Aditya-L1 Mission: ಇತಿಹಾಸ ಸೃಷ್ಟಿಸಿದ ಇಸ್ರೋ: ನಿಗದಿತ ಕಕ್ಷೆ ತಲುಪಿದ ಆದಿತ್ಯ-ಎಲ್1!
ಇಸ್ರೋ ಸಂಸ್ಥೆಯ ಬಹು ನಿರೀಕ್ಷಿತ ಆದಿತ್ಯ L1 ಬಾಹ್ಯಕಾಶ ನೌಕೆ ನಿಗದಿತ ಕಕ್ಷೆಯನ್ನು ಪ್ರವೇಶಿಸಿದೆ. ಈ ಮೂಲಕ ಸೂರ್ಯ ಶಿಕಾರಿ ಮಾಡಲು ಹೊರಟಿರುವ ಇಸ್ರೋ ಯೋಜನೆಗೆ ಯಶಸ್ಸು ಸಿಕ್ಕಂತಾಗಿದೆ. ಚಂದ್ರನ ಅಂಗಳದಲ್ಲಿ ಯಶಸ್ವಿಯಾಗಿ ನೌಕೆ ಇಳಿಸಿದ್ದ ಇಸ್ರೋ ಇದೀಗ ಸೂರ್ಯನ ಮೇಲ್ಮೈ ಅನ್ನು ಸಂಶೋಧಿಸುವ ಪ್ರಯತ್ನದಲ್ಲಿ ಸಫಲತೆಯ ಸೂಚನೆ ನೀಡಿದೆ.
ಹೌದು, ಇಸ್ರೋದ ಆದಿತ್ಯ-ಎಲ್ 1 (Aditya-L1 Mission)ಬಾಹ್ಯಾಕಾಶ ನೌಕೆಯು ತನ್ನ ಅಂತಿಮ ಗಮ್ಯಸ್ಥಾನ ಕಕ್ಷೆಯನ್ನು ಸೇರಿದೆ. ಸೂರ್ಯನನ್ನು ಅಧ್ಯಯನ ಮಾಡುವ ಮೊದಲ ಇಸ್ರೋ ಗುರುತಿಸಿದ್ದ ಹಾಲೋ ಕಕ್ಷೆಯನ್ನು ಸೇರಿದೆ. ಇದು ಭೂಮಿಯಿಂದ ಸುಮಾರು 1.5 ಮಿಲಿಯನ್ ಕಿಲೋಮೀಟರ್ ದೂರದಲ್ಲಿದ್ದು, ಸೂರ್ಯ-ಭೂಮಿಯ ವ್ಯವಸ್ಥೆಯ ಲ್ಯಾಗ್ರೇಂಜ್ ಪಾಯಿಂಟ್ 1 ಎಂದು ಗುರುತಿಸಲಾಗಿದೆ. ಹಾಗಾದ್ರೆ ಆದಿತ್ಯ-ಎಲ್ 1 ಯೋಜನೆಯ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಆದಿತ್ಯ-ಎಲ್ 1 ನೌಕೆ ಯಶಸ್ವಿಯಾಗಿ L1 ಪಾಯಿಂಟ್ ಪ್ರವೇಶಿಸಿದೆ. ಈ ಮೂಲಕ ಸೂರ್ಯ ಶಿಕಾರಿಯಲ್ಲಿಯು ಇಸ್ರೋ ಯಶಸ್ಸು ಸಾಧಿಸಿದೆ. ಇನ್ಮುಂದೆ ಸೂರ್ಯನ ಕುರಿತು ಸಂಶೋಧನೆ ನಡೆಸುವ ಆದಿತ್ಯ-ಎಲ್ 1 ನಿಂದ ಏನೆಲ್ಲಾ ಅಚ್ಚರಿಯ ಮಾಹಿತಿ ಸಿಗಲಿದೆ ಎಂಬ ಕುತೂಹಲ ಗರಿಗೆದರಿದೆ. ಸದ್ಯ ಆದಿತ್ಯ-ಎಲ್ 1 ಪ್ರವೇಶಿಸಿರುವ ಎಲ್ 1 ಪಾಯಿಂಟ್ ಭೂಮಿ ಮತ್ತು ಸೂರ್ಯ ವ್ಯವಸ್ಥೆಯ ಲ್ಯಾಗ್ರೇಂಜ್ ಪಾಯಿಂಟ್ ಸೂರ್ಯ ಹಾಗೂ ಭೂಮಿ ನಡುವೆ ಇರುವ ಒಟ್ಟು ಅಂತರದ ಶೇಕಡಾ ಒಂದು ಭಾಗವಾಗಿದೆ. ಈ ಹಂತದಲ್ಲಿ ಇಸ್ರೋ ಸೂರ್ಯನ ಮೇಲ್ಮೈ ಅನ್ನು ಅಧ್ಯಯನ ನಡೆಸುವುದಕ್ಕೆ ಸೂಕ್ತವಾಗಿದೆ ಎಂದು ಇಸ್ರೋ ಹೇಳಿದೆ.
ಆದಿತ್ಯ L1 ಮಿಷನ್ ಪ್ರಯೋಜನಗಳೇನು?
ಆದಿತ್ಯ L1 ನೌಕೆ L1 ಪಾಯಿಂಟ್ ಸೇರಿರುವುದು ಕೇವಲ ಇಸ್ರೋದ ತಾಂತ್ರಿಕತೆಯ ಸಾಧನೆಯಲ್ಲ. ಬದಲಿಗೆ ನಾವು ಸೂರ್ಯನ ಬಗ್ಗೆ ಅಧ್ಯಯನ ನಡೆಸುವುದಕ್ಕೆ ವೈಜ್ಞಾನಿಕ ಪುರಾವೆಗಳನ್ನು ನೀಡಲಿದೆ. ಸೌರ ಬಿರುಗಾಳಿಗಳು ಮತ್ತು ಜ್ವಾಲೆಗಳು ಸೇರಿದಂತೆ ಸೂರ್ಯನ ಚಟುವಟಿಕೆಗಳ ಬಗ್ಗೆ ಆಳವಾದ ಪರಿಣಾಮಗಳನ್ನು ಬೀರುತ್ತವೆ. ಜೊತೆಗೆ ಭೂಮಿ ಮತ್ತು ಸೂರ್ಯನ ನಡುವೆ ಇರುವ ಬಾಹ್ಯಕಾಶ ಹವಾಮಾನದ ಬಗ್ಗೆ ಅಧ್ಯಯನ ನಡೆಸಲು ಅನುವು ಮಾಡಿಕೊಡಲಿದೆ. ಎಲ್ಲದಕ್ಕಿಂತ ಹೆಚ್ಚಾಗಿ ವಿಜ್ಞಾನಿಗಳಿಗೆ ಸೌರ ಮಾರುತಗಳ ಬಗ್ಗೆ ಹೆಚ್ಚು ನಿಖರವಾಗಿ ಅಧ್ಯಯನ ನಡೆಸಲು ಸಹಾಯ ಮಾಡಲಿದೆ.

ಆದಿತ್ಯ L1 ನೌಕೆಯಲ್ಲಿ ಏನೆಲ್ಲಾ ಇದೆ?
ಆದಿತ್ಯ L1 ನೌಕೆ ಒಟ್ಟು ಏಳು ಪೇಲೋಡ್‌ಗಳನ್ನು ಹೊಂದಿದೆ. ಈ ಪೇಲೋಡ್‌ಗಳು ಸೂರ್ಯನ ವಿವಿಧ ಅಂಶಗಳನ್ನು ಪರೀಕ್ಷಿಸಲು ಸಹಾಯ ಮಾಡಲಿದೆ. ಇದರಲ್ಲಿ ಸೂರ್ಯನ ನೇರಳಾತೀತ ಇಮೇಜಿಂಗ್ ಟೆಲಿಸ್ಕೋಪ್ (SUIT) ಸಹ ಅಳವಡಿಸಲಾಗಿದೆ. ಇದು ಕಳೆದ ವರ್ಷ ಡಿಸೆಂಬರ್‌ನಲ್ಲಿ ಸೂರ್ಯನ ದ್ಯುತಿಗೋಳ ಮತ್ತು ಕ್ರೋಮೋಸ್ಪಿಯರ್ ಅನ್ನು ಪ್ರದರ್ಶಿಸುವ ಮೊದಲ ಚಿತ್ರವನ್ನು ಸಹ ಸೆರೆಹಿಡಿದು ರವಾನಿಸಿದೆ. ಇದರಿಂದ ಈ ಏಳು ಪೇಲೋಡ್‌ಗಳು ಸೂರ್ಯನ ಸುತ್ತ ವಿವಿಧ ಕೋನಗಳಲ್ಲಿ ಅಧ್ಯಯನ ನಡೆಸುವುದಕ್ಕೆ ಸಹಕಾರಿಯಾಗಲಿದೆ.

ಆದಿತ್ಯ-ಎಲ್ 1 ಯಶಸ್ಸು ಮೋದಿ ಟ್ವೀಟ್
ಆದಿತ್ಯ-ಎಲ್ 1 ನೌಕೆ ನಿಗದಿತ ಕಕ್ಷೆ ಸೇರುತ್ತಿದ್ದ ಹಾಗೇ ಪ್ರಧಾನಿ ನರೇಂದ್ರ ಮೋದಿ ಎಕ್ಸ್ (ಟ್ವಿಟರ್)ನಲ್ಲಿ ಪೋಸ್ಟ್ ಮಾಡಿದ್ದಾರೆ. ಭಾರತವು ಮತ್ತೊಂದು ಮೈಲುಗಲ್ಲು ಸಾಧಿಸಿದೆ. ಭಾರತದ ಮೊದಲ ಸೌರ ಮಿಷನ್ ಆದಿತ್ಯ-ಎಲ್1 ತನ್ನ ಗಮ್ಯಸ್ಥಾನವನ್ನು ತಲುಪಿದೆ. ಇದು ಅತ್ಯಂತ ಸಂಕೀರ್ಣ ಮತ್ತು ಸಂಕೀರ್ಣವಾದ ಬಾಹ್ಯಾಕಾಶ ಕಾರ್ಯಾಚರಣೆಗಳ ನಡುವೆ ನಮ್ಮ ವಿಜ್ಞಾನಿಗಳ ನಿರಂತರ ಸಮರ್ಪಣೆಗೆ ಸಾಕ್ಷಿಯಾಗಿದೆ. ಈ ಅಸಾಧಾರಣ ಸಾಧನೆಯನ್ನು ಶ್ಲಾಘಿಸುತ್ತೇನೆ ಎಂದು ಹೇಳಿದ್ದಾರೆ.


Click it and Unblock the Notifications








