Xiaomi 17, Xiaomi 17 Ultra: ಜಾಗತಿಕ ಬೆಲೆ ಮತ್ತು ಬಿಡುಗಡೆ ದಿನಾಂಕ ಲೀಕ್!
ಜನಪ್ರಿಯ ಮೊಬೈಲ್ ಬ್ರ್ಯಾಂಡ್ Xiaomi ತನ್ನ ಇತ್ತೀಚಿನ ಫ್ಲಾಗ್‌ಶಿಪ್ ಸರಣಿಯಾದ Xiaomi 17 ಸರಣಿಯನ್ನು ಜಾಗತಿಕ ಮಾರುಕಟ್ಟೆಗೆ ತರಲು ಸಜ್ಜಾಗಿದೆ ಎನ್ನುವ ವರದಿಗಳು ಹಲವಾರು ದಿನಗಳಿಂದ ಹರಿದಾಡುತ್ತಿವೆ. ಕಳೆದ ವರ್ಷ ಚೀನಾದಲ್ಲಿ ಪರಿಚಯವಾದ ಈ ಜನಪ್ರಯ ಸರಣಿಯ ಆಗಮನಕ್ಕಾಗಿ ಗ್ರಾಹಕರು ಕೂಡ ಕಾದು ಕುಳಿತಿದ್ದರು. ಇದೀಗ ಜಾಗತಿಕವಾಗಿ Xiaomi 17 ಸರಣಿಯ ಬಿಡುಗಡೆ ದಿನಾಂಕ, ಬೆಲೆ ಹಾಗೂ ಸ್ಟೋರೇಜ್ ಆಯ್ಕೆಗಳ ಬಗ್ಗೆ ಸ್ಪಷ್ಟ ಸೂಚನೆಗಳು ಲಭ್ಯವಾಗಿವೆ. ವಿಶ್ವದಾದ್ಯಂತ ಟೆಕ್ ಪ್ರಿಯರ ಗಮನ ಸೆಳೆದಿರುವ Xiaomi 17 Ultra ಫೋನ್ ಕೂಡ ಇದೇ ಸಂದರ್ಭದಲ್ಲಿ ಅನಾವರಣಗೊಳ್ಳುವ ಸಾಧ್ಯತೆ ಇದೆ.
ಇತ್ತೀಚಿನ ಆನ್‌ಲೈನ್ ವರದಿಗಳ ಪ್ರಕಾರ, Xiaomi 17 ಮತ್ತು Xiaomi 17 Ultra ಫೆಬ್ರವರಿ 28ರಂದು ಜಾಗತಿಕವಾಗಿ ಬಿಡುಗಡೆಯಾಗಬಹುದು. ಇದು ಮಾರ್ಚ್‌ನಲ್ಲಿ ಆರಂಭವಾಗಲಿರುವ (MWC 2026) ಕಾರ್ಯಕ್ರಮಕ್ಕೂ ಮುನ್ನವೇ ನಡೆಯುವ ಸಾಧ್ಯತೆ ಇದೆ. ಕಂಪನಿಯು ಇನ್ನೂ ಅಧಿಕೃತ ಘೋಷಣೆ ಮಾಡದಿದ್ದರೂ, ಯುರೋಪಿನ ಮಾರುಕಟ್ಟೆ ಬೆಲೆ ವಿವರಗಳು ಲೀಕ್ ಆಗಿರುವುದು ಗಮನಾರ್ಹ. ಏಕೆಂದರೆ, Xiaomi 17 ಮತ್ತು Xiaomi 17 Ultra ನ ಜಾಗತಿಕ ಬೆಲೆ, ಶೇಖರಣಾ ರೂಪಾಂತರಗಳು ಮತ್ತು ಬಣ್ಣ ಆಯ್ಕೆಗಳನ್ನು Dealabs ಪ್ರಕಟಿಸಿರುವುದು ಶೀಘ್ರ ಆಗಮನವನ್ನು ಸೂಚಿಸಿದೆ.
ಯುರೋಪಿನಲ್ಲಿ Xiaomi 17 ಮೂಲ ಮಾದರಿ 12GB RAM ಮತ್ತು 256GB ಸ್ಟೋರೇಜ್ ಆಯ್ಕೆಯಲ್ಲಿ ಸುಮಾರು EUR 999 (ಅಂದಾಜು ₹1.07 ಲಕ್ಷ) ದರದಲ್ಲಿ ಲಭ್ಯವಾಗಬಹುದು ಎಂದು ಹೇಳಲಾಗುತ್ತಿದೆ. 12GB + 512GB ಆವೃತ್ತಿಯ ಬೆಲೆ EUR 1,099 (ಸುಮಾರು ₹1.18 ಲಕ್ಷ) ಇರಬಹುದು. ಇನ್ನೊಂದೆಡೆ, Xiaomi 17 Ultra 16GB + 512GB ಆಯ್ಕೆಯಲ್ಲಿ EUR 1,499 (ಸುಮಾರು ₹1.61 ಲಕ್ಷ) ಹಾಗೂ 16GB + 1TB ಮಾದರಿ EUR 1,699 (ಸುಮಾರು ₹1.83 ಲಕ್ಷ) ದರದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಯೂರೋಪಿಗಿಂತ ಭಾರತದಲ್ಲಿ ಇದರ ಬೆಲೆ ಕಡಿಮೆಯಾಗುವ ಸಾಧ್ಯತೆ ಇದೆ.

ಬಣ್ಣಗಳ ವಿಷಯದಲ್ಲಿ Xiaomi 17 ಕಪ್ಪು, ಹಸಿರು, ನೀಲಿ ಮತ್ತು ಗುಲಾಬಿ ಬಣ್ಣಗಳಲ್ಲಿ ಲಭ್ಯವಾಗಬಹುದು. Xiaomi Ultra ಮಾದರಿ ಕಪ್ಪು, ಬಿಳಿ ಮತ್ತು ಹಸಿರು ಆಯ್ಕೆಗಳಲ್ಲಿ ಬರಬಹುದೆಂದು ವರದಿಗಳು ಸೂಚಿಸುತ್ತವೆ. ಡಿಸೈನ್ ಮತ್ತು ಫಿನಿಷ್ ವಿಚಾರದಲ್ಲಿ ಈ ಸರಣಿ ಪ್ರೀಮಿಯಂ ಸೆಗ್ಮೆಂಟ್ ಬಳಕೆದಾರರನ್ನು ಗುರಿಯಾಗಿಸಿಕೊಂಡಿದೆ. ವೈಶಿಷ್ಟ್ಯಗಳ ದೃಷ್ಟಿಯಿಂದ, ಈ ಸ್ಮಾರ್ಟ್‌ಫೋನ್‌ಗಳು Android 16 ಆಧಾರಿತ HyperOS 3 ಮೇಲೆ ಕಾರ್ಯನಿರ್ವಹಿಸಬಹುದು ಎನ್ನಲಾಗಿದೆ. ಜೊತೆಗೆ Qualcomm Snapdragon 8 Elite Gen 5 (3nm ಪ್ರೊಸೆಸರ್) ಚಿಪ್‌ಸೆಟ್ ಬಳಸುವ ಸಾಧ್ಯತೆ ಇದೆ.
ಸಾಮಾನ್ಯ Xiaomi 17 ಮಾದರಿಯಲ್ಲಿ 6,330mAh ಸಾಮರ್ಥ್ಯದ ಬ್ಯಾಟರಿ ಇರಬಹುದು ಎಂಬ ಮಾಹಿತಿ ಲಭ್ಯವಾಗಿದೆ. Ultra ದಲ್ಲಿನ ಬ್ಯಾಟರಿ ಶಕ್ತಿಯು ತಿಳಿಯದಿದ್ದರೂ, ವೇಗವಾದ 100W ವೈರ್‌ಡ್ ಹಾಗೂ 50W ವೈರ್‌ಲೆಸ್ ಚಾರ್ಜಿಂಗ್ ಬೆಂಬಲವು ಈ ಸರಣಿಯ ಪ್ರಮುಖ ಹೈಲೈಟ್ ಆಗಿರಬಹುದು. ಚೀನಾದಲ್ಲಿ ಬಿಡುಗಡೆಯಾದ ಮಾದರಿಯಂತೆ, Xiaomi 17 ನಲ್ಲಿ Leica ಸಹಭಾಗಿತ್ವದ ಟ್ರಿಪಲ್ ರಿಯರ್ ಕ್ಯಾಮೆರಾ ವ್ಯವಸ್ಥೆ ಇರುವ ಸಾಧ್ಯತೆ ಇದೆ. ಇನ್ನು ಈ ಫೋನ್‌ಗಳಲ್ಲಿ 6.3 ಇಂಚಿನ 1.5K OLED ಡಿಸ್‌ಪ್ಲೇ ಹಾಗೂ 120Hz ರಿಫ್ರೆಶ್ ರೇಟ್ ಬೆಂಬಲವನ್ನು ನೀಡಬಹುದಾದ ಸಾಧ್ಯತೆ ದಟ್ಟವಾಗಿದೆ.
ಒಟ್ಟಿನಲ್ಲಿ, Xiaomi 17 ಮತ್ತು Xiaomi 17 Ultra ಜಾಗತಿಕ ಲಾಂಚ್ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ದೊಡ್ಡ ಚರ್ಚೆಗೆ ಕಾರಣವಾಗುವ ಸಾಧ್ಯತೆ ಇದೆ. ಭಾರತದಲ್ಲಿ ಅಧಿಕೃತ ಬಿಡುಗಡೆ ಮತ್ತು ದರ ವಿವರಗಳು ಹೊರಬಂದ ಬಳಿಕ ಈ ಫೋನ್‌ಗಳು ಪ್ರೀಮಿಯಂ ವಿಭಾಗದಲ್ಲಿ ಎಷ್ಟು ಸ್ಪರ್ಧೆ ನೀಡಲಿವೆ ಎಂಬುದು ಸ್ಪಷ್ಟವಾಗಲಿದೆ. ಟೆಕ್ ಅಭಿಮಾನಿಗಳು ಮುಂದಿನ ದಿನಗಳಲ್ಲಿ ಕಂಪನಿಯ ಅಧಿಕೃತ ಘೋಷಣೆಯನ್ನು ಕಾದು ನೋಡುತ್ತಿದ್ದಾರೆ. ಈ ಕುರಿತಂತೆ ನಿಮ್ಮ ಅನಿಸಿಕೆ ಏನು? ಎಂಬುದನ್ನು ಈ ಕೆಳಗೆ ಕಾಮೆಂಟ್ ಮಾಡಿ ತಿಳಿಸಿ. Xiaomi 17 Ultra ಕುರಿತು ನೀವು ಕೂಡ ಕುತೂಹಲ ಹೊಂದಿದ್ದರೆ ಈ ಕೆಳಗೆ ಕಾಮೆಂಟ್ ಮಾಡಿ ತಿಳಿಸಿ.


Click it and Unblock the Notifications