Samsung: ಮ್ಯೂಸಿಕ್ ಪ್ರಿಯರಿಗೆ ಖುಷಿ ಸುದ್ದಿ.. ಹೊಸ ಮ್ಯೂಸಿಕ್ ಫ್ರೇಮ್ ಬಿಡುಗಡೆ: ಬೆಲೆ ಎಷ್ಟು?
ಮ್ಯೂಸಿಕ್ ಪ್ರಿಯರಿಗೆ ಸಿಹಿ ಸುದ್ದಿ..! ನಿಮಗಾಗಿ ಸ್ಯಾಮ್‌ಸಂಗ್ (Samsung) ತಂದಿದೆ ಹೊಚ್ಚ ಹೊಸ ಮ್ಯೂಸಿಕ್ ಫ್ರೇಮ್. ಇದು ತುಂಬಾ ಸ್ಟೈಲಿಶ್ ಆಗಿದ್ದು, ವೈರ್‌ಲೆಸ್ ಸ್ಪೀಕರ್ ಹೊಂದಿದೆ. ಮುಖ್ಯವಾಗಿ, ಡಾಲ್ಬಿ ಅಟ್ಮೋಸ್ ತಂತ್ರಜ್ಞಾನ ಇದೆ. ಹೌದು, ಸ್ಯಾಮ್‌ಸಂಗ್ ಕಂಪನಿ ತನ್ನ ಗುಣಮಟ್ಟ ಹಾಗೂ ಅತ್ಯಾಕರ್ಷಕ ವಿನ್ಯಾಸದ ಸಾಧನಗಳಿಗೆ ಹೆಸರುವಾಸಿಯಾಗಿದೆ. ಸ್ಯಾಮ್‌ಸಂಗ್‌ನ ಸ್ಮಾರ್ಟ್‌ಫೋನ್‌ಗಳು, ಟ್ಯಾಬ್ಲೆಟ್‌ಗಳು, ಇಯರ್ ಫೋನ್‌ಗಳು, ಮ್ಯೂಸಿಕ್ ಫ್ರೇಮ್ ಯುವಜನರ ಹಾಟ್‌ಫೇವರಿಟ್ ಆಗಿವೆ. ಅದರಂತೆ ಇದೀಗ, ಮ್ಯೂಸಿಕ್ ಪ್ರಿಯರಿಗಾಗಿ ಹೊಸ ಮ್ಯೂಸಿಕ್ ಫ್ರೇಮ್ ಅನ್ನು ಬಿಡುಗಡೆ ಮಾಡಿದೆ. ಈ ಮ್ಯೂಸಿಕ್ ಫ್ರೇಮ್ ಬೆಲೆ ಎಷ್ಟು? ಯಾವೆಲ್ಲಾ ಫೀಚರ್ಸ್ ಒಳಗೊಂಡಿದೆ? ಎಂಬ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
ವಿಶ್ವದ ದೈತ್ಯ ಟೆಕ್ ಕಂಪನಿಗಳಲ್ಲಿ ಒಂದಾಗಿರುವ ಹಾಗೂ ಭಾರತದ ಅತಿದೊಡ್ಡ ಗ್ರಾಹಕರ ಬಳಗವನ್ನು ಹೊಂದಿರುವ ಸ್ಯಾಮ್‌ಸಂಗ್ ಸೋಮವಾರ ಭಾರತದಲ್ಲಿ ತನ್ನ ಮ್ಯೂಸಿಕ್ ಫ್ರೇಮ್ ಬಿಡುಗಡೆ ಮಾಡಿದೆ. ಇದು ವೈರ್‌ಲೆಸ್ ಸ್ಪೀಕರ್ ಆಗಿದೆ. ಮ್ಯೂಸಿಕ್ ಫ್ರೇಮ್ ಡಾಲ್ಬಿ ಅಟ್ಮೋಸ್ ಮತ್ತು ವೈರ್‌ಲೆಸ್ ಮ್ಯೂಸಿಕ್ ಸ್ಟ್ರೀಮಿಂಗ್‌ನಂತಹ ನೂತನ ಫೀಚರ್‌ಗಳನ್ನು ಹೊಂದಿದೆ. ಈ ಸ್ಟೈಲಿಶ್ ವೈರ್‌ಲೆಸ್ ಸ್ಪೀಕರ್, ಪಿಕ್ಚರ್ ಫ್ರೇಮ್‌ನಂತೆ ಕೆಲಸ ಮಾಡುವ ಮೂಲಕ ಮ್ಯೂಸಿಕ್ ಪ್ರಿಯರ ಸ್ವರೂಪವನ್ನು ಹಿಂದೆಂದಿಗಿಂತಲೂ ಹೆಚ್ಚು ಸೊಗಸಾಗಿಸುತ್ತದೆ.

ಸ್ಯಾಮ್‌ಸಂಗ್ ಮ್ಯೂಸಿಕ್ ಫ್ರೇಮ್ ಡಾಲ್ಬಿ ಅಟ್ಮೋಸ್ ಮತ್ತು ವೈರ್‌ಲೆಸ್ ಮ್ಯೂಸಿಕ್ ಸ್ಟ್ರೀಮಿಂಗ್‌ನಂತಹ ಹೊಸ ಫೀಚರ್‌ಗಳನ್ನು ಹೊಂದಿದೆ. ನಿಜವಾದ ಫ್ರೇಮ್‌ನಂತೆಯೇ ಮ್ಯೂಸಿಕ್ ಪ್ರಿಯರಿಗೆ ಫೋಟೋಗಳನ್ನು ಪ್ರದರ್ಶಿಸಲು ಅನುಕೂಲ ಮಾಡಿಕೊಡುತ್ತದೆ. ಅಮೂಲ್ಯವಾದ ನೆನಪುಗಳುಳ್ಳ ಫೋಟೋಗಳನ್ನು ನೋಡುತ್ತಾ ಅಥವಾ ಕಲಾಕೃತಿಯಗಳನ್ನು ನೋಡುತ್ತಾ ಮ್ಯೂಸಿಕ್ ಆಲಿಸುವ ಪ್ರಕ್ರಿಯೆಯು ನಿಮಗೆ ಹೊಸ ಮತ್ತು ಮಜವಾದ ಅನುಭವವನ್ನು ನೀಡುತ್ತದೆ. ಹಾಗಿದ್ರೆ, ಈ ಮ್ಯೂಸಿಕ್ ಫ್ರೇಮ್ ಏನೆಲ್ಲಾ ವಿಶೇಷತೆಗಳನ್ನು ಹೊಂದಿದೆ ತಿಳಿಯೋಣ ಬನ್ನಿ.
ವಾಯ್ಸ್ ಮೂಲಕವೇ ನಿಯಂತ್ರಿಸಬಹುದು
ಮ್ಯೂಸಿಕ್ ಪ್ರಿಯರು ಮಾತನಾಡುವ ಮೂಲಕವೇ ಸರಳವಾಗಿ ಆಜ್ಞೆಗಳನ್ನು ನೀಡಬಹುದು. ನಿಮ್ಮ ಮಾತಿಗೆ ಮ್ಯೂಸಿಕ್ ಫ್ರೇಮ್ ಪ್ರತಿಕ್ರಿಯಿಸುತ್ತದೆ. ಈ ಮ್ಯೂಸಿಕ್ ಫ್ರೇಮ್ ಅನ್ನು ಅಲೆಕ್ಸಾ ಮತ್ತು ಗೂಗಲ್ ಅಸಿಸ್ಟೆಂಟ್‌ನಂತಹ ಬಿಲ್ಟ್-ಇನ್ ವಾಯ್ಸ್ ಅಸಿಸ್ಟೆಂಟ್‌ಗಳ ಮೂಲಕ ಆರಾಮಾಗಿ ನಿಯಂತ್ರಿಸಬಹುದಾಗಿದೆ. ಯಾವುದೇ ಮ್ಯಾನ್ಯುವಲ್ ಕೆಲಸ ಮಾಡದೆಯೇ ಪ್ಲೇ, ಪಾಸ್, ಟ್ರ್ಯಾಕ್ ಸ್ಕಿಪ್ಪಿಂಗ್ ಮತ್ತು ವಾಲ್ಯೂಮ್ ಅಡ್ಜಸ್ಟ್ ಮೆಂಟ್ ಇತ್ಯಾದಿಯನ್ನು ಮಾಡಬಹುದಾಗಿದೆ. ಈ ಫೀಚರ್ ಮೂಲಕ ದೂರದಲ್ಲಿ ಇದ್ದೇ ಆಡಿಯೊ ಅನುಭವದ ಮೇಲೆ ನಿಯಂತ್ರಣವನ್ನು ಸಾಧಿಸಬಹುದಾಗಿದೆ.
ಸ್ಪಷ್ಟವಾದ ಆಡಿಯೊವನ್ನು ನೀಡುತ್ತದೆ
ಈ ಮ್ಯೂಸಿಕ್ ಫ್ರೇಮ್ ಅಸಮರ್ಪಕ ಧ್ವನಿಯನ್ನು ತೆಗೆದುಹಾಕುತ್ತದೆ. ಜೊತೆಗೆ, ರೂಮ್‌ನ ಎಲ್ಲಾ ಭಾಗದಲ್ಲಿಯೂ ಸ್ಫಟಿಕ, ಸ್ಪಷ್ಟವಾದ ಧ್ವನಿಯನ್ನು ನೀಡುತ್ತದೆ. ರೂಮ್‌ನ ಯಾವುದೇ ಮೂಲೆಯಿಂದಲೂ ಸಮತೋಲಿತವಾದ ಮತ್ತು ಸ್ಥಿರವಾದ ಆಡಿಯೊ ಗುಣಮಟ್ಟವನ್ನು ಪಡೆಯಬಹುದು. ಸ್ಥಳ ಯಾವುದೇ ಇದ್ದರೂ ಇದು ಅತ್ಯುತ್ತಮ ಧ್ವನಿ ಆಲಿಸುವ ಅನುಭವವನ್ನು ನೀಡುತ್ತದೆ.
ಗೇಮಿಂಗ್ ಆಡುವಾಗ ವಾವ್ ಫೀಲ್
ಈ ಮ್ಯೂಸಿಕ್ ಫ್ರೇಮ್ ಡಾಲ್ಬಿ ಅಟ್ಮೋಸ್ ತಂತ್ರಜ್ಞಾನ ಇದೆ. ಗೇಮಿಂಗ್ ಆಡುವಾಗ ವಾವ್ ಫೀಲ್ ನೀಡುತ್ತದೆ. ಪ್ರತೀ ಕೋನದಿಂದಲೂ ಕೇಳಿಸುವ ಮೂರು ಆಯಾಮದ ಆಡಿಯೋ ವಿಶೇಷ ಅನುಭವ ನೀಡುತ್ತದೆ. ಧ್ವನಿಯನ್ನು ಆಲಿಸುವ ಆನಂದವನ್ನು ಹೆಚ್ಚಿಸುವ ಹಾಗೂ ಸಿನಿಮಾಗಳನ್ನು ವೀಕ್ಷಿಸುವಾಗ, ಮ್ಯೂಸಿಕ್ ಕೇಳುವಾಗ ಅಥವಾ ಗೇಮ್‌ಗಳನ್ನು ಆಡುವಾಗ ಈ ಡಾಲ್ಬಿ ಅಟ್ಮೋಸ್ ತಂತ್ರಜ್ಞಾನವು ಆಡಿಯೋ ಅನುಭವವನ್ನು ಹೊಸ ಮಟ್ಟಕ್ಕೆ ಏರಿಸುತ್ತದೆ.
ಟಿವಿಯ ಎರಡೂ ಬದಿಯಲ್ಲಿ ಇರಿಸಬಹುದು
ನೀವು ಟಿವಿಗಳ ಎರಡೂ ಬದಿಯಲ್ಲಿ ಎರಡು ಮ್ಯೂಸಿಕ್ ಫ್ರೇಮ್‌ಗಳನ್ನು ಇರಿಸಬಹುದು. ಈ ಮೂಲಕ ಉತ್ಕೃಷ್ಟ ಸ್ಟಿರಿಯೊ ಧ್ವನಿಗಾಗಿ ಕ್ಯೂ- ಸಿಂಫನಿ ಅನ್ನು ಬಳಸಿಕೊಳ್ಳಬಹುದು. ಸ್ಮಾರ್ಟ್ ಥಿಂಗ್ಸ್ ಆಪ್ ಮೂಲಕ ಬಳಕೆದಾರರು ಈಕ್ವಲೈಜರ್ ಸೆಟ್ಟಿಂಗ್‌ಗಳನ್ನು ತಮ್ಮ ಆದ್ಯತೆಗಳಿಗೆ ತಕ್ಕಂತೆ ಹೊಂದಿಸಬಹುದು. ಸರೌಂಡ್ ಸೌಂಡ್‌ಗಾಗಿ, ಬಳಕೆದಾರರು ತಮ್ಮ ಟಿವಿಯ ಮುಂದೆ ಸೌಂಡ್‌ಬಾರ್ ಅನ್ನು ಇರಿಸಬಹುದು. ಹಿಂಭಾಗದ ಸ್ಪೀಕರ್ ಆಗಿ ಕಾರ್ಯನಿರ್ವಹಿಸಲು ಎದುರು ಗೋಡೆಯ ಮೇಲೆ ಮ್ಯೂಸಿಕ್ ಫ್ರೇಮ್ ಅನ್ನು ಇರಿಸಬಹುದು.
ಸ್ಪೇಸ್‌ಫಿಟ್ ಸೌಂಡ್ ಪ್ರೊ ಫೀಚರ್ ಲಾಭವೇನು?
ನಿಮ್ಮ ಮನೆಯ ನಿರ್ದಿಷ್ಟ ರೂಮ್‌ನ ವಾತಾವರಣಕ್ಕೆ ತಕ್ಕಂತೆ ರೂಮ್ ಅನಾಲಿಸಿಸ್ ಮತ್ತು ಆಪ್ಟಿಮೈಸೇಶನ್ ತಂತ್ರಜ್ಞಾನದ ಮೂಲಕ ಆಡಿಯೋ ಸೌಲಭ್ಯವನ್ನು ಹೊಂದಿಸಿಕೊಳ್ಳಬಹುದು. ಸ್ಪೇಸ್‌ಫಿಟ್ ಸೌಂಡ್ ಪ್ರೊ ಫೀಚರ್ ರೂಮ್‌ನ ಪರಿಸರವನ್ನು ವಿಶ್ಲೇಷಿಸುತ್ತದೆ. ಅದಕ್ಕೆ ಅನುಗುಣವಾಗಿ ಆಡಿಯೊ ಮಟ್ಟವನ್ನು ಸರಿಹೊಂದಿಸುತ್ತದೆ. ಆಯಾ ಸ್ಥಳಕ್ಕೆ ಅನುಗುಣವಾಗಿ ಉತ್ತಮ ಧ್ವನಿ ಗುಣಮಟ್ಟವನ್ನು ನೀಡುತ್ತದೆ. ಈ ತಂತ್ರಜ್ಞಾನವು ವೈಯಕ್ತೀಕರಿಸಿದ ಧ್ವನಿ ಪರಿಪೂರ್ಣತೆಗೆ ತಕ್ಕಂತೆ ಒಂದೇ ರೀತಿಯ ಧ್ವನಿಯನ್ನು ಕೊಡುತ್ತದೆ.
ಮ್ಯೂಸಿಕ್ ಫ್ರೇಮ್‌ನ ಬೆಲೆ ಎಷ್ಟು? ಖರೀದಿ ಎಲ್ಲಿ?
ಇಷ್ಟಲ್ಲಾ ವಿಶೇಷತೆಗಳನ್ನು ಹೊಂದಿರುವ ಈ ಮ್ಯೂಸಿಕ್ ಫ್ರೇಮ್‌ನ ಬೆಲೆ ಎಷ್ಟು? ಮತ್ತು ಲಭ್ಯತೆ ಬಗ್ಗೆ ಕುತೂಹಲ ಮೂಡುವುದು ಸಹಜ. ಈ ಸ್ಯಾಮ್‌ಸಂಗ್ ಮ್ಯೂಸಿಕ್ ಫ್ರೇಮ್‌ನ ಬೆಲೆ 23,990 ರೂ. ಇದೆ. ನೀವು Samsung.in ಮತ್ತು Amazon.in ಗಳಲ್ಲಿ ಹಾಗೂ ಆಯ್ದ ಆಫ್‌ಲೈನ್ ಸ್ಟೋರ್‌ಗಳಲ್ಲಿ ಖರೀದಿ ಮಾಡಬಹುದು. ಒಟ್ನಲ್ಲಿ, ಸ್ಯಾಮ್‌ಸಂಗ್ ಲಾಂಚ್ ಮಾಡಿರುವ ಈ ಸ್ಟೈಲಿಶ್ ಮ್ಯೂಸಿಕ್ ಫ್ರೇಮ್ ಮ್ಯೂಸಿಕ್ ಪ್ರಿಯರ ದಿಲ್ ಕದಿಯುವುದರಲ್ಲಿ ಡೌಟೇ ಇಲ್ಲ.
ಪಿಚ್ಚರ್ ಫ್ರೇಮ್ ರೂಪದಲ್ಲಿ ಅಸಾಧಾರಣ ತಂತ್ರಜ್ಞಾನ
ಹೊಸ ಮ್ಯೂಸಿಕ್ ಫ್ರೇಮ್ ಬಿಡುಗಡೆ ಬಗ್ಗೆ ಸ್ಯಾಮ್‌ಸಂಗ್ ಇಂಡಿಯಾದ ವಿಷುಯಲ್ ಡಿಸ್ಪ್ಲೇ ಬ್ಯುಸಿನೆಸ್‌ನ ಹಿರಿಯ ಉಪಾಧ್ಯಕ್ಷ ಮೋಹನ್‌ದೀಪ್ ಸಿಂಗ್ ಪ್ರತಿಕ್ರಿಯಿಸಿದ್ದಾರೆ. ಈ ಹೊಸ ಮ್ಯೂಸಿಕ್ ಫ್ರೇಮ್ ಅಸಾಧಾರಣ ತಂತ್ರಜ್ಞಾನವನ್ನು ಪಿಚ್ಚರ್ ಫ್ರೇಮ್ ರೂಪದಲ್ಲಿ ನೀಡುತ್ತಿದೆ. ಅದರ ವಿಶಿಷ್ಟವಾದ, ಸೊಗಸಾದ ವಿನ್ಯಾಸದ ಮೂಲಕ ಸಿನಿಮೀಯ ಆಡಿಯೊ ಅನುಭವವನ್ನು ನೀಡುತ್ತದೆ. ಬಳಕೆದಾರರಿಗೆ ವೈರ್-ಫ್ರೀ ಸೌಕರ್ಯದ ಮೂಲಕ ಆಡಿಯೋ ಆಲಿಸುವಿಕೆಯ ಅನುಕೂಲವನ್ನು ನೀಡುತ್ತದೆ ಮತ್ತು ಉತ್ಕೃಷ್ಟವಾದ ಸೌಂಡ್ ಗುಣಮಟ್ಟವನ್ನು ನೀಡುತ್ತದೆ ಎಂದು ತಿಳಿಸಿದ್ದಾರೆ.
Samsung ಮ್ಯೂಸಿಕ್ ಫ್ರೇಮ್‌ನ ಪೂರ್ಣ ವಿಶೇಷತೆಗಳು
- ವಿನ್ಯಾಸ: ಕಲರ್ ಬೆಜೆಲ್, ಆರ್ಟ್ ಪ್ಯಾನಲ್, Customizable ಡಿಸೈನ್
- ಬಣ್ಣ: ಕಪ್ಪು
- ಸೌಂಡ್‌ಬಾರ್: 120W
- ನಂಬರ್ ಆಫ್ ಚಾನಲ್: 2.0
- ಸ್ಪೀಕರ್ ಸಂಖ್ಯೆ: 6 | ವೈಡ್ ಸ್ವೀಟ್ ಸ್ಪಾಟ್
- ಆಡಿಯೋ ವೈಶಿಷ್ಟ್ಯಗಳು: ಆಕ್ಟಿವ್ ವಾಯ್ಸ್ ಆಂಪ್ಲಿಫೈಯರ್, ಸ್ಪೇಸ್‌ಫಿಟ್ ಸೌಂಡ್, ವಾಯ್ಸ್ ಎನ್‌ಹಾನ್ಸ್ ಮೋಡ್, ನೈಟ್ ಮೋಡ್
- ಸೌಂಡ್ ಮಾಡೆಲ್: ಅಡಾಪ್ಟಿವ್, ಮ್ಯೂಸಿಕ್, ಸ್ಟಾಂಡರ್ಡ್
- ಡಾಲ್ಬಿ: Atmos Music, Atmos, Dolby Digital Plus
- ಕನೆಕ್ಟಿವಿಟಿ ಆಯ್ಕೆಗಳು: Wi-Fi 5, ಬ್ಲೂಟೂತ್ v5.2, ಒಂದು ನಿಯಂತ್ರಣ, x1 ಆಪ್ಟಿಕಲ್ ಇನ್
- ವಾಯ್ಸ್ ಫೀಚರ್ಸ್: ಗೂಗಲ್, ಅಲೆಕ್ಸಾ, ಬಿಕ್ಸ್ಬಿ
- ವಿಶೇಷ ಫೀಚರ್ಸ್: ಕ್ಯೂ-ಸಿಂಫನಿ, ಟ್ಯಾಪ್ ಸೌಂಡ್, ಸ್ಪಾಟಿಫೈ ಕನೆಕ್ಟ್, ವೈರ್‌ಲೆಸ್ ಡಾಲ್ಬಿ ಅಟ್ಮಾಸ್, ವೈರ್‌ಲೆಸ್ ಮ್ಯೂಸಿಕ್ ಸ್ಟ್ರೀಮಿಂಗ್, ಕ್ರೋಮ್‌ಕಾಸ್ಟ್, ಏರ್‌ಪ್ಲೇ ಮತ್ತು ರೂನ್ ಸರ್ವೀಸ್
- ಅಸೆಸರಿಸ್: ವಾಲ್ ಮೌಂಟ್ ಬ್ರಾಕೆಟ್
- ಅಪ್ಲಿಕೇಶನ್: ಸ್ಮಾರ್ಟ್ ಥಿಂಗ್ಸ್ ಅಪ್ಲಿಕೇಶನ್


Click it and Unblock the Notifications








