ಹಳಿ ತಪ್ಪಿದ ಫರಕ್ಕಾ ಎಕ್ಸ್‌ಪ್ರೆಸ್: ರಕ್ಷಣೆಗೆ ಡ್ರೋನ್ ಮೊರೆ ಹೋದ ಅಧಿಕಾರಿಗಳು..!
ರಾಷ್ಟ್ರದಲ್ಲಿ ರೈಲು ಅಪಘಾತಗಳ ಸರಣಿ ಮುಂದುವರೆದಿದ್ದು, ಉತ್ತರ ಪ್ರದೇಶದಲ್ಲಿ ಮತ್ತೊಂದು ರೈಲು ಹಳಿ ತಪ್ಪಿದೆ. ನ್ಯೂ ಫರಾಕ್ಕಾ ಎಕ್ಸ್‌ಪ್ರೆಸ್ ರೈಲಿನ 5 ಬೋಗಿಗಳು ಹಳಿ ತಪ್ಪಿದ್ದು, 7 ಮಂದಿ ಮೃತಪಟ್ಟಿದ್ದಾರೆ. 30ಕ್ಕಿಂತ ಹೆಚ್ಚು ಜನರು ಗಾಯಗೊಂಡಿದ್ದು, ಸಾವಿನ ಸಂಖ್ಯೆ ಹೆಚ್ಚುವ ಸಾಧ್ಯತೆ ಇದೆ. ಪರಿಹಾರ ಕಾರ್ಯಾಚರಣೆಗೆ ಅಧಿಕಾರಿಗಳು ತಂತ್ರಜ್ಞಾನದ ಮೊರೆ ಹೋಗಿದ್ದಾರೆ.

ಹೌದು, ಬುಧವಾರ ಬೆಳಿಗ್ಗೆ ಉತ್ತರ ಪ್ರದೇಶದ ರಾಯ್‌ಬರೇಲಿ ಜಿಲ್ಲೆಯ ಹರ್ಚಂದಾಪುರ ಬಳಿ ಸಂಭವಿಸಿದ ರೈಲ್ವೇ ಅಪಘಾತದಲ್ಲಿ ಸಂತ್ರಸ್ತರ ರಕ್ಷಣಾ ಕಾರ್ಯಕ್ಕೆ ಡ್ರೋನ್ ಮತ್ತು ದೀರ್ಘ ವ್ಯಾಪ್ತಿಯ ಕ್ಯಾಮೆರಾಗಳನ್ನು ಬಳಸಿಕೊಂಡಿದ್ದಾರೆ. ದೆಹಲಿಯಿಂದ ಹೊರಟಿದ್ದ MLDT NDLS ಎಕ್ಸ್‌ಪ್ರೆಸ್ ರೈಲಿನ 5 ಬೋಗಿಗಳು ಬುಧವಾರ ಬೆಳಿಗ್ಗೆ 6 ಗಂಟೆಗೆ ಹರ್‌ಚಾಂದ್‌ಪುರ ರೈಲ್ವೆ ಸ್ಟೇಷನ್‌ನಿಂದ ಸುಮಾರು 50 ಮೀಟರ್ ದೂರದಲ್ಲಿ ಹಳಿತಪ್ಪಿವೆ ಎಂದು ಉತ್ತರ ರೈಲ್ವೆ ವಿಭಾಗೀಯ ರೈಲು ವ್ಯವಸ್ಥಾಪಕ ಸತೀಶ್ ಕುಮಾರ್ ಹೇಳಿದ್ದಾರೆ.
ಪಶ್ಚಿಮ ಬಂಗಾಳದ ಮಾಲ್ಡಾದಿಂದ ಹೊಸದಿಲ್ಲಿಗೆ ತೆರಳುತ್ತಿದ್ದ ಫರಾಕ್ಕಾ ಎಕ್ಸ್‌ಪ್ರೆಸ್ ಉತ್ತರ ಪ್ರದೇಶದ ರಾಜಧಾನಿ ಲಕ್ನೋದಿಂದ 77 ಕಿ.ಮೀ ದೂರದಲ್ಲಿ ಅಪಘಾತಕ್ಕಿಡಾಗಿದೆ. ಘಟನೆ ಬಗ್ಗೆ ಉತ್ತರ ಪ್ರದೇಶ ಕಾನೂನು ಮತ್ತು ಸುವ್ಯವಸ್ಥೆಯ ಎಡಿಜಿ ಆನಂದ್ ಕುಮಾರ್ ಮಾಹಿತಿ ನೀಡಿ, ಹಳಿ ತಪ್ಪಿರುವ ಬೋಗಿಗಳಿಂದ ಮೃತದೇಹಗಳನ್ನು ಹೊರತೆಗೆಯಲಾಗಿದ್ದು, ಸಾವಿನ ಸಂಖ್ಯೆ ಇನ್ನು ಏರಿಕೆಯಾಗುವ ನಿರೀಕ್ಷೆಯಿದೆ. ಕಾರ್ಯಚರಣೆಗೆ ಡ್ರೋಣ್ ಕ್ಯಾಮೆರಾ, ಲಾಂಗ್ ರೆಂಜ್ ಕ್ಯಾಮೆರಾಗಳನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ರೈಲು ಅವಘಡದ ಬಗ್ಗೆ ಸಂತಾಪ ವ್ಯಕ್ತಪಡಿಸಿದ ಸಿಎಂ ಯೋಗಿ ಆದಿತ್ಯನಾಥ್, ಅವಘಡದಲ್ಲಿ ಮೃತಪಟ್ಟ ಕುಟುಂಬಸ್ಥರಿಗೆ 2 ಲಕ್ಷ ರೂ. ಹಾಗೂ ತೀವ್ರ ಗಾಯಗೊಂಡವರಿಗೆ 50 ಸಾವಿರ ರೂ. ಪರಿಹಾರ ಘೋಷಿಸಿದ್ದಾರೆ.


Click it and Unblock the Notifications




