189 ದೇಶಗಳಲ್ಲಿ ಅನ್‌ಲಿಮಿಟೆಡ್ ಡೇಟಾ: ಏರ್‌ಟೆಲ್‌ನಿಂದ 2 ಹೊಸ ರೋಮಿಂಗ್ ಪ್ಲಾನ್ಸ್!
ಭಾರತದ ಪ್ರಮುಖ ಟೆಲಿಕಾಂ ಸಂಸ್ಥೆ ಏರ್‌ಟೆಲ್, ತನ್ನ ಪೋಸ್ಟ್‌ಪೇಯ್ಡ್ ಬಳಕೆದಾರರಿಗಾಗಿ ಎರಡು ಹೊಸ ಅಂತರರಾಷ್ಟ್ರೀಯ ರೋಮಿಂಗ್ ಯೋಜನೆಗಳನ್ನು ಪರಿಚಯಿಸಿದೆ. ಈ ನೂತನ ಯೋಜನೆಗಳು 10 ದಿನಗಳು ಮತ್ತು 30 ದಿನಗಳ ಅವಧಿಯ ಆಯ್ಕೆಗಳೊಂದಿಗೆ ಲಭ್ಯವಿದ್ದು, 189 ದೇಶಗಳಲ್ಲಿ ಧ್ವನಿ ಕರೆಗಳು ಮತ್ತು ಅನ್‌ಲಿಮಿಟೆಡ್ ಡೇಟಾ ಸೇವೆಗಳನ್ನು ಒದಗಿಸಲಿವೆ. ಈ ಹೊಸ ರೀಚಾರ್ಜ್ ಪ್ಲ್ಯಾನ್‌ಗಳು ಅಂತರರಾಷ್ಟ್ರೀಯ ಪ್ರಯಾಣ ಮಾಡುವ ಏರ್‌ಟೆಲ್ ಬಳಕೆದಾರರಿಗೆ ಹೆಚ್ಚಿನ ಅನುಕೂಲವನ್ನು ಕಲ್ಪಿಸುವ ಗುರಿಯನ್ನು ಹೊಂದಿದೆ.ಈ ಕುರಿತಂತೆ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ ಬನ್ನಿ.
ಏರ್‌ಟೆಲ್‌ನ ಅಧಿಕೃತ ವೆಬ್‌ಸೈಟ್‌ನಲ್ಲಿ ಈ ಯೋಜನೆಗಳ ವಿವರಗಳನ್ನು ಪ್ರಕಟಿಸಲಾಗಿದೆ. ಟೆಕ್ ವಲಯದ ಮಾಹಿತಿ ನೀಡುವ ತಜ್ಞರಾದ ಮುಕುಲ್ ಶರ್ಮಾ (@stufflistings) ಅವರು ಈ ಕುರಿತು ಮೊದಲು ಬೆಳಕು ಚೆಲ್ಲಿದ್ದಾರೆ. ಈ ಹೊಸ ಯೋಜನೆಗಳ ಬೆಲೆಗಳು ಕ್ರಮವಾಗಿ ರೂ. 2,999 ಮತ್ತು ರೂ. 3,999 ಆಗಿದ್ದು, ಇವುಗಳು ಕ್ರಮವಾಗಿ 10 ದಿನಗಳು ಮತ್ತು 30 ದಿನಗಳವರೆಗೆ ಚಾಲ್ತಿಯಲ್ಲಿರುತ್ತವೆ. ಗಮನಾರ್ಹ ಅಂಶವೆಂದರೆ, ಈ ಎರಡೂ ಯೋಜನೆಗಳು ಅನಿಯಮಿತ ಡೇಟಾ ಬಳಕೆಯನ್ನು ಬೆಂಬಲಿಸುತ್ತವೆ ಎಂದು ಏರ್‌ಟೆಲ್ ತಿಳಿಸಿದೆ.
ಏರ್‌ಟೆಲ್‌ನ ರೂ. 2,999 ಮತ್ತು ರೂ. 3,999 ರ ಈ ಎರಡೂ ಹೊಸ ಯೋಜನೆಗಳು ಬಳಕೆದಾರರಿಗೆ ದಿನದ 24 ಗಂಟೆಯೂ ಒಳಬರುವ ಮತ್ತು ಹೊರಹೋಗುವ ಕರೆಗಳನ್ನು ಆನಂದಿಸಲು ಅವಕಾಶ ನೀಡುತ್ತವೆ. ಇದರೊಂದಿಗೆ, ಪ್ರತಿ ದಿನ 100 ನಿಮಿಷಗಳ ಉಚಿತ ಕರೆಗಳನ್ನು ಸಹ ನೀಡಲಾಗುತ್ತದೆ. ವಿಶೇಷವಾಗಿ ರೂ. 3,999 ರ ಯೋಜನೆಯು ವಿಮಾನದಲ್ಲಿ ಪ್ರಯಾಣಿಸುವಾಗಲೂ ನೆಟ್‌ವರ್ಕ್ ಸೌಲಭ್ಯಗಳನ್ನು ಪಡೆಯುವ ಅವಕಾಶವನ್ನು ನೀಡುತ್ತದೆ. ಈ ಸೌಲಭ್ಯವು 24 ಗಂಟೆಗಳವರೆಗೆ ಮಾನ್ಯವಾಗಿದ್ದು, 100 ನಿಮಿಷಗಳ ಹೊರಹೋಗುವ ಕರೆಗಳು, 100 ಉಚಿತ ಎಸ್ಎಂಎಸ್ ಮತ್ತು 250MB ಡೇಟಾವನ್ನು ಒಳಗೊಂಡಿದೆ.

ಏರ್‌ಟೆಲ್ ತನ್ನ ಬಳಕೆದಾರರಿಗೆ ರೋಮಿಂಗ್ ಸೇವೆಗಳನ್ನು ಸುಲಭಗೊಳಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಿಟ್ಟಿದೆ. ಈ ಹೊಸ ಅಂತರರಾಷ್ಟ್ರೀಯ ರೋಮಿಂಗ್ ಯೋಜನೆಗಳನ್ನು ಬಳಸುವ ಪೋಸ್ಟ್‌ಪೇಯ್ಡ್ ಗ್ರಾಹಕರು ವಿದೇಶದಲ್ಲಿ ರೋಮಿಂಗ್ ಪ್ರಯೋಜನಗಳನ್ನು ಪಡೆಯಲು ತಮ್ಮ ಸಿಮ್ ಕಾರ್ಡ್‌ಗಳನ್ನು ಬದಲಾಯಿಸುವ ಅಗತ್ಯವಿರುವುದಿಲ್ಲ. ಬಳಕೆದಾರರು ತಾವು ತಲುಪಬೇಕಾದ ವಿದೇಶಕ್ಕೆ ಬಂದ ತಕ್ಷಣ ಈ ಯೋಜನೆಗಳು ಸ್ವಯಂಚಾಲಿತವಾಗಿ ಸಕ್ರಿಯಗೊಳ್ಳುತ್ತವೆ ಎಂದು ಕಂಪನಿಯು ಸ್ಪಷ್ಟಪಡಿಸಿದೆ. ಇದರಿಂದ ವಿದೇಶಕ್ಕೆ ಹೆಚ್ಚು ಪ್ರಯಾಣಿಸುವ ಗ್ರಾಹಕರಿಗೆ ಹೆಚ್ಚು ಲಾಭದಾಯಕವಾಗಲಿದೆ.
ಇತ್ತೀಚೆಗೆ, ಏರ್‌ಟೆಲ್‌ನ ಪ್ರಮುಖ ಸ್ಪರ್ಧಿ ವೊಡಾಫೋನ್ ಐಡಿಯಾ (Vi) ಸಹ ಗಲ್ಫ್ ರಾಷ್ಟ್ರಗಳಿಗಾಗಿ ಪ್ರಿಪೇಯ್ಡ್ ಮತ್ತು ಪೋಸ್ಟ್‌ಪೇಯ್ಡ್ ಬಳಕೆದಾರರಿಗೆ ಅಂತರರಾಷ್ಟ್ರೀಯ ರೋಮಿಂಗ್ ಪ್ಯಾಕ್‌ಗಳನ್ನು ಪರಿಚಯಿಸಿತ್ತು. ಈ ಪ್ಯಾಕ್‌ಗಳು ಸೌದಿ ಅರೇಬಿಯಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ನಲ್ಲಿ ಲಭ್ಯವಿದ್ದು, 20 ಮತ್ತು 40 ದಿನಗಳ ಮಾನ್ಯತೆಯ ಅವಧಿಯನ್ನು ಹೊಂದಿವೆ. ಇದೇ ಮಾದರಿಯನ್ನು ಏರ್‌ಟೆಲ್ ಗಮನಿಸಿದೆ ಮತ್ತು ಅದೇ ವಿಧವಾಗಿ ರೀಚಾರ್ಜ್ ಪ್ಲಾನ್‌ಗಳನ್ನು ಬಿಡುಗಡೆ ಮಾಡಿರುವ ಸಾಧ್ಯತೆ ಇದೆ.
ಒಟ್ಟಾರೆಯಾಗಿ, ಏರ್‌ಟೆಲ್‌ನ ಈ ಹೊಸ ಅಂತರರಾಷ್ಟ್ರೀಯ ರೋಮಿಂಗ್ ಯೋಜನೆಗಳು ವಿದೇಶ ಪ್ರಯಾಣಿಕರಿಗೆ ಅನುಕೂಲಕರ ಮತ್ತು ವೆಚ್ಚ-ಪರಿಣಾಮಕಾರಿ ಆಯ್ಕೆಗಳನ್ನು ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿವೆ ಎನ್ನಬಹುದು. ಅನಿಯಮಿತ ಡೇಟಾ ಮತ್ತು ವಿಮಾನದಲ್ಲಿಯೂ ಸಹ ಸಂಪರ್ಕದಲ್ಲಿರುವ ಸೌಲಭ್ಯವು ಏರ್‌ಟೆಲ್ ಬಳಕೆದಾರರಿಗೆ ಹೆಚ್ಚಿನ ಅನುಕೂಲವನ್ನು ನೀಡುತ್ತದೆ ಎಂಬುದರಲ್ಲಿ ಸಂದೇಹವಿಲ್ಲ. ಈ ಬಗ್ಗೆ ನಿಮ್ಮ ಅನಿಸಿಕೆ ಏನು ಎಂಬುದನ್ನು ಈ ಕೆಳಗೆ ಕಾಮೆಂಟ್ ಮಾಡುವ ಮೂಲಕ ತಿಳಿಸಿ. ಮತ್ತು ಕನ್ನಡ ಗಿಜ್‌ಬಾಟ್‌ನಲ್ಲಿ ಯಾವಾಗಲೂ ಲೈವ್ ಆಗಿರಿ.


Click it and Unblock the Notifications








