ಆಧಾರ್ ಮಾಹಿತಿ ಸೋರಿಕೆಯಾಗಿಲ್ಲವಂತೆ..! ಭಾರತೀಯರ ಕ್ಷಮೆ ಕೇಳಿದ ಗೆಮಾಲ್ಟೋ..!
ಇತ್ತೀಚೆಗೆ ತಾನೇ ಆಧಾರ್ ಕುರಿತು ತಪ್ಪು ಮಾಹಿತಿಯನ್ನು ಪ್ರಕಟಿಸಿದ್ದ ಡಿಜಿಟಲ್ ಭದ್ರತಾ ಸಂಸ್ಥೆ ಗೆಮಾಲ್ಟೋ ಶನಿವಾರ ತನ್ನ ತಪ್ಪಿಗೆ ಭಾರತೀಯರಿಗೆ ಬಹಿರಂಗ ಕ್ಷಮೆ ಕೇಳಿದೆ. ಹೌದು, ಅಕ್ಟೋಬರ್ 15ರಂದು ಗೆಮಾಲ್ಟೋ ಬ್ರೀಚ್ ಲೆವೆಲ್ ಇಂಡೆಕ್ಸ್ 2018ರ ವರದಿಯನ್ನು ಬಿಡುಗಡೆ ಮಾಡಿ 945 ಮಾಹಿತಿ ಹಗರಣಗಳು ಪತ್ತೆಯಾಗಿದ್ದು, 4.5 ಬಿಲಿಯನ್ ಮಾಹಿತಿಗಳು ಸೋರಿಕೆಯಾಗಿವೆ ಎಂದು ಹೇಳಿತ್ತು.

ಇಷ್ಟೇ, ಅಲ್ಲದೇ ಭಾರತದ ಆಧಾರ್ ಮಾಹಿತಿ ಸೋರಿಕೆ ಎರಡನೇ ಅತಿದೊಡ್ಡ ಮಾಹಿತಿ ಹಗರಣ ಎಂದು ಹೇಳಿ 1 ಬಿಲಿಯನ್ ಆಧಾರ್ ಮಾಹಿತಿ ಸೋರಿಕೆಯಾಗಿದೆ ಎಂದು ಪಟ್ಟಿಯಲ್ಲಿ ತಿಳಿಸಿತ್ತು. ಇದರಿಂದ ಆಧಾರ್ ಗೌಪ್ಯತೆಯ ಬಗ್ಗೆ ಹಲವು ಅನುಮಾನಗಳು ಎದ್ದಿದ್ದವು. ಈಗ ಗೆಮಾಲ್ಟೋ ಸಂಸ್ಥೆಯ ಸಿಇಒ ಭಾರತದ ಆಧಾರ್ ಬಗ್ಗೆ ತಪ್ಪಿನಿಂದ ಆಗಿರುವ ವರದಿ ಎಂದು ಹೇಳಿ ಭಾರತೀಯರನ್ನು ಬಹಿರಂಗ ಕ್ಷಮೆ ಕೇಳಿ ಪ್ರಕಟಣೆಯೊಂದನ್ನು ಹೊರಡಿಸಿದ್ದಾರೆ. ಆ ಪ್ರಕಟಣೆಯಲ್ಲಿ ಏನೀದೆ..? ಅಂತ ನೋಡಿ..

ಏನೀತ್ತು ವರದಿಯಲ್ಲಿ..?
ಗೆಮಾಲ್ಟೋ ಸಂಸ್ಥೆ ಅಕ್ಟೋಬರ್ 15ರಂದು ಪ್ರಕಟಿಸಿದ್ದ ವರದಿಯಲ್ಲಿ 2018ರ ಮೊದಲಾರ್ಧದಲ್ಲಿ ವಿಶ್ವದಲ್ಲಿನ ಮಾಹಿತಿ ಸೋರಿಕೆ ಹಗರಣಗಳ ಪಟ್ಟಿಯನ್ನು ಮಾಡಿ ಬ್ರೀಚ್ ಲೆವೆಲ್ ಇಂಡೆಕ್ಸ್- 2018ನ್ನು ಬಿಡುಗಡೆಗೊಳಿಸಿ 945 ಮಾಹಿತಿ ಹಗರಣಗಳನ್ನು ಹೆಸರಿಸಿ 4.5 ಬಿಲಿಯನ್ ಜನರ ಮಾಹಿತಿ ಸೋರಿಕೆಯಾಗಿತ್ತು ಎಂದು ಹೇಳಿತ್ತು. ಅದಲ್ಲದೇ, ಭಾರತದ ಆಧಾರ್ ಮಾಹಿತಿ ಸೋರಿಕೆಯ ಕುರಿತು ಸಹ ಹೇಳಿತ್ತು.

2ನೇ ದೊಡ್ಡ ಹಗರಣ ಆಧಾರ್ ಅಂತೆ..!
ಗೆಮಾಲ್ಟೋ ಪಟ್ಟಿ ಮಾಡಿದ್ದ ಮಾಹಿತಿ ಸೋರಿಕೆ ಹಗರಣಗಳಲ್ಲಿ ಆಧಾರ್‌ನ್ನು ಕೂಡ ಸೇರಿಸಿ ಇದು ವಿಶ್ವದ ಎರಡನೇ ಅತಿದೊಡ್ಡ ಡೇಟಾ ಬ್ರೀಚ್ ಎಂದು ಹೇಳಿತ್ತು. ಅದಲ್ಲದೇ 1 ಬಿಲಿಯನ್‌ಗೂ ಹೆಚ್ಚು ಜನರ ಆಧಾರ್ ಮಾಹಿತಿಯಾದ ಹೆಸರು, ವಿಳಾಸ ಮತ್ತು ಇತರ ವೈಯಕ್ತಿಕ ಮಾಹಿತಿ ಸೋರಿಕೆಯಾಗಿದೆ ಎಂದು ಹೇಳಿ ಆಧಾರ್ ಬಗ್ಗೆ ಹಲವು ಅನುಮಾನಗಳನ್ನು ಉಂಟು ಮಾಡಿತ್ತು.

ಕ್ಷಮೆ ಕೇಳಿದ ಸಿಇಒ
ಆಧಾರ್ ಕುರಿತು ತಪ್ಪು ಮಾಹಿತಿ ಪ್ರಕಟಿಸಿದ ಗೆಮಾಲ್ಟೋ ಶನಿವಾರ ಪ್ರಕಟಣೆಯೊಂದನ್ನು ಹೊರಡಿಸಿದ್ದು, ಗೆಮಾಲ್ಟೋ ಸಿಇಒ ಫಿಲಿಪ್ ವ್ಯಾಲಿ ಭಾರತೀಯರಿಗೆ ಬಹಿರಂಗ ಕ್ಷಮೆ ಕೇಳಿದ್ದು, ತಪ್ಪು ಮಾಡಿದವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ.

ಕ್ಷಮಾಪಣೆಯಲ್ಲಿ ಏನೀದೆ..?
ಯಾವುದೇ ಆಧಾರ್ ದತ್ತಾಂಶಗಳಲ್ಲಿ ಡೇಟಾ ಉಲ್ಲಂಘನೆಯನ್ನು ದೃಢೀಕರಿಸಿಲ್ಲ ಎಂದು ಗೆಮಾಲ್ಟೋ ಹೇಳಿದೆ. ಆದ್ದರಿಂದ, ಬ್ರೀಚ್ ಲೆವೆಲ್ ಇಂಡೇಕ್ಸ್ 2018ರ ಹಿಂದಿನ ಪಟ್ಟಿಯನ್ನು ವಾಪಸ್ ತೆಗೆದುಕೊಂಡಿದ್ದು, ಹೊಸ ಪಟ್ಟಿಯನ್ನು ಪ್ರಕಟಿಸಲಾಗಿದೆ ಹಾಗೂ ದೋಷವನ್ನು ಸರಿಪಡಿಸಲಾಗಿದೆ ಎಂದು ಹೇಳಿದೆ.

ವಿಷಾದ ವ್ಯಕ್ತಪಡಿಸಿದ ಗೆಮಾಲ್ಟೋ
ಬ್ರೀಚ್ ಲೆವೆಲ್ ಇಂಡೆಕ್ಸ್- 2018ರ ವರದಿಯಲ್ಲಿ ಪರಿಶೀಲಿಸದೇ ಮಾಹಿತಿಯನ್ನು ಬಿಡುಗಡೆ ಮಾಡಿರುವುದು ಮತ್ತು ಮಾಹಿತಿ ಪ್ರಕಟಿಸುವ ಮೊದಲು ಸಾಕಷ್ಟು ಪರಿಶೀಲನೆಯಲ್ಲಿ ತೊಡಗಿಕೊಳ್ಳುವಲ್ಲಿ ವಿಫಲವಾಗಿರುವುದನ್ನು ಗೆಮಾಲ್ಟೋ ತೀವ್ರವಾಗಿ ವಿಷಾದಿಸುತ್ತೇವೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ. ಇದು ತಿಳಿದೇ ಮಾಡಿರುವ ತಪ್ಪಾಗಿದ್ದು, ಭಾರತದ ಪ್ರತಿಷ್ಟಿತ ಗುರುತಿನ ಯೋಜನೆ ಆಧಾರ್‌ನ್ನು ದುರುಪಯೋಗಪಡಿಸಿಕೊಳ್ಳಲು ನಾವೆಂದೂ ಉದ್ದೇಶಿಸಿದ್ದಿಲ್ಲ ಎಂದು ಸಿಇಒ ಹೇಳಿದ್ದಾರೆ.


Click it and Unblock the Notifications