ಭಾರತಕ್ಕೆ ಹೊಸ AppleCare+ ಪ್ಲ್ಯಾನ್ಸ್: ₹799ಕ್ಕೆ ಕಳವು ಮತ್ತು ವಿಸ್ತೃತ ವಾರಂಟಿ!
ನೀವು ಐಫೋನ್ ಪ್ರಿಯರ?..ಹಾಗಾದರೆ, ನಿಮಗಿದು ಭರ್ಜರಿ ಸಿಹಿಸುದ್ದಿ. ಏಕೆಂದರೆ, ಆಪಲ್ ಭಾರತದಲ್ಲಿ ತನ್ನ AppleCare+ ಸೇವೆಯನ್ನು ಮತ್ತಷ್ಟು ಸುಲಭಗೊಳಿಸುವ ನಿಟ್ಟಿನಲ್ಲಿ ಹೊಸ ಯೋಜನೆಗಳನ್ನು ಬಿಡುಗಡೆ ಮಾಡಿದೆ. ಆಪಲ್ ಮಂಗಳವಾರದಂದು ಭಾರತದಲ್ಲಿ ಹೊಸ AppleCare+ ಕವರೇಜ್ ಆಯ್ಕೆಗಳನ್ನು ಘೋಷಿಸಿದ್ದು, ಇದೀಗ ಕಡಿಮೆ ಬೆಲೆಯಲ್ಲಿ ಗ್ರಾಹಕರು ವಾರ್ಷಿಕ ಯೋಜನೆಗಳ ಜೊತೆಗೆ ಮಾಸಿಕ ಚಂದಾದಾರಿಕೆ ಆಯ್ಕೆಯನ್ನೂ ಪಡೆಯಬಹುದು.!
ಇಷ್ಟೇ ಅಲ್ಲದೆ, ಈ ಯೋಜನೆಯಲ್ಲಿ ವಿಶೇಷವಾಗಿ ಕಳ್ಳತನ ಅಥವಾ ಸಾಧನ ನಷ್ಟಕ್ಕೆ ವರ್ಷಕ್ಕೆ ಎರಡು ಬಾರಿ ರಕ್ಷಣೆಯನ್ನು ಪಡೆಯುವ AppleCare+ with Theft and Loss ಸೇವೆಯನ್ನು ಸಹ ಆಪಲ್ ಈಗ ಭಾರತದಲ್ಲೂ ಲಭ್ಯ ಮಾಡಿದೆ. ಪ್ರಸ್ತುತ AppleCare+ ಕವರೇಜ್ ಕೇವಲ ₹799 ರೂ.ಗಳಿಂದ ಆರಂಭವಾಗಲಿದ್ದು, ಹೊಸದಾಗಿ ಪರಿಚಯಿಸಿರುವ AppleCare+ ಸೇವೆಯು ಏನೆಲ್ಲಾ ಪ್ರಮುಖ ಅಂಶಗಳನ್ನು ಒಳಗೊಂಡಿದೆ ಎಂಬುದನ್ನು ನೋಡೋಣ ಬನ್ನಿ.
AppleCare+: ಹೊಸ ಯೋಜನೆಗಳ ಪ್ರಮುಖ ಅಂಶಗಳು
ನೀವು ಹೊಸ ಐಫೋನ್ ಖರೀದಿಸಿದಾಗ ಇದು ಮೊದಲ ವರ್ಷ ಹಾರ್ಡ್‌ವೇರ್ ರಿಪೇರ್ ವಾರಂಟಿ ಮತ್ತು 90 ದಿನಗಳ ತಾಂತ್ರಿಕ ಬೆಂಬಲದೊಂದಿಗೆ ಬರುತ್ತದೆ. ಆದರೆ, ಇದೀಗ AppleCare+ ಚಂದಾದಾರಿಕೆಯನ್ನು ತೆಗೆದುಕೊಂಡರೆ ಈ ರಕ್ಷಣೆಯು ಎರಡು ವರ್ಷಗಳವರೆಗೆ ವಿಸ್ತರಿಸುತ್ತದೆ. ಇದರಲ್ಲಿ ಅಪರಿಮಿತ ಆಕಸ್ಮಿಕ ಹಾನಿ ರಿಪೇರಿ, ಮೊದಲ ಬೆಂಬಲ ಮತ್ತು ಬ್ಯಾಟರಿ ಬದಲಾವಣೆ ಸೇವೆಗಳನ್ನೂ ಒಳಗೊಂಡಿದೆ. ಇದರಿಂದ ಗ್ರಾಹಕರು ಹಲವು ವರ್ಷಗಳವರೆಗೂ ಐಫೋನ್ ಸುರಕ್ಷತೆಯನ್ನು ಖಾತರಿಪಡಿಸಿಕೊಳ್ಳಬಹುದು.

ಆಪಲ್ ನೀಡಿರುವ ವಿವರಗಳ ಪ್ರಕಾರ, ಸ್ಕ್ರೀನ್ ಅಥವಾ ಬ್ಯಾಕ್ ಗ್ಲಾಸ್ ಹಾನಿಗೆ ₹2,500 ಸೇವಾ ಶುಲ್ಕ,ಇತರೆ ಅಪಘಾತ ಹಾನಿಗೆ ₹8,900 ಶುಲ್ಕ ಅನ್ವಯಿಸುತ್ತದೆ. ಗ್ರಾಹಕರು ತಮ್ಮ ಹೊಸ ಐಫೋನ್‌ನ್ನು ಖರೀದಿಸುವಾಗಲೇ AppleCare+ ತೆಗೆದುಕೊಳ್ಳಬಹುದು. ಇಲ್ಲವಾದರೆ, ಖರೀದಿಸಿದ 60 ದಿನಗಳ ಒಳಗೆ iPhone → Settings ಮೂಲಕವೂ ಚಂದಾದಾರಿಕೆ ಸೇರಿಸಿಕೊಳ್ಳಬಹುದು. ಐಪ್ಯಾಡ್ ಮತ್ತು ಮ್ಯಾಕ್ ಸಾಧನಗಳಿಗೂ ಇದೇ ವಿಧಾನ ಅನ್ವಯಿಸುತ್ತದೆ.
ಇದುವರೆಗೆ ಭಾರತದಲ್ಲಿ AppleCare+ ವಾರ್ಷಿಕ ಯೋಜನೆ ಮಾತ್ರ ಲಭ್ಯವಿತ್ತು. ಈಗ ಕಂಪನಿ ಹೊಸದಾಗಿ ಮಾಸಿಕ ಯೋಜನೆಯನ್ನು ಆರಂಭಿಸಿದೆ. ದೇಶದ ಗ್ರಾಹಕರು ವಾರ್ಷಿಕ ಒಮ್ಮೆಲೆ ಹಣವನ್ನು ಪಾವತಿಸುವುದಕ್ಕಿಂತ ಈಗ ಸುಲಭ ಕಂತುಗಳಲ್ಲಿ ಸುರಕ್ಷತೆಯನ್ನು ಕಾಪಾಡಿಕೊಳ್ಳಬಹುದು. ಈ ಮಾಸಿಕ ಯೋಜನೆಗಳು ಕೇವಲ ₹799 ರಿಂದ ಪ್ರಾರಂಭವಾಗುತ್ತದೆ. ಇದರಿಂದ ಹೆಚ್ಚು ಮಂದಿ ತಮ್ಮ ಐಫೋನ್‌ನ್ನು ದೀರ್ಘಾವಧಿಗೆ ಸುರಕ್ಷಿತವಾಗಿ ಬಳಸಲು ಅನುಕೂಲವಾಗಲಿದೆ.
AppleCare+ ನೀಡುವ ವೈಶಿಷ್ಟ್ಯಗಳು
- ಬ್ಯಾಟರಿ ಬದಲಾವಣೆ: ಬ್ಯಾಟರಿ ಆರೋಗ್ಯ 80% ಕ್ಕಿಂತ ಕಡಿಮೆ ಆದಲ್ಲಿ ಉಚಿತ ಬದಲಾವಣೆ
- ಅಪರಿಮಿತ ಅಪಘಾತ ರಿಪೇರ್: ನೀರು, ಬಿದ್ದದ್ದು, ಒತ್ತಡ ಮತ್ತಿತರ ಕಾರಣಗಳಿಂದ ಹಾನಿಯಾದರೂ ರಿಪೇರ್ ಅವಕಾಶ
- 24×7 ಮೊದಲ ಬೆಂಬಲ: ತಾಂತ್ರಿಕ ಸಮಸ್ಯೆಗಳಿಗೆ ತಕ್ಷಣದ ಸಹಾಯ
- ಮೂಲ Apple ಭಾಗಗಳು: ಎಲ್ಲ ರಿಪೇರ್‌ಗಳಲ್ಲೂ ಅಧಿಕೃತ ಭಾಗಗಳ ಬಳಕೆ
- ವಿಸ್ತೃತ ಹಾರ್ಡ್‌ವೇರ್ ವಾರಂಟಿ: ಸಾಮಾನ್ಯ ವಾರಂಟಿಗಿಂತ ಹೆಚ್ಚು ಅವಧಿಯ ರಕ್ಷಣೆ ದೊರೆಯಲಿದೆ.
ಆಪಲ್‌ನ iPhone ಉತ್ಪನ್ನ ಮಾರ್ಕೆಟಿಂಗ್ ಉಪಾಧ್ಯಕ್ಷೆ ಕಯಾನ್ ಡ್ರಾನ್ಸ್ ಅವರು, "ಭಾರತದಲ್ಲಿ ಇಂದಿನ ನವೀಕರಣಗಳೊಂದಿಗೆ, ಐಫೋನ್‌ಗಾಗಿ ನಮ್ಮ ಅತ್ಯಂತ ಸಂಪೂರ್ಣ ಕವರೇಜ್‌ಗೆ ಪ್ರವೇಶವನ್ನು ಒಳಗೊಂಡಂತೆ ವಿಶ್ವಾಸಾರ್ಹ ರಕ್ಷಣೆಯನ್ನು ಪಡೆಯುವುದನ್ನು ನಾವು ಸುಲಭ ಮತ್ತು ಹೆಚ್ಚು ಕೈಗೆಟುಕುವಂತೆ ಮಾಡುತ್ತಿದ್ದೇವೆ" ಎಂದು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಒಟ್ಟಾರೆ ಸಾರಾಂಶವಾಗಿ, ಹೊಸ AppleCare+ ಯೋಜನೆಗಳು ಭಾರತದಲ್ಲಿ ಐಫೋನ್ ಬಳಕೆದಾರರಿಗೆ ಹೆಚ್ಚುವರಿ ಭದ್ರತೆ ಮತ್ತು ಬಜೆಟ್‌ಗೆ ತಕ್ಕ ಆಯ್ಕೆಗಳನ್ನು ಒದಗಿಸುತ್ತವೆ. ಮಾಸಿಕ ಚಂದಾದಾರಿಕೆ ಪರಿಚಯಿಸಿದ ನಂತರ, ಹೆಚ್ಚಿನವರು ತಮ್ಮ ಸಾಧನಕ್ಕೆ ದೀರ್ಘಕಾಲದ ರಕ್ಷಣೆಯನ್ನು ಪಡೆಯಲು ಸಾಧ್ಯವಾಗುತ್ತದೆ. ಕಳ್ಳತನ ಅಥವಾ ನಷ್ಟವನ್ನೂ ಒಳಗೊಂಡಿರುವುದು ಈಗಿನ ಮಾರುಕಟ್ಟೆಯಲ್ಲಿ ಆಪಲ್‌ಗೆ ಹೆಚ್ಚಿನ ಸ್ಪರ್ಧಾತ್ಮಕತೆ ನೀಡುತ್ತದೆ ಎನ್ನಬಹುದು. ಈ ಕುರಿತಂತೆ ನಿಮ್ಮ ಅಭಿಪ್ರಾಯ ಏನು? ಎಂಬುದನ್ನು ಈ ಕೆಳಗೆ ಕಾಮೆಂಟ್ ಮಾಡಿ ತಿಳಿಸಿ.


Click it and Unblock the Notifications








