ಶಾಕಿಂಗ್ ನ್ಯೂಸ್: ಮುಂಬರುವ ಐಫೋನ್‌ಗಳ ಬೆಲೆ ಏರಿಕೆ ಬಹುತೇಕ ಖಚಿತ!
ಈ ವರ್ಷದ ಅಂತ್ಯದ ವೇಳೆಗೆ ಬಿಡುಗಡೆಯಾಗಲಿರುವ ತನ್ನ ಮುಂದಿನ ಐಫೋನ್ ಸರಣಿ ಸ್ಮಾರ್ಟ್‌ಫೋನ್‌ಗಳ ಬೆಲೆಗಳನ್ನು ಹೆಚ್ಚಿಸುವ ಕುರಿತು ಆಪಲ್ ಕಂಪೆನಿ ಚಿಂತಿಸುತ್ತಿದೆ ಎನ್ನಲಾಗಿದೆ. ಹೌದು, ದಿ ವಾಲ್ ಸ್ಟ್ರೀಟ್ ಜರ್ನಲ್‌ನ ಇತ್ತೀಚಿನ ವರದಿಯ ಪ್ರಕಾರ, ಹೊಸ ವೈಶಿಷ್ಟ್ಯಗಳು ಮತ್ತು ವಿನ್ಯಾಸದಲ್ಲಿನ ಸುಧಾರಣೆಗಳಿಗೆ ಸಂಬಂಧಿಸಿದಂತೆ ಆಪಲ್ ತನ್ನ ಐಫೋನ್‌ಗಳ ಬೆಲೆಯನ್ನು ಹೆಚ್ಚಿಸುತ್ತಿದೆ ಎಂದು ಹೇಳಲಾಗಿದೆ. ಈ ಸುದ್ದಿಯ ಪ್ರಭಾವದಿಂದ, ಮಾರುಕಟ್ಟೆಪೂರ್ವ ವಹಿವಾಟಿನಲ್ಲಿ ಆಪಲ್‌ನ ಷೇರುಗಳು ಸುಮಾರು ಶೇಕಡಾ 7 ರಷ್ಟು ಏರಿಕೆಯನ್ನು ಕಂಡಿವೆ.!
ಐಫೋನ್‌ಗಳ ಈ ಬೆಲೆ ಏರಿಕೆಯು ಕೇವಲ ಹೆಚ್ಚುತ್ತಿರುವ ಆಮದು ಸುಂಕಗಳ ಕಾರಣದಿಂದಲ್ಲ, ಬದಲಾಗಿ ಹೊಸ ವೈಶಿಷ್ಟ್ಯಗಳು ಮತ್ತು ವಿನ್ಯಾಸದಲ್ಲಿನ ಸುಧಾರಣೆಗಳಿಗೂ ಸಂಬಂಧಿಸಿದೆ ಎಂದು ದಿ ವಾಲ್ ಸ್ಟ್ರೀಟ್ ಜರ್ನಲ್ ವರದಿಯು ಉಲ್ಲೇಖಿಸಿದೆ. ವಿಶೇಷವಾಗಿ ಉನ್ನತ-ಮಟ್ಟದ ಪ್ರೊ ಮತ್ತು ಪ್ರೊ ಮ್ಯಾಕ್ಸ್ ಮಾದರಿಗಳನ್ನು ಚೀನಾದಲ್ಲಿ ತಯಾರಿಸಲಾಗುತ್ತಿರುವುದರಿಂದ, ಬೆಲೆ ಏರಿಕೆಯು ಅಮೆರಿಕದ ಸುಂಕಗಳ ಕಾರಣದಿಂದ ಉಂಟಾಗಿದೆ ಎಂಬ ಭಾವನೆಯನ್ನು ತಪ್ಪಿಸಲು ಆಪಲ್ ಬಯಸುತ್ತಿದೆ ಎಂದು ವರದಿಯಲ್ಲಿ ಹೇಳಿರುವುದು ಆಶ್ಚರ್ಯಕರವಾಗಿದೆ.
ಆಪಲ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಟಿಮ್ ಕುಕ್ ಅವರು ಅಮೆರಿಕದ ಮಾರುಕಟ್ಟೆಗೆ ಉದ್ದೇಶಿಸಿರುವ ಹೆಚ್ಚಿನ ಐಫೋನ್‌ಗಳು ಭಾರತದಲ್ಲಿಯೇ ತಯಾರಾಗಲಿವೆ ಎಂದು ಭರವಸೆ ನೀಡಿದ್ದರೂ, ಭಾರತೀಯ ಕಾರ್ಖಾನೆಗಳು ಪ್ರೊ ಮಾದರಿಗಳನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದ್ದರೂ ಸಹ, ಭಾರತದಲ್ಲಿ ಅಗತ್ಯವಾದ ಮೂಲಸೌಕರ್ಯ ಮತ್ತು ತಾಂತ್ರಿಕ ಪರಿಣತಿಯ ಕೊರತೆಯಿದೆ ಎಂದು ವರದಿಯು ವಿವರಿಸಿದೆ. ಆದರೆ, ಐಫೋನ್‌ಗಳ ಬೆಲೆ ಏರಿಕೆಗೆ ಇದು ನಿಖರವಾದ ಕಾರಣವಾಗಿದೆಯೇ ಎಂಬುದನ್ನು ಮಾತ್ರ ವರದಿಯು ತಿಳಿಸಿಲ್ಲ.

ಹಿಂದಿನ ವರದಿಗಳ ಪ್ರಕಾರ, ಆಪಲ್ ಒಂದು ವೇಳೆ ಹೆಚ್ಚಿನ ಸುಂಕಗಳ ವೆಚ್ಚವನ್ನು ನೇರವಾಗಿ ಗ್ರಾಹಕರಿಗೆ ವರ್ಗಾಯಿಸಲು ನಿರ್ಧರಿಸಿದರೆ, ಐಫೋನ್‌ಗಳ ಬೆಲೆ ಶೇಕಡಾ 30 ರಿಂದ 40 ರಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎನ್ನಲಾಗಿತ್ತು. ಆದರೆ, ಅಮೆರಿಕ ಮತ್ತು ಚೀನಾ ದೇಶಗಳು ಪರಸ್ಪರ ಸರಕುಗಳ ಮೇಲಿನ ಸುಂಕಗಳನ್ನು ಕಡಿಮೆ ಮಾಡುವ ಯೋಜನೆಯನ್ನು ಜಂಟಿಯಾಗಿ ಘೋಷಿಸಿದ ನಂತರ ಈ ಸುದ್ದಿಗೆ ಬ್ರೇಕ್ ಬಿದ್ದಿತ್ತು. ಇದೀಗ ಆಪಲ್‌ನ ಮುಂಬರುವ ಐಫೋನ್‌ಗಳ ಬೆಲೆಯಲ್ಲಿ ಏರಿಕೆಕು ಖಚಿತವಾದಂತಿದೆ ಎಂದು ತಜ್ಷರು ಅಂದಾಜಿಸಿದ್ದಾರೆ.
ಹೊಸ ನಿಯಮಗಳ ಅನ್ವಯ, ಅಮೆರಿಕವು ಫೆಂಟನಿಲ್‌ಗೆ ಸಂಬಂಧಿಸಿದ ಸುಂಕಗಳನ್ನು ಒಳಗೊಂಡಂತೆ ಚೀನಾದಿಂದ ಆಮದಾಗುವ ಸರಕುಗಳ ಮೇಲಿನ ಒಟ್ಟು ಶೇಕಡಾ 145 ರಷ್ಟು ಸುಂಕವನ್ನು ಶೇಕಡಾ 30 ಕ್ಕೆ ಇಳಿಸಲಿದೆ. ಇದಕ್ಕೆ ಪ್ರತಿಯಾಗಿ, ಚೀನಾವು ಅಮೆರಿಕದ ಉತ್ಪನ್ನಗಳ ಮೇಲಿನ ತನ್ನ ಶೇಕಡಾ 125 ರಷ್ಟು ಸುಂಕವನ್ನು ಶೇಕಡಾ 10 ಕ್ಕೆ ಇಳಿಸಲಿದೆ. ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ಅವರು "ಫೆಂಟನಿಲ್ ಮೇಲಿನ ಮುಂದಿನ ಕ್ರಮಗಳ ಕುರಿತು ನಾವು ಬಹಳ ಬಲವಾದ ಮತ್ತು ಉತ್ಪಾದಕ ಚರ್ಚೆಯನ್ನು ನಡೆಸಿದ್ದೇವೆ" ಎಂದು ಹೇಳಿದ್ದಾರೆ.
ಜಿನಿವಾದಲ್ಲಿ ನಡೆದ ಸಭೆಯಲ್ಲಿ ಚೀನಾ ಮತ್ತು ಅಮೆರಿಕಾ ರಾಷ್ಟ್ರಗಳು "ಆರ್ಥಿಕ ಮತ್ತು ವ್ಯಾಪಾರ ಸಂಬಂಧಗಳ ಕುರಿತು ಚರ್ಚೆಗಳನ್ನು ಮುಂದುವರಿಸಲು ಒಂದು ಕಾರ್ಯವಿಧಾನವನ್ನು ಸ್ಥಾಪಿಸುತ್ತವೆ" ಎಂದು ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದವು. ಅಮೆರಿಕದ ವ್ಯಾಪಾರ ಪ್ರತಿನಿಧಿ ಜೇಮೀಸನ್ ಗ್ರೀರ್ ಅವರು "ಚೀನಾದೊಂದಿಗೆ ಹೆಚ್ಚು ಸಮತೋಲಿತ ವ್ಯಾಪಾರ" ವನ್ನು ಹೊಂದುವ ಗುರಿಯನ್ನು ಒತ್ತಿ ಹೇಳಿದರು. ಈ ಬೆಳವಣಿಗೆಗಳು ಮುಂಬರುವ ಐಫೋನ್ ಬೆಲೆಗಳ ಮೇಲೆ ಮತ್ತು ಒಟ್ಟಾರೆ ಮಾರುಕಟ್ಟೆಯ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬುದನ್ನು ಕಾದು ನೋಡಬೇಕಿದೆ.


Click it and Unblock the Notifications








