ಬಂದೇ ಬಿಡ್ತು Xiaomi 15 Ultra ಫೋನ್; 200MP ಕ್ಯಾಮೆರಾ.. 6000mAh ಬ್ಯಾಟರಿ.. ಅಬ್ಬಬ್ಬಾ ಬಲು ದುಬಾರಿ!
ಬಹುನಿರೀಕ್ಷಿತ ಶಿಯೋಮಿ 15 ಅಲ್ಟ್ರಾ (Xiaomi 15 Ultra) ಮೊಬೈಲ್ ಬಿಡುಗಡೆಯಾಗಿದೆ. ಕಂಪನಿಯು ಇದನ್ನು ಈವರೆಗಿನ ಅತ್ಯಂತ ಶಕ್ತಿಶಾಲಿ ಸ್ಮಾರ್ಟ್‌ಫೋನ್ ಎಂದು ಕರೆದಿದೆ. ಈ ಮೂಲಕ ಮತ್ತೊಮ್ಮೆ ಗ್ರಾಹಕರ ಗಮನ ಸೆಳೆದಿದೆ. ಪ್ರಸ್ತುತ, ಶಿಯೋಮಿ 15 ಅಲ್ಟ್ರಾ ಫೋನ್ ಚೀನಾದಲ್ಲಿ ಖರೀದಿಗೆ ಲಭ್ಯವಿದೆ. ಇದೇ ಮಾರ್ಚ್ 2 ರಂದು ಜಾಗತಿಕವಾಗಿ ಬಿಡುಗಡೆಯಾಗಲಿದೆ. ಈ ಫೋನ್ ಭಾರತದಲ್ಲೂ ಬಿಡುಗಡೆಯಾಗಲಿದೆ ಎಂದು ಈಗಾಗಲೇ ಶಿಯೋಮಿ ಖಚಿತಪಡಿಸಿದೆ. ಶಿಯೋಮಿ 15 ಅಲ್ಟ್ರಾ ಪ್ರೀಮಿಯಂ ಸ್ಮಾರ್ಟ್‌ಫೋನ್ ಸ್ನಾಪ್‌ಡ್ರಾಗನ್ 8 ಎಲೈಟ್ ಪ್ರೊಸೆಸರ್ ಹೊಂದಿದೆ. ಬನ್ನಿ, ಈ ಫೋನಿನ ಬೆಲೆ ಮತ್ತು ವಿಶೇಷತೆಗಳನ್ನು ತಿಳಿಯೋಣ.
ನೀವು ಅತ್ಯುತ್ತಮ ಕ್ಯಾಮೆರಾ ಫೋನ್ ಖರೀದಿಸುವಾಗ ಸ್ಯಾಮ್‌ಸಂಗ್, ವಿವೋ ಮತ್ತು ಆಪಲ್ ಸೇರಿದಂತೆ ಹಲವು ಕಂಪನಿಗಳ ಹೆಸರುಗಳು ಮನಸ್ಸಿಗೆ ಬರುತ್ತವೆ. ಆದರೆ, ಶಿಯೋಮಿ ತನ್ನ ಹೊಸ ಶಕ್ತಿಶಾಲಿ ಅಲ್ಟ್ರಾ ಫೋನಿನೊಂದಿಗೆ ಮೊಬೈಲ್ ಪ್ರಿಯರ ಗಮನ ಸೆಳೆದಿದೆ. ಕಳೆದ ವರ್ಷ ಬಿಡುಗಡೆಯಾಗಿದ್ದ ಶಿಯೋಮಿ 14 ಅಲ್ಟ್ರಾ ಫೋನಿನ ಉತ್ತರಾಧಿಕಾರಿಯಾಗಿ ಶಿಯೋಮಿ 15 ಅಲ್ಟ್ರಾ ಅನ್ನು ಪರಿಚಯಿಸಿದೆ. ಇದು 200 ಮೆಗಾಪಿಕ್ಸೆಲ್ ಕ್ಯಾಮೆರಾ, 6000mAh ಬ್ಯಾಟರಿ, 16GB RAM ಸೇರಿದಂತೆ ಹಲವು ಅತ್ಯುತ್ತಮ ಗುಣಮಟ್ಟದ ವೈಶಿಷ್ಟ್ಯಗಳೊಂದಿಗೆ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದೆ.

ಶಿಯೋಮಿ 15 ಅಲ್ಟ್ರಾ: ಟಾಪ್ 5 ವೈಶಿಷ್ಟ್ಯಗಳು
ಡಿಸ್ಪ್ಲೇ ವಿವರ
ಶಿಯೋಮಿ 15 ಅಲ್ಟ್ರಾ ಮೊಬೈಲ್ 6.73 ಇಂಚಿನ ಅಮೋಲೆಡ್ ಡಿಸ್ಪ್ಲೇ ಹೊಂದಿದೆ. ಇದು 3100 x 1440 ಪಿಕ್ಸೆಲ್‌ಗಳ ರೆಸಲ್ಯೂಶನ್ ಸಾಮರ್ಥ್ಯ, 120Hz ರಿಫ್ರೆಶ್ ದರ ಮತ್ತು 3,200 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಬೆಂಬಲದೊಂದಿಗೆ ಬರುತ್ತದೆ. ಈ ಫೋನಿನ ಬೆಜೆಲ್‌ಗಳು ಈ ಹಿಂದಿನ ಮಾದರಿಗಿಂತ ಸ್ವಲ್ಪ ತೆಳ್ಳಗಿವೆ.
ಪ್ರೊಸೆಸರ್ ಸಾಮರ್ಥ್ಯ
ನೂತನ ಶಿಯೋಮಿ 15 ಅಲ್ಟ್ರಾ ಫೋನ್ ಶಕ್ತಿಶಾಲಿ ಸ್ನಾಪ್‌ಡ್ರಾಗನ್ 8 ಎಲೈಟ್ ಪ್ರೊಸೆಸರ್ ಹೊಂದಿದೆ. ಈ ಮೊಬೈಲ್‌ನಲ್ಲಿ ಡ್ಯುಯಲ್ ಚಾನೆಲ್ ಐಸ್ ಲೂಪ್ ಡಿ ಕೂಲಿಂಗ್ ಸಿಸ್ಟಮ್ ಅಳವಡಿಸಲಾಗಿದೆ. ಈ ಫೋನ್ ಆಂಡ್ರಾಯ್ಡ್ 15 ಆಧಾರಿತ HyperOS 2.0 ನಲ್ಲಿ ಕೆಲಸ ನಿರ್ವಹಿಸುತ್ತದೆ. ಈ ಮೊಬೈಲ್ 4 ವರ್ಷಗಳ ಸಾಫ್ಟ್‌ವೇರ್ ಅಪ್ಡೇಟ್ ಪಡೆಯುತ್ತದೆ. ಈ ಶಕ್ತಿಶಾಲಿ ಫೋನ್ 12GB RAM, 16GB RAM ಮತ್ತು 256GB, 512GB, 1TB ಸ್ಟೋರೇಜ್ ಹೊಂದಿದೆ.
ಕ್ಯಾಮೆರಾ ಸೆಟಪ್
ಶಿಯೋಮಿ 15 ಅಲ್ಟ್ರಾ ಸ್ಮಾರ್ಟ್‌ಫೋನ್ ಅದ್ಭುತ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಲಭ್ಯವಿದೆ. ಇದು 200 ಮೆಗಾಪಿಕ್ಸೆಲ್ ಸ್ಯಾಮ್‌ಸಂಗ್ HP9 ಪೆರಿಸ್ಕೋಪ್ ಲೆನ್ಸ್, 50 ಮೆಗಾಪಿಕ್ಸೆಲ್ ಟೆಲಿಫೋಟೋ ಲೆನ್ಸ್ ಮತ್ತು 50 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಲೆನ್ಸ್ ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಫೋನಿನಲ್ಲಿ 32 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಇದೆ.

ಬ್ಯಾಟರಿ ಮತ್ತು ಚಾರ್ಜಿಂಗ್
ಹೊಸ ಶಿಯೋಮಿ 15 ಅಲ್ಟ್ರಾ ಮೊಬೈಲ್ 6,000mAh ಸಾಮರ್ಥ್ಯದ ದೊಡ್ಡ ಬ್ಯಾಟರಿ ಹೊಂದಿದೆ. ಜಾಗತಿಕ ಮಾರುಕಟ್ಟೆಯಲ್ಲಿ 5400mAh ಬ್ಯಾಟರಿಯೊಂದಿಗೆ ಬಿಡುಗಡೆಯಾಗಲಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 90W ವೈರ್ಡ್ ಫಾಸ್ಟ್ ಚಾರ್ಜಿಂಗ್ ಮತ್ತು 80W ವೈರ್‌ಲೆಸ್ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ. ಈ ಫೋನ್ ಯುಎಸ್‌ಬಿ 3.2 ಜೆನ್ 2 ಪೋರ್ಟ್ ಹೊಂದಿದೆ. ಇದು IP68 ರೇಟಿಂಗ್ ಮತ್ತು ಗೊರಿಲ್ಲಾ ಗ್ಲಾಸ್ 7i ಅನ್ನು ಒಳಗೊಂಡಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಈ ಮೊಬೈಲ್ 5G SA/NSA, ಡ್ಯುಯಲ್ 4G VoLTE,ವ-ಫೈ 7, ಬ್ಲೂಟೂತ್ 6.0, ಎನ್‌ಎಫ್‌ಸಿ, ಸ್ಯಾಟಲೈಟ್ ಕಮ್ಯುನಿಕೇಷನ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ.
ಶಿಯೋಮಿ 15 ಅಲ್ಟ್ರಾ ಬೆಲೆ ಮತ್ತು ಲಭ್ಯತೆ
ಶಿಯೋಮಿ 15 ಅಲ್ಟ್ರಾ ಫೋನ್ ನಾಲ್ಕು ಸ್ಟೊರೇಜ್ ರೂಪಾಂತರಗಳಲ್ಲಿ ಲಾಂಚ್ ಆಗಿದೆ. ಈ ಫೋನಿನ 12GB + 256GB ಸ್ಟೊರೇಜ್ ರೂಪಾಂತರದ ಬೆಲೆ 78,050 ರೂ. ಆಗಿದೆ. 16GB + 512GB ಸ್ಟೊರೇಜ್ ವೇರಿಯಂಟ್ 84,050 ರೂ. ಬೆಲೆ ಹೊಂದಿದೆ. 16GB + 1TB ಸ್ಟೊರೇಜ್ ಮಾದರಿಯು 93,655 ರೂ.ಗೆ ಮಾರಾಟವಾಗಲಿದೆ. ಹಾಗೆಯೇ 16GB + 1TB ಸ್ಟೊರೇಜ್ ರೂಪಾಂತರವನ್ನು (ಡ್ಯುಯಲ್ ಸ್ಯಾಟಲೈಟ್ ಆವೃತ್ತಿ) 96,045 ರೂ.ಗೆ ಪರಿಚಯಿಸಲಾಗಿದೆ. ಈ ಮೊಬೈಲ್ ಕ್ಲಾಸಿಕ್ ಬ್ಲಾಕ್ ಮತ್ತು ಸಿಲ್ವರ್, ಪೈನ್ ಮತ್ತು ಸೈಪ್ರೆಸ್ ಗ್ರೀನ್, ಬಿಳಿ ಮತ್ತು ಕಪ್ಪು ಬಣ್ಣಗಳ ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಿದೆ. ಇದು ಮಾರ್ಚ್ 2 ರಂದು ಭಾರತ ಮತ್ತು ಜಾಗತಿಕ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದೆ.


Click it and Unblock the Notifications








