ಮೊಬೈಲ್ ಚಾರ್ಜರ್ ಶಾಕ್ ಹೊಡೆದು 8 ತಿಂಗಳ ಮಗು ಸಾವು; ಇನ್ನಾದರೂ ಈ ಅಭ್ಯಾಸ ಬದಲಾಯಿಸಿಕೊಳ್ಳಿ!
ಮೊಬೈಲ್ ಚಾರ್ಜರ್ ತಾನೇ ಕರೆಂಟ್ ಹೊಡೆಯೋದಿಲ್ಲ ಅಂತಾ ಅಸಡ್ಡೆ ಮಾಡುವವರು ಈ ಸುದ್ದಿಯನ್ನು ಓದಲೇಬೇಕು. ಮೊಬೈಲ್ ಚಾರ್ಜರ್ ಅನ್ನು ಪವರ್ ಶಾಕೆಟ್‌ನಲ್ಲೇ ಬಿಟ್ಟು ಸ್ವಿಚ್ ಆಫ್ ಕೂಡ ಮಾಡದೇ ಹೋಗುವ ಮುನ್ನ ಈ ಶಾಕಿಂಗ್ ಸುದ್ದಿಯನ್ನು ಗಮನಿಸಲೇಬೇಕು. ಯಾಕಂದ್ರೆ ಮೊಬೈಲ್ ಚಾರ್ಜರ್ ವೈರ್ ಅನ್ನು ಬಾಯಲಿಟ್ಟುಕೊಂಡ ಪರಿಣಾಮ 8 ತಿಂಗಳ ಮಗು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಕಾರಾವಾರದಲ್ಲಿ ನಡೆದಿದೆ.
ಹೌದು, ಮೊಬೈಲ್ ಚಾರ್ಜ್‌ಗೆ ಹಾಕಿ ಸ್ವಿಚ್ ಆಫ್ ಮಾಡದೇ ಹಾಗೇ ಬಿಟ್ಟಿದ್ದ ವೈರ್ ಅನ್ನು ಮಗು ಬಾಯಲಿಟ್ಟುಕೊಂಡಿದೆ. ತಕ್ಷಣವೇ ಮಗುವಿಗೆ ಕರೆಂಟ್ ಶಾಕ್ ತಗುಲಿದ್ದು, ಸ್ಥಳದಲ್ಲಿಯೇ ಮಗು ಸಾವನ್ನಪ್ಪಿದೆ. ಮೊಬೈಲ್ ಚಾರ್ಜರ್ ಅನ್ನು ಸ್ವಿಚ್ ಆಫ್ ಮಾಡದೇ ಬಿಟ್ಟಿದ್ದ ಪೋಷಕರ ನಿರ್ಲಕ್ಷ್ಯವೇ ಇದಕ್ಕೇ ಕಾರಣ ಎನ್ನಲಾಗಿದೆ.

ಮೊಬೈಲ್ ಚಾರ್ಜರ್‌ನ ಪಾಯಿಂಟ್ ಅನ್ನು ಮುಟ್ಟಿದಾಗ ಕರೆಂಟ್ ಹೊಡೆದ ಅನುಭವ ನಿಮಗೂ ಕೂಡ ಆಗಿರಬಹುದು. ಆದರೆ ಕೆಲವರಿಗೆ ಮೊಬೈಲ್ ಚಾರ್ಜರ್‌ನಿಂದ ಕರೆಂಟ್ ಶಾಕ್ ಹೊಡೆಯುವುದಿಲ್ಲ ಎನ್ನುವ ನಂಬಿಕೆಯಲ್ಲಿದ್ದಾರೆ. ನಿಜ ಹೇಳಬೇಕು ಅಂದರೆ ಮೊಬೈಲ್ ಚಾರ್ಜರ್ ಪಾಯಿಂಟ್‌ನಲ್ಲಿ ಕರೆಂಟ್ ಪ್ರವಾಹ ಆಗುತ್ತಿರುತ್ತದೆ. ಇದ್ಯಾವುದನ್ನು ತಿಳಿಯದ ಮುಗ್ದ ಕಂದಮ್ಮ ತನ್ನ ಬಾಯಲ್ಲಿ ಮೊಬೈಲ್ ಚಾರ್ಜರ್ ವೈರ್ ಅನ್ನು ಇಟ್ಟುಕೊಂಡು ಇದೀಗ ಬಾರದ ಲೋಕಕ್ಕೆ ಪಯಣಿಸಿದೆ.
ಉತ್ತರಕನ್ನಡ ಜಿಲ್ಲೆ ಕಾರವಾರ ತಾಲೂಕಿನ ಸಿದ್ದರ ಗ್ರಾಮದಲ್ಲಿ ಈ ದುರ್ಘಟನೆ ನಡೆದಿದೆ. ಸದ್ಯ ಮೊಬೈಲ್ ಚಾರ್ಜಿಂಗ್ ವೈರ್‌ನಿಂದ ಕರೆಂಟ್ ಶಾಕ್ ತಾಗಿ ಮೃತಪಟ್ಟ 8 ತಿಂಗಳ ಮಗುವನ್ನು ಸಾನಿಧ್ಯ ಎಂದು ಗುರುತಿಸಲಾಗಿದೆ. ಇವರ ಮನೆಯಲ್ಲಿ ಚಾರ್ಜರ್ ವೈರ್ ಅನ್ನು ಪವರ್ ಶಾಕೆಟ್‌ನಿಂದ ತೆಗೆದುಹಾಕದೇ ಶಾಶ್ವತವಾಗಿ ಅಲ್ಲಿಯೇ ಮೊಬೈಲ್ ಚಾರ್ಜರ್ ಅನ್ನು ಬಿಟ್ಟು ಹೋಗಿದ್ದರ ಪರಿಣಾಮ ಈ ಘಟನೆ ನಡೆದಿದೆ. ವಿದ್ಯುತ್ ಆನ್ ಇದ್ದ ಕಾರಣ ಮೊಬೈಲ್ ಚಾರ್ಜರ್ನಲ್ಲಿ ಕರೆಂಟ್ ಪಾಸ್ ಆಗಿದ್ದು ಮಗು ಸ್ಥಳದಲ್ಲಿಯೇ ಸಾವನಪ್ಪಲು ಕಾರಣ ಎನ್ನಬಹುದು.
ನೀವು ಕೂಡ ಹೀಗೆ ಮಾಡ್ತೀರಾ ಇರಲಿ ಎಚ್ಚರ?
ಮನೆಯಲ್ಲಿರುವಾಗ ಮೊಬೈಲ್ ಚಾರ್ಜರ್ ಅನ್ನು ಪವರ್ ಶಾಕೆಟ್‌ನಿಂದ ರಿಮೂವ್ ಮಾಡುವ ಗೋಜಿಗೆ ಯಾರು ಕೂಡ ಹೋಗೋದಿಲ್ಲ. ತಮಗೆ ಬೇಕೆನಿಸಿದಾಗ ಮೊಬೈಲ್ ಚಾರ್ಜಿಂಗ್ ಹಾಕುವುದು ನಂತರ ಚಾರ್ಜರ್ ಅನ್ನು ಅಲ್ಲೆ ಬಿಟ್ಟು ಸ್ವಿಚ್ ಆಫ್ ಕೂಡ ಮಾಡದೇ ಹೋಗುವ ಜನರಿದ್ದಾರೆ. ಆದರೆ ಈ ರೀತಿ ಮಾಡಿದರೆ ಏನೆಲ್ಲಾ ಅನಾಹುತ ಆಗಲಿದೆ ಅನ್ನೊದನ್ನ ಈ ಘಟನೆಯೇ ಸಾಕ್ಷಿ. ಆದರಿಂದ ಮೊಬೈಲ್ ಚಾರ್ಜರ್ ಹಾಕಿದ ನಂತರ ಅದನ್ನು ತೆಗೆದುಕೊಂಡು ಸ್ವಿಚ್ ಆಫ್ ಮಾಡಬೇಕು. ಇಲ್ಲವಾದಲ್ಲಿ ಮಕ್ಕಳಿಗೆ ಅಪಾಯ ಆಗುವ ಸಾಧ್ಯತೆ ಹೆಚ್ಚು.

ಮಕ್ಕಳಿರುವ ಮನೆಯಲ್ಲಿ ಮಾತ್ರವಲ್ಲ ಮೊಬೈಲ್ ಚಾರ್ಜರ್ ಅನ್ನು ಬಳಸಿದ ನಂತರ ಅದನ್ನು ಪವರ್ ಶಾಕೆಟ್‌ನಿಂದ ರಿಮೂವ್ ಮಾಡುವುದು ಅತ್ಯಗತ್ಯವಾಗಿದೆ. ಏಕೆಂದರೆ ಮಳೆಗಾಲದಲ್ಲಿ ಮನೆಯ ಗೋಡೆಗಳು ಒದ್ದೆಯಾಗಿರುತ್ತವೆ. ಇಂತಹ ಸಮಯದಲ್ಲಿ ನಿಮ್ಮ ಮೊಬೈಲ್ ಚಾರ್ಜರ್ ಮೂಲಕ ಹಿರಯುವ ವಿದ್ಯುತ್ ಪ್ರವಾಹದ ಪ್ರಮಾಣವೂ ಕೂಡ ಹೆಚ್ಚಾಗಲಿದೆ. ಇದರಿಂದ ಮನೆಯ ಗೋಡೆಗಳು ಕೂಡ ಗ್ರೌಂಡ್ ಆಗುವ ಸಾದ್ಯತೆಯಿರುತ್ತದೆ. ಇದರಿಂದ ನಿಮಗೂ ಕೂಡ ವಿದ್ಯುತ್ ಶಾಕ್ ಹೊಡೆಯುವ ಸಾಧ್ಯತೆಯಿದೆ.
ಮೊಬೈಲ್ ಚಾರ್ಜರ್‌ನಿಂದ ವಿದ್ಯುತ್ ಶಾಕ್ ಹೊಡೆದು ಸಾವನಪ್ಪಿರುವ ಘಟನೆ ಇದೇ ಮೊದಲೇನಲ್ಲ. ಈ ಹಿಂದೆಯೂ ಕೂಡ ಸಾಕಷ್ಟು ಕಡೆಗಳಲ್ಲಿ ಮೊಬೈಲ್ ಚಾರ್ಜರ್ ಬಳಸುವಾಗ ಕರೆಂಟ್ ಶಾಕ್ ಹೊಡೆದ ಪ್ರಕರಣಗಳು ದಾಖಲಾಗಿದೆ. ಅಷ್ಟೇ ಅಲ್ಲ ಮೊಬೈಲ್ ಚಾರ್ಜಿಂಗ್ ಹಾಕಿರುವಾಗ ಫೋನ್ ಬಳಕೆ ಮಾಡುವುದರಿಂದ ಕೂಡ ಸಾಕಷ್ಟು ದುರ್ಘಟನೆಗಳು ಸಂಭವಿಸಿವೆ. ಈ ಸನ್ನಿವೇಶದಲ್ಲಿ ಮೊಬೈಲ್ ಬ್ಲ್ಯಾಸ್ಟ್ ಆಗುವ ಸಾದ್ಯತೆ ಕೂಡ ಹೆಚ್ಚಿದೆ. ಆದರಿಂದ ಮೊಬೈಲ್ ಚಾರ್ಜಿಂಗ್ ಹಾಕುವಾಗ, ಚಾಜಿಂಗ್ ಆದ ನಂತರವೂ ಕೂಡ ಎಚ್ಚರಿಕೆ ವಹಿಸಬೇಕಾದ ಅನಿವಾರ್ಯತೆ ನಮ್ಮೆಲ್ಲರಿಗೂ ಇದೆ.


Click it and Unblock the Notifications








