ಭಾರತಕ್ಕಾಗಿ ವಿಶೇಷ ಕೆಂಪು ಬಣ್ಣದಲ್ಲಿ ಬರುತ್ತಿದೆಯಂತೆ Vivo X300 ಫೋನ್!
ಕಳೆದ ತಿಂಗಳು ಚೀನಾದಲ್ಲಿ ಮೊದಲಿಗೆ ಬಿಡುಗಡೆಯಾದ ಬಹುನಿರೀಕ್ಷಿತ Vivo X300 ಸ್ಮಾರ್ಟ್‌ಫೋನ್ ಸರಣಿಯು ಕೆಲವು ದಿನಗಳ ಹಿಂದೆಯಷ್ಟೇ ಜಾಗತಿಕ ಮಾರುಕಟ್ಟೆಗೆ ಪ್ರವೇಶಿಸಿದೆ. ಇದಾದ ಬಳಿಕ, ವಿವೋ ತನ್ನ ಮುಂದಿನ ಫ್ಲ್ಯಾಗ್‌ಶಿಪ್ ಸರಣಿ Vivo X300 ಅನ್ನು ಭಾರತದಲ್ಲಿ ಡಿಸೆಂಬರ್ ತಿಂಗಳಲ್ಲಿ ಬಿಡುಗಡೆ ಮಾಡುವ ಸಾಧ್ಯತೆ ಇದೆ. ಇತ್ತೀಚೆಗಷ್ಟೇ ಲೀಕ್ ಆಗಿರುವ ರೆಂಡರ್‌ಗಳಲ್ಲಿ ಭಾರತಕ್ಕೆ ಮಾತ್ರ ಮೀಸಲಾದ ವಿಶೇಷ ಕೆಂಪು ಬಣ್ಣದ ಆವೃತ್ತಿಯ ಈ ಫೋನ್ ಕಾಣಿಸಿಕೊಂಡಿದ್ದು, ಇದು Vivo X300 ಸ್ಟಾಂಡರ್ಡ್ ಮಾದರಿಯಾಗಿರುವ ಮಾಹಿತಿ ಹೊರಬಂದಿದೆ. ವಿಶೇಷವೆಂದರೆ, ಈ ಬಣ್ಣದ ಮಾದರಿಯು ಚೀನಾ ಅಥವಾ ಜಾಗತಿಕ ಮಾರುಕಟ್ಟೆಗಳಲ್ಲಿ ಲಭ್ಯವಾಗಿಲ್ಲ.!
ಹೌದು, ಪ್ರಖ್ಯಾತ ಟಿಪ್‌ಸ್ಟರ್ ಸಂಜು ಚೌಧರಿ ಹಂಚಿಕೊಂಡಿರುವ ಚಿತ್ರದಲ್ಲಿ Vivo X300 ನ ವಿಶೇಷ ಕೆಂಪು ವೇರಿಯಂಟ್‌ನ್ನು ನೋಡಬಹುದು. ಅವರ ಪ್ರಕಾರ, ಈ ಬಣ್ಣ ಭಾರತೀಯ ಮಾರುಕಟ್ಟೆಗೆ ಮಾತ್ರ ಸೀಮಿತವಾಗಲಿದೆ ಎನ್ನಲಾಗಿದೆ. ಹಾಗೆಯೇ, ಮತ್ತೋರ್ವ ಲೀಕರ್ ಪರಾಸ್ ಗುಗ್ಲಾನಿ ಕೂಡ ಇದೇ ಮಾಹಿತಿ ಹಂಚಿಕೊಂಡಿದ್ದು, ಕೆಂಪು ಬಣ್ಣದಲ್ಲಿ vivo X300 ಮಾದರಿ ಬರಲಿದೆ ಎಂದು ತಿಳಿಸಿದ್ದಾರೆ. ಗಮನಿಸುವುದಾದರೆ, ಚೀನಾದಲ್ಲಿ ಈ ಫೋನ್ Free Blue, Comfortable Purple, Pure Black ಮತ್ತು Lucky Colour ಎಂಬ ನಾಲ್ಕು ಬಣ್ಣಗಳಲ್ಲಿ ದೊರೆಯುತ್ತದೆ. ಇನ್ನು ಜಾಗತಿಕ ಮಾರುಕಟ್ಟೆಯಲ್ಲಿ Halo Pink ಮತ್ತು Phantom Black ಬಣ್ಣಗಳಲ್ಲಿ ಮಾತ್ರ ಈ ಸರಣಿ ಲಭ್ಯವಿದೆ.
ಭಾರತೀಯ ಮಾರುಕಟ್ಟೆಗೆ ವಿವೋ ಅಧಿಕೃತ ಘೋಷಣೆ ನೀಡದಿದ್ದರೂ, ದೇಶದಲ್ಲಿ ಬಿಡುಗಡೆಯಾಗುವ Vivo X300 ಸರಣಿ ಸ್ಮಾರ್ಟ್‌ಫೋನ್ ಮಾದರಿಗಳು ಚೀನಾ ಮತ್ತು ಯೂರೋಪ್ ಆವೃತ್ತಿಗಳಂತೆಯೇ ಸ್ಪೆಸಿಫಿಕೇಶನ್‌ಗಳನ್ನು ಹೊಂದುವ ನಿರೀಕ್ಷೆಯಿದೆ. ಈಗಾಗಲೇ ತಿಳಿದುಬಂದಂತೆ, ಹೊಸ Vivo X300 ಸರಣಿ ಫೋನ್‌ಗಳು ಆಕರ್ಷಕ ವಿನ್ಯಾಸ, ಶಕ್ತಿಶಾಲಿ ಕಾರ್ಯಕ್ಷಮತೆ, ಮತ್ತು ಅಪಾರ ಕ್ಯಾಮೆರಾ ಸಾಮರ್ಥ್ಯಗಳೊಂದಿಗೆ ಸಂಪೂರ್ಣ ಫ್ಲ್ಯಾಗ್‌ಶಿಪ್ ಅನುಭವ ನೀಡಲಿವೆ. ಹಾಗಾದರೆ, Vivo X300 ಸ್ಮಾರ್ಟ್‌ಫೋನ್ ಫೋನ್‌ಗಳಲ್ಲಿ ಯಾವ ಪ್ರಮುಖ ವೈಶಿಷ್ಟ್ಯಗಳು ಲಭ್ಯವಿರಬಹುದು ಮತ್ತು ಬೆಲೆ ಎಷ್ಟಿರಬಹುದು ಎಂಬೆಲ್ಲಾ ಮಾಹಿತಿಗಳನ್ನು ನೋಡೋಣ ಬನ್ನಿ.
Vivo X300 ಸರಣಿ: ಪ್ರಮುಖ ವೈಶಿಷ್ಟ್ಯಗಳು
Vivo X300 ಸ್ಮಾರ್ಟ್‌ಫೋನಿನಲ್ಲಿ 6.31 ಇಂಚಿನ ಫ್ಲಾಟ್ LTPO OLED ಡಿಸ್ಪ್ಲೇ ಇದೆ, 1.5K ರೆಸಲ್ಯೂಷನ್ ಮತ್ತು 120Hz ರಿಫ್ರೆಶ್ ರೇಟ್‌ನೊಂದಿಗೆ ಬಂದಿದೆ. ಇತ್ತ X300 Pro ನಲ್ಲಿ ಸ್ವಲ್ಪ ದೊಡ್ಡ 6.78 ಇಂಚಿನ ಮೈಕ್ರೋ-ಕರ್ವ್ಡ್ ಸ್ಕ್ರೀನ್ ದೊರೆಯಲಿದೆ. ಈ ಎರಡೂ ಫೋನ್‌ಗಳು OriginOS 6 (Android 16) ಆಧಾರಿತವಾಗಿವೆ ಮತ್ತು ಹೊಸ Dimensity 9500 ಚಿಪ್‌ನಿಂದ ಚಾಲಿತವಾಗಿವೆ. ಮಾರುಕಟ್ಟೆಯಲ್ಲಿ ಇದು Snapdragon 8 Elite Gen 5 ಗೆ ಸಮಾನವಾದ ಶಕ್ತಿಶಾಲಿ ಪ್ರೊಸೆಸರ್ ಎಂದು ಹೇಳಲಾಗುತ್ತದೆ.

ವಿವೋ X300 ಮತ್ತು X300 ಪ್ರೊ ಸ್ಮಾರ್ಟ್‌ಫೋನ್‌ಗಳು LPDDR5X RAM ಮತ್ತು UFS 4.0 ಸ್ಟೋರೇಜ್ ತಂತ್ರಜ್ಞಾನವನ್ನು ಹೊಂದಿವೆ. ಇದು ಅತ್ಯುತ್ತ ಪ್ರದರ್ಶನ ಮತ್ತು ಮಲ್ಟಿಟಾಸ್ಕಿಂಗ್ ಅನುಭವ ಒದಗಿಸುತ್ತವೆ.. ಬ್ಯಾಟರಿ ವಿಭಾಗದಲ್ಲಿ X300 ನಲ್ಲಿ 6,040mAh, ಮತ್ತು X300 Pro ನಲ್ಲಿ 6,510mAh ಸಾಮರ್ಥ್ಯವಿದೆ. ಇವೆರಡೂ 90W ವೈರ್ಡ್ ಮತ್ತು 40W ವೈರ್‌ಲೆಸ್ ಚಾರ್ಜಿಂಗ್ ಬೆಂಬಲಿಸುತ್ತವೆ. ಜೊತೆಗೆ IP68 ರೇಟಿಂಗ್, ಅಲ್ಟ್ರಾಸೋನಿಕ್ ಫಿಂಗರ್‌ಪ್ರಿಂಟ್ ಸೆನ್ಸರ್, ಮತ್ತು ಉತ್ತಮ ತಾಪಮಾನ ನಿಯಂತ್ರಣ ವ್ಯವಸ್ಥೆ ಇವೆ.
Zeiss ಜೊತೆಗಿನ ಸುಧಾರಿತ ಕ್ಯಾಮೆರಾ ಇದೆ
ವಿವೋ ಮತ್ತು Zeiss ಸಹಯೋಗವು ಈ ಸರಣಿ ಫೋನ್‌ಗಳ ಮುಖ್ಯ ಆಕರ್ಷಣೆಯಾಗಿದೆ. Vivo X300 ನಲ್ಲಿ 200MP Samsung HPB ಪ್ರಾಥಮಿಕ ಸೆನ್ಸರ್, 50MP ಅಲ್ಟ್ರಾ-ವೈಡ್ Samsung JN1, ಮತ್ತು 50MP Sony LYT-602 ಪೆರಿಸ್ಕೋಪ್ ಲೆನ್ಸ್ ಇವೆ. X300 Pro ನಲ್ಲಿ ಮುಖ್ಯ ಕ್ಯಾಮೆರಾ 50MP Sony LYT-828 ಆಗಿದ್ದು, ನೈಸರ್ಗಿಕ ಪೋರ್ಟ್ರೇಟ್‌ಗಳು ಮತ್ತು ಕಡಿಮೆ ಬೆಳಕಿನ ಫೋಟೋಗಳಲ್ಲಿ ಉತ್ತಮ ಫಲಿತಾಂಶ ನೀಡುತ್ತದೆ ಎಂದು ಹೇಳಲಾಗಿದೆ. ಈ ಎರಡೂ ಮಾದರಿಗಳಲ್ಲಿ Zeiss T* ಲೆನ್ಸ್ ಕೋಟಿಂಗ್ ಮತ್ತು Vivo V1 ಮತ್ತು V3+ ಇಮೇಜಿಂಗ್ ಚಿಪ್‌ಗಳು ಅಳವಡಿಸಲಾಗಿವೆ, ಇದರಿಂದ ಬಣ್ಣ ಸಮತೋಲನ ಮತ್ತು ಡೈನಾಮಿಕ್ ಶ್ರೇಣಿಯಲ್ಲಿ ಸ್ಪಷ್ಟತೆ ಹೆಚ್ಚುತ್ತದೆ ಎಂದು ತಿಳಿಸಲಾಗಿದೆ.
Vivo X300 ಸರಣಿ: ಬೆಲೆ ಎಷ್ಟಿರಬಹುದು?
ಭಾರತದಲ್ಲಿ Vivo X300 ಸರಣಿಯ ಕುರಿತು ಇನ್ನೂ ಯಾವುದೇ ಅಧಿಕೃತ ಮಾಹಿತಿ ಬಿಡುಗಡೆಯಾಗಿಲ್ಲ. ಆದಾಗ್ಯೂ, ಉದ್ಯಮದ ಸೋರಿಕೆಗಳು ಮತ್ತು ವರದಿಗಳ ಆಧಾರದ ಮೇಲೆ Vivo X300 5G ಮೂಲ ಮಾದರಿಯ ಫೋನ್ ನಿರೀಕ್ಷಿತ ಬೆಲೆ ಸುಮಾರು ₹54,990 ಇರಬಹುದು ಎಂದು ಹೇಳಿವೆ. ಅಧಿಕೃತ ಘೋಷಣೆ ಇನ್ನೂ ಬಾರದಿದ್ದರೂ, ಭಾರತದಲ್ಲಿ ವಿವೋ X300 ಸರಣಿಯು ಡಿಸೆಂಬರ್‌ನಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ.


Click it and Unblock the Notifications








