ಆನ್‌ಲೈನ್ ಗೇಮಿಂಗ್‌ಗಾಗಿ ಗಂಡನನ್ನು ಬಿಟ್ಟು ಹೋದ ಬೆಂಗಳೂರಿನ ಮಹಿಳೆ
ಆನ್‌ಲೈನ್ ಗೇಮಿಂಗ್‌ನಲ್ಲಿ ಹಣ ಕಳೆದುಕೊಂಡ ಮಹಿಳೆಯೊಬ್ಬಳು ಗಂಡನನ್ನು ಬಿಟ್ಟು ಹೋದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರಿನಲ್ಲಿ ವಾಸವಾಗಿರುವ ಮಹಿಳೆಗೆ ಆನ್‌ಲೈನ್ ಗೇಮಿಂಗ್ ಮೇಲೆ ವಿಪರೀತ ವ್ಯಾಮೋಹವಿದ್ದು, ಅದರ ಫಲವಾಗಿ ಇದೀಗ ಆಕೆಯ ಗಂಡ ಪರಿತಪಿಸುವಂತೆ ಆಗಿದೆ.
ಹೌದು, ಆನ್‌ಲೈನ್ ಗೇಮಿಂಗ್ ವ್ಯಸನಿಯಾಗಿದ್ದ ಮಹಿಳೆ ಹಣವನ್ನು ಕಳೆದುಕೊಂಡಿದ್ದು ಮಾತ್ರವಲ್ಲದೆ ಇದೀಗ ಮನೆಯಿಂದಲೂ ಪರಾರಿಯಾಗಿದ್ದಾಳೆ. ಜೊತೆಗೆ ತನ್ನ ಮಕ್ಕಳನ್ನು ಸಹ ಕರೆದುಕೊಂಡು ಹೋಗಿದ್ದು, ವಿಷಯ ಗಂಬೀರತೆ ಪಡೆದುಕೊಂಡಿದೆ. ಅಷ್ಟಕ್ಕೂ ಆಕೆ ಆನ್‌ಲೈನ್ ಗೇಮಿಂಗ್ ಹಣ ಕಳೆದುಕೊಂಡಿದ್ದು ಯಾಕೆ? ಇಡೀ ಘಟನೆಯ ಸಂಪೂರ್ಣ ವಿವರವನ್ನು ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಬೆಂಗಳೂರಿನಲ್ಲಿ ವಾಸವಾಗಿರುವ 26 ವರ್ಷದ ಮಹಿಳೆ ಆನ್‌ಲೈನ್ ಗೇಮಿಂಗ್ ವ್ಯಸನಿಯಾಗಿದ್ದು, ಪ್ರತಿನಿತ್ಯವೂ ಆನ್‌ಲೈನ್ ಲುಡೋ ಗೇಮ್ ಆಡುತ್ತಿದ್ದಳು ಎನ್ನಲಾಗಿದೆ. ಅಲ್ಲದೆ ಲುಡೋ ಗೇಮ್‌ನಲ್ಲಿ 4 ಲಕ್ಷ ರೂ. ಹಣವನ್ನು ಕೂಡ ಕಳೆದುಕೊಂಡಿದ್ದಾಲೆ. ಅಲ್ಲದೆ ಹಣ ಕಳೆದುಕೊಂಡ ನಂತರ ಮನೆಯಲ್ಲಿದ್ದ ಇನ್ನಷ್ಟು ಹಣವನ್ನು ತೆಗೆದುಕೊಂಡು ತನ್ನ ಮಕ್ಕಳೊಂದಿಗೆ ಮನೆ ಬಿಟ್ಟು ಹೋಗಿದ್ದಾಳೆ. ಸದ್ಯ ಮನೆಯಲ್ಲಿ ಆಕೆ ತನ್ನ ಗಂಡನಿಗೆ ಬರೆದ ಪತ್ರ ಸಿಕ್ಕಿದ್ದು, ಇದರಲ್ಲಿ ಆಕೆ ಮನೆ ಬಿಟ್ಟು ಹೋಗುತ್ತಿರುವುದಾಗಿ ಬರೆಯಲಾಗಿದೆ.
ಇನ್ನು ಆಕೆ ಲುಡೋ ಗೇಮ್‌ನಲ್ಲಿ ಹಣ ಕಳೆದುಕೊಂಡಿರುವುದು ಇದೇ ಮೊದಲೇನಲ್ಲ. ಒಂದು ವರ್ಷದ ಹಿಂದೆ, ಮಹಿಳೆ ಆನ್‌ಲೈನ್ ಗೇಮಿಂಗ್‌ನಲ್ಲಿ 50,000 ರೂ ಕಳೆದುಕೊಂಡಿದ್ದಾಳೆ. ನಂತರ ಲುಡೋ ಗೇಮ್ ಮುಂದುವರಿಸಲು 1.25 ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ಗಿರವಿ ಇಟ್ಟಿದ್ದಾಳೆ. ಈ ಹಣವನ್ನು ಕೂಡ ಲುಡೋಗೇಮ್‌ನಲ್ಲಿ ಕಳೆದುಕೊಂಡಿದ್ದಾಳೆ. ಇದಿಷ್ಟೇ ಅಲ್ಲದೆ ಪತಿಗೆ ಹೇಳದೆ ಸಂಬಂಧಿಕರಿಂದ 1.75 ಲಕ್ಷ ಸಾಲ ಪಡೆದುಕೊಂಡು, ಅದನ್ನು ಕೂಡ ಲುಡೋ ಗೇಮ್‌ನಲ್ಲಿ ಸೋತಿದ್ದಾಳೆ.
ಹೀಗೆ ಹಂತ ಹಂತವಾಗಿ ಹಣವನ್ನು ಲುಡೋ ಗೇಮ್‌ನಲ್ಲಿ ಹಣವನ್ನು ಸೋಲುತ್ತಾ ಬಂದಿದ್ದಾಳೆ. ಈ ವಿಚಾರ ತನ್ನ ಪತಿಗೆ ತಿಳಿದ ನಂತರ ಇನ್ನು ಮುಂದೆ ಆನ್‌ಲೈನ್ ಗೇಮ್ ಆಡೋದಿಲ್ಲ ಎಂಬ ಭರವಸೆ ನೀಡಿದ್ದಾಳೆ. ಆದರೆ ಈ ವರ್ಷದ ಜುಲೈನಲ್ಲಿ, ಮಹಿಳೆ ಮತ್ತೊಮ್ಮೆ ಆನ್‌ಲೈನ್‌ನಲ್ಲಿ ಲುಡೋ ಆಡುವ ಸಲುವಾಗಿ ತನ್ನ ಚಿನ್ನಾಭರಣಗಳನ್ನು 1.20 ಲಕ್ಷಕ್ಕೆ ಗಿರವಿ ಇಟ್ಟಿದ್ದಳು ಎನ್ನಲಾಗಿದೆ. ಇದಾದ ನಂತರ ಆಕೆಯ ಪತಿ ಮಧ್ಯಪ್ರವೇಶಿಸಿ ಮಹಿಳೆಯ ಪೋಷಕರಿಗೆ ತಿಳಿಸಿ ತಮ್ಮ ಮಗಳಿಗೆ ಬುದ್ದಿ ಹೇಳುವಂತೆ ಹೇಳಿದ್ದಾರೆ.
ಆದರೆ ಇದೆಲ್ಲದರ ನಡುವೆಯೂ ಲುಡೋ ಗೇಮ್ ಆಡುವುದನ್ನು ಮುಂದುವರೆಸಿದ ಮಹಿಳೆ ಇದೇ ಆಗಸ್ಟ್ 8 ರಂದು ಮನೆ ಬಿಟ್ಟು ಹೋಗಿದ್ದಾಳೆ. ಮನೆ ಬಿಟ್ಟು ಹೋಗುವ ಮುನ್ನ ಪತ್ರವೊಂದನ್ನು ಬರೆದಿಟ್ಟಿದ್ದಾಳೆ. ಇದರಲ್ಲಿ "ನಾನು ನಿಮ್ಮ ಕ್ಷಮೆಯಾಚಿಸುತ್ತೇನೆ, ನಾನು ಮನೆಯಲ್ಲಿಟ್ಟ ಹಣವನ್ನು ತೆಗೆದುಕೊಳ್ಳುತ್ತಿದ್ದೇನೆ, ದಯವಿಟ್ಟು ನನ್ನನ್ನು ಕ್ಷಮಿಸಿ" ಎಂದು ಬರೆಯಲಾಗಿದೆ. ಅಂದರೆ ಆಕೆ ಲುಡೋ ಗೇಮ್‌ಗಾಗಿಯೇ ಮನೆಯಲ್ಲಿದ್ದ ಹಣವನ್ನು ಸಹ ಎತ್ತುಕೊಂಡು ಹೋಗಿದ್ದಾಳೆ ಎಂದು ಹೇಳಲಾಗ್ತಿದೆ. ಸದ್ಯ ಮಹಿಳೆಯ ಪತ್ತೆ ಹಚ್ಚುವ ಕಾರ್ಯ ನಡೆಯುತ್ತಿದೆ.
ಇಲ್ಲಿ ಮಹಿಳೆ ಆನ್‌ಲೈನ್ ಗೇಮಿಂಗ್ ಮೋಹದಿಂದ ಮನೆ ಬಿಟ್ಟು ಹೋಗಿದ್ದಾಳೆ. ಅಲ್ಲದೆ ಮನೆಯಲ್ಲಿದ್ದ ಹಣಕಾಸನ್ನು ಗೇಮಿಂಗ್‌ನಲ್ಲಿ ಕಳೆದುಕೊಂಡಿದ್ದಾಳೆ. ಆದರೆ ಇದೇ ರೀತಿಯಲ್ಲಿ ಇನ್ನು ಅನೇಕ ಯುವಜನತೆ ಆನ್‌ಲೈನ್ ವ್ಯಾಮೋಹಕ್ಕೆ ಸಿಲುಕಿ ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಸುಲಭವಾಗಿ ಹಣ ಗಳಿಸಬಹುದು ಎನ್ನುವ ಉದ್ದೇಶ ಮಾತ್ರವಲ್ಲದೆ ಆನ್‌ಲೈನ್ ಗೇಮ್‌ನಲ್ಲಿ ಸಾಧಿಸಿದ್ದೇನೆ ಅಂತಾ ಸ್ನೇಹಿತರ ಮುಂದೆ ಜಂಬ ತೋರಿಸುವ ಕಾರಣಕ್ಕೋ ಇಲ್ಲವೇ ಇನ್ಯಾವುದೊ ಕಾರಣಕ್ಕೆ ಹೆಚ್ಚಿನ ಯುವಕರು ದಾರಿ ತಪ್ಪುತ್ತಿದ್ದಾರೆ.
ಆನ್‌ಲೈನ್ ಗೇಮಿಂಗ್ ಅನ್ನೋದು ಇಂದಿನ ಟೆಕ್ನಾಲಜಿ ಆಧಾರಿತ ಆಟವಾಗಿರಬಹುದು. ಇದನ್ನು ಕೇವಲ ಮನರಂಜನಾತ್ಮಕವಾಗಿ ತೆಗೆದುಕೊಂಡರೆ ಮಾತ್ರ ಒಳಿತು. ಆದರೆ ಇದನ್ನೇ ಒಂದು ಅಭ್ಯಾಸ ಮಾಡಿಕೊಂಡು ಬಿಟ್ಟರೆ ಅಫೀಮಿಗಿಂತ ಹೆಚ್ಚಿನ ವ್ಯಸನಕಾರಿಯಾಗಿರಲಿದೆ.


Click it and Unblock the Notifications








