ಏರ್‌ಟೆಲ್ ಬಳಕೆದಾರರಿಗೆ ಸಿಹಿಸುದ್ದಿ: AI ಸಹಾಯದಿಂದ ವಂಚನೆಗೆ ಕಡಿವಾಣ!
ದೇಶದಲ್ಲಿ ಹೆಚ್ಚುತ್ತಿರುವ ಆನ್‌ಲೈನ್ ವಂಚನೆಯ ಪ್ರಕರಣಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಭಾರತದ ಪ್ರಮುಖ ಟೆಲಿಕಾಂ ಸೇವೆ ಒದಗಿಸುವ ಸಂಸ್ಥೆ ಭಾರ್ತಿ ಏರ್‌ಟೆಲ್ ಮಹತ್ವದ ಹೆಜ್ಜೆಯಿಟ್ಟಿದೆ. ಸಂಸ್ಥೆಯು ಇತ್ತೀಚೆಗೆ ಸುಧಾರಿತ ವಂಚನೆ ಪತ್ತೆ ಪರಿಹಾರವನ್ನು ಬಿಡುಗಡೆ ಮಾಡಿದ್ದು, ಇದು ತನ್ನ ಬಳಕೆದಾರರನ್ನು ಆನ್‌ಲೈನ್‌ನಲ್ಲಿ ನಡೆಯುವ ವಿವಿಧ ರೀತಿಯ ಮೋಸಗಳಿಂದ ರಕ್ಷಿಸುವ ಗುರಿಯನ್ನು ಹೊಂದಿದೆ. ಈ ನೂತನ ಪರಿಹಾರವು ಕೇವಲ ಸಾಮಾನ್ಯ ವೆಬ್‌ಸೈಟ್‌ಗಳಿಗೆ ಮಾತ್ರ ಸೀಮಿತವಾಗಿರದೆ, ಜನಪ್ರಿಯ ಓಟಿಟಿ (OTT) ಅಪ್ಲಿಕೇಶನ್‌ಗಳು ಹಾಗೂ ವಾಟ್ಸಾಪ್ (WhatsApp), ಇನ್‌ಸ್ಟಾಗ್ರಾಮ್ (Instagram) ಮತ್ತು ಫೇಸ್‌ಬುಕ್ (Facebook)ನಂತಹ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲೂ ಕಾರ್ಯನಿರ್ವಹಿಸಲಿದೆ ಎಂಬುದು ಗಮನಾರ್ಹ. ಇದರ ಮೂಲಕ, ಏರ್‌ಟೆಲ್ ತನ್ನ ಗ್ರಾಹಕರಿಗೆ ಸಮಗ್ರವಾದ ಸುರಕ್ಷತಾ ಕವಚವನ್ನು ಒದಗಿಸಲು ಮುಂದಾಗಿದೆ.
ಏರ್‌ಟೆಲ್ ನೀಡಿರುವ ಮಾಹಿತಿಯ ಪ್ರಕಾರ, ಈ ವಂಚನೆ ಪತ್ತೆ ವ್ಯವಸ್ಥೆಯು ಅತ್ಯಾಧುನಿಕ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವನ್ನು ಆಧರಿಸಿದ ಬಹು-ಹಂತದ ಗುಪ್ತಚರ ವೇದಿಕೆಯಾಗಿದೆ. ಈ ವೇದಿಕೆಯು ತನ್ನ ಬೆದರಿಕೆ ಪತ್ತೆ ಸಾಮರ್ಥ್ಯದ ಮೂಲಕ ಎಲ್ಲಾ ಆನ್‌ಲೈನ್ ವೇದಿಕೆಗಳಲ್ಲಿ ಡೊಮೇನ್ ಫಿಲ್ಟರಿಂಗ್ ಅನ್ನು ನಡೆಸುತ್ತದೆ. ಅಂದರೆ, ಬಳಕೆದಾರರು ಯಾವುದೇ ವೆಬ್‌ಸೈಟ್‌ಗೆ ಭೇಟಿ ನೀಡಲು ಪ್ರಯತ್ನಿಸಿದಾಗ, ಆ ಡೊಮೇನ್ ಹೆಸರನ್ನು ಪರಿಶೀಲಿಸಲಾಗುತ್ತದೆ. ಇದು ಈಗಾಗಲೇ ಗುರುತಿಸಲಾದ ಅಪಾಯಕಾರಿ ವೆಬ್‌ಸೈಟ್‌ಗಳ ಪಟ್ಟಿಯಲ್ಲಿದೆಯೇ ಅಥವಾ ಏರ್‌ಟೆಲ್‌ನ ಭದ್ರತಾ ನೀತಿಗಳನ್ನು ಉಲ್ಲಂಘಿಸುತ್ತಿದೆಯೇ ಎಂಬುದನ್ನು ತಕ್ಷಣವೇ ಪತ್ತೆ ಮಾಡುತ್ತದೆ. ಒಂದು ವೇಳೆ ಯಾವುದೇ ದುರುದ್ದೇಶಪೂರಿತ ಅಂಶಗಳು ಕಂಡುಬಂದರೆ, ಆ ವೆಬ್‌ಸೈಟ್‌ನ ಪುಟ ಲೋಡ್ ಆಗುವುದನ್ನು ತಡೆಹಿಡಿಯಲಾಗುತ್ತದೆ ಮತ್ತು ಬಳಕೆದಾರರನ್ನು ಸಂಭಾವ್ಯ ಅಪಾಯದ ಬಗ್ಗೆ ಮಾಹಿತಿ ನೀಡುವ ಪುಟಕ್ಕೆ ಮರುನಿರ್ದೇಶಿಸಲಾಗುತ್ತದೆ.

ಈ ಕುರಿತು ಮಾತನಾಡಿರುವ ಏರ್‌ಟೆಲ್, ಡಿಜಿಟಲ್ ವೇದಿಕೆಗಳ ಬಳಕೆ ಹೆಚ್ಚಾದಂತೆ ಆನ್‌ಲೈನ್ ವಂಚನೆಯ ಬೆದರಿಕೆಯೂ ಗಣನೀಯವಾಗಿ ಏರಿಕೆಯಾಗಿದೆ ಎಂದು ಅಭಿಪ್ರಾಯಪಟ್ಟಿದೆ. ಮೊದಲೆಲ್ಲಾ ಕೇವಲ ಒಟಿಪಿ (OTP) ವಂಚನೆಗಳು ಮತ್ತು ಮೋಸದ ಕರೆಗಳ ರೂಪದಲ್ಲಿದ್ದ ಸೈಬರ್ ಅಪರಾಧಗಳು ಇಂದು ಜಾಗತಿಕವಾಗಿ ಲಕ್ಷಾಂತರ ಜನರನ್ನು ಗುರಿಯಾಗಿಸುವ ಸಂಕೀರ್ಣ ಸ್ವರೂಪವನ್ನು ಪಡೆದುಕೊಂಡಿವೆ. ಈ ಹೆಚ್ಚುತ್ತಿರುವ ಅಪಾಯವನ್ನು ಮನಗಂಡಿರುವ ಏರ್‌ಟೆಲ್, ತನ್ನ ಗ್ರಾಹಕರ ಹಿತಾಸಕ್ತಿಯನ್ನು ಕಾಪಾಡುವ ಉದ್ದೇಶದಿಂದ ಈ ಮುಂಜಾಗ್ರತಾ ಕ್ರಮವನ್ನು ಕೈಗೊಂಡಿದೆ.ಟೆಲಿಕಾಂ ಸಂಸ್ಥೆಯ ಪ್ರಕಾರ, ಈ ಹೊಸ ಭದ್ರತಾ ಸೇವೆಯು ಇಮೇಲ್‌ಗಳು, ಬ್ರೌಸರ್‌ಗಳು, ಎಸ್ಎಂಎಸ್ (SMS) ಮತ್ತು ವಾಟ್ಸಾಪ್, ಟೆಲಿಗ್ರಾಮ್ (Telegram), ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ನಂತಹ ಜನಪ್ರಿಯ ಓಟಿಟಿ ಅಪ್ಲಿಕೇಶನ್‌ಗಳು ಸೇರಿದಂತೆ ಎಲ್ಲಾ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ನೈಜ ಸಮಯದಲ್ಲಿ ಕಾರ್ಯನಿರ್ವಹಿಸುತ್ತದೆ.
ಪ್ರಸ್ತುತ, ಈ ವಂಚನೆ ಪತ್ತೆ ಪರಿಹಾರವು ಹರಿಯಾಣ ವಲಯದಲ್ಲಿ ಪ್ರಾಯೋಗಿಕವಾಗಿ ಕಾರ್ಯನಿರ್ವಹಿಸುತ್ತಿದ್ದು, ಶೀಘ್ರದಲ್ಲೇ ಇದನ್ನು ರಾಷ್ಟ್ರವ್ಯಾಪಿ ಬಿಡುಗಡೆ ಮಾಡುವ ಯೋಜನೆಯನ್ನು ಏರ್‌ಟೆಲ್ ಹೊಂದಿದೆ. ಇದು ಈ ಹಿಂದೆ ಬಿಡುಗಡೆ ಮಾಡಲಾದ ಸ್ಪ್ಯಾಮ್ ಕರೆಗಳು ಮತ್ತು ಸಂದೇಶಗಳನ್ನು ಪತ್ತೆ ಮಾಡುವ ನೆಟ್‌ವರ್ಕ್ ಆಧಾರಿತ ಕೃತಕ ಬುದ್ಧಿಮತ್ತೆ ಪರಿಹಾರದ ಮುಂದುವರಿದ ಭಾಗವಾಗಿದೆ. ಈ ಹಿಂದಿನ ವ್ಯವಸ್ಥೆಯು ಸ್ಪ್ಯಾಮ್ ಕರೆಗಳು ಮತ್ತು ಎಸ್ಎಂಎಸ್‌ಗಳನ್ನು ಸ್ವಯಂಚಾಲಿತವಾಗಿ ಗುರುತಿಸಿ ಬಳಕೆದಾರರಿಗೆ ಎಚ್ಚರಿಕೆ ನೀಡುತ್ತಿತ್ತು. ಇದೀಗ, ಈ ಎಚ್ಚರಿಕೆಗಳನ್ನು ದೇಶದ ಎಲ್ಲಾ ಬಳಕೆದಾರರಿಗೆ ಇಂಗ್ಲಿಷ್‌ನೊಂದಿಗೆ, ಕನ್ನಡ ಬಂಗಾಳಿ, ಗುಜರಾತಿ, ಹಿಂದಿ, , ಮಲಯಾಳಂ, ಮರಾಠಿ, ಪಂಜಾಬಿ, ತಮಿಳು, ತೆಲುಗು ಮತ್ತು ಉರ್ದು ಸೇರಿದಂತೆ ಹತ್ತು ಪ್ರಾದೇಶಿಕ ಭಾಷೆಗಳಲ್ಲಿಯೂ ನೀಡಲಾಗುವುದು ಎಂದು ಏರ್‌ಟೆಲ್ ತಿಳಿಸಿದೆ. .
ವಿಶೇಷವೆಂದರೆ, ಈ ಸೇವೆಯು ಏರ್‌ಟೆಲ್‌ನ ಎಲ್ಲಾ ಮೊಬೈಲ್ ಮತ್ತು ಬ್ರಾಡ್‌ಬ್ಯಾಂಡ್ ಗ್ರಾಹಕರಿಗೆ ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಲಭ್ಯವಾಗಲಿದೆ ಮತ್ತು ಇದು ಸ್ವಯಂಚಾಲಿತವಾಗಿ ಸಕ್ರಿಯಗೊಳ್ಳಲಿದೆ ಎಂದು ಕಂಪೆನಿ ತಿಳಿಸಿದ್ದು, ಏರ್‌ಟೆಲ್‌ನ ಈ ಕ್ರಮವು ತನ್ನ ಗ್ರಾಹಕರನ್ನು ಡಿಜಿಟಲ್ ವಂಚನೆಯಿಂದ ರಕ್ಷಿಸುವಲ್ಲಿ ಒಂದು ಮಹತ್ವದ ಮೈಲಿಗಲ್ಲಾಗಿದ್ದು, ಸೈಬರ್ ಸುರಕ್ಷತೆಗೆ ಸಂಸ್ಥೆಯ ಬದ್ಧತೆಯನ್ನು ತೋರಿಸುತ್ತದೆ ಎಂದು ಹೇಳಬಹುದು. ಈ ಕುರಿತಂತೆ ನಿಮ್ಮ ಅಭಿಪ್ರಾಯ ಏನು ಎಂಬುದನ್ನು ಈ ಕೆಳಗೆ ಕಾಮೆಂಟ್ ಮಾಡಿ ತಿಳಿಸಿ.


Click it and Unblock the Notifications








