Cyber Crime: ಆ್ಯಪ್ ಡೌನ್‌ಲೋಡ್ ಮಾಡಿಸಿ ಲಕ್ಷಾಂತರ ರೂ ವಂಚನೆ, ಪ್ರಕರಣ ದಾಖಲು
ತಂತ್ರಜ್ಞಾನ ಮುಂದುವರೆದಂತೆ ಇತ್ತೀಚಿನ ದಿನಗಳಲ್ಲಿ ಆನ್‌ಲೈನ್ ವಂಚನೆಯ (Cyber Crime) ಪ್ರಕರಣಗಳು ಕೂಡ ದಿನೇ ದಿನೇ ಹೆಚ್ಚುತ್ತಲೇ ಇವೆ, ಆ್ಯಪ್ ಡೌನ್‌ಲೋಡ್, ಓಟಿಪಿ ಶೇರ್ ಸೇರಿದಂತೆ ವಿವಿಧ ಬಗೆಯ ವಂಚನೆಯ ಕುರಿತಾಗಿ ದಿನನಿತ್ಯ ಜಾಗೃತಿ ಮೂಡಿಸುವ ಕೆಲಸಗಳು ನಡೆಯುತ್ತಿವೆ ಇದರ ನಡುವೆಯೂ ಆನ್‌ಲೈನ್ ಕಳ್ಳರ ಬಲೆಗೆ ಬೀಳುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಲೇ ಇರುವುದನ್ನು ಗಮನಿಸಬಹುದಾಗಿದೆ.
ಇದೀಗ ಅಂತಹದ್ದೇ ಒಂದು ಘಟನೆ ಬೆಗಳೂರಿನಲ್ಲಿ ನಡೆದಿದೆ. ಏನಿದು ವಂಚನೆ ಪ್ರಕರಣ, ಎಷ್ಟು ಹಣ ವಂಚನೆ ಮಾಡಲಾಗಿದೆ ಆನ್‌ಲೈನ್ ವಂಚನೆಗಳಿಂದ ತಪ್ಪಿಸಿಕೊಳ್ಳುವುದು ಹೇಗೆ ಎಂಬುದನ್ನು ತಿಳಿಯಲು ಈ ಲೇಖನ ಸಂಪೂರ್ಣ ಓದಿ.

ಮೊಬೈಲ್ ಆ್ಯಪ್ ಇನ್‌ಸ್ಟಾಲ್ ಮಾಡಿಸಿ ಖಾತೆಯಲ್ಲಿದ್ದ 14.16 ಲಕ್ಷ ರೂ. ಗಳನ್ನು ವಂಚಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು, ಈ ಕುರಿತು ಬೆಂಗಳೂರು ನಗರದ ಸೈಬರ್ ಕ್ರೈಮ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ. ನಗರದ 57ವರ್ಷದ ಪುರುಷ ಹಾಗೂ 31 ವರ್ಷದ ಮಹಿಳೆಯಿಂದ ಹಣ ವರ್ಗಾಯಿಸಿಕೊಂಡು ವಂಚನೆ ಎಸಗಲಾಗಿದ್ದು, ಈ ಸಂಬಂಧ ಇಬ್ಬರೂ ಕೂಡ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಸೈಬರ್ ಠಾಣೆ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಆರಂಭಿಸಿರುವ ಕುರಿತು ಮಾಹಿತಿ ನೀಡಿದ್ದಾರೆ. ಕ್ರೆಡಿಟ್ ಕಾರ್ಡ್ ಹಾಗೂ ಪಾನ್ ಕಾರ್ಡ್ ನವೀಕರಣದ ಹೆಸರಿನಲ್ಲಿ ಆರೋಪಿಗಳು ದೂರುದಾರರಿಗೆ ಸಂದೇಶ ಕಳುಹಿಸಿದ್ದರು, ಅದನ್ನು ನಂಬಿದ್ದ ದೂರುದಾರರು ಸಂದೇಶಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ನಿಮ್ಮ ಕ್ರೆಡಿಟ್ ಕಾರ್ಡ್ ಹಾಗೂ ಪಾನ್ ಕಾರ್ಡ್ ನವೀಕರಣ ಮಾಡಿಸಿಕೊಳ್ಳಬೇಕು ಇಲ್ಲವಾದರೆ ನಿಮ್ಮ ಹಣ ಸಿಗುವುದಿಲ್ಲ ಹಾಗೂ ಖಾತೆ ನಿಷ್ಕ್ರೀಯವಾಗಲಿದೆ ಎಂದು ಹೆದರಿಸಿದರು ಇದನ್ನು ನಂಬಿದ್ದ ದೂರುದಾರರು, ನವೀಕರಣ ಮಾಡಿಕೊಳ್ಳಲು ಒಪ್ಪಿದರು.
ಕೂಡಲೇ ಆರೋಪಿಗಳು ವಾಟ್ಸ್‌ಆಪ್ ನಲ್ಲಿ ಆ್ಯಪ್ ಒಂದರ ಆಂಡ್ರಾಯ್ಡ್ ಅಪ್ಲಿಕೇಷನ್ ಪ್ಯಾಕೇಜ್ ಫೈಲ್ ಕಳಿಸಿದರು, ಅದನ್ನು ದೂರುದಾರರು ತಮ್ಮ ಮೊಬೈಲ್‌ನಲ್ಲಿ ಇನ್‌ಸ್ಟಾಲ್ ಮಾಡಿಕೊಂಡಿದ್ದರು. ಇದಾದ ಬಳಿಕ ದೂರುದಾರರ ಖಾತೆಯಲ್ಲಿದ್ದ ಹಣ ಕಡಿತವಾಗಿದೆ ಎಂದು ಆರೋಪಿಸಿ ಪ್ರಕರಣ ದಾಖಲಿಸಿದ್ದಾರೆ.
ಆ್ಯಪ್ ಬಗ್ಗೆ ಎಚ್ಚರ ನೀಡಿದ ಪೊಲೀಸರು: ಇತ್ತೀಚಿನ ದಿನಗಳಲ್ಲಿ ಸೈಬರ್ ವಂಚಕರು ನಾನಾ ಕಾರಣಗಳನ್ನು ಹೇಳಿ ಆ್ಯಪ್ ಒಂದರ ಎಪಿಕೆ ಕಳುಹಿಸಿ ವಂಚನೆ ಮಾಡುತ್ತಿದ್ದಾರೆ, ಜನರು ಇಂಥ ವಂಚನೆ ಆ್ಯಪ್‌ಗಳ ಕುರಿತು ಸಂದೇಶಗಳು ಬಂದಾಗ ಹೆಚ್ಚು ನಿಗಾ ವಹಿಸಬೇಕು ಹಾಗೂ ಜಾಗೃತಿಯಿಂದ ಇಂಥ ಸಂದೇಶಗಳಿಗೆ ಯಾವುದೇ ಪ್ರತಿಕ್ರಿಯೆ ನೀಡದೆ ಸೈಬರ್ ಅಪರಾಧಿಗಳಿಂದ ವಂಚನೆಗೊಳಗಾಗುವುದನ್ನು ತಡೆಯಬೇಕು ಎಂದು ಪೊಲೀಸರು ಸಲಹೆ ನೀಡಿದ್ದಾರೆ.
ಕೆನರಾ ಬ್ಯಾಂಕ್, ಐಸಿಐಸಿಐ ಬ್ಯಾಂಕ್ ಸೇರದಂತೆ ಇತರೆ ಬ್ಯಾಂಕ್‌ಗಳ ಹೆಸರಿನ ಸಂದೇಶಗಳು ಬರುತ್ತಿವೆ, ಇಂಥ ಸಂದೇಶಗಳ ಬಗ್ಗೆ ಸಾರ್ವಜನಿಕರು ಎಚ್ಚರ ವಹಿಸಬೇಕು, ಅನುಮಾನಾಸ್ಪದ ಸಂದೇಶಗಳು ಬಂದಾಗ ಅವುಗಳ ಕುರಿತು ಸ್ಥಳೀಯ ಪೊಲೀಸರಿಗೆ ಅಥವ ಪೊಲೀಸ್ ಠಾಣೆಗೆ ದೂರು ನೀಡಬೇಕು ಎಂದು ತಿಳಿಸಿದ್ದಾರೆ.
ಲಿಂಕ್‌ಗಳ ಮೇಲೆ ಕ್ಲಿಕ್ ಮಾಡುವಾಗ ಎಚ್ಚರ ವಹಿಸಿ: ಸೈಬರ್ ವಂಚಕರು ಮೊಬೈಲ್‌ಗಳಿಗೆ ಅನಗತ್ಯ ಸ್ಕ್ಯಾಮ್ ಲಿಂಗ್‌ಗಳನ್ನು ಕಳುಹಿಸಿ ಕ್ಲಿಕ್ ಮಾಡಿ ಹಣ ಗಳಿಸಿ ಎಂಬ ಸಂದೇಶ ಸೇರಿದಂತೆ ವಿವಿಧ ರೀತಿಯ ಆಶ್ವಾಸನೆಗಳನ್ನು ನೀಡುತ್ತಾರೆ ಆದರೆ ಗ್ರಾಹಕರು ಯಾವುದೇ ಕಾರಣಕ್ಕೂ ಅಂತ ಲಿಂಕ್ ಗಳನ್ನು ಕ್ಲಿಕ್ ಮಾಡದೆ ಅವುಗಳ ಕುರಿತು ಜಾಗೃತಿ ವಹಿಸಬೇಕು.
ಒಟಿಪಿಗಳ ಮೇಲೆ ನಿಗಾ ಇರಿಸುವುದು: ಬ್ಯಾಂಕ್ ಪಾಸ್‌ಬುಕ್ ನವೀಕರಣ, ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್‌ಗಳ ನವೀಕರಣದ ಹೆಸರಿನಲ್ಲಿ ಕಾಲ್ ಮಾಡಿ ಓಟಿಪಿ ಕೇಳುವುದನ್ನು ಸೈಬರ್ ವಂಚಕರು ಎಸಗುತ್ತಾರೆ ಆ ಸಂದರ್ಭದಲ್ಲಿ ಓಟಿಪಿ ನೀಡದೆ ಎಚ್ಚರಿಕ ವಹಿಸಬೇಕು.
ಅನುಮತಿ ನೀಡುವಾಗ ಎಚ್ಚರವಹಿಸಿ: ಆನ್‌ಲೈನ್ ಹಣ ವರ್ಗಾವಣೆ ಸಂದರ್ಭದಲ್ಲಿ ನಿಮ್ಮ ಮೊಬೈಲ್‌ನಲ್ಲಿ ಅನುಮತಿ ನೀಡುವುದನ್ನು ಸಮರ್ಪಕವಾಗಿ ನಿಭಾಯಿಸುವುದರಿಂದ ನಿಮ್ಮ ವೈಕಕ್ತಿಕ ಡೇಟಾ ಹಾಗೂ ನಿಮ್ಮ ಹಣವನ್ನು ಸುರಕ್ಷಿತವಾಗಿ ಇರಿಸಿಕೊಳ್ಳಬಹುದು.


Click it and Unblock the Notifications








