭಾಗದ ಫಲಕದಲ್ಲಿ 3D ಬಾಗಿದ ವಿನ್ಯಾಸವನ್ನು ಹೊಂದಿದೆ. ಈ ಫೋನ್ 0.749 ಸೆಂ.ಮೀ ದಪ್ಪ ಮತ್ತು 183 ಗ್ರಾಂ ತೂಕವಿರಲಿದೆ. ಈ ಹಿಂದೆ ಬಿಡುಗಡೆಯಾಗಿದ್ದ ಫೋನಿಗೆ ಹೋಲಿಸಿದರೆ, ವಿವೋ V40e 5G ಸ್ಮಾರ್ಟ್‌ಫೋನ್ ವಿಭಿನ್ನ ವಿನ್ಯಾಸವನ್ನು ಹೊಂದಿದೆ.
ವಿವೋ V40e 5G ಫೋನಿನ ವೈಶಿಷ್ಟ್ಯಗಳು
ಡಿಸ್ಪ್ಲೇ: ವಿವೋ V40e 5G ಫೋನ್ 120 Hz ರಿಫ್ರೆಶ್ ದರದೊಂದಿಗೆ 6.77 ಇಂಚಿನ 3D ಕರ್ವ್ಡ್ AMOLED ಡಿಸ್ಪ್ಲೇಯನ್ನು ಹೊಂದಿರಲಿದೆ. ಇದು 2392 x 1080 ಪಿಕ್ಸೆಲ್‌ಗಳ ರೆಸಲ್ಯೂಶನ್, 93.3 ಪ್ರತಿಶತ ಸ್ಕ್ರೀನ್ ಟು ಬಾಡಿ ರೇಶಿಯೋ, SGS ಕಡಿಮೆ ನೀಲಿ ಬೆಳಕಿನ ಪ್ರಮಾಣೀಕರಣವನ್ನು ಹೊಂದಿದೆ.
ಪ್ರೊಸೆಸರ್: ವಿವೋ V40e 5G ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 7300 ಚಿಪ್‌ಸೆಟ್ ಅನ್ನು ಹೊಂದಿರಲಿದೆ. ಇದು Android 14 OS, FuntouchOS 14 ಕಸ್ಟಮ್ ಸ್ಕಿನ್ ಮತ್ತು 8GB RAM, 256GB ಸ್ಟೋರೇಜ್ ಆಯ್ಕೆನೊಂದಿಗೆ ಬಿಡುಗಡೆಯಾಗುವ ಸಾಧ್ಯತೆಯಿದೆ.
ಕ್ಯಾಮೆರಾ: ವಿವೋ V40e 5G ಫೋನ್ 50 ಮೆಗಾಪಿಕ್ಸೆಲ್ ಸೋನಿ OIS ರಕ್ಷಿತ ಮುಖ್ಯ ಕ್ಯಾಮೆರಾವನ್ನು ಹೊಂದಿದೆ. 8 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಆಂಗಲ್ ಲೆನ್ಸ್ ಇದೆ. ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ, ಎಫ್ (AF) ಗುಂಪಿನ ಸೆಲ್ಫಿ ಕ್ಯಾಮೆರಾ ಇದೆ. ಹಿಂಭಾಗದ ಫಲಕದಲ್ಲಿ ಔರಾ ಲೈಟ್ ಕೂಡ ಇದೆ.
ಬ್ಯಾಟರಿ: ಕಂಪನಿಯು ವಿವೋ V40e 5G ಮೊಬೈಲ್ ಅನ್ನು 5,500mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಪರಿಚಯಿಸಲಿದೆ. ಇದನ್ನು ವೇಗವಾಗಿ ಚಾರ್ಜ್ ಮಾಡಲು 80W ವೇಗದ ಚಾರ್ಜಿಂಗ್ ಸೌಲಭ್ಯ ಇರಲಿದೆ.


Click it and Unblock the Notifications








