ಶಿಯೋಮಿ ಮತ್ತು ಸ್ಯಾಮ್‌ಸಂಗ್ ನಡುವಿನ ಯುದ್ಧಕ್ಕೆ ಇಂದಿನಿಂದ ಹೊಸ ಆಯಾಮ!!
ಭಾರತದ ಬಜೆಟ್ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಶಿಯೋಮಿ ಮತ್ತು ಸ್ಯಾಮ್‌ಸಂಗ್ ನಡುವಿನ ಯುದ್ಧಕ್ಕೆ ಇಂದಿನಿಂದ ಮತ್ತೆ ಹೊಸ ಆಯಾಮವೊಂದು ಸಿಗುತ್ತಿದೆ. ದೇಶದಲ್ಲಿ ಇಂದಿನಿಂದ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಂ40 ಸ್ಮಾರ್ಟ್‌ಫೋನ್ ಮಾರಾಟಕ್ಕೆ ಬರುತ್ತಿದ್ದು, ಶಿಯೋಮಿಯ ಅತಿಬೇಡಿಕೆಯ ಸ್ಮಾರ್ಟ್‌ಫೋನ್‌ಗಳಿಗೆ ಬ್ರೇಕ್ ಹಾಕುವ ವಿಶ್ವಾಸವನ್ನು ಸ್ಯಾಮ್‌ಸಂಗ್ ಹೊಂದಿದೆ.
ಹೌದು, ಶಿಯೋಮಿ ಕಂಪೆನಿಯನ್ನು ಕಟ್ಟಿಹಾಕುವುದಕ್ಕಾಗಿಯೇ ದೇಶದಲ್ಲಿ ಗ್ಯಾಲಕ್ಸಿ ಎಂ ಸರಣಿಯ ಫೋನ್‌ಗಳನ್ನು ಸ್ಯಾಮ್‌ಸಂಗ್ ಹೊರತಂದಿದ್ದು, ಕಳೆದ ಮೂರು ತಿಂಗಳುಗಳಲ್ಲಿ ಗ್ಯಾಲಕ್ಸಿ ಎಂ ಸರಣಿಯ ಮೂರು ಫೋನ್‌ಗಳು ದೇಶದಲ್ಲಿ ಬಿಡುಗಡೆಯಾಗಿ ಭರ್ಜರಿ ಮಾರಾಟ ಕಂಡಿವೆ. ಇದೀಗ ಇದೇ ಸರಣಿಯ ನಾಲ್ಕನೇ ಸ್ಮಾರ್ಟ್‌ಫೋನ್ ಆಗಿ ಗ್ಯಾಲಕ್ಸಿ ಎಂ40 ಬಿಡುಗಡೆಗೊಂಡಿದೆ.

ದೇಶದ ಬಜೆಟ್ ಫೋನ್ ಮಾರುಕಟ್ಟೆಯಲ್ಲಿ ಶಿಯೋಮಿಯ ರೆಡ್‌ಮಿ ನೋಟ್ 7 ಪ್ರೊ ಹೆಚ್ಚು ಸದ್ದು ಮಾಡುತ್ತಿರುವುದರಿಂದ ಇದಕ್ಕೆ ಪೈಪೋಟಿ ನೀಡಲು ಗ್ಯಾಲಕ್ಸಿ ಎಂ40 ಇದೀಗ ತಯಾರಾಗಿದೆ. ಹಾಗಾಗಿ, ಇಂದಿನ ಲೇಖನದಲ್ಲಿ ರೆಡ್‌ಮಿ ನೋಟ್ 7 ಪ್ರೊ ಫೋನನ್ನು ಕಟ್ಟಿಹಾಕಲು ಬಂದಿರುವ ಗ್ಯಾಲಕ್ಸಿ ಎಂ40 ಎರಡೂ ಫೋನ್‌ಗಳ ನಡುವಿನ ವ್ಯತ್ಯಾಸಗಳು ಮತ್ತು ವಿಶೇಷತೆಗಳನ್ನು ನಾನು ತಿಳಿಸುತ್ತಿದ್ದೇನೆ.

ರೆಡ್‌ಮಿ ನೋಟ್ 7 ಪ್ರೊ VS ಗ್ಯಾಲಕ್ಸಿ ಎಂ40 ಡಿಸೈನ್
ಭಾರತ ಸೇರಿದಂತೆ ವಿಶ್ವ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿರುವ 'ರೆಡ್‌ಮಿ ನೋಟ್ 7 ಪ್ರೊ' ಸ್ಮಾರ್ಟ್‌ಫೋನ್ ವಿನ್ಯಾಸ ಅತ್ಯುತ್ತಮವಾಗಿದೆ ಎಂದು ಹೇಳಬಹುದು. ಹಿಂಬಾಗದಲ್ಲಿ ಡ್ಯುಯಲ್ ಕ್ಯಾಮೆರಾ ಮತ್ತು ಫಿಂಗರ್‌ಪ್ರಿಂಟ್ ಆಯ್ಕೆಯ ಡಿಸೈನ್ ಹೊಂದಿರುವ ಸ್ಮಾರ್ಟ್‌ಪೋನ್ ಎರಡೂ ಭಾಗಗಳಲ್ಲಿ 2.D ಕರ್ವಡ್ ಗ್ಲಾಸ್ ಡಿಸೈನ್ ಹೊಂದಿರುವುದು ಪ್ರಮುಖ ವಿಶೇಷ ಎನ್ನಬಹುದು.
ಮಾರುಕಟ್ಟೆಗೆ ತರುವ ಮುನ್ನವೇ ಗ್ಯಾಲಕ್ಸಿ M40 ಫೋನ್ ಅನ್ನು ಅಮೆಜಾನ್‌ನಲ್ಲಿ ಪ್ರದರ್ಶನಕ್ಕೆ ಇಡಲಾಗಿತ್ತು. ಅದರಂತೆ ಗ್ಯಾಲಕ್ಸಿ M40 ಬಹುತೇಕ ಪೂರ್ಣ ಡಿಸ್‌ಪ್ಲೇ ಹೊಂದಿರುವಂತೆ ಕಾಣುತ್ತಿದೆ. ಡಿಸ್‌ಪ್ಲೇ ಎಡಭಾಗದ ಮೂಲೆಯಲ್ಲಿ ಸೆಲ್ಫೀ ಕ್ಯಾಮೆರಾವನ್ನು ನೀಡಲಾಗಿದೆ. ಇನ್ನು ಹಿಂಬಾಗದಲ್ಲಿ ಮೂರು ಕ್ಯಾಮೆರಾಗಳು ಮತ್ತು ಫಿಂಗರ್ ಪ್ರಿಂಟ್ ಆಯ್ಕೆಯನ್ನು ಫೋನ್ ಹೊಂದಿದೆ.

ರೆಡ್‌ಮಿ ನೋಟ್ 7 ಪ್ರೊ VS ಗ್ಯಾಲಕ್ಸಿ ಎಂ40 ಡಿಸ್‌ಪ್ಲೇ
'ರೆಡ್‌ಮಿ ನೋಟ್ 7 ಪ್ರೊ' ಸ್ಮಾರ್ಟ್‌ಫೋನ್ FHD + ರೆಸಲ್ಯೂಶನ್ ಮತ್ತು 19.5:9ರ ಆಕಾರ ಅನುಪಾತದೊಂದಿಗೆ 6.3-ಇಂಚಿನ LTPS ಎಲ್‌ಸಿಡಿ ಪ್ರದರ್ಶನದೊಂದಿಗೆ ಬಿಡುಗಡೆಯಾಗಿದೆ. ಕಣ್ಣಿನ ಒತ್ತಡವನ್ನು ತಪ್ಪಿಸಲು ಸನ್‌ಲೈಟ್ ಡಿಸ್‌ಪ್ಲೇ ಮತ್ತು ಓದುವಿಕೆ ವಿಶೇಷ ಮೋಡ್ ಅನ್ನು ಹೊಂದಿರುವ ಫೋನ್ ಭಾಗಶಃ ಪೂರ್ಣ ಪ್ರಮಾಣದ ಸ್ಕ್ರೀನ್ ಡಿಸ್‌ಪ್ಲೇಯಂತೆ ಹೊಂದಿದೆ.
ಗ್ಯಾಲಕ್ಸಿ M40 ಸ್ಮಾರ್ಟ್‌ಫೋನ್ 6.3-ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇಯನ್ನು ಹೊಂದಿದ್ದು, 1080×2340 ಪಿಕ್ಸೆಲ್‌ಗಳ ಸಾಮರ್ಥ್ಯದಲ್ಲಿ ಇನ್ಫಿನಿಟಿ ಓ ಪ್ರದರ್ಶನ ಫಲಕವನ್ನು ನೀಡಿ ಸ್ಯಾಮ್‌ಸಂಗ್ ಗಮನಸೆಳೆದಿದೆ. ಜೊತೆಗೆ ಫೋನ್ ಸ್ಕ್ರೀನ್ ಧ್ವನಿ ತಂತ್ರಜ್ಞಾನವನ್ನು ಒಳಗೊಂಡಿರುವ ವಿಶೇಷತೆಯಲ್ಲಿ ಗ್ಯಾಲಕ್ಸಿ M40 ಡಿಸ್‌ಪ್ಲೇ ಅತ್ಯುತ್ತಮವಾಗಿ ಎಂದು ಹೇಳಬಹುದು.

ರೆಡ್‌ಮಿ ನೋಟ್ 7 ಪ್ರೊ VS ಗ್ಯಾಲಕ್ಸಿ ಎಂ40 ಪ್ರೊಸೆಸರ್
ಆಕ್ಟಕೋರ್ ಸ್ನಾಪ್‌ಡ್ರಾಗನ್ 675 SoC ಪ್ರೊಸೆಸರ್ ಜೊತೆಗೆ 6GB LPDDR4X RAM ಮತ್ತು 128GB ಆಂತರಿಕ ಮೆಮೊರಿಯನ್ನು 'ರೆಡ್‌ಮಿ ನೋಟ್ 7 ಪ್ರೊ'ನಲ್ಲಿ ನೋಡಬಹುದು. ರೆಡ್‌ಮಿ ಫೋನಿನಲ್ಲಿ ಇದೇ ಮೊದಲ ಬಾರಿಗೆ 128GB ಮೆಮೊರಿಯನ್ನು ತರಲಾಗಿದ್ದು, ಅಡ್ರಿನೋ 612 ಜಿಪಿಯು ಜೊತೆಗೆ MIUI 10 ಟಾಪ್ ಆಂಡ್ರಾಯ್ಡ್ ಪೈನಲ್ಲಿ ಸ್ಮಾರ್ಟ್ ಕಾರ್ಯನಿರ್ವಹಣೆ ನೀಡಲಿದೆ.
ಗ್ಯಾಲಕ್ಸಿ M40 ಸ್ಮಾರ್ಟ್‌ಫೋನಿನಲ್ಲಿ 2GHz ಆಕ್ಟಾ-ಕೋರ್ ಸ್ನಾಪ್ಡ್ರಾಗನ್ 675 ಪ್ರೊಸೆಸರ್ ಅನ್ನು ಅಳವಡಿಸಲಾಗಿದೆ. 6GB RAM ಮತ್ತು 128GB ಆಂತರಿಕ ಸಂಗ್ರಹಣಾ ಮಾದರಿಯಲ್ಲಿ ಬಿಡುಗಡೆಯಾಗಿರುವ ಫೋನಿನ ಮೆಮೊರಿಯನ್ನು ಮೈಕ್ರೊ SD ಕಾರ್ಡ್ ಮೂಲಕ 512GB ವರೆಗೆ ವಿಸ್ತರಿಸಬಹುದಾಗಿದ್ದು, ಅಡ್ರಿನೊ 612 ಜಿಪಿಯು ಇರುವುದು ಗೇಮಿಂಗ್‌ಗೆ ಅತ್ಯುತ್ತಮವಾಗಿದೆ.

ರೆಡ್‌ಮಿ ನೋಟ್ 7 ಪ್ರೊ VS ಗ್ಯಾಲಕ್ಸಿ ಎಂ40 ರಿಯರ್ ಕ್ಯಾಮೆರಾ
ರೆಡ್‌ಮಿ ನೋಟ್ 7 ಪ್ರೊನಲ್ಲಿ 48MP ಪ್ರಾಥಮಿಕ ಸಂವೇದಕ ಮತ್ತು 5 MP ಸೆಕೆಂಡರಿ ಸಂವೇದಕಗಳನ್ನು ನೀಡಲಾಗಿದೆ. 48MP ಕ್ಯಾಮರಾವು ಸೋನಿ IMX586 ಸಂವೇದಕವನ್ನು ಬಳಸುತ್ತಿದ್ದು, ಇದು ಸ್ಮಾರ್ಟ್ಫೋನ್ಗಳಿಗಾಗಿ ಅತ್ಯುನ್ನತ ರೆಸಲ್ಯೂಶನ್ ಸಂವೇದಕವಾಗಿದ್ದು ಉತ್ತಮ ಫೋಟೋಗಳಿಗಾಗಿ AI ಪೋರ್ಟ್ರೇಟ್ 2.0 4x ಡೈನಾಮಿಕ್ ಶ್ರೇಣಿಯನ್ನು ಬೆಂಬಲಿಸಲಿದೆ.
ಗ್ಯಾಲಕ್ಸಿ ಎಂ40 ಸ್ಮಾರ್ಟ್‌ಫೋನ್ ತ್ರಿವಳಿ ಕ್ಯಾಮೆರಾ ಸೆಟಪ್‌ನೊಂದಿಗೆ ಬರುತ್ತದೆ. ಪ್ರಾಥಮಿಕ ಕ್ಯಾಮೆರಾ 32 ಮೆಗಾಪಿಕ್ಸೆಲ್ ಸಾಮರ್ಥ್ಯವನ್ನು ಹೊಂದಿದ್ದರೆ, 8MP ಅಲ್ಟ್ರಾ ವೈಡ್-ಆಂಗಲ್ ಲೆನ್ಸ್ ಮತ್ತು 5MP ಆಳ ಸಂವೇದಕಗಳು ಕ್ಯಾಮೆರಾ ತಂತ್ರಜ್ಞಾನಕ್ಕೆ ಹಿಡಿದ ಕನ್ನಡಿಗಳು ಎನ್ನಬಹುದು. ಇದರಲ್ಲಿ 4K ರೆಸೊಲ್ಯೂಶನ್ ವರೆಗೆ ವೀಡಿಯೊಗಳನ್ನು ರೆಕಾರ್ಡ್ ಮಾಡಬಹುದು.

ರೆಡ್‌ಮಿ ನೋಟ್ 7 ಪ್ರೊ VS ಗ್ಯಾಲಕ್ಸಿ ಎಂ40 ಸೆಲ್ಫೀ ಕ್ಯಾಮೆರಾ!
'ರೆಡ್‌ಮಿ ನೋಟ್ 7 ಪ್ರೊ' ಸ್ಮಾರ್ಟ್‌ಫೋನಿನಲ್ಲಿ 13 ಎಂಪಿ ಎಐ ಸೆಲ್ಫಿ ಕ್ಯಾಮರಾವನ್ನು ಹೊಂದಿದೆ. ಎಐ ಭಾವಚಿತ್ರ ಸೆಲ್ಫಿ, ಸ್ಟುಡಿಯೋ ಲೈಟಿಂಗ್ ಸೆಲ್ಫಿ, ಎಐ ಫೇಸ್ ಅನ್ಲಾಕ್, ಎಐ ಬ್ಯೂಟಿಗಳೊಂದಿಗೆ 13 ಎಂಪಿ ಎಐ ಸೆಲ್ಫ್ ಕ್ಯಾಮರಾ ಅದ್ಬುತವಾಗಿದೆ. ನಿರ್ದಿಷ್ಟ ಆಪ್ಟಿಮೈಸೇಶನ್ಗಳೊಂದಿಗೆ AI ದೃಶ್ಯ ಪತ್ತೆಹಚ್ಚುವಿಕೆ ತಂತ್ರಜ್ಞಾನ ಹೊಂದಿರುವುದು ಇದರ ವಿಶೇಷತೆ.
'ರೆಡ್‌ಮಿ ನೋಟ್ 7 ಪ್ರೊ' ಸ್ಮಾರ್ಟ್‌ಫೋನಿನಲ್ಲಿ 13 ಎಂಪಿ ಎಐ ಸೆಲ್ಫಿ ಕ್ಯಾಮರಾ ನಿಡಲಾಗಿದ್ದರೆ, ಗ್ಯಾಲಕ್ಸಿ M40 ಸ್ಮಾರ್ಟ್‌ಫೋನ್ 16-ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮರಾವನ್ನು ಹೊಂದಿದೆ. ಐ ಭಾವಚಿತ್ರ ಸೆಲ್ಫಿ, ಸ್ಟುಡಿಯೋ ಲೈಟಿಂಗ್ ಸೆಲ್ಫಿ, ಎಐ ಫೇಸ್ ಅನ್ಲಾಕ್, ಎಐ ಬ್ಯೂಟಿಗಳೊಂದಿಗೆ ಕ್ಯಾಮೆರಾ ತಂತ್ರಜ್ಞಾನ ಇದರಲ್ಲೂ ಕೂಡ ಅತ್ಯುತ್ತಮವಾಗಿದೆ ಎಂದು ಹೇಳಬಹುದು.

ರೆಡ್‌ಮಿ ನೋಟ್ 7 ಪ್ರೊ VS ಗ್ಯಾಲಕ್ಸಿ ಎಂ40 ಬ್ಯಾಟರಿ
'ರೆಡ್‌ಮಿ ನೋಟ್ 7 ಪ್ರೊ' ಸ್ಮಾರ್ಟ್‌ಪೋನಿನಲ್ಲಿ ಎರಡು ದಿನಗಳ ಬ್ಯಾಟರಿ ಬಾಳಿಕೆ ಬರುವಂತಹ 4000mAh ಸಾಮರ್ಥ್ಯದ ಬಿಗ್ ಬ್ಯಾಟರಿಯನ್ನು ನೀಡಲಾಗಿದೆ. ಇದು ವೇಗವಾಗಿ ಚಾರ್ಜಿಂಗ್ ಆಗಲು ಕ್ವಾಲ್ಕಾಮ್ ಕ್ವಿಕ್ ಚಾರ್ಜ್ 4.0 ಅನ್ನು ಬೆಂಬಲಿಸುತ್ತದೆ ಎಂದು ಶಿಯೋಮಿ ತಿಳಿಸಿದೆ. ಶಿಯೋಮಿ ರೆಡ್‌ಮಿ ನೋಟ್ 6 ನಲ್ಲಿ ಕ್ವಿಕ್ ಚಾರ್ಜ್ 3.0 ತಂದಿದನ್ನು ನಾವಿಲ್ಲಿ ನೋಡಬಹುದು.
ಗ್ಯಾಲಕ್ಸಿ ಎಂ40 ಫೋನ್ 3,500 mAh ಬ್ಯಾಟರಿಯನ್ನು ಹೊಂದಿರಲಿದೆ ಎಂ ಎಂಬುದು ನಿಜವಾಗಿದೆ. 15W ಯುಎಸ್ಬಿ-ಸಿ ಚಾರ್ಜರ್ನೊಂದಿಗೆ ಗ್ಯಾಲಕ್ಸಿ M30 ವೇಗದ ಚಾರ್ಜಿಂಗ್ ಬೆಂಬಲವನ್ನು ಹೊಂದಿದೆ. ಈ ಮೊದಲಿನ ಲೀಕ್ ವರದಿಗಳಲ್ಲಿ 5000 mAh ಬ್ಯಾಟರಿ ಇರಲಿದೆ ಎಂಬ ಗಾಳಿಸುದ್ದಿ ಇದ್ದವು. ಆದರೆ, ಬ್ಯಾಟರಿ ವಿಷಯದಲ್ಲಿ ಸ್ಯಾಮ್‌ಸಂಗ್ ಸ್ವಲ್ಪ ಹಿಂದುಳಿದಿದೆ ಎನ್ನಬಹುದು.

ರೆಡ್‌ಮಿ ನೋಟ್ 7 ಪ್ರೊ VS ಗ್ಯಾಲಕ್ಸಿ ಎಂ40 ಬೆಲೆಗಳು
'ರೆಡ್‌ಮಿ ನೋಟ್ 7 ಪ್ರೊ' ಸ್ಮಾರ್ಟ್‌ಫೋನ್ ಎರಡು ವೆರಿಯಂಟ್‌ಗಳಲ್ಲಿ ಮೊಬೈಲ್ ಮಾರುಕಟ್ಟೆಗೆ ಲಾಂಚ್ ಆಗಿದ್ದು, 4GB RAM ಮತ್ತು 64GB ಆಂತರಿಕ ಮೆಮೊರಿಯನ್ನು ಹೊಂದಿರುವ 'ರೆಡ್‌ಮಿ ನೋಟ್ 7 ಪ್ರೊ' ಫೋನಿನ ಬೆಲೆ 13,999 ರೂ.ಗಳಾಗಿವೆ. ಹಾಗೆಯೇ, 6GB RAM ಮತ್ತು 128GB ಆಂತರಿಕ ಮೆಮೊರಿಯ ನೋಟ್ 7 ಪ್ರೊ ಫೋನ್ ಬೆಲೆ 16,999 ರೂ.ಗಳಾಗಿವೆ.
ಸ್ಯಾಮ್‌ಸಂಗ್ ತನ್ನ 'ಗ್ಯಾಲಕ್ಸಿ ಎಂ40' ಫೋನನ್ನು 6GB RAM ಮತ್ತು 128GB ಆಂತರಿಕ ಸಂಗ್ರಹಣಾ ಮಾದರಿಯಲ್ಲಿ ಬಿಡುಗಡೆ ಮಾಡಿದೆ. 6GB RAM ಮತ್ತು 128GB ಆಂತರಿಕ ಮೆಮೊರಿ ಹೊಂದಿರುವ ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್ ಇದೇ ಮೊದಲ ಬಾರಿಗೆ ಅತ್ಯಂತ ಕಡಿಮೆ ಬೆಲೆಗೆ ಎಂಟ್ರಿ ನೀಡಿರುವುದರಿಂದ ಗಮನಸೆಳೆದಿದೆ. ಈ ಫೋನ್ ಬೆಲೆ 19,990 ರೂ.ಗಳಾಗಿವೆ.

ರೆಡ್‌ಮಿ ನೋಟ್ 7 ಪ್ರೊ VS ಗ್ಯಾಲಕ್ಸಿ ಯಾವುದು ಬೆಸ್ಟ್?
ಒಂದು ಅತ್ಯುತ್ತಮ ಸ್ಮಾರ್ಟ್‌ಫೋನ್ ಖರೀದಿಸಬೇಕು ಎಂದುಕೊಂಡರೇ ಈ ಎರಡೂ ಸ್ಮಾರ್ಟ್‌ಫೋನ್‌ಗಳು ಉತ್ತಮವಾದ ಸ್ಮಾರ್ಟ್‌ಫೋನ್‌ಗಳೇ. ದೇಶದಲ್ಲಿ ಹೆಚ್ಚು ಸದ್ದು ಮಾಡುತ್ತಿರುವ ಶಿಯೋಮಿ ರೆಡ್‌ಮಿ ನೋಟ್ 7 ಪ್ರೊ ಮಾದರಿಯ6GB RAM ಮತ್ತು 128GB ಆಂತರಿಕ ಮೆಮೊರಿಯ ನೋಟ್ 7 ಪ್ರೊ ಫೋನ್ ಬೆಲೆ 16,999 ರೂ.ಗಳಾಗಿದ್ದರೆ, 'ಗ್ಯಾಲಕ್ಸಿ ಎಂ40' ಫೋನಿನ ಬೆಲೆ 19,990 ರೂ.ಗಳಾಗಿವೆ. ಅಂದರೆ, ಎರಡೂ ಫೋನ್‌ಗಳ ನಡುವೆ 3000 ರೂ.ಗಳ ವ್ಯತ್ಯಾಸವಿದೆ. ಡಿಸ್‌ಪ್ಲೇ, ಪ್ರೊಸೆಸರ್, ಕ್ಯಾಮೆರಾ ಮತ್ತು ಬ್ಯಾಟರಿ ವಿಷಯದಲ್ಲಿ ಎರಡೂ ಫೋನ್‌ಗಳು ಒಂದಕ್ಕೊಂದು ಸೆಡ್ಡುಹೊಡೆಯುತ್ತಿವೆ ಎಂದು ಹೇಳಬಹುದು.
iಇನ್ನು ಬ್ರ್ಯಾಂಡ್ ವಿಷಯಕ್ಕೆ ಬಂದರೆ ಸ್ಯಾಮ್‌ಸಂಗ್ 'ಗ್ಯಾಲಕ್ಸಿ ಎಂ40' ಸ್ಮಾರ್ಟ್‌ಫೋನ್ ಖರೀದಿಗೆ ಉತ್ತಮವಾದ ಸ್ಮಾರ್ಟ್‌ಫೋನ್ ಎನ್ನಬಹುದು. ನನ್ನ ಅನುಭವದಂತೆ, 'ಗ್ಯಾಲಕ್ಸಿ ಎಂ40' ಸ್ಮಾರ್ಟ್‌ಫೋನಿನ ಇನ್ಫಿನಿಟಿ ಓ ಡಿಸ್‌ಪ್ಲೇ ರೆಡ್‌ಮಿ ನೋಟ್ 7 ಪ್ರೊಗಿಂತ ಹೆಚ್ಚು ಉತ್ತಮವಾಗಿದೆ. ಪ್ರೊಸೆಸರ್ ವಿಷಯದಲ್ಲಿ ಯಾವುದೇ ವ್ಯತ್ಯಾಸಗಳನ್ನು ಗುರುತಿಸಲು ಸಾಧ್ಯವಿಲ್ಲ. ಕ್ಯಾಮೆರಾದಲ್ಲಿ ನೋಟ್ 7 ಪ್ರೊ ಮೇಲುಗೈ ಪಡೆದಿದ್ದರೆ, ಇನ್ನೆಲ್ಲಾ ವಿಷಯಗಳಲ್ಲೂ 'ಗ್ಯಾಲಕ್ಸಿ ಎಂ40' ಸ್ಮಾರ್ಟ್‌ಫೋನ್ ಉತ್ತಮ ಎನ್ನಬಹುದು. ಆದರೆ, ಬೆಲೆ ವಿಷಯಕ್ಕೆ ಬಂದರೆ ಶಿಯೋಮಿ ರೆಡ್‌ಮಿ ನೋಟ್ 7 ಪ್ರೊ ನಿಮ್ಮ ಬೆಸ್ಟ್ ಆಯ್ಕೆಯಾಗಬಹುದು.


Click it and Unblock the Notifications








