ಫೆಬ್ರವರಿ 28ಕ್ಕೆ Xiaomi 17 ಸರಣಿ ಜಾಗತಿಕ ಲಾಂಚ್: ಭಾರತದ ಬೆಲೆ ವಿವರ ಲೀಕ್!
ವಿಶ್ವ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಭಾರೀ ಕುತೂಹಲ ಮೂಡಿಸಿರುವ ಬಹುನಿರೀಕ್ಷಿತ Xiaomi 17 ಸರಣಿಯ ಜಾಗತಿಕ ಬಿಡುಗಡೆ ದಿನಾಂಕವು ಇದೀಗ ಅಧಿಕೃತವಾಗಿದೆ. ಇದೇ ಫೆಬ್ರವರಿ 28ರಂದು ಸ್ಪೇನ್‌ನ ಬಾರ್ಸಿಲೋನಾ ನಗರದಲ್ಲಿ ನಡೆಯಲಿರುವ ಮೊಬೈಲ್ ವರ್ಲ್ಡ್ ಕಾಂಗ್ರೆಸ್ ಕಾರ್ಯಕ್ರಮದಲ್ಲಿ Xiaomi 17 ಸರಣಿಯು ಜಾಗತಿಕವಾಗಿ ಬಿಡುಗಡೆಯಾಗಲಿದೆ ಎಂದು ಕಂಪೆನಿ ದೃಢಪಡಿಸಿದ್ದು, ಈ ಕಾರ್ಯಕ್ರಮದಲ್ಲಿ ಜಾಗತಿಕ ಮಾರುಕಟ್ಟೆಗೆ Xiaomi 17 ಮತ್ತು Xiaomi 17 Ultra ಮಾದರಿಗಳು ಬರಲಿವೆ ಎಂಬ ಸೂಚನೆಗಳು ದೊರೆತಿವೆ. ಇದೇ ವೇಳೆಗೆ ಭಾರತದಲ್ಲೂ ಈ ಫೋನ್‌ಗಳ ಬೆಲೆಗಳು ಸೋರಿಕೆಯಾಗಿವೆ.
ಜಾಗತಿಕ ಲಾಂಚ್‌ಗೆ ವೇದಿಕೆ ಸಿದ್ಧ
Xiaomi ಈಗಾಗಲೇ ತನ್ನ ಅಧಿಕೃತ ಮೈಕ್ರೋಸೈಟ್ ಮೂಲಕ ಲಾಂಚ್ ದಿನಾಂಕವನ್ನು ಖಚಿತಪಡಿಸಿದೆ. ಟೀಸರ್ ಚಿತ್ರಗಳಲ್ಲಿ Xiaomi 17 Ultra ಮಾದರಿ "Starry Green" ಬಣ್ಣದಲ್ಲಿ ಕಾಣಿಸಿಕೊಂಡಿದ್ದು, ಈ ಬಾರಿ Ultra ಆವೃತ್ತಿಯೇ ಮುಖ್ಯ ಆಕರ್ಷಣೆಯಾಗಲಿದೆ ಎಂಬ ನಿರೀಕ್ಷೆ ಮೂಡಿಸಿದೆ. ಜಾಗತಿಕವಾಗಿ Xiaomi 17 ಮಾದರಿಯು Black, Green, Blue ಮತ್ತು Pink ಬಣ್ಣಗಳಲ್ಲಿ ಬಿಡುಗಡೆಯಾಗಬಹುದು ಮತ್ತು Ultra ಮಾದರಿಯು Black, White ಮತ್ತು Green ಬಣ್ಣಗಳಲ್ಲಿ ಲಭ್ಯವಾಗುವ ನಿರೀಕ್ಷೆಯಿದೆ.
ನಿರೀಕ್ಷಿತ ಬೆಲೆ ಮತ್ತು ಸ್ಟೋರೇಜ್ ಆಯ್ಕೆಗಳು
ಯೂರೋಪಿನ ಮಾರುಕಟ್ಟೆಯಲ್ಲಿ Xiaomi 17 (12GB RAM + 256GB ಸ್ಟೋರೇಜ್) ಮಾದರಿಯ ಬೆಲೆ EUR 999 ಇರಬಹುದು ಎಂದು ವರದಿಯಾಗಿದೆ. 12GB + 512GB ಆವೃತ್ತಿ EUR 1,099 ದಲ್ಲಿ ಲಭ್ಯವಾಗುವ ಸಾಧ್ಯತೆ ಇದೆ. ಇನ್ನೊಂದೆಡೆ, Xiaomi 17 Ultra ಹೆಚ್ಚು ಪ್ರೀಮಿಯಂ ವಿಭಾಗವನ್ನು ಗುರಿಯಾಗಿಸಿಕೊಂಡಿದ್ದು, 16GB + 512GB ಮಾದರಿಗೆ EUR 1,499 ಮತ್ತು 16GB + 1TB ಮಾದರಿಗೆ EUR 1,699 ಬೆಲೆ ಇರಬಹುದು ಎಂದು ಹೇಳಲಾಗಿದೆ.
ಭಾರತದಲ್ಲಿ ಯಾವಾಗ?..ಎಷ್ಟು ಬೆಲೆ?
Xiaomi 17 ಸರಣಿಯು ಭಾರತೀಯ ಮಾರುಕಟ್ಟೆಗೆ ಬರುವ ಕುರಿತು ಯಾವುದೇ ಅಧಿಕೃತ ಮಾಹಿತಿ ಇನ್ನೂ ಪ್ರಕಟವಾಗಿಲ್ಲ. ಭಾರತದ ವೆಬ್‌ಸೈಟ್ ಅಥವಾ ಸಾಮಾಜಿಕ ಚಾನೆಲ್‌ಗಳಲ್ಲಿ Xiaomi 17 ಸರಣಿಯ ಕುರಿತು ಈ ವರೆಗೂ ಟೀಸರ್ ಸಹ ಬಿಡುಗಡೆಯಾಗಿಲ್ಲ. ಆದರೆ, ವರದಿಗಳ ಪ್ರಕಾರ Xiaomi 17 ಭಾರತದಲ್ಲಿ ಸುಮಾರು ₹80,000 ದಿಂದ ಆರಂಭವಾಗಬಹುದು. Ultra ಮಾದರಿ ₹1,25,000 ರಷ್ಟು ಬೆಲೆಯನ್ನು ತಲುಪುವ ಸಾಧ್ಯತೆ ಇದೆ. ಮತ್ತು ಜಾಗತಿಕ ಪ್ರಕಟಣೆಯ ನಂತರ ಸ್ವಲ್ಪ ಸಮಯದಲ್ಲೇ ಭಾರತಕ್ಕೆ ಆಗಮನಿಸುವ ನಿರೀಕ್ಷೆ ಇದೆ.

ಖರೀದಿದಾರರಿಗೆ ವಿಶೇಷ ಭರವಸೆ ಯೋಜನೆ
Xiaomi 17 ಸರಣಿಯ ಜಾಗತಿಕ ಖರೀದಿದಾರರಿಗೆ 24 ತಿಂಗಳ "ಕ್ವಾಲಿಟಿ ಅಶ್ಯುರೆನ್ಸ್ ಪ್ಲಾನ್" ನೀಡಲಾಗುತ್ತದೆ ಎಂದು ಕಂಪೆನಿ ಪ್ರಕಟಿಸಿದೆ. ಮೊದಲ ಆರು ತಿಂಗಳೊಳಗೆ ಒಂದು ಬಾರಿ ಉಚಿತ ಸ್ಕ್ರೀನ್ ಬದಲಾವಣೆ ಸೌಲಭ್ಯ ದೊರೆಯಲಿದೆ. ಜೊತೆಗೆ, ವಾರಂಟಿ ಅವಧಿಯಲ್ಲಿ ಲೇಬರ್ ಚಾರ್ಜ್ ಇಲ್ಲದೆ ರಿಪೇರಿ ಮಾಡುವ ಅವಕಾಶವೂ ಲಭ್ಯವಾಗುತ್ತದೆ ಎಂದು ಕಂಪೆನಿ ತಿಳಿಸಿದೆ. ಪ್ರೀಮಿಯಂ ಸ್ಮಾರ್ಟ್‌ಫೋನ್ ಖರೀದಿಸುವವರಿಗೆ ಈ ರೀತಿಯ ಭರವಸೆ ಹೆಚ್ಚುವರಿ ವಿಶ್ವಾಸವನ್ನು ನೀಡುತ್ತಿದೆ.
ಪ್ರೀಮಿಯಂ ವಿಭಾಗದಲ್ಲಿ ಹೊಸ ಸ್ಪರ್ಧೆ
Xiaomi 17 ಸರಣಿಯು ಆಕರ್ಷಕ ವಿನ್ಯಾಸ, ಹೆಚ್ಚಿನ RAM ಆಯ್ಕೆಗಳು ಮತ್ತು ಬಲಿಷ್ಠ ಕಾರ್ಯಕ್ಷಮತೆಯೊಂದಿಗೆ ಪ್ರೀಮಿಯಂ ಸೆಗ್ಮೆಂಟ್‌ನಲ್ಲಿ ಹೊಸ ಸ್ಪರ್ಧೆಯನ್ನು ಸೃಷ್ಟಿಸಬಹುದು. ಜಾಗತಿಕ ಲಾಂಚ್ ಬಳಿಕ ಭಾರತದಲ್ಲಿಯೂ ಶೀಘ್ರದಲ್ಲೇ ಅಧಿಕೃತ ಘೋಷಣೆ ನಿರೀಕ್ಷಿಸಲಾಗಿದೆ. ಪ್ರೀಮಿಯಂ ಸ್ಮಾರ್ಟ್‌ಫೋನ್ ಖರೀದಿಸಲು ಯೋಚಿಸುತ್ತಿರುವವರಿಗೆ Xiaomi 17 ಮತ್ತು Xiaomi 17 Ultra ಪ್ರಮುಖ ಆಯ್ಕೆಗಳಾಗಿ ಪರಿಣಮಿಸಬಹುದು.


Click it and Unblock the Notifications








