AirTag ಬಳಸಿ ಲಗೇಜ್ ಪತ್ತೆ ಇನ್ನಷ್ಟು ಸುಲಭ: ಫೈಂಡ್ ಮೈಗೆ ಏರ್‌ಲೈನ್ ಇಂಟಿಗ್ರೇಷನ್!
ಟೆಕ್ ದೈತ್ಯ Apple ತನ್ನ ಫೈಂಡ್ ಮೈ ಅಪ್ಲಿಕೇಶನ್‌ನಲ್ಲಿ ಮಹತ್ವದ ಅಪ್‌ಡೇಟ್ ನೀಡುವ ಮೂಲಕ, ಐಫೋನ್ ಬಳಕೆದಾರರ ಲಗೇಜ್ ಟ್ರ್ಯಾಕಿಂಗ್ ಸೌಲಭ್ಯವನ್ನು ಮತ್ತಷ್ಟು ಉತ್ತಮಗೊಳಿಸಿದೆ. ಫೈಂಡ್ ಮೈ ಅಪ್ಲಿಕೇಶನ್‌ನಲ್ಲಿ ಶೇರ್ ಐಟಂ ಲೊಕೇಶನ್ ವೈಶಿಷ್ಟ್ಯಕ್ಕೆ ಏರ್‌ಲೈನ್ ಬೆಂಬಲವನ್ನು ವಿಸ್ತರಿಸಲಾಗಿದ್ದು, ಈಗ ಆಪಲ್ AirTag ಅಳವಡಿಸಿದ ಲಗೇಜ್‌ನ ನೇರ ಸ್ಥಳ ಮಾಹಿತಿಯನ್ನು ಪ್ರಯಾಣಿಕರು ವಿಮಾನಯಾನ ಸಂಸ್ಥೆಗಳೊಂದಿಗೆ ಅಧಿಕೃತವಾಗಿ ಹಂಚಿಕೊಳ್ಳಬಹುದು. ಇದರಿಂದ ವಿಮಾನ ಪ್ರಯಾಣಿಕರಿಗೆ ನೇರ ಲಾಭ ದೊರೆಯಲಿದೆ.
ವಿಮಾನ ನಿಲ್ದಾಣಗಳಲ್ಲಿ ಲಗೇಜ್ ತಡವಾಗುವುದು, ತಪ್ಪು ವಿಮಾನಕ್ಕೆ ಹೋಗುವುದು ಅಥವಾ ಟ್ರಾನ್ಸ್ಫರ್ ವೇಳೆ ಕಳೆದುಹೋಗುವುದು ಸಾಮಾನ್ಯ ಸಮಸ್ಯೆಯಾಗಿದ್ದು, ಇಂತಹ ಸಂದರ್ಭಗಳಲ್ಲಿ ಪ್ರಯಾಣಿಕರು ಮತ್ತು ಏರ್‌ಲೈನ್ ಸಿಬ್ಬಂದಿ ನಡುವೆ ಸಮನ್ವಯದ ಕೊರತೆ ಕಂಡುಬರುತ್ತಿತ್ತು. ಇದೀಗ ಆಪಲ್ ಫೈಂಡ್ ಮೈ ಅಪ್ಲಿಕೇಶನ್‌ನಲ್ಲಿ ಶೇರ್ ಐಟಂ ಲೊಕೇಶನ್ ವೈಶಿಷ್ಟ್ಯಕ್ಕೆ ಏರ್‌ಲೈನ್ ಬೆಂಬಲವಿರುವ ಹೊಸ ವ್ಯವಸ್ಥೆಯು ಈ ಅಂತರವನ್ನು ಕಡಿಮೆ ಮಾಡಿ, ಲಗೇಜ್ ಪತ್ತೆ ಪ್ರಕ್ರಿಯೆಯನ್ನು ವೇಗಗೊಳಿಸುವ ಉದ್ದೇಶವನ್ನು ಹೊಂದಿದೆ.
ಐಫೋನ್ ಬಳಕೆದಾರರು Find My ಆಪ್ ತೆರೆಯುವ ಮೂಲಕ, AirTag ಅಳವಡಿಸಿದ ಯಾವುದೇ ಲಗೇಜ್‌ಗೆ Share Item Location ಲಿಂಕ್ ಅನ್ನು ಸೃಷ್ಟಿಸಬಹುದು. ಈ ಲಿಂಕ್ ಅನ್ನು ವಿಮಾನಯಾನ ಸಿಬ್ಬಂದಿಗೆ ಹಂಚಿದರೆ, ಅವರು ಯಾವುದೇ ಬ್ರೌಸರ್ ಮೂಲಕ ಲಗೇಜ್ ಇರುವ ಸ್ಥಳವನ್ನು ನಕ್ಷೆಯಲ್ಲಿ ವೀಕ್ಷಿಸಬಹುದು. Apple Find My ನೆಟ್‌ವರ್ಕ್ ಮೂಲಕ ಹೊಸ ಮಾಹಿತಿ ಲಭ್ಯವಾದಂತೆ ಸ್ಥಳ ವಿವರ ಸ್ವಯಂಚಾಲಿತವಾಗಿ ಅಪ್‌ಡೇಟ್ ಆಗುತ್ತದೆ. ಭದ್ರತೆಯ ದೃಷ್ಟಿಯಿಂದ, ಈ ಲಿಂಕ್ ಲಗೇಜ್ ಸಿಕ್ಕ ನಂತರ ಅಥವಾ ಗರಿಷ್ಠ ಏಳು ದಿನಗಳಲ್ಲಿ ಸ್ವಯಂ ನಿಷ್ಕ್ರಿಯವಾಗುತ್ತದೆ.

Apple ಈ ವೈಶಿಷ್ಟ್ಯವನ್ನು iOS 18.2 ಅಪ್‌ಡೇಟ್‌ನೊಂದಿಗೆ ಪರಿಚಯಿಸಿದೆ. ಈ ಹೊಸ ಅಪ್‌ಡೇಟ್‌ನಿಂದ ಮಾನ ಪ್ರಯಾಣಿಕರು ಲಗೇಜ್‌ನ ಸ್ಥಿತಿಯನ್ನು ಸ್ಪಷ್ಟವಾಗಿ ತಿಳಿದುಕೊಳ್ಳುವ ಅವಕಾಶ ಪಡೆಯುತ್ತಾರೆ ಮತ್ತು ಕೌಂಟರ್‌ನಲ್ಲಿ ಅನಗತ್ಯ ಕಾಯುವಿಕೆ ಕಡಿಮೆಯಾಗುತ್ತದೆ.ಈಗಾಗಲೇ Air India, Lufthansa, British Airways, American Airlines, Singapore Airlines, United Airlines, KLM, Qatar Airways ಸೇರಿದಂತೆ ಅನೇಕ ಪ್ರಮುಖ ಏರ್‌ಲೈನ್ಸ್‌ಗಳು ಈ ವೈಶಿಷ್ಟ್ಯವನ್ನು ಅಳವಡಿಸಿಕೊಂಡಿವೆ.ಇದರಿಂದ ಭಾರತೀಯ ಪ್ರಯಾಣಿಕರಿಗೆ ಕೂಡ ನೇರ ಲಾಭ ದೊರೆಯಲಿದೆ.
ಇತ್ತೀಚಿನ ವರ್ಷಗಳಲ್ಲಿ ಪ್ರಯಾಣಿಕರಲ್ಲಿ AirTag ಲಗೇಜ್ ಟ್ರ್ಯಾಕಿಂಗ್ ಬಳಕೆ ಗಣನೀಯವಾಗಿ ಹೆಚ್ಚಾಗಿದೆ. ಆದರೆ ಇದುವರೆಗೂ ಈ ಮಾಹಿತಿ ಅನೌಪಚಾರಿಕವಾಗಿ ಮಾತ್ರ ಬಳಸಲಾಗುತ್ತಿತ್ತು. ಈಗ ಆಪಲ್ ನೀಡಿರುವ ಅಧಿಕೃತ ವ್ಯವಸ್ಥೆಯಿಂದ, ಏರ್‌ಲೈನ್ಸ್‌ಗಳು ಪ್ರಯಾಣಿಕರಿಂದ ದೊರಕುವ ಸ್ಥಳ ಮಾಹಿತಿಯನ್ನು ನೇರವಾಗಿ ತಮ್ಮ ಲಗೇಜ್ ರಿಕವರಿ ವ್ಯವಸ್ಥೆಯೊಂದಿಗೆ ಜೋಡಿಸಬಹುದು. ಇದರಿಂದ ಲಗೇಜ್ ಪತ್ತೆಗೆ ಬೇಕಾಗುವ ಸಮಯ ಕಡಿಮೆಯಾಗುವ ಸಾಧ್ಯತೆ ಹೆಚ್ಚಿದೆ.
ಭವಿಷ್ಯದಲ್ಲಿ ಇನ್ನಷ್ಟು ವಿಮಾನಯಾನ ಸಂಸ್ಥೆಗಳು ಈ ವೈಶಿಷ್ಟ್ಯಕ್ಕೆ ಬೆಂಬಲ ನೀಡಲಿವೆ ಎಂದು ಆಪಲ್ ಸೂಚಿಸಿದೆ. ಡಿಜಿಟಲ್ ಲಗೇಜ್ ಟ್ರ್ಯಾಕಿಂಗ್, ಪ್ರಯಾಣಿಕರ ಅನುಭವ ಸುಧಾರಣೆ ಮತ್ತು ಪಾರದರ್ಶಕ ಸೇವೆ ಎಂಬ ದಿಕ್ಕಿನಲ್ಲಿ ಇದು ಮಹತ್ವದ ಹೆಜ್ಜೆಯಾಗಿದೆ. ತಂತ್ರಜ್ಞಾನ ಮತ್ತು ಪ್ರಯಾಣ ಕ್ಷೇತ್ರದ ಸಂಯೋಜನೆಯಿಂದ, ಮುಂದಿನ ದಿನಗಳಲ್ಲಿ ವಿಮಾನ ಪ್ರಯಾಣ ಇನ್ನಷ್ಟು ಸುಲಭ ಮತ್ತು ನಂಬಿಕಾರ್ಹವಾಗಲಿದೆ ಎಂಬುದು ನಮ್ಮ ಅಭಿಪ್ರಾಯ. ನೀವು ಏನಂತಿರಾ.?


Click it and Unblock the Notifications








