ದೇಶದ ಮೊಬೈಲ್ ಮಾರುಕಟ್ಟೆಯಲ್ಲಿ ಶಿಯೋಮಿಯ ಬಿಗಿಹಿಡಿತ!..ಯಾವ ಕಂಪೆನಿಗಳ ಪಾಲು ಎಷ್ಟು?
ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಚೀನಾದ ಶಿಯೋಮಿ ಮೊಬೈಲ್ ಕಂಪೆನಿಯ ಅಬ್ಬರ ಮತ್ತಷ್ಟು ಹೆಚ್ಚಾಗಿದೆ. ಕಳೆದ ಎರಡು ವರ್ಷಗಳಿಂದಲೂ ದೇಶದ ಮಾರುಕಟ್ಟೆಯಲ್ಲಿ ಮೊದಲ ಸ್ಥಾನದನ್ನೇ ಪಡೆದುಕೊಂಡು ಬಂದಿರುವ ಶಿಯೋಮಿಯ ಪ್ರಾಬಲ್ಯ ಮತ್ತಷ್ಟು ಮುಂದುವರೆಸಿದ್ದು, ಈ ವರ್ಷದ ಕೊನೆಯ ತ್ರೈಮಾಸಿಕದಲ್ಲಿ ಶಿಯೋಮಿ ಸಂಸ್ಥೆಯ ಮೊಬೈಲ್ಗಳ ಮಾರಾಟದಲ್ಲಿ ಶೇ.7ರಷ್ಟು ಏರಿಕೆಯಾಗಿದೆ. ಅಂದರೆ, ದೇಶದ ಮಾರುಕಟ್ಟೆಯಲ್ಲಿ ಈ ಬಾರಿಯೂ ಶಿಯೋಮಿ ಅತಿಹೆಚ್ಚು ಸ್ಮಾರ್ಟ್‌ಫೋನ್‌ಗಳನ್ನು ಮಾರಾಟ ಮಾಡಿದೆ.

ಶಿಯೋಮಿ ಕಂಪೆನಿಯ ಸಾಗಣೆಯ ಪ್ರಮಾಣವು ವರ್ಷಕ್ಕೆ 7 ಪ್ರತಿಶತದಷ್ಟು ಹೆಚ್ಚಾಗಿದ್ದು, ಈ ವರ್ಷದ ಮೂರನೇ ಅಥವಾ ಕೊನೆಯ ತ್ರೈಮಾಸಿಕದಲ್ಲಿ ಭಾರತದ ಮೊಬೈಲ್ ಮಾರುಕಟ್ಟೆಯಲ್ಲಿ ಶಿಯೋಮಿಯು ಶೇ.26ರಷ್ಟು ಮಾರುಕಟ್ಟೆಯ ಪಾಲನ್ನು ತನ್ನ ಹಿಡಿತದಲ್ಲಿಟ್ಟುಕೊಂಡಿದೆ. ಇನ್ನು ಎರಡನೇ ಸ್ಥಾನದಲ್ಲಿರುವ ಸ್ಯಾಮ್ಸಂಗ್ ಕಂಪೆನಿ ಶೇ.20ರಷ್ಟು ಮಾರುಕಟ್ಟೆ ಪಾಲು ಪಡೆಯುವ ಮೂಲಕ ಎರಡನೇ ಸ್ಥಾನದಲ್ಲಿದ್ದರೆ, ನಂತರದ ಮೂರು ಸ್ಥಾನಗಳನ್ನು ವಿವೋ ಶೇ.17, ರಿಯಲ್ಮಿ ಶೇ.16 ಹಾಗೂ ಒಪ್ಪೋ ಶೇ.8ರಷ್ಟು ಮಾರುಕಟ್ಟೆ ಪಾಲನ್ನು ಪಡೆದಿವೆ.

ಒಟ್ಟಾರೆಯಾಗಿ ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆಯು ಒಟ್ಟಾರೆ ವಾರ್ಷಿಕ 10 ಬೆಳವಣಿಗೆಯನ್ನು ದಾಖಲಿಸಿದೆ. ಈ ಬೆಳವಣಿಗೆಯು ಈ ತ್ರೈಮಾಸಿಕದಲ್ಲಿ ದಾಖಲೆಯ ಗರಿಷ್ಠ 49 ಮಿಲಿಯನ್ ಸ್ಮಾರ್ಟ್‌ಫೋನ್‌ಗಳನ್ನು ರವಾನಿಸಿದೆ ಎಂದು ಮಾರುಕಟ್ಟೆ ವರದಿಗಳು ತಿಳಿಸಿವೆ. ಸ್ಮಾರ್ಟ್‌ಫೋನ್‌ಗಳ ಮೇಲೆ ಹೆಚ್ಚುಚ್ಚು ರಿಯಾಯಿತಿಗಳು, ಆನ್‌ಲೈನ್ ಮಾರಾಟಗಳು, ಹೊಸ ಸಾಧನಗಳು ಮತ್ತು ಹಬ್ಬದ ಋತುವಿನ ಆಗಮನವು ಭಾರತದಲ್ಲಿ ಸ್ಮಾರ್ಟ್‌ಫೋನ್ ಸಾಗಣೆಗೆ ಆರ್ಥಿಕ ಕುಸಿತವನ್ನು ನಿವಾರಿಸಲು ಸಹಾಯ ಮಾಡಿದೆ ಎಂದು ವರದಿಗಳು ತಿಳಿಸಿವೆ.

ಬಜೆಟ್ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಈ ವರ್ಷ ಪುಟುದೆದ್ದಿರುವ ಸ್ಯಾಮ್ಸಂಗ್ ಕಂಪೆನಿ ಈ ತ್ರೈಮಾಸಿಕದಲ್ಲಿ ಕೊಂಚ ಇಳಿಕೆಯ ಹಾದಿ ಹಿಡಿದಿದ್ದು, ಶೇ.4ರಷ್ಟು ಕುಸಿತ ಕಂಡಿದೆ. ಚೀನಾ ಮೂಲದ ವಿವೋ, ರೀಯಲ್ಮಿ ಹಾಗೂ ಒಪ್ಪೋ ಮೊಬೈಲ್ಗಳ ತೀವ್ರ ಸ್ಫರ್ಧೆಯಿಂದ ಸ್ಯಾಮ್ಸಂಗ್ ಮಾರುಕಟ್ಟೆ ಕೊಂಚ ವಿಚಲಿತವಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಆದರೆ, ಸ್ಯಾಮ್ಸಂಗ್ ಗ್ಯಾಲಕ್ಸಿ ನೋಟ್ 10 ಬಿಡುಗಡೆಯು ಬ್ರಾಂಡ್‌ನ ಸಾಗಣೆ ಸಂಖ್ಯೆಗಳ ಮೇಲೆ ಸಕಾರಾತ್ಮಕ ಪರಿಣಾಮ ಬೀರಿದೆ ಎಂದು ಕೌಂಟರ್ಪಾಯಿಂಟ್ ರಿಚರ್ಸ್ ಅಭಿಪ್ರಾಯಪಟ್ಟಿದೆ.

ಇನ್ನು ವಿವೊ ಕಂಪೆನಿ ಭಾರತದಲ್ಲಿ ಇದುವರೆಗೆ ಮೊದಲ ಬಾರಿ ಅತಿ ಹೆಚ್ಚು ಮಾರುಕಟ್ಟೆ ಪಾಲನ್ನು ಗಳಿಸಿದೆ. ಮಧ್ಯಮ ಶ್ರೇಣಿಯ ಸಾಧನಗಳಲ್ಲಿ ಬಲವಾದ ಆನ್‌ಲೈನ್ ಮಾರಾಟಕ್ಕೆ ಇದಕ್ಕೆ ಕಾರಣವಾಗಿದ್ದು,ರಿಯಲ್ಮೆ ಸುಮಾರು 6x ನಷ್ಟು ಸಾಗಣೆಯ ಬೆಳವಣಿಗೆಯನ್ನು ಕಂಡಿದೆ ಎಂದು ಕೌಂಟರ್ಪಾಯಿಂಟ್ ಹೇಳಿದೆ. ಒಪ್ಪೊ ಕೂಡ ಜನಪ್ರಿಯ ಬಜೆಟ್ ಮತ್ತು ಮಧ್ಯ ಶ್ರೇಣಿಯ ಸಾಧನಗಳಲ್ಲಿ 12 ಪ್ರತಿಶತದಷ್ಟು ಸಾಗಣೆ ಬೆಳವಣಿಗೆಯನ್ನು ಕಂಡಿದೆಯಾದರೂ ಅದರ ಮಾರುಕಟ್ಟೆ ಪಾಲು 2018ರ ಅದೇ ತ್ರೈಮಾಸಿಕದಂತೆಯೇ ಉಳಿದಿದೆ ಎಂದು ಹೇಳಬಹುದು.


Click it and Unblock the Notifications








