ಆಂಡ್ರಾಯ್ಡ್ ಟಿವಿಗೆ ಬಂತು ನಾಲ್ಕು ಹೊಸ ಫೀಚರ್..! ಇನ್ಮುಂದೆ ಡೇಟಾ ಬಳಕೆ ಚಿಂತೆಯೇ ಬೇಡ..!
ಗ್ರಾಹಕರಿಗೆ ಒಂದಿಲ್ಲೊಂದು ಹೊಸತನಗಳನ್ನು ನೀಡುವಲ್ಲಿ ಮೊದಲಿರುವ ಗೂಗಲ್ ಈಗ ಆಂಡ್ರಾಯ್ಡ್ ಟಿವಿ ಬಳಕೆದಾರರನ್ನು ಗುರಿಯಾಗಿಟ್ಟುಕೊಂಡು ಹೊಸ ಫೀಚರ್‌ಗಳೊಂದಿಗೆ ಬರುತ್ತಿದೆ. ಹೌದು, ಭಾರತದಲ್ಲಿ ಆಂಡ್ರಾಯ್ಡ್ ಟಿವಿ ಬಳಕೆದಾರರಿಗಾಗಿ ಗೂಗಲ್ ನಾಲ್ಕು ಹೊಸ ಫೀಚರ್‌ಗಳನ್ನು ಪರಿಚಯಿಸುತ್ತಿದೆ. ಹೊಸ ವೈಶಿಷ್ಟ್ಯಗಳು ವಿಡಿಯೋ ಸ್ಟ್ರೀಮಿಂಗ್ ಮಾಡುವಾಗ ಡೇಟಾವನ್ನು ಸಾಧ್ಯವಾದಷ್ಟು ಉಳಿಸುವ ಗುರಿ ಹೊಂದಿವೆ.

ವೈ-ಫೈ ಸಂಪರ್ಕವಿಲ್ಲ
ಗೂಗಲ್‌ನ ಉತ್ಪನ್ನ ನಿರ್ವಾಹಕ ಜೋರಿಸ್ ವ್ಯಾನ್ ಮೆನ್ಸ್ ಹೇಳುವಂತೆ, ಆಂಡ್ರಾಯ್ಡ್ ಟಿವಿಗಳು ಭಾರತದಲ್ಲಿ ಜನಪ್ರಿಯತೆ ಗಳಿಸುತ್ತಿವೆ. ಆದರೆ ಅನೇಕರು ಇನ್ನೂ ಮನೆಯಲ್ಲಿ ವೈ-ಫೈ ಹೊಂದಿಲ್ಲ ಮತ್ತು ತಮ್ಮ ಸ್ಮಾರ್ಟ್‌ಫೋನ್‌ಗಳನ್ನು ಹಾಟ್‌ಸ್ಪಾಟ್‌ಗಳಾಗಿ ಬಳಸುವ ಮೂಲಕ ವಿಡಿಯೋ ಸ್ಟ್ರೀಮ್ ಮಾಡುತ್ತಾರೆ. ಇದು ಡೇಟಾ ಬರಿದಾಗಲು ಪ್ರಮುಖ ಕಾರಣವಾಗಿದೆಯಂತೆ. ಇನ್ನು, ಭಾರತಕ್ಕಾಗಿ 4 ಹೊಸ ಫೀಚರ್‌ಗಳನ್ನು ಪರಿಚಯಿಸಲು ನಾವು ಹೆಮ್ಮೆಪಡುತ್ತೇವೆ. ಇದರಿಂದ ಬಳಕೆದಾರರು ಸೀಮಿತ ಮೊಬೈಲ್ ಡೇಟಾದಿಂದ ತಮ್ಮ ಸ್ಮಾರ್ಟ್ ಟಿವಿಯಿಂದ ಹೆಚ್ಚಿನದನ್ನು ಪಡೆಯಲು ಸಹಾಯ ಮಾಡುತ್ತದೆ ಎಂದು ಬ್ಲಾಗ್ ಪೋಸ್ಟ್‌ನಲ್ಲಿ ಮೆನ್ಸ್ ಹೇಳಿದ್ದಾರೆ.

ಡೇಟಾ ಸೇವರ್
ಈ ಆಂಡ್ರಾಯ್ಡ್ ಟಿವಿ ಫೀಚರ್ ಹೆಸರೇ ಸೂಚಿಸುವಂತೆ ಮೊಬೈಲ್ ಸಂಪರ್ಕಗಳಲ್ಲಿನ ಡೇಟಾ ಬಳಕೆಯನ್ನು ಕಡಿಮೆ ಮಾಡುತ್ತದೆ. ಈ ಫೀಚರ್‌ನಿಂದ ಮೂರು ಪಟ್ಟು ಹೆಚ್ಚು ವಿಡಿಯೋ ವೀಕ್ಷಣೆ ಮಾಡಬಹುದು.

ಡೇಟಾ ಅಲರ್ಟ್
ಟಿವಿ ನೋಡುವಾಗ ಎಷ್ಟು ಡೇಟಾ ಬಳಸಲಾಗುತ್ತಿದೆ ಎಂಬುದನ್ನು ಸುಲಭವಾಗಿ ಮೇಲ್ವಿಚಾರಣೆ ಮಾಡಲು ಈ ಫೀಚರ್ ನಿಮಗೆ ಅವಕಾಶ ನೀಡುತ್ತದೆ.

ಹಾಟ್‌ಸ್ಪಾಟ್ ಮಾರ್ಗದರ್ಶಿ
ತಮ್ಮ ಟಿವಿಗಳನ್ನು ಸ್ಮಾರ್ಟ್‌ಫೋನ್ ಹಾಟ್‌ಸ್ಪಾಟ್‌ನೊಂದಿಗೆ ಹೇಗೆ ಸಂಪರ್ಕಿಸಬೇಕು ಎಂಬುದು ತಿಳಿದಿಲ್ಲದವರಿಗೆ ಈ ಫೀಚರ್ ಮಾರ್ಗದರ್ಶನ ನೀಡುತ್ತದೆ.

ಕಾಸ್ಟ್
ಈ ಫೀಚರ್ ಫೈಲ್ಸ್ ಆಪ್‌ಗೆ ಸಂಬಂಧಿಸಿದ್ದಾಗಿದ್ದು, ಯಾವುದೇ ಹೆಚ್ಚುವರಿ ಡೇಟಾ ಬಳಸದೆ ಹ್ಯಾಂಡ್‌ಸೆಟ್‌ನಿಂದ ಟಿವಿಗೆ ಡೌನ್‌ಲೋಡ್ ಮಾಡಿದ ಮಾಧ್ಯಮವನ್ನು ವೀಕ್ಷಿಸಲು ಅನುವು ಮಾಡಿಕೊಡುತ್ತದೆ.

ಶಿಯೋಮಿ, ಟಿಸಿಎಲ್, ಮಾರ್ಕ್ಯೂನಲ್ಲಿ ಹೊಸ ಫೀಚರ್
ಈ ಫೀಚರ್‌ಗಳು ಭಾರತದ ಎಲ್ಲಾ ಆಂಡ್ರಾಯ್ಡ್ ಟಿವಿ ಬಳಕೆದಾರರನ್ನು ತಲುಪಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತವೆ ಎಂದು ಗೂಗಲ್ ಹೇಳಿದೆ. ಫ್ಲಿಪ್‌ಕಾರ್ಟ್‌ನಿಂದ ಶಿಯೋಮಿ, ಟಿಸಿಎಲ್ ಮತ್ತು ಮಾರ್ಕ್ಯೂ ಈ ಫೀಚರ್‌ಗಳನ್ನು ಪಡೆದ ಮೊದಲ ಕಂಪನಿಗಳಾಗಿವೆ. ಗೂಗಲ್ ಫೈಲ್ಸ್ ಹೊಸ ಫೀಚರ್‌ಗಳನ್ನು ಬಳಸಲು ನೀವು ಬೀಟಾ ಆವೃತ್ತಿಯ ಭಾಗವಾಗಿರಬೇಕು. ಅಂತಿಮ ಆವೃತ್ತಿ ಶೀಘ್ರದಲ್ಲಿಯೇ ಬರಲಿದೆ.

ಸ್ಪರ್ಧಾತ್ಮಕ ಮಾರುಕಟ್ಟೆ
ಆಂಡ್ರಾಯ್ಡ್ ಟಿವಿಗಳ ಮಾರುಕಟ್ಟೆಯ ಕಡೆ ಗಮನಹರಿಸಿದರೆ, ಸ್ಪರ್ಧೆ ಹೆಚ್ಚಾಗುತ್ತಿದೆ. ಚೀನಾಆ ಮೂಲದ ಕಂಪನಿ ಶಿಯೋಮಿ ಭಾರತದಲ್ಲಿ ನಾಲ್ಕು ಹೊಸ ಆಂಡ್ರಾಯ್ಡ್ ಟಿವಿಗಳನ್ನು ಇದೀಗ ಬಿಡುಗಡೆ ಮಾಡಿದೆ. ಮೊಟೊರೊಲಾ ಕೂಡ ಈ ವಾರ ಇಂಟರ್ನಲ್ ಸೌಂಡ್‌ಬಾರ್‌ನೊಂದಿಗೆ ಹೊಸ ಟಿವಿಗಳನ್ನು ಪರಿಚಯಿಸಿತು. ಒನ್‌ಪ್ಲಸ್ ಕೂಡ ತನ್ನ ಮೊದಲ ಆಂಡ್ರಾಯ್ಡ್ ಆಧಾರಿತ ಸ್ಮಾರ್ಟ್ ಟಿವಿಯನ್ನು ಶೀಘ್ರದಲ್ಲಿಯೇ ಭಾರತದಲ್ಲಿ ಬಿಡುಗಡೆ ಮಾಡಲು ಸಜ್ಜಾಗಿದೆ.


Click it and Unblock the Notifications








