ಯಾರ ಪಾಲಾಗುತ್ತೆ 5G..? ಏರ್‌ಟೆಲ್, ಜಿಯೋ ನಡುವೆ ಮತ್ತೆ ಜಂಗಿಕುಸ್ತಿ..!
ನಿಮಗೆಲ್ಲಾ ಗೊತ್ತೆ ಇದೆ..! ಭಾರತದಲ್ಲಿ 4G ನೆಟ್‌ವರ್ಕ್ ಅಕ್ಷರಶಃ ಕ್ರಾಂತಿಯನ್ನೇ ಸೃಷ್ಟಿಸಿದೆ. ಡಿಜಿಟಲ್ ಇಂಡಿಯಾ, ಕ್ಯಾಶ್‌ಲೆಸ್ ಇಂಡಿಯಾಗೆ 4G ನೆಟ್‌ವರ್ಕ್ ಹೊಸ ಹಾದಿಯನ್ನೇ ತೋರಿಸಿದೆ. ಈಗ ಭಾರತದಲ್ಲಿ 4Gಯ ಮುಂದುವರಿದ ಆವೃತ್ತಿ 5G ನೆಟ್‌ವರ್ಕ್ ಮತ್ತೆ ಮುನ್ನೇಲೆಗೆ ಬಂದಿದೆ. ಸದ್ಯ ಭಾರತೀಯ ಟೆಲಿಕಾಂ ಜಗತ್ತಿನಲ್ಲಿ 5G ತರಂಗಾಂತರದ ಬಗ್ಗೆಯೇ ವ್ಯಾಪಕ ಚರ್ಚೆ ನಡೆಯುತ್ತಿದೆ. ಭರತಖಂಡಕ್ಕೆ ಮೊದಲು 5G ನೆಟ್‌ವರ್ಕ್‌ನ್ನು ಪರಿಚಯಿಸುವವರು ಯಾರು ಎಂಬುದರ ಬಗ್ಗೆ ತಂತ್ರಜ್ಞಾನ ಲೋಕದಲ್ಲಿ ಭಾರಿ ಕುತೂಹಲ ಮೂಡಿಸಿದೆ.

ಹೌದು, ಭಾರತ ಸರ್ಕಾರ ಈಗ 5G ತರಂಗಾಂತರಗಳ ಮಾರಾಟಕ್ಕೆ ಮುಂದಾಗಿದೆ. ಏರ್‌ಟೆಲ್, ವೊಡಾಫೋನ್-ಐಡಿಯಾ, ರಿಲಾಯನ್ಸ್ ಜಿಯೋ ಮಧ್ಯೆ 5G ನೆಟ್‌ವರ್ಕ್ ಖರೀದಿಗಾಗಿ ಭಾರೀ ಪೈಪೋಟಿ ಶುರುವಾಗಿದೆ. ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್ ಕೂಡ 5G ತರಂಗಾಂತರ ಖರೀದಿಗೆ ಆಸಕ್ತಿ ತೋರಿಸಿರುವುದು ಮಾರುಕಟ್ಟೆಯ ಸ್ಪರ್ಧಾತ್ಮಕತೆಯನ್ನು ತೋರಿಸುತ್ತಿದೆ. ಇದು ಕೇವಲ ನಮ್ಮ ದೇಶವಷ್ಟೇ ಅಲ್ಲದೇ, ಅಮೆರಿಕ ಮತ್ತು ಚೀನಾದಲ್ಲೂ ಕೂಡ 5G ತರಂಗಾಂತರ ಖರೀದಿಯಲ್ಲಿ ತುರುಸಿನ ಸ್ಪರ್ಧೆ ಕಾಣುತ್ತಿದೆ.
ಇಷ್ಟೆಲ್ಲಾ ಸ್ಪರ್ಧೆ, ಕೌತುಕಕ್ಕೆ ಕಾರಣವಾಗಿರುವ 5G ಭಾರತದಲ್ಲಿ ಹೇಗೆ ಕಾರ್ಯನಿರ್ವಹಿಸಲಿದೆ, ಯಾವೆಲ್ಲಾ ವಿಶೇಷತೆಗಳನ್ನು ಹೊಂದಿದೆ, 4G ಮತ್ತು 5G ನಡುವಿನ ವ್ಯತ್ಯಾಸದ ಬಗ್ಗೆ ಒಂದಿಷ್ಟು ಮಾಹಿತಿಯನ್ನು ಮುಂದೆ ತಿಳಿಯೋಣ..

5G ತಂತ್ರಜ್ಞಾನ ಎಂದರೇನು..?
5G ಅಥವಾ 5ನೇ ಜನರೇಷನ್ ತಂತ್ರಜ್ಞಾನ ಅತಿ ವೇಗದ ಡೌನ್‌ಲೋಡ್ ಮತ್ತು ವೇಗದ ಅಪ್‌ಲೋಡ್ ಸೇವೆಯನ್ನು ನೀಡುವ ಮೊಬೈಲ್ ಇಂಟರ್‌ನೆಟ್ ಸಂಪರ್ಕ ಸೇವೆಯಾಗಿದೆ. 5G ನೆಟ್‌ವರ್ಕ್ ಅನ್ನು ಸದ್ಯ ಇರುವ ನೆಟ್‌ವರ್ಕ್‌ಗಳಲ್ಲಿಯೇ ನಿರ್ಮಿಸಲಾಗುತ್ತದೆ. ಅಂದ್ರೆ (LTE 4G) ನೆಟ್‌ವರ್ಕ್‌ಗಳನ್ನು 3 ರೀತಿಯಲ್ಲಿ ಉನ್ನತೀಕರಿಸಬೇಕಾಗುತ್ತದೆ. ನೆಟ್‌ವರ್ಕ್ ರೆಸ್ಪಾನ್ಸ್‌ನಲ್ಲಿ ಕಡಿಮೆ ವ್ಯತ್ಯಯ, ಅಲ್ಪ ಪ್ರಮಾಣದ ಬ್ಯಾಟರಿ ಬಳಕೆ ಮತ್ತು ಹೆಚ್ಚಿನ ಪ್ರಮಾಣದ ಡಾಟಾ ವರ್ಗಾವಣೆ ಮಾಡಲು ಅತಿವೇಗದ ನೆಟ್‌ವರ್ಕ್ ಅನ್ನು 5G ತಂತ್ರಜ್ಞಾನ ನೀಡುತ್ತದೆ.

ಅತಿ ವೇಗ ಅಂದ್ರೇ ಎಷ್ಟು..?
5G ನೆಟ್‌ವರ್ಕ್ ವೇಗದ ಇಂಟರ್‌ನೆಟ್ ನೀಡುತ್ತೆ ಎಂಬುದು ಎಲ್ಲರಿಗೂ ಗೊತ್ತಿರೋ ವಿಷಯ. 5G ಅಂದ್ಮೇಲೆ 4Gಗಿಂತಲೂ ವೇಗದ ನೆಟ್‌ವರ್ಕ್ ಹೊಂದಿರುವುದು ಸರ್ವೇ ಸಾಮಾನ್ಯ. ಆದರೆ, 5G ನೆಟ್‌ವರ್ಕ್ 10,000 Mbps ವೇಗದಲ್ಲಿ ನಮಗೆ ಇಂಟರ್‌ನೆಟ್ ನೀಡುವ ಅಂದಾಜಿದೆ. ಅದಲ್ಲದೇ ಉತ್ತಮ ಸಂಪರ್ಕ ಸೇವೆಗೆ 5G ಹೆಸರಾಗಿದೆ.

5G VS 4G VS 3G
5G ಮತ್ತು 4G ಹಾಗೂ 3G ನೆಟ್‌ವರ್ಕ್ ಹೋಲಿಕೆ ಮಾಡಿ ನೋಡಿದ್ರೆ.. 5G ನೆಟ್‌ವರ್ಕ್ 4Gಗಿಂತ ಹತ್ತು ಪಟ್ಟು ಹೆಚ್ಚಿನ ವೇಗ ಹೊಂದಿದೆ. ಇನ್ನು 3G ನೆಟ್‌ವರ್ಕ್‌ಗೆ 5G ನೆಟ್‌ವರ್ಕ್ ಅನ್ನು ಹೋಲಿಕೆ ಮಾಡಲು ಸಾಧ್ಯವೇ ಇಲ್ಲ. ಅಷ್ಟರ ಮಟ್ಟಿಗೆ 5G ನೆಟ್‌ವರ್ಕ್ ವೇಗವನ್ನು ಹೊಂದಿದೆ.
5G - 10,000 Mbps
4G (LTE) - 1,000 Mbps
3G - 3.1 Mbps

ನೆಟ್‌ವರ್ಕ್‌ನ ಬೆಳವಣಿಗೆ ಹೇಗಾಯ್ತು..?
ತಂತ್ರಜ್ಞಾನ ಜಗತ್ತು ದಿನದಿಂದ ದಿನಕ್ಕೆ, ಕ್ಷಣದಿಂದ ಕ್ಷಣಕ್ಕೆ ಬದಲಾಗ್ತಾನೆ ಇದೆ. ಅದರಂತೆ ಮೊಬೈಲ್ ನೆಟ್‌ವರ್ಕ್ ಕೂಡ ಅನೇಕ ಬದಲಾವಣೆಗಳನ್ನು ಕಂಡು 1G ಯಿಂದ 5Gವರೆಗೆ ಬಂದು ನಿಂತಿದೆ. ಹೇಗಿತ್ತು ಮೊಬೈಲ್ ನೆಟ್‌ವರ್ಕ್ ಬೆಳವಣಿಗೆ ಮುಂದೆ ನೋಡಿ.
1G - ವಾಯ್ಸ್ ಕಾಲ್ಸ್
2G - ಟೆಕ್ಸ್ಟ್ ಮೆಸೇಜ್‌ಸ್
3G - ಇಂಟರ್‌ನೆಟ್
4G (LTE) - ವಿಡಿಯೋ
5G - ಸ್ಮಾರ್ಟ್‌ಫೋನ್, 40 ಸೆಕೆಂಡ್‌ಗಳಲ್ಲಿ ಸಿನಿಮಾ ಡೌನ್‌ಲೋಡ್ ಮಾಡಿಕೊಳ್ಳಬಹುದಾದ ವೇಗ.

ಇನ್ನು 100 ದಿನ ಮಾತ್ರ ಬಾಕಿ..!
ಭಾರತದಲ್ಲಿ 5G ನೆಟ್‌ವರ್ಕ್ ಪರೀಕ್ಷಾರ್ಥ ಸೇವೆಯನ್ನು ಪ್ರಾರಂಭಿಸಲು ಕೇವಲ ನೂರೇ ನೂರು ದಿನ ಬಾಕಿಯಿದೆ, ಇತ್ತೀಚೆಗಷ್ಟೇ ನೂತನ ಕೇಂದ್ರ ಮಾಹಿತಿ ಮತ್ತು ಸಂವಹನ ಸಚಿವರಾಗಿರುವ ರವಿಶಂಕರ್ ಪ್ರಸಾದ್ ಹೇಳಿದಂತೆ ಭಾರತದಲ್ಲಿ ಕೇಲವೆ ದಿನಗಳಲ್ಲಿ 5G ನೆಟ್‌ವರ್ಕ್ ಗ್ರಾಹಕರ ಬಳಕೆಗೆ ದೊರೆಯುತ್ತದೆ.

ಏರ್‌ಟೆಲ್ VS ವೊಡಾಫೋನ್ - ಐಡಿಯಾ VS ಜಿಯೋ
5G ತರಂಗಾಂತರ ಹಂಚಿಕೆಯಿಂದ ದೇಶದ ಟೆಲಿಕಾಂ ಉದ್ಯಮದಲ್ಲಿ ಮತ್ತೆ ಬಿರುಕನ್ನು ಮೂಡಿಸಿದೆ. ಹೌದು, ಕೇಂದ್ರ ಸರ್ಕಾರ 2019ರಲ್ಲಿ 4G ಮತ್ತು 5G ತರಂಗಾಂತರ ಹಂಚಿಕೆಯ ಹರಾಜನ್ನು ನಿಗದಿಪಡಿಸಿದೆ. ಆದರೆ, ತರಂಗಾಂತರಗಳ ಬೆಲೆಯಲ್ಲಿ ಯಾವುದೇ ರೀತಿಯ ಕಡಿತವನ್ನು ಸರ್ಕಾರ ಮಾಡಿಲ್ಲ. ಈ ಹಿನ್ನೆಲೆಯಲ್ಲಿ ಟೆಲಿಕಾಂ ಆಪರೇಟರ್‌ಗಳು ಸರ್ಕಾರಕ್ಕೆ ದರ ಕಡಿಮೆ ಮಾಡುವಂತೆ ಮನವಿ ಸಲ್ಲಿಸಿದ್ದವು. ಏರ್‌ಟೆಲ್ ಮತ್ತು ವೊಡಾಫೋನ್ - ಐಡಿಯಾ ಸರ್ಕಾರದ ನೀತಿಯನ್ನು ಖಂಡಿಸಿದ್ದು, ಬೆಲೆ ಅತಿ ಹೆಚ್ಚಾಗಿದೆ ಎಂದಿವೆ. ಇನ್ನು ಜಿಯೋ ಕೂಡ ದರ ಕಡಿಮೆ ಮಾಡುವಂತೆ ಸರ್ಕಾರಕ್ಕೆ ಕೇಳಿಕೊಂಡಿದೆ.

ಭಾರತದಲ್ಲಿ 5Gಗೆ ದೊಡ್ಡ ಸವಾಲು..!
ಭಾರತದಲ್ಲಿ 5G ನೆಟ್‌ವರ್ಕ್ ಆರಂಭಕ್ಕೂ ಮುನ್ನ ದೊಡ್ಡ ದೊಡ್ಡ ಸವಾಲುಗಳೇ ಎದುರಾಗುತ್ತಿವೆ. ಹುವಾಯಿ ಕಂಪನಿ ಸದ್ಯ 5G ಉತ್ಪನ್ನಗಳ ತಯಾರಿಕೆಯಲ್ಲಿ ಮುಂಚೂಣಿಯಲ್ಲಿದೆ. ಆದರೆ, ಅಮೆರಿಕ ಹುವಾಯಿ ಕಂಪನಿಯನ್ನು 5G ಕಾರ್ಯಗಳಿಂದ ಎಲ್ಲಾ ದೇಶಗಳು ನಿಷೇಧಿಸಬೇಕು ಎಂದು ಪಟ್ಟು ಹಿಡಿದಿದೆ. ಈ ಬಗ್ಗೆ ಭಾರತ ಇದುವರೆಗೂ ಅಧಿಕೃತವಾಗಿ ಯಾವುದೇ ತೀರ್ಮಾನವನ್ನು ತೆಗೆದುಕೊಂಡಿಲ್ಲ. ಇದು ಒಂದೇಡೆಯಾದ್ರೆ. ಮತ್ತೊಂದೆಡೆ ತರಂಗಾಂತರ ಖರೀದಿಗೆ ಭಾರಿ ಬೆಲೆಯನ್ನು ಸರ್ಕಾರ ನಿಗದಿಪಡಿಸಿರುವುದು ಕೂಡ ಆರಂಭದಲ್ಲಿಯೇ ವಿಘ್ನ ಎಂಬಂತಾಗಿದೆ. 5G ತರಂಗಾಂತರಕ್ಕೆ ಸರ್ಕಾರ ನಿಗದಿಪಡಿಸಿದ ಬೆಲೆ ಗ್ರಾಹಕರಿಗೆ 5G ಸೇವೆಯನ್ನು ಕೈಗೆಟುಕವಂತೆ ನೀಡಲಾಗಲ್ಲ ಎಂದು ಏರ್‌ಟೆಲ್ ಇಂಡಿಯಾ ಸಿಇಒ ಈಗಾಗಲೇ ಹೇಳಿದ್ದಾರೆ.

5G ಬಂದ್ರೆ ಉಪಯೋಗ ಏನು..?
ಸದ್ಯ ಇರೋ 4Gನೇ ಸಾಕಪ್ಪ ಮತ್ಯಾಕ್ 5G ಅಂತಾ ಬಹಳಷ್ಟು ಜನ ಮೂಗು ಮುರೀತಾರೆ. ಆದರೆ, 5G ನೆಟ್‌ವರ್ಕ್ ಬಂದ್ರೆ ರಾಷ್ಟ್ರದಲ್ಲಿ ಒಂದಿಷ್ಟು ಅಮೂಲಾಗ್ರ ಬದಲಾವಣೆಗಳಾಗುವುದು ಖಂಡಿತ. ಸಾರಿಗೆ, ಆರೋಗ್ಯ, ಸ್ಮಾರ್ಟ್‌ಸಿಟಿ, ಸ್ಮಾರ್ಟ್‌ಫೋನ್ ಮತ್ತಿತರ ಕ್ಷೇತ್ರಗಳು ಮತ್ತಷ್ಟು ಆಧುನೀಕತೆಗೆ ತೆರೆದುಕೊಳ್ಳುತ್ತವೆ. ನಿಮ್ಮ ಸ್ಮಾರ್ಟ್‌ಫೋನ್‌ನಿಂದ ಮನೆಯ ಎಲ್ಲಾ ವಸ್ತುಗಳನ್ನು ನಿಯಂತ್ರಿಸಬಹುದು. ಅದಲ್ಲದೇ ಸ್ಮಾರ್ಟ್‌ಸಿಟಿ ಮತ್ತು ರೋಬೋಟಿಕ್ ಕಾರ್‌ಗಳು ವಾಸ್ತವ ರೂಪ ಪಡೆಯೋ ಸಾಧ್ಯತೆ ಕೂಡ ಇದೆ.

ನೆಟ್‌ವರ್ಕ್ ಏನೋ ಬರ್ತಿದೆ..! 5G ಸ್ಮಾರ್ಟ್‌ಫೋನ್ ಬರಬೇಕಲ್ಲ..!
ಭಾರತದಲ್ಲಿ 5G ನೆಟ್‌ವರ್ಕ್ ಬರ್ತಿದೆ. ಆದ್ರೆ 5G ನೆಟ್‌ವರ್ಕ್ ಬೆಂಬಲಿಸೋ ಸ್ಮಾರ್ಟ್‌ಫೋನ್ ಬರಬೇಕಲ್ಲ. 5G ಸ್ಮಾರ್ಟ್‌ಫೋನ್ ಬಿಡುಗಡೆಗೆ ಕೆಲವು ದಿನ ಕಾಯಲೇಬೇಕು. ಸ್ಯಾಮ್‌ಸಂಗ್ ಮತ್ತು ಹುವಾಯಿ ಎರಡು ಕಂಪನಿಗಳು 5G ಸ್ಮಾರ್ಟ್‌ಫೋನ್‌ಗಳನ್ನು ಲಾಂಚ್ ಮಾಡಿವೆ. ಆದರೆ, ಕೆಲವು ಕಾರಣಾಂತರಗಳಿಂದ ಈ ಫೋನ್‌ಗಳು ಭಾರತದಲ್ಲಿ ಬಿಡುಗಡೆಯಾಗಲು ಇನ್ನು ಸಮಯ ಬೇಕು. ಈ ವರ್ಷಾರಂಭದಲ್ಲಿ ಒನ್‌ಪ್ಲಸ್ ಮತ್ತು ಶಿಯೋಮಿ 5G ಸ್ಮಾರ್ಟ್‌ಫೋನ್‌ಗಳನ್ನು ಪ್ರದರ್ಶನಕ್ಕೆ ಇಟ್ಟಿದ್ದವು, ಆದರೆ, ಅವುಗಳ ಲಾಂಚಿಂಗ್ ಬಗ್ಗೆ ಇದುವರೆಗೂ ಯಾವುದೇ ಮಾಹಿತಿಯಿಲ್ಲ.

5Gಯಿಂದ ಪ್ರೈವಸಿಗೆ ಧಕ್ಕೆ..?
5G ನೆಟ್‌ವರ್ಕ್ ಹಲವು ಸಕಾರಾತ್ಮಕ ಅಂಶಗಳನ್ನು ಹೊಂದಿದ್ದರು, ಎಲ್ಲ ಉತ್ಪನ್ನಗಳಿಗೆ ಇದ್ದಂಗೆ 5Gಗೂ ಕೂಡ ನೆಗೆಟಿವ್ ಮುಖ ಇದ್ದೇ ಇದೆ. ಮೊದಲಿಗಿಂತಲೂ ಹೆಚ್ಚಾಗಿ 5G ನೆಟ್‌ವರ್ಕ್ ಹೆಚ್ಚಿನ ಡಾಟಾವನ್ನು ಸೃಷ್ಟಿಸುತ್ತದೆ. ಇದು ಒವರ್‌ಲೋಡ್ ಸಮಸ್ಯೆಗೆ ದಾರಿ ಮಾಡಿಕೊಡಬಹುದು. ಅದಲ್ಲದೇ, ಎಲ್ಲಾ ಕಡೆಯೂ ಸ್ಮಾರ್ಟ್‌ಫೋನ್ ಅಕ್ಸೆಸ್ ಆಗುವುದರಿಂದ ನಮ್ಮ ವೈಯಕ್ತಿಕ ಮಾಹಿತಿಯೆಲ್ಲಾ ಇಂಟರ್‌ನೆಟ್ ಜಗತ್ತಿನಲ್ಲಿ ಬಿಕರಿಯಾಗೋ ಸಾಧ್ಯತೆ ಜಾಸ್ತಿ.

ಹ್ಯಾಕಿಂಗ್ ಕೂಡ..?
5G ಬೆಂಬಲಿತ ಡಿವೈಸ್‌ಗಳು ಬೈಪಾಸ್ ನೆಟ್‌ವರ್ಕ್‌ನೊಂದಿಗೆ ಕಾರ್ಯನಿರ್ವಹಿಸುತ್ತಾ ನೇರವಾಗಿ ಇಂಟರ್‌ನೆಟ್‌ಗೆ ಸಂಪರ್ಕ ಪಡೆದಿರುತ್ತವೆ. ಇದರಿಂದ ಹ್ಯಾಕರ್‌ಗಳಿಗೆ ನಾವು, ನೀವೆಲ್ಲಾ ಸುಲಭದ ತುತ್ತಾಗುವುದನ್ನು ಅಲ್ಲಗಳೆಯುವಂತಿಲ್ಲ.


Click it and Unblock the Notifications








