ಟಿವಿ ಖರೀದಿಸುವ ಮುನ್ನ ಈ ಅಂಶಗಳನ್ನು ಗಮನಿಸಲು ಮರೆಯದಿರಿ!
ನಿಮ್ಮ ಮನೆಗೆ ಟಿವಿ ಖರೀದಿಸುವ ಅಲೋಚನೆಯಿದ್ದರೆ ನೀವು ಗಮನಿಸ ಬೇಕಾದ ಅಂಶಗಳು ಹಲವು. ನೀವು ಪಾವತಿಸುವ ಹಣಕ್ಕೆ ತಕ್ಕುದಾದ ಉತ್ತಮ ಟಿವಿ ನಿಮ್ಮದಾಗಬೇಕೆಂದರೆ ಟಿವಿಯ ಕೆಲವು ಸೂಕ್ಷ್ಮತೆಗಳ ಅರಿವು ನಿಮಗಿರಲೇಬೇಕು.

ಮಾರುಕಟ್ಟೆಯಲ್ಲಿ ಹಲವಾರು ರೀತಿಯ ಟಿವಿಗಳು ಲಭ್ಯವಿದೆ. ಸ್ಮಾರ್ಟ್ ಟಿವಿ, LED,OLED, 4K, HDR ಹೀಗೆ ಹಲವು ವಿಧದ ಟಿವಿಗಳು ಲಭ್ಯವಿದೆ. ಟಿವಿ ಯ ತಂತ್ರಜ್ಞಾನ ದಿನದಿಂದ ದಿನಕ್ಕೆ ಅಭಿವೃದ್ಧಿ ಕಾಣುತ್ತಿದ್ದು ಒಂದಕ್ಕಿಂತ ಒಂದು ಉತ್ತಮ ಟಿವಿಗಳು ಬಿಡುಗಡೆಯಾಗಿತ್ತಿದೆ. ಹೀಗಾಗಿ ಟಿವಿ ಖರೀದಿಸುವ ಮೊದಲು ಕೆಲವು ಅಂಶಗಳನ್ನು ಮನದಲ್ಲಿರಿಸಿಕೊಂಡು ಸೂಕ್ತ ಆಯ್ಕೆ ಮಾಡುವುದು ಉತ್ತಮ.

ಟಿವಿ ಪರದೆಯ ಗಾತ್ರ
ಇದೊಂದು ಮುಖ್ಯ ಅಂಶವಾಗಿದ್ದು ಇದನ್ನು ನಿರ್ಧರಿಸುವುದು ಕಷ್ಟಕರವೇನಲ್ಲ.ನಿಮ್ಮ ಮನೆಯಲ್ಲಿ ಸಾಮಾನ್ಯವಾಗಿ ಎಷ್ಟು ಮಂದಿ ಜೊತೆಗೆ ಕುಳಿತು ಟಿವಿ ವೀಕ್ಷಿಸುತ್ತೀರೆಂಬುದನ್ನು ಯೋಚಿಸಿ. ಜನ ಹೆಚ್ಚಿದಂತೆ ಟಿವಿಯ ಪರದೆ ಯ ಗಾತ್ರವೂ ಹೆಚ್ಚಾಗಬೇಕಾದೀತು. ಅಲ್ಲದೆ ಟಿವಿಯಿಂದ ಎಷ್ಟು ಅಂತರದಲ್ಲಿ ಕುಳಿತು ಟಿವಿ ವೀಕ್ಷಿಸುತ್ತೀರಿ ಎನ್ನುವುದರ ಆಧಾರದಲ್ಲಿ ಸೂಕ್ತ ಗಾತ್ರವನ್ನು ನಿರ್ಧರಿಸಬೇಕು.

ಸ್ಕ್ರೀನ್/ಪರದೆಯ ರೆಸೊಲ್ಯೂಶನ್
ಟಿವಿಯ ಪರದೆಯ ರೆಸೊಲ್ಯೂಶನ್ ಟಿವಿಯಲ್ಲಿ ಕಾಣಿಸುವ ದೃಶ್ಯಗಳ ನಿಖರತೆಯನ್ನು ನಿರ್ಧರಿಸುತ್ತದೆ.ಈಗಿನ ದಿನಗಳಲ್ಲಿ 720p, 1080p, ಫುಲ್ HD ಮೊದಲಾದ ರೆಸೊಲ್ಯೂಶನ್ಗಳಲ್ಲಿ ಟಿವಿಗಳು ದೊರೆಯುತ್ತದೆ. HDTV ಯಿಂದ ಅಲ್ಟ್ರಾ HD ಟಿವಿಗಳತ್ತ ಉತ್ಪಾದಕರು ಮುಂದುವರೆಯುತ್ತಿದ್ದಾರೆ. ಅಲ್ಲದೆ 4K ಟೆಲಿವಿಶನ್ಗೂ ಸಾಕಷ್ಟು ಕಂಟೆಂಟ್ ಲಭ್ಯವಿದೆ. ಆದರೆ ಈಗಲೂ ಫುಲ್ HD 1080p ರೆಸಲೊಲ್ಯೂಶನ್ ಸಾಮಾನ್ಯವಾಗಿದ್ದು, ಮುಂದಿನ ದಿನಗಳಲ್ಲಿ 4K ಟಿವಿ ಪ್ರಸಿದ್ಧಿ ಪಡೆಯಲಿದೆ.

ರಿಫ್ರೆಶ್ ರೇಟ್
ನಿಮ್ಮ ಟಿವಿಯ ಪರದೆಯ ಮೇಲಿನ ದೃಶ್ಯಗಳು ಒಂದು ಸೆಕೆಂಡ್ನಲ್ಲಿ ಎಷ್ಟು ಬಾರಿ ರಿಫ್ರೆಶ್ ಆಗುತ್ತದೆ ಎನ್ನುವುದನ್ನು ರಿಫ್ರೆಶ್ ರೇಟ್ ಎನ್ನುತ್ತಾರೆ. ಇದನ್ನು ಹರ್ಟ್ಜ್ ಎಂಬ ಮಾನದಂಡದಲ್ಲಿ ಅಳೆಯಲಾಗುತ್ತದೆ. ಟಿವಿ ಯ ಬಾಕ್ಸ್ನಲ್ಲಿ 60Hz,120Hz ಅಥವಾ 144Hz ಎಂದು ಬರೆದಿರುವುದನ್ನು ನೀವು ಗಮನಿಸಿರಬಹುದು. ರಿಫ್ರೆಶ್ ರೇಟ್ ಹೆಚ್ಚಿದಂತೆ ಟಿವಿಯಲ್ಲಿನ ದೃಶ್ಯಗಳ ಮಧ್ಯೆ ಹರಿವು ಹೆಚ್ಚು ಸುಗಮವಾಗಿರುತ್ತದೆ ಮತ್ತು ಮೋಶನ್ ಬ್ಲರ್ ಕಡಿಮೆಯಾಗುತ್ತದೆ.

HDMI ಪೋರ್ಟ್ ಗಳು
ಟಿವಿಯಲ್ಲಿ ಹೆಚ್ಚು HDMI ಪೋರ್ಟ್ಗಳು ಇದ್ದಷ್ಟು ಉತ್ತಮ. ಸೌಂಡ್ಬಾರ್,ಕ್ರೋಮ್ಕಾಸ್ಟ್, ರೋಕು ಇತ್ಯಾದಿಗಳನ್ನು ಜೋಡಿಸಲು ಇದು ಅನುಕೂಲಕರವಾಗಿರುತ್ತದೆ. ನೀವು 4K ಅಲ್ಟ್ರಾ HD ಟಿವಿ ಖರೀದಿಸಲು ನಿರ್ಧರಿಸಿದ್ದರೆ ಟಿವಿಯ ಪೋರ್ಟ್ HDMI 2.0 ಸಪೋರ್ಟ್ ಮಾಡುತ್ತದೆ ಎನ್ನುವುದನ್ನು ಖಚಿತಪಡಿಸಿಕೊಳ್ಳಿ. ಭವಿಷ್ಯದ ಅಲ್ಟ್ರಾ HD ಸೋರ್ಸ್ಗಳನ್ನು ಸಪೋರ್ಟ್ ಮಾಡಲು ಇದು ಅಗತ್ಯವಾಗಿದೆ. ನಿಮ್ಮ ಟಿವಿಯಲ್ಲಿ ಕಡಿಮೆಯೆಂದರೆ 3 ಪೋರ್ಟ್ಗಳಾದರೂ ಇರಲೇಬೇಕು ಎನ್ನುವುದನ್ನು ಮರೆಯದಿರಿ.

ಟಿವಿ ಯ ಸ್ಮಾರ್ಟ್ನೆಸ್ ಗಿಂತ ಗಾತ್ರಕ್ಕೆ ಪ್ರಾಶಸ್ತ್ಯ
ಹೆಚ್ಚು ಸ್ಮಾರ್ಟ್ ಫೀಚರ್ಗಳಿರುವ ಚಿಕ್ಕ ಟಿವಿ ಮತ್ತು ಕಡಿಮೆ ಫೀಚರ್ಗಳಿರುವ ದೊಡ್ಡ ಟಿವಿಯ ಮಧ್ಯೆ ಒಂದನ್ನು ಆಯ್ಕೆ ಮಾಡಬೇಕಿದ್ದರೆ ದೊಡ್ಡ ಟಿವಿಯನ್ನೇ ಆಯ್ದುಕೊಳ್ಳಿ. ಟಿವಿಯ ಸ್ಮಾರ್ಟ್ ಫೀಚರ್ಗಳು ನಿಜವಾದ ಫೀಚರ್ಗಿಂತ ಗಿಮಿಕ್ ಎನಿಸುವುದೇ ಹೆಚ್ಚು.

ಸ್ಪೀಕರ್ಗಳು
ಈಗೀಗ ಟಿವಿಗಳೊಂದಿಗೆ ಬರುವ ಸ್ಪೀಕರ್ಗಳು ಉತ್ತಮ ದರ್ಜೆಯದ್ದಾಗಿರುವುದಿಲ್ಲ. ಹೀಗಾಗಿ ನೀವು ಟಿವಿ ವೀಕ್ಷಿಸುವ ಕೊಠಡಿ ಚಿಕ್ಕದಾಗಿದ್ದಲ್ಲಿ ಇದು ಕೆಲಸ ಮಾಡುತ್ತದೆ. ಆದರೆ ಕೊಠಡಿ ದೊಡ್ಡದಿದ್ದಲ್ಲಿ ಇದರ ಸೌಂಡ್ ನಿಮಗೆ ನಿರಾಶೆಯುಂಟು ಮಾಡಬಹುದು. ಹಾಗಾಗಿ ದೊಡ್ಡ ಟಿವಿಗಳೊಂದಿಗೆ ಉತ್ತಮ ಸೌಂಡ್ ಬಾರ್ ಖರೀದಿಸುವುದು ಉತ್ತಮ.

ಕಲರ್ ಡೆಪ್ತ್
ಸಾಮನ್ಯವಾಗಿ ಯಾವುದೇ ಟಿವಿ ಉತ್ಪಾದಕರು ಟಿವಿ ಯ ಕಲರ್ ನ ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳಲು ಬಯಸುವುದಿಲ್ಲ.ಆದರೆ ನೀವು ಟಿವಿ ಖರೀದಿಸುವಾಗ ಒಳ್ಳೆಯ ಕಲರ್ ಡೆಪ್ತ್ ಇರುವ ಟಿವಿಯನ್ನೇ ಆಯ್ಕೆ ಮಾಡಿ. ಕಲರ್ ಡೆಪ್ತ್ " 8 ಬಿಟ್ಸ್ ಪರ್ ಚ್ಯಾನಲ್" ಅಥವಾ ಅದಕ್ಕಿಂತ ಹೆಚ್ಚಿದ್ದರೆ ಒಳಿತು. ಈ ಮೂಲಕ ನಿಮ್ಮ ಟಿವಿ ಹೆಚ್ಚಿನ ಬಣ್ಣಗಳನ್ನು ಸೃಷ್ಟಿಸುವುದಲ್ಲದೆ ಈ ಮೂಲಕ ಒಳ್ಳೆಯ ದೃಶ್ಯಗಳನ್ನು ನಿಮಗೆ ನೀಡುತ್ತದೆ.

ಬ್ಯಾಕ್ಲೈಟ್ ತಂತ್ರಜ್ಞಾನ
ನೀವು LCD ಟಿವಿ ಖರೀದಿಸಲು ಯೋಚಿಸಿದ್ದರೆ ಅದು ಹೇಗೆ ಕೆಲಸ ಮಾಡುತ್ತದೆ ಎನ್ನುವುದನ್ನು ಮೊದಲು ತಿಳಿಯಬೇಕು. ಟಿವಿಯ ಪರದೆಯ ಕಾಂಟ್ರಾಸ್ಟ್ ಅನ್ನು ಇದು ನಿರ್ಧರಿಸುತ್ತದೆ.ಕೆಲವು ಟಿವಿಗಳು ಪರದೆಯ ಅಂಚಿನಲ್ಲಿ ಇರುವ ಲೈಟ್ ಗಳ ಮೂಲಕ ಪರದೆಯ ಮೇಲೆ ಬೆಳಕು ಚೆಲ್ಲಿದರೆ ಇನ್ನು ಕೆಲವು ಪರದೆಯ ಹಿಂದಿನಿಂದ ಪರದೆಯ ಮೇಲೆ ಬೆಳಕು ಚೆಲ್ಲುತ್ತದೆ. ಪರದೆಯ ಹಿಂದಿನಿಂದ ಬೆಳಕು ಹರಿಸುವ ಟಿವಿಗಳು ಅಂಚಿನಿಂದ ಬೆಳಕು ಹರಿಸುವ ಟಿವಿಗಳಿಗಿಂತ ಉತ್ತಮ ಕಾಂಟ್ರಾಸ್ಟ್ ನೀಡುತ್ತದೆ.

ಕರ್ವ್ಡ್ ಟಿವಿ
ಸಧ್ಯಕ್ಕೆ ಕರ್ವ್ಡ್ ಟಿವಿಗಳು ಅಷ್ಟು ಸಾಮಾನ್ಯವಾಗಿಲ್ಲವಾದರೂ ಸ್ಯಾಮ್ಸಂಗ್ ಕರ್ವ್ಡ್ ಟಿವಿಗಳು ತಮ್ಮ ಪಯಣವನ್ನು ಮುಗಿಸಿದೆ ಎಂದು ನಿರ್ಧರಿಸಿದೆ. ಕರ್ವ್ಡ್ ಟಿವಿಗಳು ನಮ್ಮ ಕಣ್ಣಿನ ಆಕಾರವನ್ನೇ ಹೋಲುವುದರಿಂದ ನಮ್ಮ ಕಣ್ಣಿಗೆ ದೃಶ್ಯಗಳು ಫ್ಲ್ಯಾಟ್ ಟಿವಿಗಳಿಗಿಂತ ಹೆಚ್ಚು ನಿಖರವಾಗಿ ಗೋಚರಿಸುತ್ತದೆಯಂತೆ. ಆದರೆ ಟಿವಿಯ ಮುಂದೆ ಸರಿಯಾದ ಸ್ಥಳದಲ್ಲಿ ಕುಳಿತುಕೊಳ್ಳದಿದ್ದರೆ ಕರ್ವ್ಡ್ ಟಿವಿಗಳಲ್ಲಿ ದೃಶ್ಯಗಳು ವಿರೂಪವಾದಂತೆ ತೋರುತ್ತದೆ. ಆದ್ದರಿಂದ ನೀವು ಕರ್ವ್ಡ್ ಟಿವಿ ಖರೀದಿಸಬೇಕೇ ಬೇಡವೇ ಎಂದು ನಿರ್ಧರಿಸುವುದು ಅಗತ್ಯ.

ಸ್ಮಾರ್ಟ್ ಟಿವಿ
ಸಾಮನ್ಯವಾಗಿ ಸ್ಮಾರ್ಟ್ ಟಿವಿಗಳು ಇಂಟರ್ನೆಟ್ ಗೆ ಕನೆಕ್ಟ್ ಆಗಿ ಅದರ ಮೂಲಕ ಕಂಟೆಂಟ್ ಸ್ಟ್ರೀಮಿಂಗ್ ಮಾಡುವ ಸಾಮರ್ಥ್ಯ ಹೊಂದಿರುತ್ತದೆ. ಅಲ್ಲದೆ ನೆಟ್ಫ್ಲಿಕ್ಸ್ ಮೊದಲಾದ ಆಪ್ಗಳನ್ನು ಹೊಂದಿದ್ದು ವೈಫೈ ಮೂಲಕ ಕನೆಕ್ಟ್ ಮಾಡಬಹುದು. ನಿಮಗೆ ವೈರ್-ರಹಿತ ಸೆಟ್-ಅಪ್ ಬೇಕಿದ್ದರೆ ಸ್ಮಾರ್ಟ್ ಟಿವಿ ಉತ್ತಮ ಆಯ್ಕೆ!


Click it and Unblock the Notifications